ಇಂಧನ ದುಬಾರಿ: ಪೆಟ್ರೋಲ್ ಬಂಕ್ ಗೆ 'ಮೋದಿ ವಸೂಲಿ ಕೇಂದ್ರ' ಎಂದ ಕಾಂಗ್ರೆಸ್!

20 ದಿನದಲ್ಲಿ ಪೆಟ್ರೋಲ್ ಲೀಟರಿಗೆ 2.65 ರೂ. ಹಾಗೂ ಡೀಸೆಲ್ 3.40 ರೂ. ಏರಿಕೆಯಾಗಿದೆ.
ಇಂಧನ ದುಬಾರಿ: ಪೆಟ್ರೋಲ್ ಬಂಕ್ ಗೆ 'ಮೋದಿ ವಸೂಲಿ ಕೇಂದ್ರ' ಎಂದ ಕಾಂಗ್ರೆಸ್!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹಿಂದೆಂದೂ ಕಂಡಿರದ ಪ್ರಮಾಣದ ಏರಿಕೆ ಕಂಡಿದ್ದು, ಪ್ರಧಾನಿ ಮೋದಿಯವರ ಸ್ವಪಕ್ಷೀಯ ನಾಯಕರೇ ತೀವ್ರ ವಾಗ್ದಾಳಿ ಆರಂಭಿಸಿದ್ದಾರೆ.

ಎರಡು ದಿನಗಳ ಹಿಂದೆ ಬಿಜೆಪಿ ಹಿರಿಯ ನಾಯಕ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಸುಬ್ರಮಣಿಯನ್ ಸ್ವಾಮಿ ಸರಿಸುಮಾರು 40 ರೂ. ಆಸುಪಾಸಿನಲ್ಲಿರಬೇಕಾದ ಪೆಟ್ರೋಲ್ ದರ ದುಪ್ಪಟ್ಟಾಗಲು ದೇಶದ ಆಡಳಿತದ ಚುಕ್ಕಾಣಿ ಹಿಡಿದವರೇ ಕಾರಣ ಎಂದು ನೇರ ವಾಗ್ದಾಳಿ ನಡೆಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ ಪ್ರತಿಪಕ್ಷ ಕಾಂಗ್ರೆಸ್ ಈ ವಿಷಯದಲ್ಲಿ ಸರ್ಕಾರದ ವಿರುದ್ಧ ತೀವ್ರ ಪ್ರಹಾರ ಆರಂಭಿಸಿದ್ದು, ದುಬಾರಿ ಬೆಲೆ ಮೂಲಕ ಮೋದಿ ಸರ್ಕಾರ ಜನಸಾಮಾನ್ಯರ ಸುಲಿಗೆ ಮಾಡುತ್ತಿದೆ ಎಂದು ಹೇಳಿದೆ.

2018ರಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿತ್ತು. ಲೀಟರಿಗೆ 84 ರೂ.ಗೆ ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿತ್ತು. ಇದೀಗ ದೇಶದ ಕೆಲವು ಕಡೆ ಲೀಟರಿಗೆ 90 ರೂ. ದಾಟುವ ಮೂಲಕ ಹಿಂದಿನ ಎಲ್ಲಾ ದಾಖಲೆ ಮುರಿದಿದೆ.

ಆ ಹಿನ್ನೆಲೆಯಲ್ಲಿ, ದೇಶದಲ್ಲಿ ಪೆಟ್ರೋಲ್ ಬಂಕ್ ಗಳು ವಸೂಲಿ ಕೇಂದ್ರಗಳಾಗಿದ್ದು, ಪೆಟ್ರೋಲ್ ಬಂಕ್ ಗಳನ್ನು 'ನರೇಂದ್ರ ಮೋದಿ ವಸೂಲಿ ಕೇಂದ್ರ' ಎಂದು ಹೆಸರಿಡಿ ಎಂದು ಕಾಂಗ್ರೆಸ್ ಟೀಕಿಸಿದೆ.

ಕಾಂಗ್ರೆಸ್ ಮುಖಂಡ ಶ್ರೀವತ್ಸ ಅವರು ಈ ಕುರಿತು ಟ್ವೀಟ್ ಮಾಡಿದ್ದು, ದೇಶದಲ್ಲಿ ಪೆಟ್ರೋಲ್ ದರ 90 ರೂ, ಅಸಲಿ ದರ 30 ರೂ, ಮೋದಿ ತೆರಿಗೆ: 60 ರೂ. ಹೀಗಾಗಿ ಎಲ್ಲಾ ಪೆಟ್ರೋಲ್ ಬಂಕ್ ಗಳನ್ನು, ''ನರೇಂದ್ರ ಮೋದಿ ವಸೂಲಿ ಕೇಂದ್ರ'' ಎಂದು ಬದಲಾಯಿಸಿ ಎಂದು ವ್ಯಂಗ್ಯವಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಗಣನೀಯ ಏರಿಕೆಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಸತತ ಒಂದು ವಾರದಿಂದ ತೈಲ ಬೆಲೆ ಗಗನಮುಖಿಯಾಗಿದೆ.

ದೆಹಲಿಯಲ್ಲಿ ಲೀಟರ್‌ಗೆ 83.71 ರೂ ಇದ್ದರೆ, ಮುಂಬೈಯಲ್ಲಿ 90.34 ರೂ, ಬೆಂಗಳೂರಿನಲ್ಲಿ 86.58 ರೂಪಾಯಿಗೆ ಮುಟ್ಟಿದೆ. ಇನ್ನು ಡೀಸೆಲ್ ದರ ಕೂಡ ಅದೇ ಹಾದಿಯಲ್ಲಿದ್ದು, ದೆಹಲಿಯಲ್ಲಿ 73.87 ರೂ., ಮುಂಬೈನಲ್ಲಿ 80.51 ರೂ.ಗೆ ತಲುಪಿದೆ. ಬೆಂಗಳೂರಿನಲ್ಲಿ 78.37 ರೂ. ದರ ಇದೆ.

ದೇಶದಲ್ಲಿ, ಕಳೆದ 20 ದಿನಗಳಲ್ಲಿ ಒಂದೆರಡು ದಿನಗಳನ್ನು ಹೊರತುಪಡಿಸಿದರೆ ಬಹುತೇಕ ದಿನಗಳಲ್ಲಿ ತೈಲ ದರ ನಿರಂತರ ಏರಿಕೆ ಕಂಡಿದೆ. ಒಟ್ಟಾರೆ ಈ 20 ದಿನದಲ್ಲಿ ಪೆಟ್ರೋಲ್ ಲೀಟರಿಗೆ 2.65 ರೂ. ಹಾಗೂ ಡೀಸೆಲ್ 3.40 ರೂ. ಏರಿಕೆಯಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com