ಕಾರ್ಪೊರೆಟ್ ಕುಳಗಳಿಗೆ ನೆರವಾಗಲಿರುವ ನರೇಂದ್ರ ಮೋದಿ ಸರ್ಕಾರದ ಮೂರ್ಖತನದ ಹೊಸ ಬ್ಯಾಂಕಿಂಗ್ ನೀತಿ

ಆರ್ಬಿಐ ಆಂತರಿಕ ಕಾರ್ಯಪಡೆಯು ಬಿಡುಗಡೆ ಮಾಡಿರುವ ಖಾಸಗಿ ಬ್ಯಾಂಕುಗಳ ಒಡೆತನ ಹಾಗೂ ಹೊಸ ಬ್ಯಾಂಕುಗಳನ್ನು ಪ್ರಾರಂಭಿಸಲು ಇರುವ ನಿಯಮಗಳ ಸಡಿಲಿಕೆ ಕುರಿತಾದ ವರದಿಯು ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
ಕಾರ್ಪೊರೆಟ್ ಕುಳಗಳಿಗೆ ನೆರವಾಗಲಿರುವ ನರೇಂದ್ರ ಮೋದಿ ಸರ್ಕಾರದ ಮೂರ್ಖತನದ ಹೊಸ ಬ್ಯಾಂಕಿಂಗ್ ನೀತಿ

ನಿಮಗೆ ನೆನಪಿರಬಹುದು, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕ ರಾಜ್ಯದ ಮೂರು ಬ್ಯಾಂಕುಗಳನ್ನು ಮುಚ್ಚಲಾಗಿದೆ. ಅಂದರೆ, ಇತರೆ ಬ್ಯಾಂಕುಗಳೊಂದಿಗೆ ವೀಲೀನಗೊಳಿಸಲಾಗಿದೆ. ಈ ರಾಜ್ಯದ ಹೆಮ್ಮೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಪ್ ಮೈಸೂರು ಇತರ ನಾಲ್ಕು ಸ್ಟೇಟ್ ಬ್ಯಾಂಕುಗಳೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ವಿಲೀನಗೊಂಡಿದೆ. ಅಲ್ಲಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇತಿಹಾಸ ಸೇರಿದೆ. ಕರಾವಳಿಯ ಹೆಮ್ಮೆಯ ಬ್ಯಾಂಕುಗಳ ಪೈಕಿ ಎರಡು ಬ್ಯಾಂಕುಗಳನ್ನು ಮುಚ್ಚಲಾಗಿದೆ. ಅಂದರೆ, ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ ನೊಂದಿಗೆ ವಿಲೀನಗೊಂಡಿದ್ದರೆ, ಕಾರ್ಪೊರೆಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆ ವಿಲೀನಗೊಂಡಿದೆ. ಈಗ ಸದ್ಯಕ್ಕೆ ಕರ್ನಾಟಕದ ಮೂಲದ ಬ್ಯಾಂಕಾಗಿ ಉಳಿದಿರುವುದು ಕೆನರಾ ಬ್ಯಾಂಕ್ ಮಾತ್ರ. ದುರಾದೃಷ್ಟವಶಾತ್ ಈ ನಾಡನ್ನು ಪ್ರತಿನಿಧಿಸುವ ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ದನಿ ಎತ್ತಿಲ್ಲ. ಈ ಜನಪ್ರತಿನಿಧಿಗಳು, ಬ್ಯಾಂಕಿಂಗ್ ವಲಯದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಅರ್ಥ ಮಾಡಿಕೊಳ್ಳಲಾರದಷ್ಟು ಮುಠ್ಠಾಳರೇ ಎಂಬ ಅನುಮಾನವೂ ಬರುತ್ತದೆ!

