ಪ್ರಧಾನಿ ಮೋದಿಯ ರೈತ ವಿರೋಧಿ ನಿಲುವು ಮೂರ್ಖತನವೋ? ಉದ್ಧಟತನವೋ?

ರೈತರ ಆದಾಯವನ್ನು ಐದು ವರ್ಷಗಳಲ್ಲಿ ಡಬ್ಬಲ್ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಮಾತು ಅಪ್ಪಟ್ಟ ಸುಳ್ಳು ಎಂಬುದಕ್ಕೆ ರೈತ ವಿರೋಧಿ ಮೂರು ಕಾನೂನುಗಳೇ ಸಾಕ್ಷಿಯಾಗಿವೆ.
ಪ್ರಧಾನಿ ಮೋದಿಯ ರೈತ ವಿರೋಧಿ ನಿಲುವು ಮೂರ್ಖತನವೋ? ಉದ್ಧಟತನವೋ?

ಮೋದಿ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶವ್ಯಾಪಿ ರೈತರು ಪ್ರತಿಭಟಿಸುತ್ತಿದ್ದಾರೆ. ದೇಶದ ರಾಜಧಾನಿಗೆ ಹೊಂದಿಕೊಂಡಿರುವ ಪಂಜಾಬ್ ಮತ್ತು ಹರ್ಯಾಣ ರೈತರು ಈಗ ನವದೆಹಲಿಗೆ ಮುತ್ತಿಗೆ ಹಾಕಿದ್ದಾರೆ. ರೈತ ವಿರೋಧಿ ಕಾನೂನುಗಳನ್ನು ಮೋದಿ ಸರ್ಕಾರ ಹಿಂದಕ್ಕೆ ಪಡೆಯುವವರೆಗೂ ಹೊರಾಟ ನಡೆಸುವುದಾಗಿ ರೈತ ನಾಯಕರು ಘೋಷಿಸಿದ್ದಾರೆ. ನಿಧಾನವಾಗಿಯಾದರೂ, ನಿಚ್ಛಳವಾಗಿ ರೈತಹೋರಾಟಕ್ಕೆ ದೇಶವ್ಯಾಪಿ ಬೆಂಬಲ ವ್ಯಕ್ತವಾಗುತ್ತಿದೆ.

ಈ ರೈತ ಹೋರಾಟವು ಪ್ರಧಾನಿ ಮೋದಿ ಸರ್ಕಾರದ ಮೂರ್ಖತನ ಮತ್ತು ಉದ್ಧಟತನ ಎರಡನ್ನೂ ಬಯಲು ಮಾಡಿದೆ. ರೈತರು ರಾಜಧಾನಿಗೆ ಬರುವುದನ್ನು ತಡೆಯುವ ಸಲುವಾಗಿ ಹೆದ್ದಾರಿಗಳನ್ನೇ ಅಗೆಯುವುದು ಬರೀ ಮೂರ್ಖತನದ ನಿರ್ಧರವಷ್ಟೇ ಅಲ್ಲ, ಉದ್ಧಟತನದ್ದೂ ಕೂಡ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವಿಷಯದಲ್ಲಿ ಮೋದಿ ಸರ್ಕಾರ ಯಾಕೆ ಟೀಕೆಗೆ ಒಳಗಾಗುತ್ತಿದೆ ಎಂದರೆ, ಚೀನ ವಿಷಯದಲ್ಲಿ ಪ್ರೈಮ್ ಟೈಮ್ ನಲ್ಲಿ ದೇಶವ್ಯಾಪಿ ಜನರಿಗೆ ಸುಳ್ಳು ಹೇಳಿ ಸಿಕ್ಕಿಬಿದ್ದಿರುವ ಪ್ರಧಾನಿ ಮೋದಿ ಈಗ ತಾವು ತಂದಿರುವ ಕಾನೂನು ರೈತಪರವಾಗಿದೆ ಎಂದು ‘ಮನ್ ಕಿ ಬಾತ್’ ನಲ್ಲಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದನ್ನು ಖುದ್ಧು ಮೋದಿ ಭಕ್ತರೂ ನಂಬುತ್ತಿಲ್ಲ. ರೈತರ ಹೋರಾಟವನ್ನು ಹತ್ತಿಕ್ಕಲು ಮೋದಿ ಸರ್ಕಾರ ಹಿಡಿದ ದಾರಿ ಅಕ್ಷಮ್ಯವಾದುದು. ರೈತರನ್ನು ದೊಂಬಿಕೊರರಂತೆ, ಭಯೋತ್ಪದಾಕರಂತೆ ಬಿಂಬಿಸುವ ಮೋದಿ ಸರ್ಕಾರದ ಹತಾಶ ಯತ್ನಗಳೆಲ್ಲವನ್ನೂ ಸಹೃದಯಿ ರೈತರು ವಿಫಲಗೊಳಿಸಿದ್ದಾರೆ. ತಮ್ಮ ಮೇಲೆ ಲಾಠಿ ಬೀಸಿದ, ಕೊರೆಯುವ ಚಳಿಯಲ್ಲೂ ವಾಟರ್ ಜೆಟ್ ಬಳಸಿದ ಪೊಲೀಸ್ ಮತ್ತು ರಕ್ಷಣಾ ಪಡೆಗಳ ಸಿಬ್ಬಂದಿಗೆ ನೀರು- ಆಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ರೈತರ ಆದಾಯವನ್ನು ಐದು ವರ್ಷಗಳಲ್ಲಿ ಡಬ್ಬಲ್ ಮಾಡುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಮಾತು ಅಪ್ಪಟ್ಟ ಸುಳ್ಳು ಎಂಬುದಕ್ಕೆ ರೈತ ವಿರೋಧಿ ಮೂರು ಕಾನೂನುಗಳೇ ಸಾಕ್ಷಿಯಾಗಿವೆ. ಈ ಕಾನೂನುಗಳು ಮೋದಿ ಆಪ್ತ ಕಾರ್ಪೊರೆಟ್ ಕುಳಗಳನ್ನು ರಕ್ಷಿಸುವುದಕ್ಕೆ ಮತ್ತು ಕೃಷಿ ಸಂಪತ್ತನ್ನು ಭಕ್ಷಿಸಲು ಅವಕಾಶ ಮಾಡಿಕೊಡುವುದಕ್ಕೆ ರೂಪಿಸಲಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ.

