ಪಶ್ಚಿಮ ಬಂಗಾಳ ರಾಜಕೀಯ; ದೀದಿಗೆ ಆಘಾತ, ಟಿಎಂಸಿ ತೊರೆದು ಬಿಜೆಪಿ ಸೇರಲಿರುವ ಹತ್ತು ಸಚಿವರು

ಈಗಾಗಲೇ ಎರಡು ಮಂದಿ ಟಿಎಂಸಿ ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳ ಅರಣ್ಯ ಸಚಿವ ರಾಜೀಬ್‌ ಬ್ಯಾನರ್ಜಿ ಹಾಗೂ ಸಂಸದ ಸುನಿಲ್‌ ಮಂಡಲ್‌ ಪಕ್ಷ ವಿರೋಧಿ ಹೇಳಿಕೆ ನೀಡಿರುವುದು ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದೆ.
ಪಶ್ಚಿಮ ಬಂಗಾಳ ರಾಜಕೀಯ; ದೀದಿಗೆ ಆಘಾತ, ಟಿಎಂಸಿ ತೊರೆದು ಬಿಜೆಪಿ ಸೇರಲಿರುವ ಹತ್ತು ಸಚಿವರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಪಕ್ಷವೂ ಬಿಜೆಪಿಯಿಂದಾಗಿ ಯಾರು ಊಹಿಸಲಾಗದಷ್ಟು ಆಘಾತ ಎದುರಿಸಬೇಕಾಯ್ತು. ನೆಲೆಯೇ ಇಲ್ಲದ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಹದಿನೆಂಟು ಕ್ಷೇತ್ರದಲ್ಲಿ ಜಯಭೇರಿ ಬಾರಿಸುವ ಮೂಲಕ ದಾಖಲೆ ನಿರ್ಮಿಸಿತ್ತು. ಇದರಿಂದ ಬಿಜೆಪಿಯನ್ನೇ ಕಂಡರೆ ಉರಿದು ಬೀಳುವ ಮಮತಾ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಲೇ ಇದ್ದರು. ಪ್ರತಿನಿತ್ಯವೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಕೆಂಡಕಾರುತ್ತಲೇ ಇದ್ದರು. ಇದಕ್ಕೆ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಗೆಲುವೊಂದೇ ಪ್ರತ್ಯುತ್ತರ ಎಂದು ಅಮಿತ್‌ ಶಾ ಹೇಳಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಬಿಹಾರ ಮತ್ತು ವಿವಿಧ ರಾಜ್ಯಗಳ ಉಪಚುನಾವಣೆ ಗೆದ್ದ ಅಮಿತ್‌ ಶಾ ಈಗ ಪಶ್ಚಿಮ ಬಂಗಾಳ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಒಮ್ಮೆಯೂ ಚುನಾವಣೆ ಪ್ರಚಾರಕ್ಕೆ ಹೋಗದೇ ಬಿಹಾರದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಟಾರ್ಗೆಟ್ ಈಗ ಪಶ್ಚಿಮ ಬಂಗಾಳ. ಇದಕ್ಕಾಗಲೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಅಮಿತ್‌ ಶಾ ಒಂದೊಂದಾಗಿಯೇ ಹೆಜ್ಜೆಯಿಡುತ್ತಿದ್ದಾರೆ. ರಾಜಕೀಯ ಪಂಡಿತರ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯೂ ಮಮತಾ ಬ್ಯಾನರ್ಜಿಗೆ ಅಷ್ಟು ಸುಲಭವಲ್ಲ. ಹೇಗಾದರೂ ಮಾಡಿ ಪಶ್ಚಿಮ ಬಂಗಾಳದಲ್ಲಿ ಎನ್ಡಿಎ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಬೇಕು ಎಂದು ಹೊರಟಿರುವ ಅಮಿತ್‌ ಶಾ ಏನು ಬೇಕಾದರು ಮಾಡಬಹುದು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದಕ್ಕಾಗಿಯೇ ತಿಂಗಳಿಗೊಮ್ಮೆಯಾದರೂ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿರುವ ಅಮಿತ್‌ ಶಾ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ಹೋರಾಟ ನಡೆಸಿ ಕೇಸರಿ ಬಾವುಟ ಹಾರಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇತರ ರಾಜ್ಯದಲ್ಲಿ ಕೇಸರಿ ಬಾವುಟ ಹಾರಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಅದು ಅಷ್ಟು ಸುಲಭವಲ್ಲ. ಹೇಗಾದರೂ ಇಲ್ಲಿ ಜಗಳ ಆಗುತ್ತದೆ, ಒಂದೆರಡು ಹಿಂದುಗಳ ಹೆಣ ಬೀಳಬಹುದು. ಆಗ ನಾವು ಅಧಿಕಾರಕ್ಕೆ ಬರಬಹುದು ಎನ್ನುವುದು ಅಮಿತ್‌ ಶಾ ಪ್ಲಾನ್‌. ಹೀಗಿರುವಾಗಲೇ ಇನ್ನೊಂದೆಡೆ ಆಮರೇಷನ್‌ ಕಮಲವೂ ಶುರುವಾಗಿದೆ.

