ಗಾಂಜಾ ಮೇಲಿನ ನಿರ್ಬಂಧ ಸಡಿಲಿಕೆ ಪರ ಮತ ಹಾಕಿದ ಭಾರತ!

ಈಗಾಗಲೇ ವ್ಯಾಪಕ ಅಕ್ರಮ ಬಳಕೆಯ ಮೂಲಕ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ನಿರ್ಲಕ್ಷ್ಯದ ವಾಹನ ಚಾಲನೆ ಮುಂತಾದ ಹೇಯ ಅಪರಾಧ ಕೃತ್ಯಗಳಿಗೆ ಕಾರಣವಾಗಿರುವ ಗಾಂಜಾ, ಮುಂದಿನ ದಿನಗಳಲ್ಲಿ ಸೃಷ್ಟಿಸಲಿರುವ ಅನಾಹುತಗಳು ಆತಂಕ ಹುಟ್ಟಿಸುತ್ತವೆ.
ಗಾಂಜಾ ಮೇಲಿನ ನಿರ್ಬಂಧ ಸಡಿಲಿಕೆ ಪರ ಮತ ಹಾಕಿದ ಭಾರತ!

ಸುಮಾರು ಆರು ತಿಂಗಳುಗಳಿಂದ ದೇಶದಲ್ಲಿ ಮಾದಕ ವಸ್ತು ಪ್ರಕರಣಗಳೇ ಸದ್ದು ಮಾಡುತ್ತಿವೆ. ಕರೋನಾ ಲಾಕ್ ಡೌನ್ ನಡುವೆ ಕೂಡ ದೊಡ್ಡಮಟ್ಟದಲ್ಲಿ ಸುದ್ದಿಯಾದ ಸಂಗತಿ ಎಂದರೆ ಅದು ಮಾದಕ ವಸ್ತು ಸೇವನೆ ಮತ್ತು ಅದಕ್ಕೆ ತಳಕುಹಾಕಿಕೊಂಡಿರುವ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾ ರಂಗಗಳ ವಿದ್ಯಮಾನಗಳೇ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಮೂಲಕ ಆರಂಭವಾದ ಮಾದಕ ವಸ್ತು ಪ್ರಕರಣಗಳ ಸರಣಿ, ಕನ್ನಡದ ಜನಪ್ರಿಯ ನಟಿಯರಿಬ್ಬರ ಬಂಧನದವರೆಗೂ ಹಬ್ಬಿತ್ತು. ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಬ್ಯೂರೋ(ಎನ್ ಸಿಆರ್ ಬಿ)ದಿಂದ ಬೆಂಗಳೂರು ಅಪರಾಧ ನಿಯಂತ್ರಣ ಬ್ಯೂರೋ(ಸಿಸಿಬಿ)ವರೆಗೆ ಪೊಲೀಸರು ತಿಂಗಳುಗಟ್ಟಲೆ ನಿರಂತರ ದಾಳಿ, ಬಂಧನ, ವಿಚಾರಣೆಗಳನ್ನು ನಡೆಸಿದ್ದಾರೆ. ಖ್ಯಾತ ಸಿನಿಮಾ ನಟ-ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳು ಸೇರಿದಂತೆ ನೂರಾರು ಮಂದಿ ಮಾದಕ ವಸ್ತು ಸರಬರಾಜುದಾರರು, ದಂಧೆಕೋರರು, ಬಳಕೆದಾರರು ಬಂಧಿತರಾಗಿದ್ದಾರೆ. ಕೇವಲ ರಾಜಧಾನಿಗಳಷ್ಟೇ ಅಲ್ಲದೆ, ಸಣ್ಣಪುಟ್ಟ ತಾಲೂಕು ಕೇಂದ್ರಗಳಿಂದ ಹಿಡಿದು ಹಳ್ಳಿಮೂಲೆಗಳವರೆಗೆ ಮಾದಕ ವಸ್ತು ತನಿಖಾ ಜಾಲ ವಿಸ್ತರಿಸಿದೆ. ರೈತರ ಹೊಲಗದ್ದೆಗಳನ್ನೂ ಜಾಲಾಡಿ ಕ್ವಿಂಟಾಲ್ ಗಟ್ಟಲೆ ಗಾಂಜಾ ಬೆಳೆ ನಾಶ ಮಾಡಲಾಗಿದೆ. ಆರೋಪಿತರ ವಿರುದ್ಧ ಸಾಲು ಸಾಲು ಕೇಸು ಹಾಕಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಮೂಲಕ ದೇಶದಲ್ಲಿ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ವಿರುದ್ಧ ಇಡೀ ದೇಶವೇ ಸಮರ ಸಾರಿದೆ ಎನ್ನುವಂತಾಗಿತ್ತು. ಮಾಧ್ಯಮಗಳು ಕೂಡ ಸುಶಾಂತ್ ಸಿಂಗ್ ಪ್ರಕರಣವನ್ನೇ ಇಟ್ಟುಕೊಂಡು ಮಾದಕ ವಸ್ತು ವ್ಯಸನವೇ ದೇಶದ ಅತಿದೊಡ್ಡ ಬಿಕ್ಕಟ್ಟು ಎಂಬಂತೆ ಬಿಂಬಿಸಿದ್ದವು. ಸುಶಾಂತ್ ಸ್ನೇಹಿತೆ ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ವಿರುದ್ಧ ಮಾಧ್ಯಮಗಳು ನಡೆಸಿದ ಕ್ಯಾಂಪೇನ್ ಪರಿಣಾಮವಾಗಿ ಆಕೆ ಮತ್ತು ಆಕೆಯ ಸಹೋದರ ತಿಂಗಳುಗಟ್ಟಲೆ ಜೈಲುಪಾಲಾಗಬೇಕಾಗಿತ್ತು.

