ಫೇಸ್ಬುಕ್ ಭಾರತದಲ್ಲಿ ಸರ್ಕಾರದ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕಳೆದ ಕೆಲವು ವರ್ಷಗಳಿಂದಲೂ ಇದೆ. ಇದಕ್ಕೆ ಸಂಬಂದಿಸಿದಂತೆ ವಾಲ್ ಸ್ಟ್ರೀಟ್ ಜರ್ನಲ್ ಫೇಸ್ಬುಕ್, ರಾಜಕೀಯ ಮತ್ತು ವ್ಯಾವಹಾರಿಕ ಕಾರಣಗಳಿಗಾಗಿ ತನ್ನ ಪ್ಲಾಟ್ಫಾರ್ಮ್ನಿಂದ ಬಜರಂಗದಳವನ್ನು ನಿಷೇಧಿಸುತ್ತಿಲ್ಲ ಎಂದು ವರದಿ ಮಾಡಿತ್ತು. ಫೇಸ್ಬುಕ್ನ ಭದ್ರತಾ ತಂಡ (security team) ಬಜರಂಗದಳದ ಜೊತೆಗೆ ಸನಾತನ ಸಂಸ್ಥೆ ಮತ್ತು ಶ್ರೀರಾಮ ಸೇನೆಯನ್ನೂ ನಿಷೇಧಿಸುವಂತೆ ಶಿಫಾರಸು ಮಾಡಿತ್ತು. ಆದರೆ ಫೇಸ್ಬುಕ್ನ ಭಾರತೀಯ ಅಧಿಕಾರಿಗಳು ಮೂರೂ ಸಂಘಟನೆಗಳನ್ನು ನಿಷೇಧಿಸದಿರುವ ನಿರ್ಧಾರ ಕೈಗೊಂಡಿದ್ದರು.
ಆಗಸ್ಟ್ನಲ್ಲಿ ಈ ಬಗ್ಗೆ ಮತ್ತೊಂದು ವರದಿ ಪ್ರಕಟಿಸಿದ್ದ ವಾಲ್ ಸ್ಟ್ರೀಟ್ ಜರ್ನಲ್ ಭಾರತದ ಸಾರ್ವಜನಿಕ ನೀತಿ ನಿರ್ದೇಶಕಾರದ ಅಂಕಿದಾಸ್ ಅವರು ಬಿಜೆಪಿ ಮತ್ತು ಬಿಜೆಪಿ ನಾಯಕರ ದ್ವೇಷದ ಪೋಸ್ಟ್ಗಳನ್ನು ಫೇಸ್ ಬುಕ್ ನಿಂದ ತೆಗೆದುಹಾಕಲು ವಿರೋಧ ವ್ಯಕ್ತಪಡಿಸುತ್ತಿದ್ದರು. ಫೇಸ್ಬುಕ್ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಈ ನಡೆಯು ಅದರ ವಾಣಿಜ್ಯಾಸಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬುವುದಾಗಿ ಅವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ತನ್ನ ವರದಿಯಲ್ಲಿ ಹೇಳಿತ್ತು.
ಪ್ರತಿಭಟನಾ ನಿರತ ರೈತರು ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವುದಕ್ಕೆ ಪ್ರತಿಯಾಗಿ ತಾವೇ 'ಕಿಸಾನ್ ಏಕ್ತಾ ಮೋರ್ಚಾ' ಎಂಬ ಪತ್ರಿಕೆ ಪ್ರಾರಂಭಿಸಿ ಫೇಸ್ಬುಕ್ ಪುಟವನ್ನೂ ತೆರೆದಿದ್ದರು. ಈಗ ಫೇಸ್ಬುಕ್ 'ಕಮ್ಯುನಿಟಿ ಸ್ಟಾಂಡರ್ಡ್ನ ವಿರುದ್ಧವಾಗಿದೆ' ಎಂಬ ನೆಪವೊಡ್ಡಿ ಆ ಪೇಜನ್ನು ತಡೆಹಿಡಿದಿದೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ರೈತ ಮುಖಂಡರು "ಸೈದ್ಧಾಂತಿಕವಾಗಿ ನಮ್ಮನ್ನು ಎದುರಿಸಲಾಗದೆ ಈ ರೀತಿ ದಾಳಿ ಮಾಡುತ್ತಿದ್ದಾರೆ" ಎಂದು ಬರೆದಿದ್ದಾರೆ. 'ಕಿಸಾನ್ ಏಕ್ತಾ ಮೋರ್ಚಾ ಫೇಸ್ಬುಕ್ನ ಕಮ್ಯುನಿಟಿ ಸ್ಟಾಡಂರ್ಡ್ನ್ನು ಉಲ್ಲಂಘನೆ ಮಾಡುವುದರಿಂದ ಪೇಜ್ ಅನ್ನು ಪ್ರಕಟಿಸಲಾಗುವುದಿಲ್ಲ' ಎಂದಿರುವ ಫೊಟೋವನ್ನೂ ಅವರು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ.
ರೈತರ ಪೇಜನ್ನು ಬ್ಲಾಕ್ ಮಾಡಿದ ಫೇಸ್ಬುಕ್ ಕೆಲವೇ ನಿಮಿಷಗಳಲ್ಲಿ ನೆಟ್ಟಿಗರಿಂದ ವ್ಯಾಪಕ ವಿರೋಧ ಎದುರಿಸಿತು. ಭಾರತದಲ್ಲಿರುವ ಮುನ್ನೂರು ಮಿಲಿಯಕ್ಕಿಂತಲೂ ಹೆಚ್ಚಿನ ಬಳಕೆದಾರರ ವಿರೋಧ ಕಟ್ಟಿಕೊಳ್ಳುವಂತಿಲ್ಲ ಎಂದೇ ಫೇಸ್ಬುಕ್ ತಾನು ಕಿಸಾನ್ ಮೋರ್ಚಾದ ಪೇಜ್ ಮೇಲೆ ಹೇರಿದ್ದ ನಿಷೇಧ ತೆರವುಗೊಳಿಸಿ ಪೋಸ್ಟ್ ಮಾಡಲು ಅನುವು ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.