ನಮ್ಮ ಸಂವಿಧಾನವು ಸ್ತ್ರೀ ಮತ್ತು ಪುರುಷರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಯಾವುದೇ ಕ್ಷೇತ್ರದಲ್ಲಿಯೂ ಮಹಿಳೆಯು ಪರುಷನಿಗೆ ಸರಿಸಮಾನಳಾಗಿ ದುಡಿಯುತ್ತಿರುವುದು ಸಹಜ ಚಿತ್ರಣವಾಗಿದೆ. ಯುವ ಮಹಿಳೆಯರು ಉದ್ಯೋಗವನ್ನು ಆರಿಸಿಕೊಳ್ಳುವಾಗ ವೈದ್ಯಕೀಯ, ಎಂಜಿನಿಯರಿಂಗ್, ನ್ಯಾಯಾಂಗ, ಸಾಫ್ಟ್ ವೇರ್ ಉದ್ಯೋಗಗಳಲ್ಲಿ ಮೇಲುಗೈಯನ್ನೇ ಸಾಧಿಸಿದ್ದಾರೆ. ಲಕ್ಷಾಂತರ ಯುವತಿಯರು ಮೇಲಿನ ರಂಗಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರೂ ಮದುವೆ ಆದ ನಂತರ ಗೃಹಿಣಿಯರೇ ಆಗಿ ಮನೆಗೆ ಸೀಮಿತರಾಗುತ್ತಾರೆ. ಇದರಿಂದಾಗಿ ಕೆಲ ರಂಗಗಳಲ್ಲಿ ಮಹಿಳೆಯರ ಸಂಖ್ಯೆಯು ಇಂದಿಗೂ ಅತೀ ಕಡಿಮೆ ದಾಖಲಾಗಿದೆ. ನಮ್ಮ ಕಾನೂನು ನೀಡಿರುವ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಸರಿಯಾಗಿ ಬಳಸಿಕೊಳ್ಳದೆ ಇಂದಿಗೂ ಲಕ್ಷಾಂತರ ಹೆಣ್ಣು ಮಕ್ಕಳು ಪದವಿ ಶಿಕ್ಷಣ ವಂಚಿತರಾಗುತ್ತಿರುವುದು ಒಂದು ಕಡೆ ಆದರೆ ಮತ್ತೊಂದೆಡೆ ಶಿಕ್ಷಣ ಪಡೆದೂ ಉದ್ಯೋಗದಿಂದ ವಿಮುಖರಾಗುತ್ತಿರುವುದು ನಿಜಕ್ಕೂ ವಿಷಾದನೀಯ. ನಮ್ಮ ನ್ಯಾಯಾಂಗ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿ ಇಂದು ಅತ್ಯಂತ ಹೆಚ್ಚು ಮಹಿಳಾ ಅಧಿಕಾರಿಗಳ ಕೊರತೆ ತಲೆದೋರಿದೆ.
ಸುಪ್ರೀಂ ಕೋರ್ಟ್ಗೆ ಇತ್ತೀಚೆಗೆ ಸಲ್ಲಿಸಿದ ಮಾಹಿತಿಯಲ್ಲಿ ಅಟಾರ್ನಿ ಜನರಲ್ ಕೆ.ಕೆ. ವೇಣು ಗೋಪಾಲ್ ಅವರು ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳ ಅಸೂಕ್ಷ್ಮ ವಿಧಾನ ವನ್ನು ತೊಡೆದುಹಾಕಲು ಭಾರತೀಯ ನ್ಯಾಯಾಂಗಕ್ಕೆ ಹೆಚ್ಚಿನ ಮಹಿಳಾ ನ್ಯಾಯಾಧೀಶರು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಾರೆಯಾಗಿ ನ್ಯಾಯಾಂಗವು ಪ್ರಸ್ತುತ ಎದುರಿಸುತ್ತಿರುವ ಲಿಂಗ ಪ್ರಾತಿನಿಧ್ಯದಲ್ಲಿ ಭಾರಿ ಅಂತರವನ್ನು ಅವರು ಎತ್ತಿ ತೋರಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅತ್ಯಾಚಾರ, ಕಿರುಕುಳ ಮತ್ತು ಅತ್ಯಾಚಾರ ಯತ್ನ ಪ್ರಕರಣಗಳಲ್ಲಿ ಜಾಮೀನು