ಕಾನೂನುಬಾಹಿರ ಮತಾಂತರವನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರವು ಹೊಸ ಸುಗ್ರೀವಾಜ್ಞೆ ತಂದ ಒಂದು ವಾರದಲ್ಲಿ, ರಾಜ್ಯ ರಾಜಧಾನಿ ಲಕ್ನೋದಲ್ಲಿ ಪೊಲೀಸರು ಹಿಂದೂ ಮಹಿಳೆ ಮತ್ತು ಮುಸ್ಲಿಂ ವ್ಯಕ್ತಿಯ ನಡುವಿನ ವಿವಾಹ ಸಮಾರಂಭವನ್ನು ತಡೆದು ನಿಲ್ಲಿಸಿದ್ದಾರೆ.
ಲಕ್ನೋದ ಪ್ಯಾರಾ ಪ್ರದೇಶದಲ್ಲಿ ಬುಧವಾರ ಮದುವೆ ನಡೆಯಬೇಕಿತ್ತು. ಆದರೆ ವಿವಾಹ ಸಮಾರಂಭ ಪ್ರಾರಂಭವಾಗುವುದಕ್ಕೆ ಕೆಲವೇ ನಿಮಿಷಗಳ ಮೊದಲು ಸ್ಥಳಕ್ಕಾಗಮಿಸಿದ ಲಕ್ನೋ ಪೊಲೀಸ್ ತಂಡ ವಿವಾಹವನ್ನು ನಿಲ್ಲಿಸಿ ಎರಡೂ ಕಡೆಯವರನ್ನು ಸ್ಥಳೀಯ ಠಾಣೆಗೆ ಬರುವಂತೆ ಸೂಚಿಸಿದೆ.
ಪೊಲೀಸ್ ಠಾಣೆಯಲ್ಲಿ, ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಮದುವೆಗೆ ಮೊದಲು ಅನುಮತಿ ಪಡೆಯಲು ಎರಡೂ ಕಡೆಯವರಿಗೆ ಪೊಲೀಸರು ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
"ಡಿಸೆಂಬರ್ 2 ರಂದು, ಒಂದು ಸಮುದಾಯದ ಹುಡುಗಿ ಮತ್ತೊಂದು ಸಮುದಾಯದ ಹುಡುಗನನ್ನು ಮದುವೆಯಾಗಲು ಬಯಸುತ್ತಿದ್ದಾಳೆ ಎಂಬ ಮಾಹಿತಿ ನಮಗೆ ಸಿಕ್ಕಿತು. ನಾವು ಎರಡೂ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದು ಹೊಸ ಕಾನೂನುಬಾಹಿರ ಮತಾಂತರದ ಸುಗ್ರೀವಾಜ್ಞೆಯ ಪ್ರತಿಯನ್ನು ಅವರಿಗೆ ಹಸ್ತಾಂತರಿಸಿದೆವು ಮತ್ತು ಎರಡೂ ಕಡೆಯವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮದುವೆಗೂ ಮೊದಲೇ ಮಾಹಿತಿ ನೀಡುತ್ತಾರೆ ಮತ್ತು ಮದುವೆ ಮುಂದುವರಿಯುವ ಮೊದಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿಯನ್ನು ಪಡೆಯುತ್ತಾರೆ ಎಂದು ಲಿಖಿತ ಒಪ್ಪಂದ ಮಾಡಿದ್ದಾರೆ ಎಂದು ಲಕ್ನೋ ಹಿರಿಯ ಪೊಲೀಸ್ ಅಧಿಕಾರಿ ಸುರೇಶ್ ಚಂದ್ರ ರಾವತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪುರುಷ ಮತ್ತು ಮಹಿಳೆ ಇಬ್ಬರ ಕುಟುಂಬಗಳ ಒಪ್ಪಿಗೆ ಮತ್ತು ಅರಿವಿನಿಂದ ಮದುವೆ ನಡೆಯುತ್ತಿದೆ ಮತ್ತು ಯಾವುದೇ ಬಲಾತ್ಕಾರ ನಡೆದಿಲ್ಲ ಎಂದು ಮೂಲಗಳು ತಿಳಿಸಿದೆ. ಕಾನೂನಿನಡಿಯಲ್ಲಿ ಅಗತ್ಯವಿರುವ ಯಾವುದೇ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಎರಡೂ ಕುಟುಂಬಗಳು ವಿವಾಹದೊಂದಿಗೆ ಮುಂದುವರಿಯಲು ಉದ್ದೇಶಿಸಿವೆ ಎಂದು ಮೂಲಗಳು ತಿಳಿಸಿವೆ. ಮತಾಂತರಗೊಳ್ಳುವ ಎರಡೂ ಕಡೆಯ ಉದ್ದೇಶವೂ ಇರಲಿಲ್ಲ ಎಂದು ಕುಟುಂಬ ಮೂಲಗಳು ಹೇಳಿಕೊಂಡಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಸುಳ್ಳು, ಬಲವಂತದ ಅಥವಾ ವಿವಾಹದ ಉದ್ದೇಶಕ್ಕಾಗಿ ಮಾತ್ರ ನಡೆಯುವ ಧಾರ್ಮಿಕ ಮತಾಂತರಗಳನ್ನು ಅಪರಾಧವೆಂದು ಘೋಷಿಸಲಾಗುವುದು ಎಂದು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ನಿಷೇಧದ ಸುಗ್ರೀವಾಜ್ಞೆ (2020) ಹೇಳುತ್ತದೆ. ಮದುವೆಯ ನಂತರ ಮತಾಂತರಗೊಳ್ಳಲು ಯೋಜಿಸುವವರು ತಮ್ಮ ಉದ್ದೇಶವನ್ನು ಕನಿಷ್ಠ ಎರಡು ತಿಂಗಳ ಮುಂಚಿತವಾಗಿ ಜಿಲ್ಲಾಧಿಕಾರಿಗೆ ತಿಳಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಮತಾಂತರವನ್ನು ಬಲವಂತವಾಗಿ ಅಥವಾ ಮದುವೆಗಾಗಿ ಮಾಡಲಾಗಿಲ್ಲ ಎಂಬ ಪುರಾವೆಯ ಜವಾಬ್ದಾರಿ, ಮತಾಂತರಗೊಳ್ಳುವ ವ್ಯಕ್ತಿಯ ಮೇಲೆ ಇರುತ್ತದೆ ಮತ್ತು ಸುಗ್ರೀವಾಜ್ಞೆಯಡಿಯಲ್ಲಿ ದಾಖಲಾದ ಎಲ್ಲಾ ಪ್ರಕರಣಗಳು ಜಾಮೀನು ರಹಿತವಾಗಿರುತ್ತದೆ.
ಸುಗ್ರೀವಾಜ್ಞೆಯ ಪ್ರಕಾರ, ಬಲವಂತದ ಮತಾಂತರ (ಅಥವಾ ವಂಚನೆಯ ಮೂಲಕ ಮತಪರಿವರ್ತನೆ)ಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ₹ 15,000 ದಂಡ ವಿಧಿಸಲಾಗುತ್ತದೆ. ಹಿಂದುಳಿದ ಸಮುದಾಯಗಳ ಮಹಿಳೆಯನ್ನು ಬಲವಂತದ ಮತಾಂತರ ಮಾಡಿದರೆ, ಶಿಕ್ಷೆಯ ಪ್ರಮಾಣ ಮೂರರಿಂದ ಮತ್ತು 10 ವರ್ಷಗಳ ಕಾಲ ಜೈಲು ಮತ್ತು ₹ 25,000 ದಂಡವನ್ನು ವಿಧಿಸಬಹುದು.