TIME ಮ್ಯಾಗಝಿನ್‌ನ 'ಹಿರೋಸ್ ಆಫ್ 2020' ಆಗಿ ಆಯ್ಕೆ ಆದ ಭಾರತೀಯ ರಾಹುಲ್ ದುಬೆ

TIMES ವರದಿ ಮಾಡಿರುವಂತೆ ರಾಹುಲ್ ದುಬೆ ಅವರು ಸುಮಾರು 70ರಷ್ಟು ಪ್ರತಿಭಟನಾಕಾರರಿಗೆ ಆಶ್ರಯ ನೀಡಿದ್ದರು.
TIME ಮ್ಯಾಗಝಿನ್‌ನ 'ಹಿರೋಸ್ ಆಫ್ 2020' ಆಗಿ ಆಯ್ಕೆ ಆದ ಭಾರತೀಯ ರಾಹುಲ್ ದುಬೆ

ಮೇ 25ರಂದು ಮಿನಿಯಾಪೋಲಿಸ್‌ನಲ್ಲಿ 46 ವರ್ಷದ ಕಪ್ಪು ವರ್ಣೀಯ ಫ್ಲಾಯ್ಡ್‌‌ನ್ನು ನೆಲಕ್ಕೆ ಕೆಡವಿ, ಕತ್ತಿನ ಮೇಲೆ ಮಂಡಿಯೂರಿದ ನಾಲ್ಕು ಬಿಳಿಯ ಪೊಲೀಸರ ಚಿತ್ರ ಇಂಟರ್ನೆಟ್‌ನಲ್ಲಿ ಹರಿದಾಡಿದ ನಂತರ ಇಡೀ ಅಮೆರಿಕ ಕಪ್ಪು ವರ್ಣೀಯರ ಪರ 'ಬ್ಲಾಕ್ ಲೈವ್ಸ್ ಮ್ಯಾಟರ್' ಎನ್ನುವ ಹೋರಾಟ ಸಂಘಟಿಸಿತ್ತು. ಫ್ಲಾಯ್ಡ್ ಅವರ 'ಐ ಕಾಂಟ್ ಬ್ರೀದ್' ಎನ್ನುವ ಕೊನೆ ಕ್ಷಣದ ಹಲುಬುವಿಕೆ ಅಮೆರಿಕದ ಪ್ರಜ್ಞಾವಂತರ ಸಾಕ್ಷಿಪ್ರಜ್ಞೆಯನ್ನೇ ಬಡಿದೆಬ್ಬಿಸಿತು.

ಈ ಪ್ರತಿಭಟನೆಯ ಕಾವಿನಲ್ಲಿ‌ ಜೂನ್ 1ರಂದು ಪ್ರತಿಭಟನಾಕಾರರು ವಾಷಿಂಗ್ಟನ್ ಡಿಸಿ ಯ ರಸ್ತೆಗಿಳಿದಿದ್ದರು. ಸಂಜೆ ಏಳು ಗಂಟೆಯ ಹೊತ್ತಿಗೆ ಕರ್ಫ್ಯೂ ಹೇರಿದ ಪೊಲೀಸರು ಪ್ರತಿಭಟನಾಕಾರರನ್ನು ಬಲೆಗೆ ಬೀಳಿಸಲು ರೋಡ್ ಬ್ಯಾರಿಕೇಡರ್‌ಗಳನ್ನು ಹಾಕಿದ್ದರು. ಮಾತ್ರವಲ್ಲ ಅವರನ್ನು ಬಂಧಿಸಲು ಸುಲಭವಾಗುವಂತೆ ಪೆಪ್ಪರ್ ಸ್ಪ್ರೇಯನ್ನು ಬಳಸುತ್ತಿದ್ದರು. ಇದನ್ನು ಗಮನಿಸಿದ ಭಾರತೀಯ ಮೂಲದ 'ರಾಹುಲ್ ದುಬೆ' ಎಂಬವರು ತನ್ನ ಮನೆಯ ಬಾಗಿಲು ತೆರೆದು ಪ್ರತಿಭಟನಾಕಾರರಿಗೆ ಆಶ್ರಯ ನೀಡಿದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

TIMES ವರದಿ ಮಾಡಿರುವಂತೆ ರಾಹುಲ್ ದುಬೆ ಅವರು ಸುಮಾರು 70ರಷ್ಟು ಪ್ರತಿಭಟನಾಕಾರರಿಗೆ ಆಶ್ರಯ ನೀಡಿದ್ದರು. ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಅವರು ಮಾಡಿರುವ ಸಮಯೋಚಿತ ಕಾರ್ಯವನ್ನು ಗುರುತಿಸಿರುವ TIME ಮ್ಯಾಗಜೀನ್ 'ಹಿರೋಸ್ ಆಫ್ 2020' (heroes of 2020) ಎಂದು ಅವರನ್ನು ಪ್ರಶಂಸಿದೆ.

"ಜನರು ಕರಿಮೆಣಸಿನ ಉರಿ ತಾಳಲಾರದೆ ಕೆಮ್ಮುತ್ತಿದ್ದರು, ಅಳುತ್ತಿದ್ದರು, ಪರಿಚಯವೇ ಇಲ್ಲದವರ ಕಣ್ಣಿಗೆ ಹಾಲು ಸುರಿಯುತ್ತಿದ್ದರು" ಎಂದು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ದುಬೆ ನೆನಪಿಸಿಕೊಳ್ಳುತ್ತಾರೆ.