ಮೋದಿ ಸರ್ಕಾರವು ಮೊದಲ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿ ಐದು ಸ್ಟೇಟ್ ಬ್ಯಾಂಕ್ ಗಳನ್ನು ವಿಲೀನಗೊಳಿಸಿಕು. ನಂತರ 2020ರ ಏಪ್ರಿಲ್ 1 ರಿಂದ ಮೊತ್ತೊಂದು ಸುತ್ತಿನ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಮುಗಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಜತೆಗೆ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ವಿಲೀನಗೊಳಿಸಲಾಗಿದೆ. ಕೆನರಾ ಬ್ಯಾಂಕ್ ಜತೆಗೆ ಸಿಂಡಿಕೇಟ್ ಬ್ಯಾಂಕನ್ನು, ಅಲಹಾಬಾದ್ ಬ್ಯಾಂಕ್ ಜತೆಗೆ ಇಂಡಿಯನ್ ಬ್ಯಾಂಕ್ ಅನ್ನು ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜತೆಗೆ ಕಾರ್ಪೊರೆಷನ್ ಬ್ಯಾಂಕ್ ಹಾಗೂ ಆಂಧ್ರ ಬ್ಯಾಂಕನ್ನು ವಿಲೀನಗೊಳಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ವಿಲೀನ ಪ್ರಕ್ರಿಯೆಯಲ್ಲಿ ಮೋದಿ ಆಪ್ತ ಕಾರ್ಪೊರೆಟ್ ಗಳ ಅದೆಷ್ಟೋ ಸಾಲಗಳನ್ನು ‘ರೈಟ್ ಆಫ್’ ಮಾಡಲಾಗಿದೆ. ಸಣ್ಣ ಪ್ರಮಾಣದ ಬ್ಯಾಂಕುಗಳಿಂದ ಹೆಚ್ಚಿನ ಉಪಯೋಗ ಇಲ್ಲ, ದೊಡ್ಡದಾದ ಹೆಚ್ಚಿನ ಬ್ಯಾಂಕುಗಳಿರಬೇಕು ಎಂಬ ವಿತಂಡವಾದ ಮೋದಿ ಸರ್ಕಾರದ್ದು. ದೇಶದಲ್ಲಿದ್ದ 27 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ ಈಗ 12 ಬ್ಯಾಂಕುಗಳಿಗೆ ತಗ್ಗಿಸಿದೆ. ಇಡೀ ಬ್ಯಾಂಕಿಂಗ್ ವಿಲೀನ ಪ್ರಕ್ರಿಯೆಯು ಬ್ಯಾಂಕಿಂಗ್ ವಲಯದ ಮತ್ತು ಬ್ಯಾಂಕಿಂಗ್ ಉದ್ಯೋಗಿಗಳ ಹಿತಾಸಕ್ತಿಗೆ ವಿರುದ್ಧವಾಗಿತ್ತು. ಆದಾಗ್ಯೂ, ಇದು ಕಾರ್ಪೊರೆಟ್ ವಲಯಗಳಿಗೆ ಪೂರಕ ಎಂಬ ಕಾರಣಕ್ಕೆ ಮೋದಿ ಸರ್ಕಾರ ಬ್ಯಾಂಕುಗಳನ್ನು ವಿಲೀನಗೊಳಿಸಿದೆ.

ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮುಚ್ಚುವ ಮತ್ತು ವಿಲೀನಗೊಳಿಸುವುದರ ಹಿಂದಿದ್ದ ‘ಕಾರ್ಪೊರೆಟ್ ಹಿತಾಸಕ್ತಿ’ ಕಾಪಾಡುವ ಮೋದಿ ಸರ್ಕಾರದ ಹುನ್ನಾರ ಇದೀಗ ಬಯಲಾಗಿದೆ. ಎರಡು ದಿನಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕಿನ ಆಂತರಿಕ ಕಾರ್ಯಪಡೆಯು ಖಾಸಗಿ ಬ್ಯಾಂಕುಗಳ ಮಾಲೀಕತ್ವ ಕುರಿತಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಲಿ ಇದ್ದ ಠೇವಣಿದಾರರ ಹಿತಾಸಕ್ತಿ ಕಾಪಾಡುವ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಪಾವಿತ್ಯ್ರತೆಯನ್ನು ಉಳಿಸಿಕೊಳ್ಳಲು ಇದ್ದ ಹಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ.

