ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಆರನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ರೈತರನ್ನು ಸಮಾಧಾನ ಪಡಿಸಲು ಕೇಂದ್ರ ಸರ್ಕಾರವು ಕೃಷಿ ಮಸೂದೆಗಳಿಗೆ ಕೆಲವು ಬದಲಾವಣೆಗಳನ್ನು ತರುವ ವಾಗ್ದಾನ ಮಾಡಿತ್ತು. ಇದರ ಕರುಡು ಪ್ರತಿಯನ್ನೂ ರೈತರಿಗೆ ನೀಡಲಾಗಿತ್ತು. ಆದರೆ, ರೈತ ಒಕ್ಕೂಟದ ಮುಖ್ಯಸ್ಥರು ಇದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.
ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿರುವ ರೈತರು, ಡಿಸೆಂಬರ್ 14ರಂದು ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಿ ಎಲ್ಲಾ ಬಿಜೆಪಿ ಕಚೇರಿಯನ್ನು ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ. ಇದರೊಂದಿಗೆ, ಡಿಸೆಂಬರ್ 12ರಂದು ದೆಹಲಿ-ಜೈಪುರ ಮತ್ತು ದೆಹಲಿ-ಆಗ್ರಾ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಕೇಂದ್ರ ಸರ್ಕಾರ ರೂಪಿಸಿರುವ ತಿದ್ದುಪಡಿ ಕರಡನ್ನು ನಾವು ತಿರಸ್ಕರಿಸುತ್ತೇವೆ. ಒಂದೊಂದಾಗಿ ದೆಹಲಿಯನ್ನು ಸಂಪರ್ಕಿಸುವ ಎಲ್ಲಾ ಹೆದ್ದಾರಿಗಳನ್ನು ತಡೆಯುತ್ತೇವೆ,” ಎಂದು ರೈತ ಮುಖಂಡರು ಒಕ್ಕೊರಳಿನಿಂದ ಹೇಳಿದ್ದಾರೆ.
ರಾಷ್ಟ್ರಪತಿಗಳನ್ನು ಭೇಟಿಯಾದ ಸರ್ವಪಕ್ಷ ನಿಯೋಗ:
ಒಂದು ಕಡೆ ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್, ಎನ್ಸಿಪಿ, ಸಿಪಿಎಂ, ಸಿಪಿಐ ಮತ್ತು ಇತರ ಪಕ್ಷಗಳ ನಾಯಕರು ರಾಷ್ಟ್ರಪತಿಗಳನ್ನು ಭೇಟಿ ಮಾಡಿ, ವಿವಾದಿತ ಮೂರು ಕೃಷಿ ಕಾನೂನು ತಿದ್ದುಪಡಿಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಭೇಟಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿರುವ ರಾಹುಲ್ ಗಾಂಧಿ ಅವರು “ಕೃಷಿ ಕಾಯ್ದೆಗಳ ಕುರಿತು ನಮ್ಮ ವಾದವನ್ನು ರಾಷ್ಟ್ರಪತಿಗಳಿಗೆ ತಿಳಿಸಿದ್ದೇವೆ. ಇದರೊಂದಿಗೆ ಆ ಮೂರು ಕಾಯ್ದೆಗಳನ್ನು ವಾಪಾಸ್ ಪಡೆಯಲು ಕೂಡಾ ಮನವಿ ಮಾಡಿದ್ದೇವೆ,” ಎಂದು ಹೇಳಿದ್ದಾರೆ.