TIME ವರದಿ ಮಾಡುವಂತೆ ಆ ಸಂಜೆ ಪೊಲೀಸರು ಹಲವು ಬಾರಿ ಅವರ ಮನೆಯೊಳಗೆ ನುಗ್ಗುವ ವಿಫಲ ಯತ್ನ ನಡೆಸಿದ್ದರು. ಒಮ್ಮೆ ಸಂತ್ರಸ್ತರ ವೇಷದಲ್ಲಿಯೂ ಪ್ರಯತ್ನಿಸಿದ್ದರು. ದುಬೆಯವರು ಸಂತ್ರಸ್ತರಿಗೆಂದು ಆರ್ಡರ್ ಮಾಡಿದ್ದ ಪಿಜ್ಜಾ ಡೆಲಿವರಿಗೆಂದು ಬಂದಿದ್ದಾಗ ಡೆಲಿವರಿ ಬಾಯ್‌ನ್ನು ತಡೆಯುವ ಪ್ರಯತ್ನವೂ ನಡೆದಿತ್ತು.

ರಾಹುಲ್ ಅವರು BuzzFeed Newsಗೆ " ನನ್ನ ಕಣ್ಣೆದುರು ನಡೆಯುತ್ತಿರುವ ಘಟನೆಗಳನ್ನು ಗಮನಿಸಿದ್ದರೆ ಸಂತ್ರಸ್ತರಿಗೆ ಬಾಗಿಲು ತೆರೆಯದೆ ಬೇರೆ ಆಯ್ಕೆಯೇ ಇರಲಿಲ್ಲ. ಪ್ರತಿಭಟನಾಕಾರರು ಪೊಲೀಸರಿಂದ ಒದೆಸಿಕೊಳ್ಳುತ್ರಾ, ಹೊಡೆಸಿಕೊಳ್ಳುತ್ತಾ, ನೆಲಕ್ಕೆ ಬೀಳುತ್ತಿದ್ದರು" ಎಂದು ಹೇಳಿಕೆ ನೀಡಿದ್ದಾರೆ.

"ನನ್ನ ಹದಿಮೂರು ವರ್ಷದ ಮಗ ಅವರಷ್ಟೇ ಅದ್ಭುತವಾಗಿ ಬೆಳೆಯುತ್ತಾನೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು WJLA Newsಗೆ ಕೊಟ್ಟಿರುವ ಮತ್ತೊಂದು ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.

ದುಬೆ ಮನೆಯಲ್ಲಿ ಆಶ್ರಯ ಪಡೆದುಕೊಂಡ ಪ್ರತಿಭಟನಾಕಾರರು "ಕಳೆದ ರಾತ್ರಿ ರಾಹುಲ್ ಜೀವಗಳನ್ನು ಉಳಿಸಿದರು" ಎಂದು ಟ್ವೀಟ್ ಮಾಡಿದ್ದಾರೆ. ಬ್ಲಾಕ್ ಲೈವ್ಸ್ ಮ್ಯಾಟರ್‌ನ ಮತ್ತೋರ್ವ ಪ್ರತಿಭಟನಾಕಾರ "ಎಷ್ಟು ಕಷ್ಟವಾದರೂ ನಿಮ್ಮ ಶಾಂತಿಯುತ ಪ್ರತಿಭಟನೆಯನ್ನು ಕೈ ಬಿಡಬೇಡಿ ಎಂದು ರಾಹುಲ್ ಹೇಳಿದ್ದರು" ಎಂದು ನೆನಪಿಸಿಕೊಳ್ಳುತ್ತಾರೆ.

ಅಮೆರಿಕದ ಮಿನಿಯಾಸೋಟಾ ಮತ್ತು ಅದರ ರಾಜಧಾನಿ ಮಿನಿಯಾಪೋಲಿಸ್ ಇಡೀ ಅಮೆರಿಕಾದಲ್ಲೇ ಅತೀ ಸನ್ನಡತೆಯ ಜನರುಳ್ಳ ಪ್ರದೇಶ ಅಂತ ಹೆಸರಾಗಿದೆ. ಅಮೆರಿಕದಲ್ಲಿ ಉದ್ಯೋಗಿಯಾಗಿದ್ದ ಗಿರಿಧರ್ ಭಟ್ ಗುಂಜಗೋಡ್ ಅವರು "ಅಲ್ಲಿಯವರು ಕಿರಿಕಿರಿಯಾಗುವಷ್ಟು ಒಳ್ಳೆಯ ಜನರು, ಪ್ರಪಂಚದ ಎಲ್ಲರನ್ನೂ ಸಮತಾಭಾವದಿಂದ ಕಾಣುವವರು, ಒಬ್ಬ ಅಧಿಕಾರಿ ಮಾಡಿದ ಪ್ರಮಾದದಿಂದ ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ಬಂತು" ಎನ್ನುತ್ತಾರೆ. ಫ್ಲಾಯ್ಡ್ ಎನ್ನುವ ಕಪ್ಪು ವರ್ಣೀಯನ ವಿರುದ್ಧ ವಿನಾಕಾರಣ ದೌರ್ಜನ್ಯ ಎಸಗಿದ ಪೊಲೀಸ್, ಆಡಳಿತವನ್ನೂ ಗಣನೆಗೆ ತೆಗೆದುಕೊಳ್ಳದೆ ನ್ಯಾಯಯುತವಾಗಿ ವರ್ತಿಸಿದ ಅಧಿಕಾರಿ ವರ್ಗ ಮತ್ತು ರಾಹುಲ್ ದುಬೆಯಂತಹ ವದಯಕ್ತಿಗಳು ಮನುಷ್ಯತ್ವದ ಹರಿಕಾರರು... ಬ್ಲಾಕ್ ಲೈವ್ಸ್ ಮ್ಯಾಟರ್ ಚಳವಳಿ ಯಶಸ್ವಿಯಾದದ್ದೇ ಇಂತಹ ಹಲವು ಮಾನವತೆಯ ಸರಪಳಿ ವ್ಯವಸ್ಥೆಯಿಂದಾಗಿ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com