ಚುನಾವಣೆ ಸಮೀಪಿಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಘರ್ಷ ತಾರಕಕ್ಕೇರಿದೆ.
ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕಾರಿನ ಮೇಲೆ ನಡೆದ ದಾಳಿ ಮತ್ತು ಆ ಘಟನೆಯನ್ನು ಬಿಜೆಪಿ ಒಂದು ರಾಷ್ಟ್ರೀಯ ದುರಂತವೆಂಬಂತೆ ಬಿಂಬಿಸುವ ಮೂಲಕ ಸಂಘರ್ಷ ಮತ್ತೊಂದು ಮಗ್ಗುಲಿಗೆ ಹೊರಳಿದೆ.
ಡಿಸೆಂಬರ್ 10ರಂದು ಕೊಲ್ಲತ್ತಾದ ಬಳಿ ನಡೆದ ದಾಳಿಯಲ್ಲಿ ಕಾರುಗಳು ಜಖಂಗೊಂಡಿದ್ದವು. ಕೆಲವರು ಗಾಯಗೊಂಡಿದ್ದರು. ಇಟ್ಟಿಗೆ, ಕೋಲುಗಳಿಂದ ದಾಳಿ ಮಾಡಿರುವುದಾಗಿ ವರದಿಯಾಗಿತ್ತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಘಟನೆ ಬೆನ್ನಲ್ಲೇ ಬಿಜೆಪಿ, ತನ್ನ ರಾಷ್ಡ್ರೀಯ ಅಧ್ಯಕ್ಷರ ಮೇಲೆ ನಡೆದ ದಾಳಿಯ ರೂವಾರಿ ಆ ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್. ಆ ಪಕ್ಷದ ಸರ್ಕಾರವೇ ತನ್ನ ಗೂಂಡಾಗಳನ್ನು ಬಿಟ್ಟು ಈ ಕೃತ್ಯ ನಡೆಸಿದೆ ಎಂದು ಗಂಭೀರ ಆರೋಪ ಮಾಡಿದೆ.
ಆದರೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್, ಈ ದಾಳಿಗೆ ಬಿಜೆಪಿಯೇ ಕಾರಣ. ಚುನಾವಣಾ ಲಾಭಕ್ಕಾಗಿ ರಾಜ್ಯದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಹೇರಲು ಮತ್ತು ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ರಾಷ್ಟ್ರಪತಿ ಆಡಳಿತ ಹೇರುವ ಹುನ್ನಾರದ ಭಾಗವಾಗಿ ತಾನೇ ಈ ಕೃತ್ಯ ನಡೆಸಿದೆ. ಕಳೆದ ಒಂದು ವರ್ಷದಿಂದ ಬಿಜೆಪಿ ನಿರಂತರವಾಗಿ ಇಂತಹ ಕುತಂತ್ರಗಳನ್ನು ನಡೆಸುತ್ತಲೇ ಇದೆ ಎಂದು ತಿರುಗೇಟು ನೀಡಿದೆ.
ಈ ನಡುವೆ, ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ, ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮುಖ್ಯಸ್ಥರಿಗೆ ನೋಟೀಸ್ ನೀಡಿದ್ದು ಘಟನೆ ತಡೆಯುವಲ್ಲಿ ವಿಫಲರಾದ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸಲು ತಾಕೀತು ಮಾಡಿದೆ.
ಈ ಬಗ್ಗೆ ಕೂಡ ತೃಣಮೂಲ ಕಾಂಗ್ರೆಸ್ ಕಿಡಿಕಾರಿದ್ದು, ಅಧಿಕಾರಿಗಳನ್ನು ಬೆದರಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸಿ ರಾಜ್ಯ ಸರ್ಕಾರದ ವಿರುದ್ಧ ಕಾರ್ಯತಂತ್ರ ಹೆಣೆಯಲು ಈ ನೋಟೀಸ್ ನೀಡಲಾಗಿದೆ. ಇದೊಂದು ರಾಜಕೀಯ ಪ್ರೇರಿತ ಕ್ರಮ ಎಂದು ಹೇಳಿದೆ.
