ಕೇರಳ ಚುನಾವಣೆ; ಎಡ ಮೈತ್ರಿ ಗೆಲುವು, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ, ಪ್ರಗತಿ ಸಾಧಿಸಿದ ಬಿಜೆಪಿ

ಕಳೆದ ಬಾರಿ ತಿರುವನಂತಪುರ ಪಾಲಿಕೆಯಲ್ಲಿ 34 ಸ್ಥಾನ ತನ್ನ ಮಡಿಗೇರಿಸಿಕೊಂಡಿದ್ದ ಬಿಜೆಪಿ ಈ ಬಾರಿ 40ರ ಆಸುಪಾಸು ಗೆದ್ದು ತುಸು ಬಲ ಹೆಚ್ಚಿಸಿಕೊಂಡಿದೆ. 100 ಸದಸ್ಯ ಬಲದ ಪಾಲಿಕೆಯಲ್ಲಿ ಎಲ್‌ಡಿಎಫ್ ಈ ಬಾರಿ 51 ಸ್ಥಾನ, ಯುಡಿಎಫ್‌ 10 ಸ್ಥಾನ ಗೆದ್ದಿದೆ
ಕೇರಳ ಚುನಾವಣೆ; ಎಡ ಮೈತ್ರಿ ಗೆಲುವು, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ, ಪ್ರಗತಿ ಸಾಧಿಸಿದ ಬಿಜೆಪಿ

ಇತ್ತೀಚೆಗೆ ನಡೆದ ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಇಲ್ಲಿನ 1,199 ಸ್ಥಳೀಯ ಸಂಸ್ಥೆಗಳ ಪೈಕಿ 670ರಲ್ಲಿ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಂದೆಡೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ತೀವ್ರ ಹಿನ್ನಡೆ ಅನುಭವಿಸಿದರೆ, ಇನ್ನೊಂದೆಡೆ ಕಳೆದ ಬಾರಿಗಿಂತಲೂ ಈ ಸಲ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರಗತಿ ಸಾಧಿಸಿದೆ. ಶಬರಿಮಲೆ ವಿವಾದವನ್ನೇ ಹಿಡಿದುಕೊಂಡು ತಿರುವನಂತಪುರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿಯ ಕನಸು ಈ ಸಲ ನನಸಾಗಿಲ್ಲವಾದರೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹತ್ವದ ಸಾಧನೆ ಮಾಡಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿಯೇ ತನ್ನ ಸೋಲಿಗೆ ಯುಡಿಎಫ್‌ ಹಾಗೂ ಎಲ್‌ಡಿಎಫ್‌ ನಡುವಿನ ಹೊಂದಾಣಿಕೆಯೇ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಇನ್ನು, ಕೇರಳದ ಆರು ಪಾಲಿಕೆಗಳ ಪೈಕಿ ಐದರಲ್ಲಿ ಎಲ್‌ಡಿಎಫ್‌ ಅಧಿಕಾರದ ಗದ್ದುಗೆಗೇರಿದೆ. ಕಣ್ಣೂರಿನಲ್ಲಿ ಮಾತ್ರ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ. ಕಳೆದ ಬಾರಿ ತಿರುವನಂತಪುರ ಪಾಲಿಕೆಯಲ್ಲಿ 34 ಸ್ಥಾನ ತನ್ನ ಮಡಿಗೇರಿಸಿಕೊಂಡಿದ್ದ ಬಿಜೆಪಿ ಈ ಬಾರಿ 40ರ ಆಸುಪಾಸು ಗೆದ್ದು ತುಸು ಬಲ ಹೆಚ್ಚಿಸಿಕೊಂಡಿದೆ. 100 ಸದಸ್ಯ ಬಲದ ಪಾಲಿಕೆಯಲ್ಲಿ ಎಲ್‌ಡಿಎಫ್ ಈ ಬಾರಿ 51 ಸ್ಥಾನ, ಯುಡಿಎಫ್‌ 10 ಸ್ಥಾನ ಗೆದ್ದಿದೆ. ಹಾಗಾಗಿ, ಸ್ಥಳೀಯ ಸಂಸ್ಥೆ ಚುನಾವಣೆ ಗೆದ್ದಂತೆಯೇ ಮುಂದಿನ ಐದು ತಿಂಗಳಲ್ಲಿ ನಡೆಯುವ ಕೇರಳ ವಿಧಾನಸಭೆ ಚುನಾವಣೆ ಗೆಲ್ಲಲು ಎಲ್‌ಡಿಎಫ್‌ ಭರ್ಜರಿ ಪ್ಲಾನ್‌ ಮಾಡಿಕೊಂಡಿದೆ. ಸಾಲು ಸಾಲು ವಿವಾದಗಳ ನಡುವೆಯೂ ಪಿಣರಾಯಿ ವಿಜಯನ್‌ ನೇತೃತ್ವದ ಸರ್ಕಾರದ ಕೈ ಜನ ಹಿಡಿದಿರುವುದು ಮಾತ್ರ ಅಚ್ಚರಿ ಸಂಗತಿಯೇ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಬಾರಿ ಚುನಾವಣೆಗೆ ಹೋಲಿಸಿದರೆ ಮೂರೂ ಮೈತ್ರಿಕೂಟಗಳ ಸಾಧನೆಯಲ್ಲಿ ಅಷ್ಟೇನೂ ದೊಡ್ಡ ವ್ಯತ್ಯಾಸ ಕಂಡಿಲ್ಲ. ಗ್ರಾಮ ಪಂಚಾಯತಿಗಳಲ್ಲಿ ಎಲ್‌ಡಿಎಫ್ ಬಲ ಸ್ವಲ್ಪ ಕಡಿಮೆಯಾಗಿದ್ದರೂ ಒಟ್ಟಾರೆ ಕಳೆದ ಬಾರಿಗಿಂತ ಹೆಚ್ಚು ವಾರ್ಡ್ ಗಳನ್ನ ಗೆದ್ದಿದೆ. ಯುಡಿಎಫ್ ಬಹುತೇಕ ಯಥಾಸ್ಥಿತಿ ಹೊಂದಿದೆ. ಬಿಜೆಪಿ ಮಾತ್ರ ಪ್ರಗತಿ ಸಾಧಿಸಿದೆ.

ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಕೋವಿಡ್ ಸಂಕಷ್ಟದಲ್ಲಿ ಮಾಡಿದ ಜನಪರ ಚಟುವಟಿಕೆಗಳೇ ಅದರ ಕೈ ಹಿಡಿದಿದೆ. ಸಿಎಂ ಪಿಣರಾಯಿ ವಿಜಯನ್‌ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡುತ್ತೇವೆ ಎಂದ ಯುಡಿಎಫ್‌ನ ಕೈ ಹಿಡಿಯಲು ಜನ ಹಿಂದೇಟು ಹಾಕಿದ್ದಾರೆ. ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಚುನಾವಣೆಗೆ ಗೆಲ್ಲಲು ಹೊರಟ ಬಿಜೆಪಿಗೆ ಜನ ಅಚ್ಚರಿ ಫಲಿತಾಂಶ ನೀಡಿ ಚಾಟೀ ಬೀಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದು ಯುಡಿಎಫ್‌ ಈ ಬಾರಿ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲು ಕಾಂಗ್ರೆಸ್ಸಿನಲ್ಲಿರುವ ಬಿರುಕು ಕಾರಣ ಎಂದೇಳಲಾಗುತ್ತಿದೆ. ಕೇರಳ ಕಾಂಗ್ರೆಸ್ಸಿಗರ ನಡುವಿನ ಭಿನ್ನಮತವೇ ಎಡ ಮೈತ್ರಿ ಗೆಲುವಿಗೆ ಸಹಕಾರಿಯಾಗಿದೆ. ಹೀಗಾಗಿ, ಕೇರಳದ ಕಾಂಗ್ರೆಸ್‌ನ ಎಲ್ಲಾ ಜಿಲ್ಲಾ ಸಮಿತಿಗಳನ್ನು ವಿಸರ್ಜಿಸಿ ನೂತನ ನಾಯಕರನ್ನು ಆಯ್ಕೆ ಮಾಡಲು ಹೈಕಮಾಂಡ್‌ ಚಿಂತಿಸಿದೆ.ಮುಂದಿನ ಐದು ತಿಂಗಳಿನಲ್ಲಿ ಕೇರಳ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವೂ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಅತ್ತ ಬಿಜೆಪಿ ಹಿಂದುತ್ವದ ಅಜೆಂಡಾ, ಇತ್ತ ಸಿಪಿಎಂ ಸರ್ಕಾರದ ಜನಪರ ಕಾರ್ಯಗಳ ನಡುವೆ ನಾವು ಅಧಿಕಾರಕ್ಕೆ ಬರಲು ಸಾಕಷ್ಟು ಶ್ರಮ ಹಾಕಬೇಕಿದೆ. ಇದಕ್ಕಾಗಿ ಕೇರಳ ರಾಜ್ಯ ನಾಯಕತ್ವ ಬದಲಾಯಿಸಲು ಸಿದ್ದ ಎಂದು ಹೈಕಮಾಂಡ್‌ ಖಡಕ್‌ ಎಚ್ಚರಿಕೆ ರವಾನಿಸಿದೆ.

ಬಿಜೆಪಿ ಹೈಕಮಾಂಡ್‌ ತಮಗೆ ತುಸು ಹೆಚ್ಚು ಬಲ ತುಂಬಿದ ಕೇರಳದ ಜನತೆಗೆ ಧನ್ಯವಾದ ತಿಳಿಸಿದೆ. ಇದರ ಬೆನ್ನಲ್ಲೇ ಎದುರಾಗಲಿರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯುವಂತೆ ಜನರಿಗೆ ಮನವಿ ಮಾಡಿದೆ. ಅದಕ್ಕಾಗಿ ತಯಾರಿಯೂ ಮಾಡಿಕೊಳ್ಳುತ್ತಿದೆ. ಎಲ್‌ಡಿಎಫ್ ಮುನ್ನಡೆ ಸಾಧಿಸಿದರೂ ಯುಡಿಎಫ್ ಅನ್ನು ಹಿಂದಿಕ್ಕಿ ಬಿಜೆಪಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಮೂರು ಹಂತಗಳಲ್ಲಿ ಕೇರಳದ 1,200 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ 6 ನಗರಪಾಲಿಕೆಗಳು, 14 ಜಿಲ್ಲಾ ಪಂಚಾಯತ್, 86 ಪುರಸಭೆ (ಮುನಿಸಿಪಾಲಿಟಿ), 103 ಬ್ಲಾಕ್ ಪಂಚಾಯತ್ ಮತ್ತು 941 ಗ್ರಾಮ ಪಂಚಾಯತ್ಗಳಿಂದ ಒಟ್ಟು 21,893 ವಾರ್ಡ್ಗಳಿಗೆ ಮತದಾನವಾಗಿತ್ತು. ಸರಾಸರಿ ಮತದಾನದ ಪ್ರಮಾಣ ಸುಮಾರು ಶೇ. 75 ಮೇಲ್ಪಟ್ಟು ಇತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com