ಪ್ರಧಾನಿ ಮೋದಿ ಪ್ರಾಂಜಲ ಮನಸ್ಸಿನಿಂದ ರೈತರ ಬಗ್ಗೆ ಚಿಂತಿಸಿದ್ದರೆ, ಹೋರಾಟ ಇಷ್ಟು ತೀವ್ರ ಸ್ವರೂಪ ಪಡೆಯುತ್ತಿರಲಿಲ್ಲ, ಪಡೆಯುವ ಅಗತ್ಯವೂ ಇರಲಿಲ್ಲ. ಹೋರಾಟ ನಿರತ ರೈತ ನಾಯಕರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬಹುದಿತ್ತು. ಅವರು ನವಿಲಿನ ಜತೆ ಕಳೆದಷ್ಟು ಸಮಯವನ್ನು ಸುಮಾರು 80 ಕೋಟಿಯಷ್ಟಿರುವ ರೈತರನ್ನು ಪ್ರತಿನಿಧಿಸುವ ನಾಯಕರ ಜತೆ ಕಳೆಯುವ ಪ್ರಾಂಜಲ ಮನಸ್ಸನ್ನು ಪ್ರಧಾನಿ ಮೋದಿ ಪ್ರದರ್ಶಿಸಲಿಲ್ಲ.

ವ್ಯಂಗ್ಯ ಚಿತ್ರ
ವ್ಯಂಗ್ಯ ಚಿತ್ರಅಭಿಜಿತ್‌ ಗೌಡ

ಸಮಸ್ಯೆಯ ಮೂಲ ಇರುವುದು ತಾನು ಮಾಡಿದ್ದೆಲ್ಲ ಸರಿ ಎಂದು ಪ್ರಧಾನಿ ಮೋದಿ ಸರ್ಕಾರ ತಳೆದಿರುವ ಉದ್ಧಟತನದ ನಿಲವಿನಲ್ಲಿ. ಈ ಕಾರಣಕ್ಕಾಗಿಯೇ ಪ್ರಜಾಸತ್ತಾತ್ಮಕ ಮಾರ್ಗೋಪಾಯಗಳನ್ನು ಮೀರಿ, ಕೇವಲ ಬಹುಮತದ ಅಹಂಮ್ಮಿನಿಂದ ದೇಶವನ್ನು ಆಳಲು ಯತ್ನಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ. ಅಪಾಯಕಾರಿ ಏಕೆಂದರೆ, ಸಂಸತ್ತಿಗೆ ಆಯ್ಕೆಯಾಗಿ ಹೋಗಿರುವ ಮೂನ್ನೂರು ಪ್ಲಸ್ ಸಂಸದರಲ್ಲಿ ಶೇ.90ರಷ್ಟು ಮಂದಿ ರೈತರ ಮಕ್ಕಳಿದ್ದಾರೆ. ಇವರೆಲ್ಲರೂ ರೈತ ವಿರೋಧಿ ಕಾನೂನುಗಳಿಗೆ ಹೌದಪ್ಪಗಳಂತೆ ತಮ್ಮ ಒಪ್ಪಿಗೆ ಸೂಚಿಸುತ್ತಿದ್ದಾರೆ, ತಮ್ಮ ಮುಂದಿನ ತಲೆಮಾರಿನ ಹಿತಾಸಕ್ತಿಯನ್ನು ಕಾರ್ಪೊರೆಟ್ ಕುಳಗಳಿಗೆ ಒಪ್ಪಿಸುವ ಮೋದಿ ತಂಡಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಾಗಿದ್ದಾರೆ. ಇದು ಅತ್ಯಂತ ಅಪಾಯಕಾರಿ.