ಈ ನಡುವೆ ಘಟನೆಗೆ ತೃಣಮೂಲ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಕಾರಣ ಎಂದಿರುವ ಬಿಜೆಪಿ ಪಶ್ಚಿಮ ಬಂಗಾಳ ಘಟಕ ಅಧ್ಯಕ್ಷ ದಿಲೀಪ್ ಘೋಷ್, ಬದಲಾವಣೆಯೊಂದಿಗೆ ಸೇಡು ಕೂಡ ಕಾದಿದೆ ಎಂದಿದ್ದಾರೆ. ಎಲ್ಲವನ್ನೂ ನಿಮಗೆ ವಾಪಸು ಮಾಡಲಿದ್ದೇವೆ. ಬಡ್ಡಿ ಸಮೇತ ವಾಪಸು ಮಾಡುವೆವು ಎಂದು ಹೇಳಿದ್ದಾರೆ.
ಸದ್ಯ ರಾಷ್ಟ್ರರಾಜಕಾರಣದ ಪ್ರಮುಖ ವಿದ್ಯಮಾನವಾಗಿ ಈ ಘಟನೆಯನ್ನು ಹಿಗ್ಗಿಸುವಲ್ಲಿ ಬಿಜೆಪಿ ಮತ್ತು ಅದರ ಮಾಧ್ಯಮಗಳು ಯಶಸ್ವಿಯಾಗಿದ್ದು, ಈ ಹಿಂದಿನ ತೇಜಸ್ವಿ ಸೂರ್ಯ ಮೇಲಿನ ಹಲ್ಲೆ ಪ್ರಕರಣದ ಬಳಿಕ ಈಗ ಮತ್ತೊಮ್ಮೆ ದೀದಿ ಆಡಳಿತದ ವಿರುದ್ಧ ಜನಾಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ದಿನಕ್ಕೊಂದು ವಿವಾದವನ್ನು ಬಳಸಿಕೊಳ್ಳುತ್ತಿದೆ.
ಅಧಿಕಾರರೂಢ ಪಕ್ಷದ ಆಡಳಿತ ನೀತಿ, ಯೋಜನೆಗಳ ವೈಫಲ್ಯವನ್ನಾಗಲೀ, ಭ್ರಷ್ಟಾಚಾರ ಅಥವಾ ಜನವಿರೋಧಿ ಆಡಳಿತವನ್ನಾಗಲೀ ಚುನಾವಣೆಗಳಲ್ಲಿ ಬಳಸಿ ಜನಾಭಿಪ್ರಾಯ ರೂಪಿಸುವ ಬದಲು, ಗಲಭೆ, ಹಿಂಸಾಚಾರ, ಪ್ರಕ್ಷುಬ್ಧತೆಯ ಮೂಲಕವೇ ಇರುವ ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸುವ, ಚುನಾವಣೆಗಳನ್ನು ಗೆಲ್ಲುವ ಬಿಜೆಪಿಯ ಯಶಸ್ವಿ ಪ್ರಯೋಗ ಸದ್ಯ ಹೋರಾಟಗಳ ನಾಡು ಬಂಗಾಳದಲ್ಲಿ ಜಾರಿಯಾಗತೊಡಗಿದೆ.
ರಾಜಕೀಯ ಜಾಣ್ಮೆ ಮತ್ತು ಪ್ರಬುದ್ಧತೆಗೆ ಹೆಸರಾದ ಬಂಗಾಳದ ಮತದಾರ ಇಂತ ತಂತ್ರ- ಪ್ರತಿತಂತ್ರಗಳನ್ನು, ದಬ್ಬಾಳಿಕೆ, ಹಗೆತನದ ರಾಜಕಾರಣವನ್ನು ಹೇಗೆ ಸ್ವೀಕರಿಸುತ್ತಾನೆ ಎಂಬುದನ್ನು ಕಾದುನೋಡಬೇಕಾಗಿದೆ.
ಆದರೆ ಅದಕ್ಕೆ ಚುನಾವಣೆಯವರೆಗೆ ಕಾಯಲೇಬೇಕಿದೆ. ಆ ಮುನ್ನ ಮುಂದಿನ ಕೆಲವು ತಿಂಗಳುಗಳಲ್ಲಿ ಪಶ್ಚಿಮ ಬಂಗಾಳ ಇನ್ನೂ ಎಂಥೆಂಥ ಘಟನೆಗಳಿಗೆ, ತಂತ್ರಗಳಿಗೆ, ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಬೇಕಿದೆಯೊ..!