ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಇಲ್ಲದೆ ಕಾಂಗ್ರೆಸ್ ಪಂಜಾಬಿನಲ್ಲಿ ಗೆಲುವು ಸಾಧಿಸಿತು. ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಮಾಡಿದ್ದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತು
ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್
ANI

ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಮತ್ತೊಮ್ಮೆ ಸಲ್ಲದ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಕೇಂದ್ರ ಗೃಹ‌ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳಕ್ಕೆ ಬಂದು ಹೋದಮೇಲೆ, ಅದೂ 7 ಜನ ಶಾಸಕರು ಹಾಗೂ ಓರ್ವ ಸಂಸದನನ್ನು ಬಿಜೆಪಿಗೆ ಸೇರಿಸಿಕೊಂಡ ಮೇಲೆ ಪ್ರಶಾಂತ್ ಕಿಶೋರ್ ಬಿಜೆಪಿಗೆ ಸವಾಲೆಸೆದಿದ್ದಾರೆ. 'ಬಿಜೆಪಿ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಡಬಲ್ ಡಿಸಿಟ್ ಕ್ರಾಸ್ ಮಾಡಿದರೆ ನಾನು ಟ್ವೀಟರ್ ತಾಣವನ್ನೇ ತ್ಯಜಿಸುತ್ತೇನೆ. ಬೇಕಿದ್ದರೆ ಈ ಟ್ವೀಟ್ ಅನ್ನು ಸೇವ್ ಮಾಡಿ‌ ಇಟ್ಟುಕೊಂಡಿರಿ' ಎಂದಿದ್ದಾರೆ.

ವಾಸ್ತವವಾಗಿ ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಡಬಲ್ ಡಿಸಿಟ್ ಇದೆ. ಅಂದರೆ ಎರಡಂಕಿ, ಬಿಜೆಪಿಯ 18 ಶಾಸಕರಿದ್ದಾರೆ‌. ಹಾಗಾದರೆ ಪ್ರಶಾಂತ್ ಕಿಶೋರ್ ಹೇಳಿದಂತೆ ಡಬಲ್ ಡಿಸಿಟ್ ಕ್ರಾಸ್ ಮಾಡುವುದು ಎಂದರೆ ತ್ರಿಬಲ್ ಡಿಸಿಟ್ ಆಗುವುದೇ (100 ಸೀಟು ಗೆಲ್ಲುವುದು)? ಇದು ಪ್ರಶಾಂತ್ ಕಿಶೋರ್ ಬೇಕಂತಲೇ ಗೊಂದಲ ಸೃಷ್ಟಿಸಿದಂತಿದೆ. ಚುನಾವಣಾ ತಂತ್ರಜ್ಞರಾದ ಅವರಿಗೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದು ಗೊತ್ತಿಲ್ಲದ ಸಂಗತಿಯಂತೂ ಅಲ್ಲ. 2015ರ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಎಲೆಕ್ಷನ್ ನಲ್ಲಿ ಬಿಜೆಪಿ 4 ಸೀಟು ಗೆದ್ದಿತ್ತು, 2020ರಲ್ಲಿ 44 ಸೀಟು ಗೆದ್ದಿದ್ದೆ. ಅದು ಪಶ್ಚಿಮ ಬಂಗಾಳದಲ್ಲಿ ಆಗುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಚುನಾವಣಾ ತಂತ್ರಜ್ಞ ಎಂದ ಮಾತ್ರಕ್ಕೆ ಪ್ರಶಾಂತ್ ಕಿಶೋರ್ ನುಡಿದ ಭವಿಷ್ಯಗಳೆಲ್ಲವೂ ನಿಜವಾಗುವುದಿಲ್ಲ. ವಿದೇಶದಿಂದ ಬಂದ ಅವರು 2012ರಲ್ಲಿ ಮೊದಲ ಬಾರಿಗೆ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಆಗ ಬಿಜೆಪಿ ಗೆದ್ದಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಪರವಾಗಿ ಕೆಲಸ ಮಾಡಿದ್ದರು. ಆಗಲೂ ಬಿಜೆಪಿ ಗೆದ್ದಿತ್ತು. ಇದಾದ ನಂತರ 2019ರಲ್ಲಿ ಆಂಧ್ರ ಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿಯವರ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಪರ ತಂತ್ರಗಾರಿಕೆ ಮಾಡಿದ್ದರು. ಆಗಲೂ ವೈಎಸ್ ಆರ್ ಕಾಂಗ್ರೆಸ್ ಗೆದ್ದಿತ್ತು. ಈ ಮೂರು ಸಂದರ್ಭಗಳಲ್ಲಿ ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಗಿಂತ ಪರಿಸ್ಥಿತಿಗಳು ಅವರು ಕೆಲಸ ಮಾಡಿದ್ದ ಪಕ್ಷಗಳಿಗೆ ಪೂರಕವಾಗಿದ್ದವು ಎಂಬುದು ಗಮನಾರ್ಹ

ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್
ಟಿಎಂಸಿ ಸೇರಿದ ಪತ್ನಿ; ವಿಚ್ಛೇದನ ನೀಡಲು ಬಿಜೆಪಿ ಸಂಸದ ನಿರ್ಧಾರ