ಈ ನಡುವೆ ಗಾಂಜಾ ವಿಷಯದಲ್ಲಿ ಅದು ಎಷ್ಟು ಮಾರಕ, ಎಷ್ಟು ಪಾರಂಪರಿಕ ಎಂಬೆಲ್ಲಾ ಚರ್ಚೆಗಳು ಗರಿಗೆದರಿದ್ದವು. ಮುಖ್ಯವಾಗಿ ಗಾಂಜಾವನ್ನು ಭಾರತದಲ್ಲಿ ಶತಮಾನಗಳಿಂದ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆ ಮತ್ತು ವಿವಿಧ ವೈದ್ಯಕೀಯ ಪದ್ಧತಿಗಳಲ್ಲಿ ಬಳಸಲಾಗುತ್ತಿರುವ ಬಗ್ಗೆ, ಸಾಧುಸಂತರು, ಯೋಗಿಗಳು ಅದನ್ನು ನಿತ್ಯ ಬಳಸುತ್ತಿರುವ ಬಗ್ಗೆ ಕೂಡ ಪರ ವಿರೋಧದ ವಾದಗಳು ಕೇಳಿಬಂದಿದ್ದವು. ಅದರ ಸಾಂಪ್ರದಾಯಿಕ ಬಳಕೆ ಮತ್ತು ವಿವಿಧ ಚಿಕಿತ್ಸಾ ವಿಧಾನಗಳಲ್ಲಿ ಬಳಕೆಯ ಹಿನ್ನೆಲೆಯಲ್ಲಿ ಅದನ್ನು ಸಂಪೂರ್ಣವಾಗಿ ನಿಷೇಧಿಸುವುದು ಎಷ್ಟರಮಟ್ಟಿಗೆ ಸರಿ ಮತ್ತು ಸಾಧ್ಯವೇ ಎಂಬ ಪ್ರಶ್ನೆ ಕೂಡ ಎದ್ದಿತ್ತು.

