ಪಶ್ಚಿಮ ಬಂಗಾಳ ಚುನಾವಣೆ: ಕಳಂಕಿತರ ಪವಿತ್ರೀಕರಣದ ಬಿಜೆಪಿ ಸೋಪು ಯಾವುದು?

“ಮೆ ನಹೀ ಖಾವೂಂಗಾ.. ನ ಖಾನೇ ದೂಂಗಾ” ಎಂದು ಹೇಳುವ ಮೋದಿಯವರು, ಹೀಗೆ ರಾಶಿರಾಶಿ ಮೇಯ್ದು ದುಂಡಗಾದ ಮಂದಿಯನ್ನು ಯಾವ ಸೋಪು ಬಳಸಿ ಪವಿತ್ರಗೊಳಿಸಿ ಕೇಸರಿ ಶಾಲು ಹೊದೆಸುತ್ತಿದ್ದಾರೆ ಎಂಬುದು ಜನರ ಪ್ರಶ್ನೆ!
ಪಶ್ಚಿಮ ಬಂಗಾಳ ಚುನಾವಣೆ: ಕಳಂಕಿತರ ಪವಿತ್ರೀಕರಣದ ಬಿಜೆಪಿ ಸೋಪು ಯಾವುದು?

ಬಿಜೆಪಿ ಎಂಬುದು ಒಂದು ರೀತಿಯಲ್ಲಿ ಸದ್ಯದ ಭಾರತದ ರಾಜಕಾರಣದ ಶುದ್ಧೀಕರಣ ಯಂತ್ರವಿದ್ದಂತೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಅಂತಹ ಮಾತಿಗೆ ಮತ್ತೊಂದು ಪುರಾವೆ ಎಂಬಂತೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಕಳಂಕಿತ ನಾಯಕರು ಬಿಜೆಪಿ ಸೇರುತ್ತಲೇ ಅವರ ವಿರುದ್ಧದ ಗಂಭೀರ ಆರೋಪಗಳು ದಿಢೀರನೇ ಮಾಯವಾಗತೊಡಗಿವೆ.

ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಗಳಿಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ಒಂದು ಕಡೆ ಅಲ್ಲಿನ ಆಡಳಿತರೂಢ ತೃಣಮೂಲ ಸರ್ಕಾರದ ವಿರುದ್ಧ ಹತ್ತಾರು ರ್ಯಾಲಿ, ಹೋರಾಟ, ಪ್ರತಿಭಟನೆಗಳ ಮೂಲಕ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹಾಳುಬಿದ್ದಿದೆ ಎಂಬ ಚಿತ್ರಣ ನೀಡಲು ಪ್ರಯತ್ನಿಸುತ್ತಿದೆ. ತೃಣಮೂಲ ಕಾಂಗ್ರೆಸ್ ಪಕ್ಷವೆಂದರೆ, ಗೂಂಡಾ ಪಡೆ ಎಂದೇ ಮಾತುಮಾತಿಗೆ ಟೀಕಿಸುತ್ತಿದೆ. ಅದೇ ಹೊತ್ತಿಗೆ, ಮತ್ತೊಂದು ಕಡೆ ಅದೇ ತೃಣಮೂಲ ಕಾಂಗ್ರೆಸ್ಸಿನ ಸಾಲು ಸಾಲು ನಾಯಕರನ್ನ ಕೇಸರಿ ಶಾಲು ಹೊದಿಸಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಯಾವುದೇ ರಾಜ್ಯದ ಚುನಾವಣಾ ಹೊಸ್ತಿಲಲ್ಲಿ ಇಂತಹ ಪಕ್ಷಾಂತರಗಳು ಸಹಜ. ಆದರೆ, ಪಕ್ಷಾಂತರವಾಗುತ್ತಲೇ ಅಂತಹ ನಾಯಕರ ವಿರುದ್ಧ ಬ್ರಹ್ಮಾಂಡ ಭಷ್ಟಾಚಾರ ಆರೋಪಗಳು, ಗಂಭೀರ ಅಪರಾಧ ಪ್ರಕರಣಗಳು ಕೂಡ ಕಸದ ಬುಟ್ಟಿಗೆ ಸರಿದು, ಆ ನಾಯಕರು ದಿಢೀರನೇ ಪರಮಪವಿತ್ರ, ಮರ್ಯಾದಾಪುರುಷೋತ್ತಮರಾಗಿ ಬಿಡುವುದು ಮಾತ್ರ ಬಿಜೆಪಿಯ ಹೊಸ ವರಸೆ. ಹಾಗೆ ನೋಡಿದರೆ, ಪಶ್ಚಿಮಬಂಗಾಳ ಮಾತ್ರವಲ್ಲ, ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಗುಜರಾತ್, ತಮಿಳುನಾಡುಗಳಲ್ಲಿಯೂ ಬಿಜೆಪಿ ಹೀಗೆ ವಾಷಿಂಗ್ ಮಷೀನ್ ಪಾತ್ರವಹಿಸಿದೆ. ಪ್ರತಿಪಕ್ಷಗಳಲ್ಲಿರುವಾಗ ಯಾವ ನಾಯಕರ ವಿರುದ್ದದ ಪ್ರಕರಣಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿತ್ತೋ, ಕೇಂದ್ರದ ತನ್ನ ಅಧಿಕಾರ ಬಳಸಿ ಸಿಬಿಐ, ಇಡಿ, ಐಟಿ ಇಲಾಖೆಗಳ ಮೂಲಕ ತನಿಖೆ ನಡೆಸಿತ್ತೋ, ಅದೇ ನಾಯಕರು ತನ್ನದೇ ತೆಕ್ಕೆಗೆ ಬರುತ್ತಲೇ ಅವರ ವಿರುದ್ಧದ ಎಲ್ಲಾ ತನಿಖೆಗಳನ್ನು ಕೈಬಿಟ್ಟು, ಎಲ್ಲಾ ಪ್ರಕರಣಗಳನ್ನು ಬದಿಗೆ ಸರಿಸಿ, ಅವರು ಸಚ್ಛಾರಿತ್ರ್ಯದ ತುಂಡುಗಳು ಎಂಬಂತ ಅಪ್ಪಿ ಮುದ್ದಾಡುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ.

ಅದು ಮಹಾರಾಷ್ಟ್ರದ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಬಿಜೆಪಿ ಸಂಸದ ನಾರಾಯಣ ರಾಣೆ ಇರಬಹುದು, ಅಥವಾ ಅಸ್ಸಾಂನ ಮಾಜಿ ಕಾಂಗ್ರೆಸ್ ಹಾಗೂ ಹಾಲಿ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಇರಬಹುದು, ಅಥವಾ ಪಶ್ಚಿಮಬಂಗಾಳದ ಮಾಜಿ ತೃಣಮೂಲ ಹಾಗೂ ಹಾಲಿ ಬಿಜೆಪಿ ನಾಯಕರಾದ ಮುಕುಲ್ ರಾಯ್ ಮತ್ತು ಸುಭೇಂದು ಅಧಿಕಾರಿ ಇರಬಹುದು. ಎಲ್ಲರ ವಿಷಯದಲ್ಲಿಯೂ ಅವರು ಪ್ರತಿಪಕ್ಷದ ಪಾಳೆಯದಲ್ಲಿರುವ ತನಕ ಅವರ ವಿರುದ್ಧದ ವಿವಿಧ ಪ್ರಕರಣಗಳನ್ನು ಮುಂದಿಟ್ಟುಕೊಂಡೇ ಆ ಆಯಾ ಪಕ್ಷಗಳು ಮತ್ತು ಆ ಪಕ್ಷಗಳ ಸರ್ಕಾರಗಳ ವಿರುದ್ಧ ಜನಾಂದೋಲನ ನಡೆಸುವ ಮೂಲಕವೇ ಬಿಜೆಪಿ ಆ ರಾಜ್ಯಗಳಲ್ಲಿ ತನ್ನ ನೆಲೆ ವಿಸ್ತರಿಸಿಕೊಂಡಿತ್ತು. ಆದರೆ, ಒಮ್ಮೆ ಅವರು ತಮ್ಮ ವಿರುದ್ಧದ ಬಿಜೆಪಿಯ ದಾಳಿ ಮತ್ತು ವಿವಿಧ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಒಡ್ಡಿದ ಬೆದರಿಕೆಗೆ ಜಗ್ಗಿ ಪಕ್ಷಾಂತರ ಮಾಡಿ ಬಿಜೆಪಿಗೆ ಸೇರಿದರೋ ಆ ಕ್ಷಣದಿಂದಲೇ ಬಿಜೆಪಿ ಅವರನ್ನು ಆದರ್ಶ ನಾಯಕರೆಂದು ಸ್ತುತಿಸತೊಡಗಿತು.