ಬಹುಮತದ ಅಹಂನಿಂದಾಗಿಯೇ ಪ್ರಧಾನಿ ಮೋದಿ ವಿರೋಧಪಕ್ಷಗಳ ಮಾತನ್ನು ಆಲಿಸುತ್ತಿಲ್ಲ. ಮೋದಿ ಸಂಸತ್ತಿನಲ್ಲಿ ನಾಯಕೀಯವಾಗಿ ವಿರೋಧ ಪಕ್ಷಗಳ ನಾಯಕರನ್ನು ಟೀಕಿಸುತ್ತಾ ಭಾಷಣ ಮಾಡುವುದು, ಆ ಭಾಷಣಕ್ಕೆ ಮೋದಿ ಹೆಸರಿನಲ್ಲಿ ಸಂಸದರೆಂದು ಆಯ್ಕೆಯಾಗಿ ಹೋಗಿರುವ ಮುನ್ನೂರು ಪ್ಲಸ್ ಸದಸ್ಯರು ಚಪ್ಪಾಳೆ ಹೊಡೆಯುವುದು ತಮಾಷೆಯಾಗಿ ಕಾಣಿಸುವುದಿಲ್ಲ, ಅದು ಪ್ರಜಾಸತ್ತೆಯ ಮೇಲೆ ನಡೆಯುತ್ತಿರುವ ಮರ್ಮಾಘಾತವಾಗಿ ಅನುರಣಿಸುತ್ತದೆ. ಅದನ್ನು ಮೋದಿಗೆ ಮತ್ತವರ ಪಟಲಾಂಗಳಿಗೆ ತಿಳಿಸಿ ಹೇಳುವ ಯಾವೊಬ್ಬ ಪ್ರಾಜ್ಞನೂ ಆಡಳಿತರೂಢ ಪಕ್ಷದಲ್ಲಿ ಇಲ್ಲದಿರುವುದು ಈ ಅವಾಂತರಗಳಿಗೆ ಕಾರಣವಾಗಿದೆ.

ಮುಖ್ಯವಿಷಯ ಏನೆಂದರೆ, ಪ್ರಧಾನಿ ಮೋದಿಗೆ ಮತ್ತು ಪ್ರಧಾನಿ ಮೋದಿಗೆ ಸಲಹೆ ನೀಡುವವರಿಗೆ ಕನಿಷ್ಠ ಅರ್ಥಶಾಸ್ತ್ರ ಅರ್ಥವಾಗಿದ್ದರೂ ರೈತ ವಿರೋಧಿ ಕಾನೂನುಗಳನ್ನು ಈ ಹಂತದಲ್ಲಿ ತರುತ್ತಿರಲಿಲ್ಲ. ವಾಸ್ತವವಾಗಿ ಲಾಕ್ಡೌನ್ ಅವಧಿಯಲ್ಲಿ ಇಡೀ ದೇಶದ ಆರ್ಥಿಕತೆ ಕುಸಿದು ಹೋಗಿದ್ದಾಗ, ಭರವಸೆಯ ಆಶಾಕಿರಣವಾಗಿ ಉದಯಿಸಿದ್ದು ಕೃಷಿ ಕ್ಷೇತ್ರ. ಮೋದಿ ಸರ್ಕಾರದ ರೈತ ವಿರೋಧಿ ನೀತಿಗಳ ನಡುವೆಯೂ ಕೃಷಿ ಕ್ಷೇತ್ರ ಮಾತ್ರವೇ ಅಭಿವೃದ್ಧಿಯನ್ನು ದಾಖಲಿಸಿದೆ. ಕೃಷಿ ಕ್ಷೇತ್ರದ ಕೊಡುಗೆಯಿಂದಾಗಿಯೇ ತೀವ್ರವಾಗಿ ಕುಸಿಯುತ್ತಿದ್ದ ಒಟ್ಟಾರೆ ಆರ್ಥಿಕತೆಯ ಕುಸಿತದ ಪ್ರಮಾಣ ತಗ್ಗಿದೆ. ಈ ಪ್ರಜ್ಞೆ ಪ್ರಧಾನಿ ಮೋದಿಗಾಗಲೀ, ಅವರ ಸಲಹೆಗಾರರಿಗಾಗಲೀ ಗೊತ್ತಿದ್ದರೆ, ಕನಿಷ್ಠ ಈ ಅವಧಿಯಲ್ಲಿ ಕಾನೂನು ಜಾರಿ ಮಾಡುವ ದುಸ್ಸಾಹಸಕ್ಕೆ ಇಳಿಯುತ್ತಿರಲಿಲ್ಲ.

ಇದನ್ನು ಅಂಕಿ ಅಂಶಗಳ ಮೂಲಕ ವಿವರಿಸುವುದಾದರೆ, ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ದೇಶದ ಆರ್ಥಿಕತೆಯು ಶೇ.-23.9ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.5.2ರಷ್ಟು ಅಭಿವೃದ್ಧಿ ದಾಖಲಿಸಿತ್ತು. ಮೊದಲ ತ್ರೈಮಾಸಿಕದ ಒಟ್ಟಾರೆ ಜಿಡಿಪಿ ಮೌಲ್ಯವನ್ನು ರುಪಾಯಿಗಳಲ್ಲಿ ಅಳೆಯುವುದಾದರೆ 26.90 ಲಕ್ಷ ಕೋಟಿ ರುಪಾಯಿಗಳು. ಕಳೆದ ವರ್ಷ ಈ ಮೊತ್ತವು 35.35 ಲಕ್ಷ ಕೋಟಿ ರುಪಾಯಿಗಳಾಗಿತ್ತು. ಅಂದರೆ, ಮೊದಲ ಮೂರು ತಿಂಗಳಲ್ಲಿ ಭಾರತದ ಆರ್ಥಿಕತೆಗೆ ಆಗಿರುವ ನಷ್ಟವು 8.45 ಕೋಟಿ ರುಪಾಯಿಗಳು. ಆದರೆ, ಈ ಅವಧಿಯಲ್ಲಿ ಕೃಷಿ ಕ್ಷೇತ್ರವು ಕಳೆದ ವರ್ಷಕ್ಕಿಂತ ಶೇ.3.4ರಷ್ಟು ಅಭಿವೃದ್ಧಿ ದಾಖಲಿಸಿದೆ. ರುಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಕೃಷಿ ಕ್ಷೇತ್ರವು ಹೆಚ್ಚುವರಿಯಾಗಿ 14,815 ಕೋಟಿ ರುಪಾಯಿಗಳಷ್ಟು ಮೌಲ್ಯವನ್ನು ಭಾರತ ಆರ್ಥಿಕತೆಗೆ ನೀಡಿದೆ.

ದೇಶದ ಆರ್ಥಿಕ ಅಭಿವೃದ್ಧಿಗೆ ಕೃಷಿ ವಲಯವು ಗಣನೀಯವಾಗಿ ಕೊಡುಗೆ ನೀಡುತ್ತಿದೆ. ಸೇವಾ ವಲಯ, ಉದ್ಯಮ ವಲಯದ ನಂತರ ಕೃಷಿ ತನ್ನ ಪಾಲು ನೀಡುತ್ತಿದೆ. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಆರ್ಥಿಕತೆ ಮೌಲ್ಯವರ್ಧನೆಯಲ್ಲಿ ಕೃಷಿ ಕ್ಷೇತ್ರದ ಪಾಲು ತಗ್ಗುತ್ತಾ ಬರುತ್ತಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆಯ ಪ್ರಕಾರ, 2014-15ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಮೌಲ್ಯವರ್ಧನೆಯು(ಜಿವಿಎ) ಶೇ.18.2ರಷ್ಟು ಇದ್ದದ್ದು 2019-20ನೇ ಸಾಲಿನಲ್ಲಿ ಶೇ.16.5ಕ್ಕೆ ಕುಸಿದಿದೆ. ಈ ಕುಸಿತಕ್ಕೆ ಕಾರಣ, ಬೆಳೆಗಳಿಂದ ಬರುತ್ತಿದ್ದ ಮೌಲ್ಯವರ್ಧನೆಯು 2014-15ರಲ್ಲಿ ಶೇ.11.2ರಷ್ಟು ಇದ್ದದ್ದು 2017-18ರ ವೇಳೆಗೆ ಇದು ಶೇ.10ಕ್ಕೆ ಕುಸಿದಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಅಂದರೆ, ಮೋದಿ ಸರ್ಕಾರದ ಅವಧಿಯಲ್ಲಿ ಆರ್ಥಿಕಾಭಿವೃದ್ಧಿಗೆ ಕೃಷಿ ಕ್ಷೇತ್ರದ ಪಾಲು ತಗ್ಗುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇಷ್ಟಿದ್ದರೂ ಪ್ರಧಾನಿ ಮೋದಿ ಐದು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಘೋಷಿಸಿದ್ದಾರೆ. ಅವರು ಘೋಷಿಸಿ ಮೂರು ವರ್ಷಗಳಾಗಿದೆ. ಉಳಿದ ಎರಡು ವರ್ಷಗಳಲ್ಲಿ ಅಂದರೆ, 2022ನೇ ಸಾಲಿನಲ್ಲಿ ರೈತರ ಆದಾಯ ದುಪ್ಪಟ್ಟಾಗಬೇಕಿದೆ. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಅಂಕಿಅಂಶಗಳು ಆರ್ಥಿಕತೆಗೆ ಕೃಷಿ ಕ್ಷೇತ್ರದ ಪಾಲು ತಗ್ಗುತ್ತಿರುವುದನ್ನು ತಿಳಿಸುತ್ತಿದೆ. ಅಂದರೆ, ರೈತರ ಆದಾಯ ದುಪ್ಪಟ್ಟು ಮಾಡುವುದು ಮೋದಿ “ಚುನಾವಣಾ ಜುಮ್ಲಾ”ಇರಬಹುದೇನೋ?