ಷರತ್ತುಗಳನ್ನ ಬಿಗಿಗೊಳಿಸುವಂತೆ ಕೋರಿ ಒಂಬತ್ತು ಮಹಿಳಾ ವಕೀಲರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸುತಿದ್ದ ನ್ಯಾಯಮೂರ್ತಿ ಖಾನ್ವಿಲ್ಕರ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರ ಪೀಠಕ್ಕೆ ಈ ಮಾಹಿತಿ ನೀಡಿದ ಅಟಾರ್ನಿ ಜನರಲ್ ಅವರು ಪ್ರಸ್ತುತ ದೇಶದಲ್ಲಿ 34 ಸುಪ್ರೀಂ ಕೋರ್ಟು ನ್ಯಾಯಾಧೀಶರ ಹುದ್ದೆಗಳಲ್ಲಿ ಕೇವಲ ಇಬ್ಬರು ಮಾತ್ರ ಮಹಿಳಾ ನ್ಯಾಯಾಧೀಶರಿದ್ದಾರೆ ಎಂದು ತಿಳಿಸಿದರು. ಮತ್ತು ಇದು ದೇಶದ ಉನ್ನತ ನ್ಯಾಯಾಲಯದಲ್ಲಿ ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
70 ವರ್ಷಗಳ ಹಿಂದೆ ಸುಪ್ರೀಂ ಕೋರ್ಟು ಪ್ರಾರಂಭವಾದಾಗಿನಿಂದ ಈವರೆಗೆ ಕೇವಲ ಎಂಟು ಮಹಿಳಾ ನ್ಯಾಯಾಧೀಶರನ್ನು ಮಾತ್ರ ಸುಪ್ರೀಂ ಕೋರ್ಟ್ಗೆ ನೇಮಕ ಮಾಡಲಾಗಿದೆ. ನ್ಯಾಯಮೂರ್ತಿ ಫಾತಿಮಾ ಬೀವಿ ಮೊದಲ ಮಹಿಳಾ ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದರು. ಅದೂ ಕೂಡ ಕೋರ್ಟ್ ಸ್ಥಾಪನೆಯಾದ 40 ವರ್ಷಗಳ ನಂತರ 1989 ರಲ್ಲಿ ಅವರನ್ನು ನೇಮಿಸಲಾಯಿತು. 1989 ರಿಂದ ಈಚೆಗೆ ಕೇವಲ ಏಳು ಮಹಿಳೆಯರನ್ನು ಮಾತ್ರ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ - ನ್ಯಾಯಮೂರ್ತಿ ಸುಜಾತಾ ಮನೋಹರ್, ನ್ಯಾಯಮೂರ್ತಿ ರುಮಾ ಪಾಲ್, ನ್ಯಾಯಮೂರ್ತಿ ಜ್ಞಾನ ಸುಧಾ ಮಿಶ್ರಾ, ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ, ನ್ಯಾಯಮೂರ್ತಿ ಬಾನುಮತಿ, ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮತ್ತು ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇಮಕಗೊಂಡವರಾಗಿದ್ದಾರೆ.
ಇದಲ್ಲದೆ, ಇಬ್ಬರು ಮಹಿಳಾ ನ್ಯಾಯಾಧೀಶರಾದ - ನ್ಯಾಯಮೂರ್ತಿ ರುಮಾ ಪಾಲ್ ಮತ್ತು ನ್ಯಾಯಮೂರ್ತಿ ಆರ್. ಬಾನುಮತಿ - ಉನ್ನತ ನ್ಯಾಯಾಲಯಗಳ ಕೊಲೀಜಿಯಂನ ಭಾಗವಾಗಿದ್ದಾರೆ. ಹೈಕೋರ್ಟ್ಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುವ ಉನ್ನತ ಸಂಸ್ಥೆ ಕೊಲೀಜಿಯಂ ಆಗಿದೆ.