ಈ ಪಟ್ಟಿಗೆ ಈಗ ಹೊಸ ಸೇರ್ಪಡೆ ಕಳೆದ ಒಂದೆರಡು ವಾರಗಳಿಂದ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು. ಶಾರದಾ ಚಿಟ್ ಫಂಡ್ ಮತ್ತು ಕುಖ್ಯಾತ ನಾರದ ಸ್ಟಿಂಗ್ ಆಪರೇಷನ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಮತ್ತು ಅದೇ ಕಾರಣಕ್ಕೆ ಹಲವು ವರ್ಷಗಳಿಂದ ಬಿಜೆಪಿಯ ಕೆಂಗೆಣ್ಣಿಗೆ ಬಿದ್ದಿದ್ದ ಮತ್ತು ರಾಜಕೀಯ ದಾಳಿಯ ಅಸ್ತ್ರವಾಗಿದ್ದ ಪಶ್ಚಿಮಬಂಗಾಳದ ತೃಣಮೂಲ ನಾಯಕ ಮುಕುಲ್ ರಾಯ್, 2017ರ ನವೆಂಬರಿನಲ್ಲಿ ತೃಣಮೂಲದಿಂದ ಹೊರಬಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಅವರ ವಿರುದ್ಧದ ಎರಡೂ ಪ್ರಮುಖ ಬಹುಕೋಟಿ ಹಗರಣ ಕುರಿತು ನಡೆಯುತ್ತಿದ್ದ ಸಿಬಿಐ ಮತ್ತು ಇಡಿ ತನಿಖೆಗಳು ತಂತಾನೆ ನಿಧಾನಗತಿಗೆ ಹೊರಳಿದ್ದವು. ಈ ನಡುವೆ ಬಿಜೆಪಿ ಅವರನ್ನು ತನ್ನ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೇರಿಸಿ ಗೌರವಿಸಿದೆ. ಆ ಮೂಲಕ ಕೇಸರಿ ಶಾಲು ಹೊದೆಯುತ್ತಲೇ ಅವರಿಗೆ ಅಂಟಿದ್ದ ಕಳಂಕವೆಲ್ಲಾ ತೊಳೆದು ಪರಿಶುದ್ಧರಾಗಿದ್ದಾರೆ ಎಂದು ಬಿಜೆಪಿ ಪ್ರತಿಪಾದಿಸಿದೆ!

ಪಶ್ಚಿಮ ಬಂಗಾಳ ಚುನಾವಣೆ: ಕಳಂಕಿತರ ಪವಿತ್ರೀಕರಣದ ಬಿಜೆಪಿ ಸೋಪು ಯಾವುದು?
ಟಿಎಂಸಿ ಸೇರಿದ ಪತ್ನಿ; ವಿಚ್ಛೇದನ ನೀಡಲು ಬಿಜೆಪಿ ಸಂಸದ ನಿರ್ಧಾರ