ಈ ನಡುವೆ ಇದೇ ಪ್ರಶಾಂತ್ ಕಿಶೋರ್ 2017ರಲ್ಲಿ ಪಂಜಾಬ್ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಪಕ್ಷದ ಪರವಾಗಿ ತಂತ್ರಗಾರಿಕೆ ಮಾಡಲು ನಿಯೋಜಿತರಾಗಿದ್ದರು. ಆದರೆ ಅಮರೀಂದರ್ ಸಿಂಗ್ ಪಂಜಾಬಿನಲ್ಲಿ ಪ್ರಶಾಂತ್ ಕಿಶೋರ್ ಅವರಿಗೆ ಆ ಅವಕಾಶವನ್ನೇ ನೀಡಲಿಲ್ಲ. ಪ್ರಶಾಂತ್ ಉತ್ತರ ಪ್ರದೇಶಕ್ಕೆ ಸೀಮಿತಗೊಳ್ಳಬೇಕಾಯಿತು.‌ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಇಲ್ಲದೆ ಕಾಂಗ್ರೆಸ್ ಪಂಜಾಬಿನಲ್ಲಿ ಗೆಲುವು ಸಾಧಿಸಿತು. ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಮಾಡಿದ್ದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತು. ಇದಲ್ಲದೆ 2019ರಲ್ಲಿ ಪ್ರಶಾಂತ್ ಕಿಶೋರ್ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಪರ ಕೆಲಸ ಮಾಡಿದ್ದರು. ಆದರೆ ದೆಹಲಿಯಲ್ಲಿ ಗೆಲ್ಲಲು ಕಾರಣವಾಗಿದ್ದು ಆಮ್ ಆದ್ಮಿ ಪಕ್ಷದ ಕೇಡರ್ ಜೊತೆಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೊರತು ಪ್ರಶಾಂತ್ ಕಿಶೋರ್ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.

ಹೀಗೆ ಪೂರಕ ವಾತಾವರಣದಲ್ಲಿ ಮಾತ್ರ ಫಲ ತಂದುಕೊಡುವ ಪ್ರಶಾಂತ್ ಕಿಶೋರ್ ಈಗ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರನ್ನು ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಮಾಡಲು 'ಗುತ್ತಿಗೆ' ಪಡೆದುಕೊಂಡಿದ್ದಾರೆ. ಸೂತ್ರಧಾರಿ ಪಾತ್ರ ನಿರ್ವಹಿಸುತ್ತಿರುವ ಪ್ರಶಾಂತ್ ಕಿಶೋರ್, ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷದ ಪರವಾಗಿ ತಂತ್ರಗಾರಿಕೆ ಮಾಡುವ ಬದಲು ತೆರೆಯ ಎದುರು ಪಾತ್ರಧಾರಿಯಾಗಿ ಪ್ರತ್ಯಕ್ಷರಾಗಿದ್ದಾರೆ. ಪ್ರಶಾಂತ್ ಹಿಂದೆ ಗೆದ್ದ ಎಲ್ಲಾ ಸಂದರ್ಭದಲ್ಲೂ ಎಂದೂ ತೆರೆ ಎದುರು ಕಾಣಿಸಿಕೊಂಡಿರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು.

ವಾಸ್ತವವಾಗಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ಆಳ್ವಿಕೆ ಬಗ್ಗೆ ತೀರಾ ಕೆಟ್ಟ ಹೆಸರೇನೂ ಇಲ್ಲ. ಬಿಜೆಪಿ ನಾಯಕರು ಬಿಂಬಿಸುತ್ತಿರುವಂತೆ ಕಾನೂನು ಸುವ್ಯವಸ್ಥೆ ಪ್ರಪಾತಕ್ಕೆ ಕುಸಿದುಬಿದ್ದಿಲ್ಲ. ಸಮಸ್ಯೆ ಇರುವುದು ಮಮತಾ ಬ್ಯಾನರ್ಜಿಯವರ 'ಪೊಲಿಟಿಕಲ್ ಮ್ಯಾನೇಜ್ಮೆಂಟ್' ವಿಷಯದಲ್ಲಿ. ಇದನ್ನು ತಂತ್ರಜ್ಞನಾಗಿ ಪ್ರಶಾಂತ್ ಕಿಶೋರ್ ಗುರುತಿಸಬೇಕು ಮತ್ತು ಸಮಸ್ಯೆಗೆ ಪರಿಹಾರ ಹುಡುಕಬೇಕು. ಆದರೆ ಪ್ರಶಾಂತ್ ಕಿಶೋರ್, ಮಮತಾ ಬ್ಯಾನರ್ಜಿಯವರ ಸೋದರಳಿಯ ಮತ್ತು ಉತ್ತರಾಧಿಕಾರಿ ಅಭಿಷೇಕ್ ಅವರನ್ನು ಮೆಚ್ಚಿಸಲು ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ. ಈಗ ಪಕ್ಷ ಬಿಟ್ಟು ಹೋದವರು ಇದೇ ಅಭಿಷೇಕ್ ಬ್ಯಾನರ್ಜಿಯ ಕಾರಣಕ್ಕೆ ಅಸಮಾಧಾನಗೊಂಡಿದ್ದರು ಎಂಬ ವಾದವೂ ಇದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಅಮಿತ್ ಶಾ ಹೇಳಿದಂತೆ 'ಚುನಾವಣೆ ವೇಳೆಗೆ ಮಮತಾ ಬ್ಯಾನರ್ಜಿಯವರು ಏಕಾಂಗಿಯಾಗಲೂಬಹುದು'.

ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್
ಪಶ್ಚಿಮ ಬಂಗಾಳ ಚುನಾವಣೆ: ಕಳಂಕಿತರ ಪವಿತ್ರೀಕರಣದ ಬಿಜೆಪಿ ಸೋಪು ಯಾವುದು?

ಪಾಠ ಕಲಿಯದ ಪಿಕೆ

ಪಿಕೆ ಎಂದೇ ಖ್ಯಾತರಾಗಿರುವ ಪ್ರಶಾಂತ್ ಕಿಶೋರ್, ಮೋದಿ ಮತ್ತು ಅಮಿತ್ ಶಾ ಅವರಿಂದ ದೂರವಾದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಗೆ ತುಂಬಾ ಹತ್ತಿರದವರಾದರು. ಅವರಿಗೆ ಬಿಹಾರ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಶಾಶ್ವತ ಕೊಠಡಿಯೂ ಇತ್ತು. ಪ್ರಶಾಂತ್ ಕಿಶೋರ್ ಅವರನ್ನು ಜೆಡಿಯು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ರಾಜಕಾರಣಿಯಾಗಿ ರಾಜಕೀಯ ಮಾಡದೆ ಜೆಡಿಯು ಬಿಟ್ಟರು. ಈಗ ತಂತ್ರಜ್ಞನಾಗಿ ತಂತ್ರಗಾರಿಕೆ ಮಾಡದೆ ನಾಲಿಗೆ ಹರಿಬಿಡುತ್ತಿದ್ದಾರೆ.

ಅಪಾಯವನ್ನು ಮೈಮೇಲೆ ಎಳೆದುಕೊಂಡ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್
ಪಶ್ಚಿಮ ಬಂಗಾಳ ಚುನಾವಣೆ; ಸಾಮಾಜಿಕ ಜಾಲತಾಣ ಪರಿಣಾಮಕಾರಿ ಬಳಕೆಗೆ ಅಮಿತ್ ಶಾ ಸೂಚನೆ

ಮತ್ತೆ ಪಶ್ಚಿಮ ಬಂಗಾಳದ ವಿಷಯಕ್ಕೆ ಬರುವುದಾದರೆ ಅಲ್ಲಿ ಬಿಜೆಪಿಗೆ ಸೂಕ್ತವಾದ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ. ಯಾರ ಹೆಸರನ್ನು ಸೂಚಿಸಿದರೂ ಮಮತಾ ಬ್ಯಾನರ್ಜಿಯವರ ಎದುರು ಅವರು ಮಂಕಾಗಿಯೇ ಕಾಣುತ್ತಾರೆ. ಮೋದಿ ಹೆಸರು ಹೇಳಿಕೊಂಡು ಚುನಾವಣೆ ನಡೆಸಲು ಮುಂದಾದರೆ 'ಬೆಂಗಾಳಿ V/s ಬಾಹರಿ' ಎಂಬ‌ ವಿವಾದ ಉಂಟಾಗುತ್ತದೆ. ಮಮತಾ ಬ್ಯಾನರ್ಜಿಯವರಿಗೆ ಬೆಂಗಾಳಿ ಅಸ್ಮಿತೆ ಬೆಂಗಾವಲಾಗಿದೆ. ಈಗಾಗಲೇ ಹೇಳಿದಂತೆ ಆಡಳಿತ ವಿರೋಧಿ ಅಲೆ ಸರ್ಕಾರವನ್ನೇ ಆಪೋಶನ ತೆಗೆದುಕೊಳ್ಳುವಷ್ಟು ಇಲ್ಲ. ಇಂಥ 'ಪೂರಕ ವಾತಾವರಣದಲ್ಲಿ ಸವಾಲು ಹಾಕಿ, ಗೆಲುವಿನ ಬಳಿಕ ಬೀಗಬಹುದು' ಎಂದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ ಹಾಕಿರಬಹುದು. ಬಹಳ ಮಹತ್ವಾಕಾಂಕ್ಷಿಯಾದ ಅವರಿಗೆ ಇದರಿಂದ ಗೆದ್ದಾಗ ಸಿಗುವ ಲಾಭಕ್ಕಿಂತ ಸೋತರೆ ಆಗುವ ನಷ್ಟವೇ ಹೆಚ್ಚು. ಸದ್ಯಕ್ಕೆ ಬಲು ಬೇಡಿಕೆಯ ತಂತ್ರಜ್ಞ ಶಾಶ್ವತವಾಗಿ ಮರೆಯಾಗಲೂಬಹುದು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com