ಕೋವಿಡ್ನ ಕಾರಣದಿಂದಾಗಿ ಈ ಬಾರಿ ಸಂಸತ್ ಚಳಿಗಾಲದ ಅಧಿವೇಶನ ರದ್ದಾಗಿದೆ. ಈ ಕುರಿತಾಗಿ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಪ್ರಹ್ಲಾದ್ ಜೋಷಿ ಅವರು, ಮುಂದಿನ ಜನವರಿಯಲ್ಲಿಯೇ ಬಜೆಟ್ ಅಧಿವೇಶನವನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಪತ್ರ ಬರೆದಿರುವ ಪ್ರಹ್ಲಾದ್ ಜೋಷಿ ಅವರು, “ಕೋವಿಡ್ನಂತಹ ಪರಿಸ್ಥಿತಿಗಳಿಗೆ ಚಳಿಗಾಲ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಅದರಲ್ಲೂ ದೆಹಲಿಯಂತಹ ಪ್ರದೇಶದಲ್ಲಿ ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ನಾವೀಗ ಡಿಸೆಂಬರ್ ಮಧ್ಯಭಾಗದಲ್ಲಿದ್ದೇವೆ. ಇನ್ನು ಕೆಲವೇ ಸಮಯದಲ್ಲಿ ಕೋವಿಡ್ ಲಸಿಕೆಯೂ ಸಿಗಲಿದೆ,” ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರೊಂದಿಗೆ, ಇತರ ಪಕ್ಷದ ನಾಯಕರನ್ನು ಕೂಡಾ ಸಂಪರ್ಕಿಸಿರುವ ಕುರಿತು ಬರೆದಿರುವ ಜೋಷಿ ಅವರು, ಇತರ ಪಕ್ಷಗಳ ನಾಯಕರೂ ಕೂಡಾ ಕೋವಿಡ್ ಕುರಿತು ಚಿಂತಿತರಾಗಿದ್ದಾರೆ. ಅವರೂ ಕೂಡಾ ಈ ಬಾರಿಯ ಅಧಿವೇಶನವನ್ನು ಮುಂದೂಡಲು ಸಮ್ಮತಿ ಸೂಚಿಸಿದ್ದಾರೆ, ಎಂದಿದ್ದಾರೆ.
“ಅತೀ ಶೀಘ್ರದಲ್ಲಿಯೇ ಮುಂದಿನ ಅಧಿವೇಶನವನ್ನು ನಡೆಸಲಾಗುವುದು. ಜನವರಿ 2021ರಲ್ಲಿಯೇ ಬಜೆಟ್ ಅಧಿವೇಶನವನ್ನು ನಡೆಸಲಾಗುವುದು,” ಎಂದವರು ಹೇಳಿದ್ದಾರೆ.