ಇದೀಗ ಮುಕುಲ್ ರಾಯ್ ಅವರ ಹಾದಿಯಲ್ಲೇ ಸಾಗಿರುವ ಪಶ್ಚಿಮಬಂಗಾಳದ ನಾರದ ಹಗರಣದಲ್ಲಿ ಮುಕುಲ್ ರಾಯ್ ಅವರೊಂದಿಗೆ ಭಾಗಿಯಾಗಿದ್ದ ಮತ್ತೊಬ್ಬರ ತೃಣಮೂಲ ಪ್ರಭಾವಿ ನಾಯಕ ಸುವೇಂಧು ಅಧಿಕಾರಿ ಕೂಡ ಬಿಜೆಪಿಗೆ ಪದಾರ್ಪಣೆ ಮಾಡಿದ್ದಾರೆ. ಆ ಮೂಲಕ ಅವರನ್ನೂ ಸೇರಿದಂತೆ ಹಲವು ಮಂದಿ ತೃಣಮೂಲ ಕಾಂಗ್ರೆಸ್ ನಾಯಕರು ಮತ್ತು ಅಧಿಕಾರಿಗಳ ವಿರುದ್ಧದ ಬಹುಕೋಟಿ ಲಂಚ ಹಗರಣದ ಕುರಿತು ಸಿಬಿಐ ತನಿಖೆ ಕೂಡ ಬದಿಗೆ ಸರಿಯಲಿದೆ. ಈ ನಡುವೆ, ಬಿಜೆಪಿ ಈಗಾಗಲೇ ಸುವೇಂಧು ವಿರುದ್ಧದ ತನ್ನ ಹೇಳಿಕೆಗಳು, ಅವರ ಹಗರಣದ ಕುರಿತ ವಿಡಿಯೋ ತುಣುಕುಗಳನ್ನು ತನ್ನ ಪಕ್ಷದ ಅಧಿಕೃತ ಜಾಲತಾಣದಿಂದ ಅಳಿಸಿಹಾಕಿದೆ.

ಬಿಜೆಪಿಯ ಈ ದ್ವಿಮುಖ ನೀತಿಯ ಬಗ್ಗೆ ಈಗಾಗಲೇ ಜಾಲತಾಣದಲ್ಲಿ ಮತ್ತು ಸಾರ್ವಜನಿಕವಾಗಿಯೂ ಸಾಕಷ್ಟು ಟೀಕೆ, ವ್ಯಂಗಗಳು ಕೇಳಿಬಂದಿವೆ.

2016ರಲ್ಲಿ ಸ್ಥಳೀಯ ನಾರದ ಡಾಟ್ ಕಾಂ ಸುದ್ದಿ ಜಾಲತಾಣ ಬಹಿರಂಗಪಡಿಸಿದ ನಾರದಾ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಮುಕುಲ್ ರಾಯ್, ಸುಲ್ತಾನ್ ಅಹಮದ್ ಅವರೊಂದಿಗೆ ಸುವೇಂಧು ಅಧಿಕಾರಿ ಕೂಡ ಪ್ರಮುಖ ಆರೋಪಿತರಾಗಿದ್ದರು. ವಿವಿಧ ಕಂಪನಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರ ಸಂಸತ್ ಮತ್ತು ರಾಜ್ಯ ವಿಧಾನಸಭೆಯಲ್ಲಿ ಲಾಬಿ ಮಾಡುವುದಕ್ಕೆ ಸಂಬಂಧಿಸಿದಂತೆ ತೃಣಮೂಲ ಸಂಸದರು ಮತ್ತು ಸಚಿವರುಗಳು ಪಡೆದ ಭಾರೀ ಲಂಚದ ಕುರಿತು ವೀಡಿಯೋ ಸಹಿತ ವರದಿ ಮಾಡಲಾಗಿತ್ತು. ಆ ಪ್ರಕರಣದ ಕುರಿತು 2017ರಲ್ಲೇ ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಸಿಬಿಐ ಮುಕುಲ್ ರಾಯ್ ಮತ್ತು ಸುವೇಂಧು ಅಧಿಕಾರಿ ವಿರುದ್ಧ ತನಿಖೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಅನುಮತಿಯನ್ನೂ ಕೇಳಿತ್ತು.

