ಕೇಂದ್ರ ಸರ್ಕಾರ ಪರಿಚಯಿಸಿರುವ ನೂತನ ಕಾಯ್ದೆ ವಿರುದ್ಧ ರೈತರು ದೊಡ್ಡ ಮಟ್ಟಿನ ಪ್ರತಿಭಟನೆ ನಡೆಸುತ್ತಿದ್ದಾರೆ. ʼಸಬ್ ಅಚ್ಚಾ ಹೇʼ ಎಂದು ನಂಬಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಇದು ನುಂಗಲಾರದ ತುತ್ತಾಗಿವೆ. ದೆಹಲಿ ಚಲೋ ಆಯೋಜಿಸಿರುವ ಪ್ರತಿಭಟನಾಕಾರ ರೈತರನ್ನು ತಡೆಯಲು ಸರ್ಕಾರ ರಸ್ತೆ ಅಗೆದು, ಬ್ಯಾರಿಕೇಡ್ ಹಾಕಿ ರಸ್ತೆ ಮುಚ್ಚಿಸಿದರೂ, ಜಲಫಿರಂಗಿ, ಆಶ್ರುವಾಯು ಸಿಡಿಸದರೂ ಪ್ರತಿಭಟನಾಕಾರರನ್ನು ತಡೆಯಲು ಸರ್ಕಾರದಿಂದ ಸಾದ್ಯವಾಗಲಿಲ್ಲ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೈತರ ಹೋರಟದ ತೀವೃತೆಗೆ ಬೆಚ್ಚಿ ಬಿದ್ದಿರುವ ಬಿಜೆಪಿ, ತನ್ನ ಐಟಿ ಸೆಲ್ ಮುಖಾಂತರ ರೈತರ ವಿರುದ್ಧವೇ ಸುಳ್ಳು ಸುದ್ದಿಗಳನ್ನು ಹಂಚುತ್ತಿದೆ. ರೈತರನ್ನು ಖಾಲಿಸ್ತಾನಿಗಳು ಎಂದು ಹಣೆಪಟ್ಟಿ ಕಟ್ಟಿದ್ದಾರೆ. ಈ ನಡುವೆ, ಮುಸ್ಲಿಮರು ಈ ಪ್ರತಿಭಟನೆಯ ಹಿಂದೆ ಇದ್ದಾರೆ ಎನ್ನುವ ಕಪೋಲ ಕಲ್ಪಿತ ಸುದ್ದಿಗಳನ್ನು ಹರಿಬಿಟ್ಟು, ಪ್ರತಿಭಟನೆಯನ್ನು ಹಣಿಯಲು ತೊಡಗಿರುವುದು ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬಿಬಿಸಿಯಿಂದ ಗೌರವಕ್ಕೊಳಗಾದ ಶಾಹೀನ್ ಭಾಗ್ ದಾದಿ ಬಿಲ್ಕೀಸ್ ಬಾನು ಅವರ ಚಿತ್ರವನ್ನು ಹಾಗೂ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಓರ್ವ ರೈತ ಮಹಿಳೆಯ ಚಿತ್ರವನ್ನು ತಿರುಚಿ ಇಬ್ಬರೂ ಒಂದೇ ಎಂದು ಬಿಂಬಿಸಿದ್ದೂ ನಡೆದಿದೆ. ಈ ಚಿತ್ರವನ್ನು ನಟಿ ಕಂಗನಾ ಕೂಡಾ ಹಂಚಿಕೊಂಡಿದ್ದು, ನಂತರ ಸುಳ್ಳು ಮಾಹಿತಿಯೆಂದು ನೆಟ್ಟಿಗರು ನಟಿಗೆ ಕ್ಲಾಸ್ ತೆಗೆದ ಬಳಿಕ ಆಕೆ ಆ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.
ವಾಸ್ತವದಲ್ಲಿ ಈ ಎರಡೂ ಚಿತ್ರದಲ್ಲಿರುವವರು ಬೇರೆ ಬೇರೆಯಾಗಿದ್ದು, ಕೇಂದ್ರದ ವಿರುದ್ಧ ನಡೆಯುವ ಹೋರಾಟವನ್ನು ಹಣಿಯಲೆಂದೇ ಬಿಜೆಪಿ ಐಟಿ ಸೆಲ್ಲಿನ ಮೂಲಕ ಈ ಚಿತ್ರ ತಿರುಚುವಿಕೆ ನಡೆದಿದೆಯೆಂದು ಆರೋಪಿಸಲಾಗಿದೆ.
ಈ ನಡುವೆ, ಹಸಿರು ಪೇಟ ಧರಿಸಿದ ವ್ಯಕ್ತಿಯೊಬ್ಬನ ಚಿತ್ರವೊಂದನ್ನು ಬಿಜೆಪಿ ಬೆಂಬಲಿಗರು ವೈರಲ್ ಮಾಡಿದ್ದು, ಪ್ರತಿಭಟನೆಯಲ್ಲಿ ಮುಸ್ಲಿಮರು ಸಿಖ್ ವೇಷಧಾರಿಯಾಗಿ ಪಾಲ್ಗೊಂಡಿದ್ದಾರೆ ಎಂದು ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ.
ವಾಸ್ತವದಲ್ಲಿ ಇದು ಸಂಪೂರ್ಣ ಸುಳ್ಳು ಮಾಹಿತಿಯಾಗಿದ್ದು, ಈ ಚಿತ್ರವು ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಪ್ರತಿನಿಧಿಸುವುದಿಲ್ಲ. ಈ ಚಿತ್ರವನ್ನು ಕೃಷಿ ಸುಧಾರಣೆ ಮೂರು ಸುಗ್ರೀವಾಜ್ಞೆಗಳನ್ನು ಪ್ರಕಟಿಸಿ,. ರಾಷ್ಟ್ರಪತಿಗಳು ಅನುಮೋದಿಸುವ ಎರಡು ತಿಂಗಳ ಮೊದಲೇ ತೆಗೆಯಲಾಗಿದೆ. ಅಂದರೆ, ಎಪ್ರಿಲ್ 8 ರಂದೇ ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ ಇದು ಪ್ರತಿಭಟನೆ ವೇಳೆ ತೆಗೆದ ಚಿತ್ರವಲ್ಲವೆಂದು ವೇದ್ಯವಾಗುತ್ತವೆ. ರೈತರ ಪ್ರತಿಭಟನೆಯ ಕುರಿತಂತೆ ಜನರ ದಿಕ್ಕು ತಪ್ಪಿಸಲೆಂದೆ ನಡೆಸಿದ ಷಡ್ಯಂತ್ರ ಬಯಲಾಗಿದೆ.