ದೆಹಲಿ ಜಲಮಂಡಳಿ ಕಛೇರಿಯನ್ನು ಧ್ವಂಸಗೊಳಿಸಿದ ಬಿಜೆಪಿ ಗೂಂಡಾಗಳು; AAP ಆರೋಪ

ಕೇಂದ್ರ ಸರ್ಕಾರದ ಕಾನೂನುಗಳನ್ನು ವಿರೋಧಿಸುವುದನ್ನು ನಿಲ್ಲಿಸದಿದ್ದರೆ, AAP ಯ ಎಲ್ಲಾ ನಾಯಕರ ಮೇಲೆ ಮಾರಣಾಂತಿಕ ದಾಳಿ ನಡೆಸುವುದಾಗಿ ಬೆದರಿಸಿದ ದಾಳಿಕೋರರು
ದೆಹಲಿ ಜಲಮಂಡಳಿ ಕಛೇರಿಯನ್ನು ಧ್ವಂಸಗೊಳಿಸಿದ ಬಿಜೆಪಿ ಗೂಂಡಾಗಳು; AAP ಆರೋಪ

ಬಿಜೆಪಿಯ ಗೂಂಡಾಗಳು ದೆಹಲಿ ಜಲ ಮಂಡಳಿಯ (DJB) ಕಛೇರಿ ಹಾಗೂ ತನ್ನ ಕಛೇರಿಗೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ ಹಾಗೂ ನೌಕರರನ್ನು ಬೆದರಿಸಿದ್ದಾರೆಂದು AAP ನಾಯಕ ರಾಘವ್‌ ಚಡ್ಡಾ ಆರೋಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಬೆದರಿಸುವ ಬಿಜೆಪಿಯ ತಂತ್ರವಿದು. ಕೇಂದ್ರದ ವಿರುದ್ಧ ಹೋರಾಟ ನಡೆಸುತ್ತಿರುವ ರೈತ ಪ್ರತಿಭಟನೆಕಾರರ ಪರವಾಗಿ ಮಾತಾಡದಂತೆ ದಾಳಿಕೋರರು ಆಗ್ರಹಿಸಿದ್ದಾರೆ ಎಂದು ಜಲ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಚಡ್ಡಾ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ʼಕಛೇರಿಗಳ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು ಅಪಾರ ಹಾನಿಯನ್ನುಂಟು ಮಾಡಿ ನೌಕರರನ್ನು ಬೆದರಿಸಿದ್ದಾರೆ. ಹಾಗೂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಬಹಿರಂಗ ಬೆದರಿಕೆ ಹಾಕಿದ್ದು, ರೈತರ ಪರವಾಗಿ ಮಾತನಾಡದಂತೆ ಎಚ್ಚರಿಕೆ ನೀಡಿದ್ದಾರೆʼ ಎಂದು ಚಡ್ಡಾ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಅಲ್ಲದೆ, ಕೇಂದ್ರ ಸರ್ಕಾರದ ಕಾನೂನುಗಳನ್ನು ವಿರೋಧಿಸುವುದನ್ನು ನಿಲ್ಲಿಸದಿದ್ದರೆ, AAP ಯ ಎಲ್ಲಾ ನಾಯಕರ ಮೇಲೆ ಮಾರಣಾಂತಿಕ ದಾಳಿ ನಡೆಸುವುದಾಗಿ ದಾಳಿಕೋರರು ಬೆದರಿಸಿರುವುದಾಗಿ ಅವರು ಹೇಳಿದ್ದಾರೆ.

ಈ ದಾಳಿಯ ಹಿಂದಿನ ಉದ್ದೇಶ ನಮ್ಮನ್ನು ಮೌನಗೊಳಿಸುವುದು, ಆದರೆ ನಮ್ಮ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಅವರು ರೈತರನ್ನು ಬೆಂಬಲಿಸುವುದನ್ನು ನಿಲ್ಲಿಸದಂತೆ ಹೇಳಿದ್ದಾರೆ. ಆದ್ದರಿಂದ, ಬಿಜೆಪಿ ಕಾರ್ಯಕರ್ತರು ಏನು ಮಾಡಿದರೂ, ಮೂರು ಕರಾಳ ಕಾನೂನುಗಳ ವಿರುದ್ಧ ರೈತರಿಗೆ ನಮ್ಮ ಬೆಂಬಲ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ.

ಚಡ್ಡಾರ ಹೇಳಿಕೆಯ ಬೆನ್ನಿಗೆ, ಈ ಕುರಿತು ಟ್ವೀಟ್‌ ಮಾಡಿದ ಕೇಜ್ರಿವಾಲ್‌, ಇದು ನಾಚಿಕೆಗೇಡಿನ ಘಟನೆ, ನಮ್ಮ ಕೊನೆಯುಸಿರು ಇರುವವರೆಗೂ ನಾವು ರೈತರ ಪರ ನಿಲ್ಲುವೆವು ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಜಲಮಂಡಳಿಯ ಕಛೇರಿಗೆ ನುಗ್ಗಿ ದಾಂಧಲೆ ನಡೆಸುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನೆಲದ ಮೇಲೆ ರಕ್ತದ ಕಲೆ, ಮುರಿದ ಪೀಠೋಪಕರಣ, ಒಡೆದ ಗ್ಲಾಸುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಇರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ.

ದಾಳಿ AAP ಷಡ್ಯಂತ್ರ‌ -ಬಿಜೆಪಿ

AAP ಆರೋಪವನ್ನು ನಿರಾಕರಿಸಿದ ಬಿಜೆಪಿ ಈ ದಾಳಿಯ ಹಿಂದೆ AAP ಕೈವಾಡ ಇದೆ ಎಂದಿದೆ.

ಜಲಮಂಡಳಿ ಕಛೇರಿ ಮೇಲೆ ನಡೆದಿರುವ ದಾಳಿ AAP ಪ್ರಾಯೋಜಿತದ್ದು, ಬಿಜೆಪಿಯ ಮೇಲೆ ತಪ್ಪು ಅಭಿಪ್ರಾಯ ಮೂಡಿಸಲು AAP ಈ ದಾಳಿಯನ್ನು ಪ್ರಾಯೋಜಿಸಿದೆ ಎಂದು ದೆಹಲಿ ಬಿಜೆಪಿ ವಕ್ತಾರ ವೀರೇಂದ್ರ ಬಾಬರ್‌ ಹೇಳಿದ್ದಾರೆ.

ಈ ನಡುವೆ, ಅಲ್ಲಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿರುವುದನ್ನು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು, ಅಲ್ಲಿ ಸಂಘರ್ಷಗಳು ನಡೆದಿದೆ, ಆದರೆ ಯಾವುದೇ ಗಾಯಗೊಂಡಿರುವುದು ವರದಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com