ಪಂಜಾಬ್ ಮತ್ತು ಹರಿಯಾಣದ ಪ್ರತಿಭಟನಾಕಾರ ರೈತರ ಮೇಲೆ ಬಲ ಪ್ರಯೋಗಿಸಿರುವುದನ್ನು ಆರ್ಎಸ್ಎಸ್ ಅಂಗಸಂಸ್ಥೆ ಭಾರತೀಯ ಕಿಸಾನ್ ಸಂಘ (BKS) ಟೀಕಿಸಿದೆ.
ಕೇಂದ್ರದ ಮೂರು ಕೃಷಿ ಮಸೂದೆಗಳ ವಿರುದ್ಧ ರೈತರ ಪ್ರತಿಭಟನೆಯ "ರಾಜಕೀಯೀಕರಣ" ದ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಿಕೆಎಸ್, ಆಂದೋಲನವನ್ನು ಶಾಂತಿಯುತವಾಗಿ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವನ್ನು ಒತ್ತಾಯಿಸಿದೆ. ಮತ್ತು ಮುಕ್ತ ಮಾರುಕಟ್ಟೆಯಲ್ಲೂ MSP (ಕನಿಷ್ಠ ಬೆಂಬಲ ಬೆಲೆ) ಖಾತರಿಪಡಿಸುವಂತೆ ಆಗ್ರಹಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಪ್ರತಿಭಟನೆ ರಾಜಕೀಯದಾಟವಾಗಿ ಮಾರ್ಪಟ್ಟಿದೆ ಮತ್ತು ರೈತರು ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ರೈತರು ಎದುರಿಸುತ್ತಿರುವ ದೌರ್ಜನ್ಯಗಳನ್ನು ತಪ್ಪಿಸಬೇಕಾಗಿತ್ತು ಮತ್ತು ಸರ್ಕಾರವು ರೈತರನ್ನು ಪ್ರಚೋದಿಸುವ ಮತ್ತು ದಾರಿತಪ್ಪಿಸುವವರ ಬೆನ್ನು ಬೀಳಬೇಕು. ಅದೇ ಸಮಯದಲ್ಲಿ, ಮಂಡಿ ಜೊತೆಗೆ ಮುಕ್ತ ಮಾರುಕಟ್ಟೆಯಲ್ಲಿನ ರೈತರಿಗೂ MSP ಅನ್ವಯವಾಗುವಂತೆ ಸರ್ಕಾರ ಖಚಿತಪಡಿಸಿಕೊಳ್ಳಬೇಕು ”ಎಂದು BKS ಸಂಘಟನಾ ಕಾರ್ಯದರ್ಶಿ ದಿನೇಶ್ ಕುಲಕರ್ಣಿ ಹೇಳಿದ್ದಾರೆ.
MSP ಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ, ಆದರೆ ಇದು ಕೇವಲ 8-10ರಷ್ಟು ಮಾತ್ರ ಎಂದು ಕುಲಕರ್ಣಿ ತಿಳಿಸಿದ್ದಾರೆ.
"ತಮ್ಮ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ರೈತರನ್ನು ಇನ್ನೂ ಒತ್ತಾಯಿಸಲಾಗುತ್ತಿದೆ. ಆದ್ದರಿಂದ MSP ಯನ್ನು ಮುಕ್ತ ಮಾರುಕಟ್ಟೆಯೊಂದಿಗೆ ಸಂಯೋಜಿಸಬೇಕು ಎಂದು ನಾವು ಸರ್ಕಾರವನ್ನು ಕೇಳಿದ್ದೇವೆ. ಒಬ್ಬ ರೈತನು ತನ್ನ ಉತ್ಪನ್ನಗಳನ್ನು ಎಲ್ಲಿ ಮಾರುತ್ತಾನೆ ಎಂಬುದರ ಹೊರತಾಗಿಯೂ, ಅವನಿಗೆ ಕನಿಷ್ಠ ಬೆಂಬಲ ಬೆಲೆಯ ಭರವಸೆ ನೀಡಬೇಕು. ಅದರಿಂದ ಕಡಿಮೆಗೆ ಖರೀದಿಸಲು ಯಾರಿಗೂ ಅವಕಾಶ ನೀಡಬಾರದು,” ಎಂದು ಅವರು ದಿ ಪ್ರಿಂಟ್ ಗೆ ಹೇಳಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಈಗ ಡಿಸೆಂಬರ್ 3 ರಂದು ಎಲ್ಲಾ ಕಾರ್ಮಿಕ ಸಂಘಗಳು ಮತ್ತು ಪ್ರತಿಭಟನಾ ರೈತ ಗುಂಪುಗಳೊಂದಿಗೆ ಸಭೆ ಕರೆದಿದೆ.
"ನಾವು ಪ್ರತಿಭಟನಾ ನಿರತ ರೈತರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಡಿಸೆಂಬರ್ 3 ರಂದು ಸಭೆ ಕರೆಯಲಾಗಿದೆ ಎಂದು ಅವರಿಗೆ ತಿಳಿಸಿದ್ದೇವೆ. ನಾವು ಅಲ್ಲಿ ಕೃಷಿ ಸಂಬಂಧಿತ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಬೇಕು ” ಎಂದು ಕುಲಕರ್ಣಿ ಹೇಳಿದ್ದಾರೆ.
ಈ ಮೂರು ಮಸೂದೆಗಳ ವಿರುದ್ಧ ಹಲವಾರು ರೈತ ಸಂಘಟನೆಗಳು, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಪ್ರತಿಭಟನೆ ನಡೆಸುತ್ತಿದೆ. ರೈತರಿಗೆ ಉತ್ತಮ ಬೆಲೆ ನೀಡುವಂತೆ ಎಂಎಸ್ಪಿಯನ್ನು ಕಾನೂನುಬದ್ಧವಾಗಿ ರೂಪಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಒಂದು.
ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ ʼದೆಹಲಿ ಚಲೋʼ ರ್ಯಾಲಿ ಸಾಗಿದ ರೈತರ ಮೇಲೆ ಆಶ್ರುವಾಯು ಸಿಡಿಸಿ, ಜಲಫಿರಂಗಿ ಬಳಸಿರುವುದು ವ್ಯಾಪಕ ಖಂಡನೆಗೆ ಒಳಗಾಗಿದೆ.