ವ್ಯಂಗ್ಯ ಚಿತ್ರ
ವ್ಯಂಗ್ಯ ಚಿತ್ರಅಭಿಜಿತ್‌ ಗೌಡ

ಆದರೆ, ಮೋದಿ ಸರ್ಕಾರ ತಿಳಿಯಬೇಕಾದ ಒಂದು ವಾಸ್ತವಿಕ ಸತ್ಯವಿದೆ. ಆರ್ಥಿಕಾಭಿವೃದ್ಧಿಗೆ ಸೇವಾ ವಲಯ ಮತ್ತು ಉದ್ಯಮ ವಲಯದ ಪಾಲು ಶೇ.60ರಷ್ಟಿರಬಹುದು. ಆದರೆ, ಉದ್ಯೋಗ ಸೃಷ್ಟಿಸುವಲ್ಲಿ, ಒದಗಿಸುವಲ್ಲಿ ಕೃಷಿ ಕ್ಷೇತ್ರದ ಪಾಲು ಶೇ.60ಕ್ಕಿಂತಲೂ ಹೆಚ್ಚಿದೆ. ಕೃಷಿ ಕ್ಷೇತ್ರವು ಸೋತರೆ ಇಡೀ ಆರ್ಥಿಕತೆಯೇ ಸೋಲುತ್ತದೆ.

ರೈತರ ಹೋರಾಟವನ್ನು ದಮನ ಮಾಡುವ ಹತಾಶ ಯತ್ನದಲ್ಲಿರುವ ಪ್ರಧಾನಿ ಮೋದಿ, ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ, ರೈತರ ಮನದ ಮಾತನ್ನು ಕೇಳಬೇಕಿದೆ, ರೈತರ ಅಳಲನ್ನು ಆಲಿಸಬೇಕಿದೆ. ಕಾರ್ಪೊರೆಟ್ ಕುಳಗಳು ನೀಡುವ ಎಲೆಕ್ಟೊರೊಲ್ ಬಾಂಡ್, ಪಿಎಂ ಕೇರ್ಸ್ ಫಂಡ್ ನ ‘ಝಣ ಝಣ’ ಸದ್ದಿನ ಲಾಲಿಯಲ್ಲಿ ಮೈಮರೆತಿರುವ ಪ್ರಧಾನಿ ಮೋದಿ ರೈತರ ಮನದ ಮಾತನ್ನು ಆಲಿಸದೇ ಹೋದರೆ ಒಂದಲ್ಲಾ ಒಂದು ದಿನ ಜನರೇ ಜೋಳಿಗೆ ಕೊಟ್ಟು ಕಳುಹಿಸುತ್ತಾರೆ.

ಏಕೆಂದರೆ, ಈ ದೇಶದ ಪ್ರಜ್ಞಾವಂತ ನಾಗರಿಕರು ಹೋರಾಟ ನಿರತ ರೈತರ ಪರವಾಗಿದ್ದಾರೆ, ಬೆಂಬಲವಾಗಿದ್ದಾರೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com