ಟಿಎಂಸಿ ಸೇರಿದ ಪತ್ನಿ; ವಿಚ್ಛೇದನ ನೀಡಲು ಬಿಜೆಪಿ ಸಂಸದ ನಿರ್ಧಾರ

ಓರ್ವ ಮಹಿಳೆಯಾಗಿ ಬಿಜೆಪಿ ಪಕ್ಷದೊಳಗೆ ಇರಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಸುಜಾತ ಮೊಂಡಾಲ್‌, TMC ಸಂಸದ ಸೌಗತಾ ರಾಯ್ ಮತ್ತು ವಕ್ತಾರ ಕುನಾಲ್ ಘೋಷ್ ಸಮ್ಮುಖದಲ್ಲಿ TMC ಗೆ ಸೇರ್ಪಡೆಯಾಗಿದ್ದಾರೆ
ಟಿಎಂಸಿ ಸೇರಿದ ಪತ್ನಿ; ವಿಚ್ಛೇದನ ನೀಡಲು ಬಿಜೆಪಿ ಸಂಸದ ನಿರ್ಧಾರ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಮೂಲ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಂತೆಯೇ, ಬಿಜೆಪಿಯ ಸಂಸದರೊಬ್ಬರ ಪತ್ನಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿದೇ ತೀರಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿರುವ ಬಿಜೆಪಿಗೆ ಈ ಬೆಳವಣಿಗೆಯಿಂದ ತೀವ್ರ ಮುಖಭಂಗವಾಗಿದೆ.

ಬಿಜೆಪಿ ಸಂಸದ ಸೌಮಿತ್ರಾ ಖಾನ್‌ ಅವರ ಪತ್ನಿ ಸುಜಾತ ಮೊಂಡಾಲ್‌ ಖಾನ್‌ ಟಿಎಂಸಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡವರು. ಭಾರತೀಯ ಜನತಾ ಯುವ ಮೋರ್ಛಾದ ಅಧ್ಯಕ್ಷರೂ ಆಗಿರುವ ಬಿಷ್ಣುಪುರ ಸಂಸದ ಸೌಮಿತ್ರಾ ಪಶ್ಚಿಮ ಬಂಗಾಳ ಬಿಜೆಪಿಯಲ್ಲಿ ಪ್ರಭಾವಿ ಯುವ ನಾಯಕ. ಇವರ ಪತ್ನಿಯೇ ಪಕ್ಷದ ವಿರುದ್ಧ ಹೇಳಿಕೆ ನೀಡಿ ಟಿಎಂಸಿಗೆ ಸೇರಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಓರ್ವ ಮಹಿಳೆಯಾಗಿ ಆ ಪಕ್ಷದಲ್ಲಿರುವುದು ಕಷ್ಟವಾಗುತ್ತಿದೆ -ಸುಜಾತ ಮೊಂಡಾಲ್‌

