ಪಶ್ಚಿಮ ಬಂಗಾಳ ಚುನಾವಣೆ ಘೋಷಣೆಗೂ ಮುನ್ನ ರಾಜಕೀಯ ಚಟುವಟಿಕೆಗಳು ತೀವ್ರವಾಗಿ ಗರಿಗೆದರಿವೆ. ಟಿಎಂಸಿ ಮಾಜಿ ಸಾರಿಗೆ ಸಚಿವ ಸುವೆಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ನಡೆದ ಬೆನ್ನಿಗೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯ ಪ್ರಾಥಮಿಕ ಸದಸ್ಯತ್ವದಿಂದ ಮತ್ತು ಪಕ್ಷದ ಪ್ರತಿಯೊಂದು ಹುದ್ದೆಗೆ ಉತ್ತರ ಕಾಂತಿ ಶಾಸಕ ಬನಸ್ರಿ ಮೈಟಿ ರಾಜೀನಾಮೆ ನೀಡಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈಗಾಗಲೇ ಎರಡು ಮಂದಿ ಟಿಎಂಸಿ ಶಾಸಕರು ಪಕ್ಷಕ್ಕೆ ರಾಜಿನಾಮೆ ನೀಡಿದ್ದರು. ಅಲ್ಲದೆ, ಪಶ್ಚಿಮ ಬಂಗಾಳ ಅರಣ್ಯ ಸಚಿವ ರಾಜೀಬ್ ಬ್ಯಾನರ್ಜಿ ಹಾಗೂ ಸಂಸದ ಸುನಿಲ್ ಮಂಡಲ್ ಪಕ್ಷ ವಿರೋಧಿ ಹೇಳಿಕೆ ನೀಡಿರುವುದು ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಬನಸ್ರಿ ಅವರ ರಾಜಿನಾಮೆಯೂ ಟಿಎಂಸಿಗೆ ನುಂಗಲಾರದ ತುತ್ತಾಗಿದೆ.
ಟಿಎಂಸಿಯ ಶಾಸಕರ ರಾಜಿನಾಮೆಯನ್ನು ಬಿಜೆಪಿಯು ಸ್ವಾಗತಿಸಿದ್ದು, ಈ ರಾಜಿನಾಮೆ ಪ್ರಹಸನಗಳ ಹಿಂದೆ ಬಿಜೆಪಿಯೇ ಇರುವುದು ಬಹಿರಂಗ ರಹಸ್ಯವೆಂದು ಹೇಳಲಾಗುತ್ತಿದೆ. ಈ ನಡುವೆ, ಬಿಜೆಪಿ ನಾಯಕರ ಆಟಾಟೋಪಗಳಿಗೆ ಕಡಿವಾಣ ಹಾಕಲು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹೊರಟಿದ್ದು, ಬಿಜೆಪಿ ನಾಯಕರು ಪಶ್ಚಿಮ ಬಂಗಾಳ ಸರ್ಕಾರ ತಮ್ಮ ವಿರುದ್ಧ ಹಗೆ ಸಾಧಿಸುತ್ತಿದೆಯೆಂದು ಸುಪ್ರೀಂ ಮೊರೆಯೂ ಹೋಗಿದ್ದಾರೆ.