ಹೀಗೆ ಪಶ್ಚಿಮ ಬಂಗಾಳದ ರಾಜಕಾರಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದಂತೆಯೇ ದೀದಿಗೆ ಆಘಾತ ಎದುರಾಗಿದೆ. ಟಿಎಂಸಿ ಮಾಜಿ ಸಾರಿಗೆ ಸಚಿವ ಸುವೆಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದಿದ್ದಾರೆ. ಸುವೆಂದು ರಾಜೀನಾಮೆಯನ್ನ ಬಿಜೆಪಿ ಸ್ವಾಗತಿಸಿದೆ. ಈ ಮುಖ್ಯ ಬೆಳವಣಿಗೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ 9 ರಿಂದ 10 ಸಚಿವರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಚುನಾವಣಾ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸದ್ಯದಲ್ಲೇ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಆಗ ಟಿಎಂಸಿ ಸಚಿವರು ಬಿಜೆಪಿ ಸೇರ್ಪಡೆಯಾಗಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನು, ಕೆಲವೇ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಟಿಎಂಸಿ ಹಿರಿಯ ನಾಯಕರು ಪಕ್ಷ ಬಿಡುತ್ತಿರುವುದು ದೀದಿಗೆ ಆಘಾತ ನೀಡಿದೆ. ಸುವೇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲೇ ಮಮತಾ ಬ್ಯಾನರ್ಜಿ ತಮ್ಮ ನಿವಾಸದಲ್ಲಿ ಪಕ್ಷದ ಹಿರಿಯ ಮುಖಂಡರ ಸಭೆ ನಡೆಸಿದ್ದಾರೆ. ಈ ವೇಳೆ ಇನ್ನು ಹಲವು ನಾಯಕರು ಪಕ್ಷ ತೊರೆಯಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ, ನೀವು ನಮ್ಮ ಪಕ್ಷದವರನ್ನು ಶಾಪಿಂಗ್‌ ಮಾಡುತ್ತಿದ್ದೀರಿ, ನಾಚಿಕೆಯಾಗುವುದಿಲ್ಲವೇ ಎಂದು ಬಿಜೆಪಿಗೆ ದೀದಿ ತರಾಟೆ ತೆಗೆದುಕೊಂಡಿದ್ದಾರೆ.

"ಹೋಗೋರು ಹೋಗಲಿ, ಬರೋರು ಬರಲಿ" ಟಿಎಂಸಿ ಮಾತ್ರ ಯಾವತ್ತು ಸ್ಟ್ರಾಂಗ್‌ ಎಂದು ಬಿಜೆಪಿಗೆ ದೀದಿ ಎಚ್ಚರಿಕಾ ಸಂದೇಶ ರವಾನಿಸಿದ್ದಾರೆ. ಶಾಸಕ ಜಿತೇಂದ್ರ ತಿವಾರಿ, ಮೊಂಡಲ್‌ ಸೇರಿದಂತೆ 10ಕ್ಕೂ ಹೆಚ್ಚು ನಾಯಕರು ಬಿಜೆಪಿ ಸೇರುವ ಸಾಧ್ಯತೆ ಇದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com