ಇದೀಗ ದಿಢೀರನೇ ಎಲ್ಲವೂ ಕಪ್ಪು ಬಿಳಪುದಾದಂತೆ, ಬಿಳುಪು ಕಪ್ಪಾದಂತೆ ಆಗಿಹೋಗಿದೆ. ಹಾಗಾಗಿ ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಈ ವರಸೆಯ ಕುರಿತು ಭರ್ಜರಿ ಟೀಕೆಗಳು ವ್ಯಕ್ತವಾಗುತ್ತಿದ್ದು, ಅದರ ಅಧಿಕೃತ ವೆಬ್ ಸೈಟಿನಿಂದ ಸುವೇಂಧು ಅಧಿಕಾರಿ ಲಂಚ ಸ್ವೀಕರಿಸುತ್ತಿರುವ ಕುರಿತ ಸ್ಟಿಂಗ್ ವೀಡಿಯೋ ಮಾಯವಾದ ಬಗ್ಗೆಯೂ ಸಾಕಷ್ಟು ಮಂದಿ ವಿಡಂಬನೆ ಮಾಡಿದ್ದಾರೆ. ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬಿಜೆಪಿಯನ್ನು ಪಾರ್ಟಿ ವಿತ್ ಎ ಡಿಫರೆನ್ಸ್ ಅನ್ನಲು ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

ಈ ನಡುವೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ತಾನೇ ಬಿಜೆಪಿ ತೊರೆದು ತೃಣಮೂಲ ಕಾಂಗ್ರೆಸ್ ಸೇರಿರುವ ಬಿಜೆಪಿ ಸಂಸದ ಸೌಮಿತ್ರ ಖಾನ್ ಪತ್ನಿ ಸುಜಾತಾ ಮಂಡಲ್ ಖಾನ್, “ಬಿಜೆಪಿಯಲ್ಲಿ ಸಾಲುಸಾಲು ಕಳಂಕಿತ ನಾಯಕರು ಒಂದೇ ಕಡೆ ಸೇರುತ್ತಿದ್ದಾರೆ. ಅವರ ಕಳಂಕವನ್ನೆಲ್ಲಾ ತೊಳೆದು ಶುದ್ಧೀಕರಿಸಿ ಅವರನ್ನು ಪರಮ ಪವಿತ್ರ ಮಾಡುವ ಯಾವ ಸೋಪು ಬಿಜೆಪಿಯಲ್ಲಿದೆ ಎಂಬುದನ್ನು ತನಗಿನ್ನೂ ಅರ್ಥವಾಗಿಲ್ಲ. ಈಗ ಆ ಪಕ್ಷದಲ್ಲಿ ಕಳಂಕಿತರು, ಭ್ರಷ್ಟರಿಗಷ್ಟೇ ಮಣೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರಿಗೆ ಯಾವ ಬೆಲೆಯಿಲ್ಲ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ!

ದೇಶದ ಜನ ಕೂಡ ಅದನ್ನೇ ಕೇಳುತ್ತಿದ್ದಾರೆ. “ಮೆ ನಹೀ ಖಾವೂಂಗಾ.. ನ ಖಾನೇ ದೂಂಗಾ” ಎಂದು ಹೇಳುವ ಮೋದಿಯವರು, ಹೀಗೆ ರಾಶಿರಾಶಿ ಮೇಯ್ದು ದುಂಡಗಾದ ಮಂದಿಯನ್ನು ಯಾವ ಸೋಪು ಬಳಸಿ ಪವಿತ್ರಗೊಳಿಸಿ ಕೇಸರಿ ಶಾಲು ಹೊದೆಸುತ್ತಿದ್ದಾರೆ ಎಂಬುದು ಜನರ ಪ್ರಶ್ನೆ. ಆದರೆ, ಇತರ ಎಲ್ಲಾ ಪಕ್ಷಗಳಿಗಿಂತ ಭಿನ್ನವಾದ ‘ಎ ಪಾರ್ಟಿ ವಿತ್ ಎ ಡಿಫರೆನ್ಸ್’ ಬಿಜೆಪಿಗೆ ಸದ್ಯ ಕೇಸರಿ ಎಂಬ ಪದವೇ ವಾಷಿಂಗ್ ಮಷೀನ್ ಎಂಬುದು ಪ್ರತಿಪಕ್ಷಗಳ ವ್ಯಂಗ್ಯ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com