ಇದೀಗ ಭಾರತ ಸರ್ಕಾರ ವಿಶ್ವಸಂಸ್ಥೆಯ ನ್ಯಾಷನಲ್ ಡ್ರಗ್ಸ್ ಆಯೋಗದ ಮುಂದೆ ಅತಿ ಅಪಾಯಕಾರಿ ಮಾದಕ ವಸ್ತು ಪಟ್ಟಿಯಿಂದ ಗಾಂಜಾವನ್ನು ಹೊರಗಿಡುವಂತೆ ಮತ್ತು ಆ ಮೂಲಕ ವೈದ್ಯಕೀಯ ಬಳಕೆಗೆ ನಿರ್ಬಂಧ ಹೇರದಂತೆ ಒತ್ತಾಯಿಸಿದೆ. ವಿಶ್ವಸಂಸ್ಥೆಯ 1961ರ ಸಿಂಗಲ್ ಕನ್ವೆಷನ್ ಆನ್ ನಾರ್ಕೊಟಿಕ್ ಡ್ರಗ್ಸ್ ಪ್ರಕಾರ ಶೆಡ್ಯೂಲ್ -4ರಲ್ಲಿ ಹೆರಾಯಿನ್ ಮತ್ತಿತರ ಮಾದಕವಸ್ತುಗಳೊಂದಿಗೆ ಗಾಂಜಾವನ್ನು ಕೂಡ ಅತಿ ಅಪಾಯಕಾರಿ ಮಾದಕವಸ್ತು ಎಂದು ಪರಿಗಣಿಸಲಾಗಿತ್ತು. ಹಾಗಾಗಿ ವೈದ್ಯಕೀಯ ಉದ್ದೇಶಕ್ಕೆ ಬಳಸಲು ಕೂಡ ನಿರ್ಬಂಧವಿತ್ತು ಮತ್ತು ಅಂತಹ ಯಾವುದೇ ಬಳಕೆಗೆ ಕಠಿಣ ಕಾನೂನು ಕ್ರಮದ ಬಿಗಿ ಹೇರಲಾಗಿತ್ತು.

ಆದರೆ, ದಶಕಗಳಿಂದಲೂ ಗಾಂಜಾವನ್ನು ಆ ಪಟ್ಟಿಯಿಂದ ಹೊರಗಿಡುವಂತೆ ಮತ್ತು ಅದರ ಔಷಧೀಯ ಮತ್ತು ರಿಕ್ರಿಯೇಷನಲ್ ಬಳಕೆಗೆ ಅವಕಾಶ ನೀಡಬೇಕು. ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸಂಶೋಧನೆಗಳು ಹೇಳಿರುವುದರಿಂದ ಗಾಂಜಾ ಬಳಕೆಯನ್ನು ಅಪರಾಧವಾಗಿ ಪರಿಗಣಿಸುವುದು ಸರಿಯಲ್ಲ ಎಂಬ ಕೂಗು ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿಯೇ ಅಮೆರಿಕ ಮತ್ತು ಯುರೋಪ್ ದೇಶಗಳು ಶೆಡ್ಯೂಲ್ -4ರಿಂದ ಗಾಂಜಾವನ್ನು ಹೊರಗಿಡುವ ಕುರಿತ ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ನ್ಯಾಷನಲ್ ಡ್ರಗ್ಸ್ ಆಯೋಗದ ಸಭೆಯಲ್ಲಿ ನಿರ್ಣಯದ ಪರ ಮತ ಹಾಕಿವೆ. ಬಹುತೇಕ ಏಷ್ಯಾ ಮತ್ತು ಆಫ್ರಿಕಾದ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳು ಆ ನಿರ್ಣಯದ ವಿರುದ್ಧ ಮತ ಹಾಕಿದ್ದರೆ, ಭಾರತ ಮಾತ್ರ, ಗಾಂಜಾವನ್ನು ಅತಿ ಅಪಾಯಕಾರಿ ಮಾದಕ ವಸ್ತು ಪಟ್ಟಿಯಿಂದ ಕೈಬಿಡುವಂತೆ ಒತ್ತಾಯಿಸುತ್ತಿರುವ ಅಮೆರಿಕ ಮತ್ತು ಯುರೋಪ್ ದೇಶಗಳೊಂದಿಗೆ ಕೈಜೋಡಿಸಿ, ನಿರ್ಣಯದ ಪರ ಮತಹಾಕಿದೆ!