ಬಿಜೆಪಿಯಲ್ಲಿ ತನಗೆ ಗೌರವ ಸಿಗುತ್ತಿಲ್ಲ, ಓರ್ವ ಮಹಿಳೆಯಾಗಿ ಬಿಜೆಪಿ ಪಕ್ಷದೊಳಗೆ ಇರಲು ನನಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಸುಜಾತ ಮೊಂಡಾಲ್‌, ತೃಣಮೂಲ ಸಂಸದ ಸೌಗತಾ ರಾಯ್ ಮತ್ತು ವಕ್ತಾರ ಕುನಾಲ್ ಘೋಷ್ ಅವರ ಸಮ್ಮುಖದಲ್ಲಿ ಟಿಎಂಸಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಟಿಎಂಸಿಗೆ ಸೇರಿದ ನಂತರ ಮಾಧ್ಯಮಗಳ ಎದುರು ಮಾತನಾಡಿರುವ ಅವರು, “ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬೆಳೆಸಲು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೇನೆ. ಬಿಜೆಪಿ ಪಕ್ಷ ತೃಣಮೂಲ ಕಾಂಗ್ರೆಸ್​ನಲ್ಲಿರುವ ಎಲ್ಲಾ ರಾಜಕಾರಣಿಗಳನ್ನು ಪಕ್ಷಾಂತರದ ಹೆಸರಿನಲ್ಲಿ ಭ್ರಷ್ಟಗೊಳಿಸುತ್ತಿದೆ. ಮೂಲ ಬಿಜೆಪಿಗರಿಗೇ ಪಕ್ಷದಲ್ಲಿ ಬೆಲೆ ಗೌರವ ಇಲ್ಲದಂತಾಗಿದೆ. ಇದೇ ಕಾರಣಕ್ಕಾಗಿ ನಾನು ಪಕ್ಷವನ್ನು ತ್ಯಜಿಸುತ್ತಿದ್ದೇನೆ” ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷಕ್ಕೆ ಮುಖ್ಯಮಂತ್ರಿ ಮುಖ ಇಲ್ಲ. ಇಲ್ಲಿ ಮಮತಾ ಬ್ಯಾನರ್ಜಿ ಅವರ ವರ್ಚಸ್ಸನ್ನು ಬಿಜೆಪಿ ಏನೇ ಮಾಡಿದರು ಕುಗ್ಗಿಸಲು ಸಾಧ್ಯವಿಲ್ಲ. ಓರ್ವ ಮಹಿಳೆಯಾಗಿ ಬಿಜೆಪಿ ಪಕ್ಷದೊಳಗೆ ಇರಲು ನನಗೆ ಸಾಧ್ಯವಾಗುತ್ತಿಲ್ಲ, ಅದರ ಬದಲು ಮಮತಾ ಬ್ಯಾನರ್ಜಿ ಜೊತೆಗೆ ಕೆಲಸ ಮಾಡುವುದು ನನಗೆ ಗೌರವಾನ್ವಿತವಾದ ವಿಚಾರ ಎಂದು ನಾನು ಭಾವಿಸುತ್ತೇನೆ” ಎಂದು ಸುಜಾತಾ ತಿಳಿಸಿದ್ದಾರೆ.

ಟಿಎಂಸಿ ಸೇರಿದ ಬೆನ್ನಲ್ಲೇ ಭದ್ರತೆ, ಕಾರು ವಾಪಸ್

ಟಿಎಂಸಿ ಸೇರುವ ಮೂಲಕ ಕೌಟುಂಬಿಕ ಅಸಮಾಧನವನ್ನೂ ಬಹಿರಂಗಗೊಳಿಸಿದ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿರುವ ಬಿಜೆಪಿ ಸಂಸದ ಸೌಮಿತ್ರಾ ಖಾನ್‌, ಬಿಷ್ಣುಪುರದ ಬರ್ಜೊರದಲ್ಲಿ ಪತ್ನಿಗೆ ನೀಡಿದ್ದ ಬಂಗಲೆಯನ್ನು ಹಾಗೂ ಭದ್ರತೆಯನ್ನು ಹಿಂತೆಗೆದುಕೊಂಡಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಸೌಮಿತ್ರಾ, ನನ್ನ ಪತ್ನಿಯನ್ನು ನನ್ನಿಂದ ದೂರಪಡಿಸಿದವರನ್ನು ನಾನು ಕ್ಷಮಿಸುವುದಿಲ್ಲ ಎಂದಿದ್ದಾರೆ.

ʼನೀವು ನನ್ನ ಕುಟುಂಬವನ್ನು ಒಡೆದಿದ್ದೀರಿ, ನಿಮ್ಮನ್ನು ನಾನು ಕ್ಷಮಿಸುವುದಿಲ್ಲ. ಟಿಎಂಸಿಯೊಂದಿಗಿನ ಹೋರಾಟ ಇದ್ದೇ ಇರುತ್ತದೆ. ರಾಜಕೀಯದಲ್ಲಿ ಏನೆಲ್ಲಾ ಆಟವನ್ನು ನಾನು ನೋಡಿದ್ದೇನೆ. ಆದರೆ ಇದು ಸಂಭವಿಸಬಹುದು ಎಂದು ನಾನು ನಿರೀಕ್ಷಿಸಿರಲಿಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com