ಇದಲ್ಲದೆ ರಾಜ್ಯಗಳ ಹೈಕೋರ್ಟ್ಗಳಲ್ಲಿಯೂ ಸ್ತ್ರೀ ಪ್ರಾತಿನಿಧ್ಯವು ಬಹಳ ಕಡಿಮೆ ಇದೆ. ಭಾರತದ ಒಟ್ಟು 26 ಹೈಕೋರ್ಟ್ಗಳಲ್ಲಿ, ಒಟ್ಟು 1,079 ನ್ಯಾಯಾಧೀಶರಲ್ಲಿ ಕೇವಲ 82 ಮಹಿಳಾ ನ್ಯಾಯಾಧೀಶರಿದ್ದಾರೆ.ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಸಾಮಾನ್ಯ ಹೈಕೋರ್ಟ್ನಲ್ಲಿ ಮಾತ್ರ ಮಹಿಳಾ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ. ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರನ್ನು ಆಗಸ್ಟ್ 2018 ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದ್ದು ಮುಂದಿನ, ಡಿಸೆಂಬರ್ 8 ರಂದು ಅವರು ನಿವೃತ್ತರಾಗಲಿದ್ದಾರೆ. ಪ್ರಸ್ತುತ, ಮದ್ರಾಸ್ ಹೈಕೋರ್ಟ್ ದೇಶದಲ್ಲಿ ಅತಿ ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ಹೊಂದಿದೆ. ಇಲ್ಲಿ 13 ಮಹಿಳಾ ನ್ಯಾಯಾಧೀಶರು ಇದ್ದು ಅವರಲ್ಲಿ ನಾಲ್ವರನ್ನು ಗುರುವಾರ ಬೆಳಿಗ್ಗೆ ನೇಮಕ ಮಾಡಲಾಗಿದೆ. ಇದರ ನಂತರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 11 ಮಹಿಳಾ ನ್ಯಾಯಾಧೀಶರನ್ನು ಹೊಂದಿದೆ. ದೆಹಲಿ ಮತ್ತು ಬಾಂಬೆ ಹೈ ಕೋರ್ಟ್ ಗಳಲ್ಲಿ ತಲಾ ಎಂಟು ಮಹಿಳಾ ನ್ಯಾಯಾಧೀಶರು ಇದ್ದರೆ, ಗುವಾಹಟಿ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ರಾಜಸ್ಥಾನ ಮತ್ತು ಸಿಕ್ಕಿಂ ಹೈಕೋರ್ಟ್ಗಳಲ್ಲಿ ತಲಾ ಒಬ್ಬ ಮಹಿಳಾ ನ್ಯಾಯಾಧೀಶರು ಇದ್ದಾರೆ. ಮಣಿಪುರ, ಮೇಘಾಲಯ, ಪಾಟ್ನಾ, ತ್ರಿಪುರ, ತೆಲಂಗಾಣ ಮತ್ತು ಉತ್ತರಾಖಂಡದ ಹೈಕೋರ್ಟ್ಗಳಲ್ಲಿ ಮಹಿಳಾ ನ್ಯಾಯಾಧೀಶರೇ ಇಲ್ಲ.
ವೇಣುಗೋಪಾಲ್ ನೀಡಿದ ಮಾಹಿತಿಯು ವಕೀಲರನ್ನು ಹಿರಿಯ ವಕೀಲರನ್ನಾಗಿ ನೇಮಿಸುವಲ್ಲಿ ಲಿಂಗ ಅಸಮಾನತೆಯ ಬಗ್ಗೆ ಬೆಳಕು ಚೆಲ್ಲಿದೆ. ದೇಶದ ಕಾನೂನು ವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವಾಗ ಮಹಿಳೆಯರ ಸಂಖ್ಯೆ ಪುರುಷರಿಗೆ ಸರಿಸಮಾನವಾಗಿ ಇದ್ದರೂ ಮಹಿಳೆಯರು ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್ ಮಾಡದೆ ಹೊರಗುಳಿಯುತಿದ್ದಾರೆ ಎನ್ನಲಾಗಿದೆ. ಈಗ ಸುಪ್ರೀಂ ಕೋರ್ಟಿನಲ್ಲಿ ಕೇವಲ 17 ಮಹಿಳಾ ಹಿರಿಯ ವಕೀಲರು ಇದ್ದಾರೆ ಇದೇ ಸಂದರ್ಭದಲ್ಲಿ ಹಿರಿಯ ಪುರುಷ ನ್ಯಾಯವಾದಿಗಳ ಸಂಖ್ಯೆ 403 ಇದೆ. ಏತನ್ಮಧ್ಯೆ, ದೆಹಲಿ ಹೈಕೋರ್ಟ್ನಲ್ಲಿ ಕೇವಲ ಎಂಟು ಮಹಿಳೆಯರನ್ನು ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಗಿದ್ದು, 229 ಪುರುಷ ಹಿರಿಯ ವಕೀಲರಿದ್ದಾರೆ. ಬಾಂಬೆ ಹೈಕೋರ್ಟ್ನಲ್ಲಿ 157 ಹಿರಿಯ ಪುರುಷ ವಕೀಲರು ಮತ್ತು ಕೇವಲ ಆರು ಮಹಿಳಾ ಹಿರಿಯ ವಕೀಲರಿದ್ದಾರೆ. ಭಾರತೀಯ ನ್ಯಾಯಾಂಗದೊಳಗಿನ ಲಿಂಗ ಅಸಮಾನತೆಯನ್ನು ಎಲ್ಲಾ ಹಂತದಲ್ಲೂ ಹೆಚ್ಚಿನ ಮಹಿಳೆಯರನ್ನು ನೇಮಕ ಮಾಡುವುದರ ಮೂಲಕ ಮಾತ್ರ ನಿಭಾಯಿಸಬಹುದು ಎಂಬ ವೇಣುಗೋಪಾಲ್ ಅವರ ಸಲಹೆಯನ್ನು ಹಿರಿಯ ಕಾನೂನು ತಜ್ಞರೂ ಅನುಮೋದಿಸಿದ್ದಾರೆ.