ಒಟ್ಟು 53 ಸದಸ್ಯಬಲದ ಆಯೋಗದಲ್ಲಿ ಭಾರತ ಸೇರಿದಂತೆ 27 ದೇಶಗಳು ಗಾಂಜಾವನ್ನು ಅತಿ ಅಪಾಯಕಾರಿ ಪಟ್ಟಿಯಿಂದ ಹೊರಗಿಡುವಂತೆ ಒತ್ತಾಯಿಸಿದ ನಿರ್ಣಯದ ಪರ ಮತ ಚಲಾಯಿಸಿದ್ದರೆ, ರಷ್ಯಾ, ಚೀನಾ, ಜಪಾನ್ ಸೇರಿದಂತೆ 25 ದೇಶಗಳು ಅದನ್ನು ಅಪಾಯಕಾರಿ ಪಟ್ಟಿಯಿಂದ ಕೈಬಿಡಬಾರದು ಎಂದು ಒತ್ತಾಯಿಸಿ ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಉಕ್ರೈನ್ ಮತದಾನದಿಂದ ಹೊರಗುಳಿದಿತ್ತು ಎಂದು ಮಾಧ್ಯಮ ವರದಿಗಳು ಹೇಳಿವೆ.

ಬಹುತೇಕ ಮುಂದುವರಿದ ಮತ್ತು ಶ್ರೀಮಂತ ರಾಷ್ಟ್ರಗಳು ಗಾಂಜಾದ ಮುಕ್ತ ಬಳಕೆಗೆ ಅವಕಾಶ ನೀಡುವ ನಿರ್ಣಯದ ಪರವಿದ್ದರೆ, ಹಿಂದುಳಿದ ರಾಷ್ಟ್ರಗಳು ಮತ್ತು ಮುಸ್ಲಿಂ ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸುವ ಮೂಲಕ ಗಾಂಜಾದ ವೈದ್ಯಕೀಯ ಮತ್ತು ಮುಕ್ತ ಬಳಕೆಗೆ ಅವಕಾಶ ನೀಡುವುದು ಸಾಮಾಜಿಕ ಸ್ವಾಸ್ಥ್ಯ ಮತ್ತು ಯುವಜನರ ಬದುಕಿನ ಮೇಲೆ ದೊಡ್ಡ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಆತಂಕ ವ್ಯಕ್ತಪಡಿಸಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದೊಡ್ಡಮಟ್ಟದಲ್ಲಿ ಯುವ ಸಮೂಹ ಗಾಂಜಾ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತು ಬಳಕೆ ಮತ್ತು ಸಾಗಣೆಯ ಮೇಲೆ ಹದ್ದಿನ ಕಣ್ಣಿಡಲಾಗುತ್ತಿದೆ. ದೇಶವೇ ಇಂತಹ ಪಿಡುಗಿನ ವಿರುದ್ದದ ಸಮರಕ್ಕೆ ಟೊಂಕ ಕಟ್ಟಿ ನಿಂತಿದೆ ಎಂದು ದೇಶದಲ್ಲಿ ಆಂತರಿಕವಾಗಿ ಹೇಳುವ ಭಾರತ, ಹೀಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ನುಡಿಯುವುದಕ್ಕೂ ನಡೆಯುವುದಕ್ಕೂ ತಾಳೆ ಇಲ್ಲದಂತೆ ನಡೆದುಕೊಂಡಿರುವುದು ಅಚ್ಚರಿ ತಂದಿದೆ.