ಸುಪ್ರೀಂ ಕೋರ್ಟಿನ ವಕೀಲ ಯುಗಂಧರ್ ಪವಾರ್ ಅವರ ಪ್ರಕಾರ, ಈ ಲಿಂಗ ಅಸಮಾನತೆಯನ್ನು ನಿವಾರಿಸಲು ಕೇಂದ್ರೀಕೃತ ಪ್ರಯತ್ನದ ಅಗತ್ಯವಿದೆ, ಇದು ನ್ಯಾಯಾಂಗದ ವರ್ಧಿತ ಸಾಮರ್ಥ್ಯಗಳನ್ನು ಮಾತ್ರವಲ್ಲದೆ ಅದು ನಿಜವಾಗಿಯೂ ಅಗತ್ಯವಿರುವ ಅಡಿಪಾಯ ಬೇಕಾಗಿದೆ. ಬಾಂಬೆ ಹೈಕೋರ್ಟ್ ಪರ ವಕೀಲೆ ಪ್ರೊಸ್ಪರ್ ಡಿಸೋಜಾ ಅವರು ಮಹಿಳೆಯರು ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಸರಿ ಸಮಾನವಾಗಿ ದುಡಿಯುತಿದ್ದಾರೆ ಮತ್ತು ನ್ಯಾಯಾಂಗವು ಕೂಡ ಇದಕ್ಕೆ ಹೊರತಾಗಿಲ್ಲ ಎಂದರು. ನೇಮಕಾತಿಗಳಲ್ಲಿ ಮಹಿಳಾ ನ್ಯಾಯಾಧೀಶರಿಗೆ ಮೀಸಲಾತಿ ಇರಬೇಕೆಂದು ಇದು ಸೂಚಿಸುವುದಿಲ್ಲ. ಅನೇಕ ಕಾನೂನುಗಳು ಮಹಿಳೆಯರನ್ನು ಸಬಲೀಕರಣಗೊಳಿಸಲು ನಿಬಂಧನೆಗಳನ್ನು ಹೊಂದಿವೆ. ಮಹಿಳಾ ನ್ಯಾಯಾಧೀಶರ ನೇಮಕದಲ್ಲಿ ಅಂತಹ ನಿಬಂಧನೆಗಳ ಅವಶ್ಯಕತೆಯಿದೆ ಎಂದು ಅವರು ಹೇಳುತ್ತಾರೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಬಲಪಡಿಸುವ ಅಗತ್ಯವಿದೆ ಎಂದು ಡಿಸೋಜಾ ಹೇಳಿದ್ದಾರೆ.
1993 ರಲ್ಲಿ ಜಾರಿಗೆ ಬಂದ ಕೊಲಿಜಿಯಂ ವ್ಯವಸ್ಥೆಯಲ್ಲಿ ಅಗ್ರ ಮೂರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಮಾತ್ರ ಉನ್ನತ ನ್ಯಾಯಾಲಯದ ಕೊಲೀಜಿಯಂನ ಭಾಗವಾಗಿದ್ದರೆ, ಹೈಕೋರ್ಟ್ನಲ್ಲಿ ಅಗ್ರ ಮೂರು ಮಂದಿ ನ್ಯಾಯಾಧೀಶರು ಅಲ್ಲಿನ ಕೊಲೀಜಿಯಂನ ಭಾಗವಾಗಿರುತ್ತಾರೆ.