ರಷ್ಯಾ, ಚೀನಾ, ಜಪಾನ್, ಇರಾನ್, ಪಾಕಿಸ್ತಾನ, ಸಿಂಗಪೂರ್, ನೈಜೀರಿಯಾದಂತಹ ರಾಷ್ಟ್ರಗಳು ಗಾಂಜಾವನ್ನು ಅಪಾಯಕಾರಿ ಮಾದಕ ವಸ್ತು ಪಟ್ಟಿಯಿಂದ ಹೊರಗಿಟ್ಟರೆ, ಈಗಾಗಲೇ ಇರುವ ಅದರ ಅಕ್ರಮ ಬಳಕೆ ಮತ್ತು ಸಾಗಣೆಯ ಅಂತಾರಾಷ್ಟ್ರೀಯ ಜಾಲಕ್ಕೆ ಕುಮ್ಮಕ್ಕು ನೀಡಿದಂತೆ ಆಗುತ್ತದೆ. ಖಂಡಿತವಾಗಿಯೂ ಅಂತಹ ಕ್ರಮ ಬಡ ಮತ್ತು ಹಿಂದುಳಿದ ದೇಶಗಳ ಯುವಕರ ಬದುಕನ್ನು ನಾಶ ಮಾಡುತ್ತದೆ ಎಂದು ವಾದಿಸಿದ್ದವು. ಆದರೆ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್, ಗಾಂಜಾದ ಬಳಕೆಗೆ ಅನುಮತಿ ಬೇಕು ಎಂದು ವಾದಿಸಿದ್ದವು. ವೈದ್ಯಕೀಯ ಬಳಕೆಗೆ ಪೂರಕವಾಗಿ ಹೆಚ್ಚಿನ ಸಂಶೋಧನೆ ಮತ್ತು ಪ್ರಯೋಗಗಳಿಗೆ ಬಳಸಲು ಇಂತಹ ನಿರ್ಬಂಧ ಸಡಿಲಿಕೆಯ ಅಗತ್ಯವಿದೆ ಎಂಬುದು ಆ ದೇಶಗಳ ವಾದವಾಗಿತ್ತು.

ಇದೀಗ ಗಾಂಜಾ ಶೇಡ್ಯೂಲ್ 4ರ ಹೊರಬಿದ್ದಿದ್ದು, ಇನ್ನು ಮುಂದೆ ನಿಯಂತ್ರಿತ ಬಳಕೆಗೆ ಅನುಮತಿ ಸಿಗಲಿದೆ. ಅದರಲ್ಲೂ ಮುಖ್ಯವಾಗಿ ಸಂಶೋಧನೆ, ಔಷಧವಾಗಿ ಗಾಂಜಾ ಗಿಡ, ಎಲೆ, ಹೂವು ಮತ್ತು ಇತರ ಭಾಗಗಳನ್ನು ನೇರವಾಗಿ ಮತ್ತು ಅವುಗಳಿಂದ ತಯಾರಿಸಿದ ಪದಾರ್ಥಗಳ ಬಳಕೆಗೂ ನಿರ್ಬಂಧ ತೆರವಾಗಲಿದೆ.

ಆದರೆ, ಭಾರತದಲ್ಲಿ; ಈಗಾಗಲೇ ವ್ಯಾಪಕ ಅಕ್ರಮ ಬಳಕೆಯ ಮೂಲಕ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ನಿರ್ಲಕ್ಷ್ಯದ ವಾಹನ ಚಾಲನೆ ಮುಂತಾದ ಹೇಯ ಅಪರಾಧ ಕೃತ್ಯಗಳಿಗೆ ಕಾರಣವಾಗಿರುವ ಗಾಂಜಾ, ಮುಂದಿನ ದಿನಗಳಲ್ಲಿ ಸೃಷ್ಟಿಸಲಿರುವ ಅನಾಹುತಗಳು ಆತಂಕ ಹುಟ್ಟಿಸುತ್ತವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com