ಈಗ ಮೋದಿ ಆಪ್ತರಾದ, ಆಂಬಾನಿ, ಅದಾನಿ ಅಷ್ಟೇ ಅಲ್ಲ, ಟಾಟಾ, ಬಿರ್ಲಾ ಮುಂತಾದವರು ಬ್ಯಾಂಕುಗಳನ್ನು ತೆರೆಯಬಹುದಾಗಿದೆ. ಖಾಸಗಿಯವರು ಬ್ಯಾಂಕುಗಳನ್ನು ತೆರೆಯಲು ಇದುವರೆಗೂ ಇದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಿರುವುದು, ಅಧಿಕಾರರೂಢ ರಾಜಕೀಯ ಪಕ್ಷದ ಕೃಪಾಕಟಾಕ್ಷ ಇರುವ ಕಾರ್ಪೊರೆಟ್ ಕುಳಗಳು ದೇಶದ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರಲು ಅವಕಾಶ ಮಾಡಿಕೊಟ್ಟಂತಾಗಿದೆ. ಅಲ್ಲದೇ ಹಾಲಿ ಇರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಬ್ಯಾಂಕುಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಡಲಾಗಿದೆ. ಇದು ತಕ್ಷಣಕ್ಕೆ ಜಾರಿಯಾಗುತ್ತದೆ ಎಂದೇನೂ ಅಲ್ಲಾ. ಆದರೆ, ಇಂದಲ್ಲಾ ನಾಳೆ, ಈ ವ್ಯವಸ್ಥೆ ಜಾರಿಗೆ ಬರುತ್ತದೆ. ಆ ವೇಳೆಗೆ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳ ಶಕ್ತಿಯನ್ನು ಮತ್ತಷ್ಟು ಕುಗ್ಗಿಸಿರುತ್ತದೆ.

ಈ ಮೊದಲು ಪೇಮೆಂಟ್ ಬ್ಯಾಂಕುಗಳನ್ನು ತೆರೆಯಲು ಅವಕಾಶ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾದಾಗ, ಆಡಳಿತಪಕ್ಷಕ್ಕೆ ಆಪ್ತವಾಗಿರುವ ಕಾರ್ಪೊರೆಟ್ ಕುಳಗಳೆಲ್ಲವೂ ಅರ್ಜಿ ಹಾಕಿದ್ದವು. ಕೆಲವರಿಗೆ ಈಗಾಗಲೇ ಪೇಮೆಂಟ್ ಬ್ಯಾಂಕಿನ ಲೈಸೆನ್ಸ್ ಸಹ ಸಿಕ್ಕಿದೆ. ಆರ್ಬಿಐ ಆಂತರಿಕ ಕಾರ್ಯಪಡೆಯು ಬಿಡುಗಡೆ ಮಾಡಿರುವ ಖಾಸಗಿ ಬ್ಯಾಂಕುಗಳ ಒಡೆತನ ಹಾಗೂ ಹೊಸ ಬ್ಯಾಂಕುಗಳನ್ನು ಪ್ರಾರಂಭಿಸಲು ಇರುವ ನಿಯಮಗಳ ಸಡಿಲಿಕೆ ಕುರಿತಾದ ವರದಿಯು ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಡೀ ವರದಿಯ ಸಾರಾಂಶವು ಮೋದಿ ಸರ್ಕಾರದ ಸಾರ್ವಜನಿಕ ವಲಯದ ಬ್ಯಾಂಕುಗಳ ವಿರೋಧಿ ಧೋರಣೆಯನ್ನು ಪೋಷಿಸುವಂತಿದೆ.

ಮೋದಿ ಸರ್ಕಾರದ ದ್ವಂದ್ವವನ್ನು ಗಮನಿಸಿ. ಒಂದು ಕಡೆ, ಸಣ್ಣ ಮಟ್ಟದ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಲಾಭವಿಲ್ಲ ಎಂಬ ಕಾರಣ ಮುಂದೊಡ್ಡಿ ಅವುಗಳನ್ನು ವಿಲೀನಗೊಳಿಸುತ್ತಿದೆ. ಆದೇ ವೇಳೆ, ಖಾಸಗಿ ವಲಯದ ಕಾರ್ಪೊರೆಟ್ ಗಳಿಗೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಸಣ್ಣ ಪ್ರಮಾಣದಲ್ಲೇ ಬ್ಯಾಂಕುಗಳನ್ನು ತೆರೆಯಲು ಮುಕ್ತ ಅವಕಾಶ ನೀಡುತ್ತಿದೆ.

ಮೋದಿ ಸರ್ಕಾರ ಬಂದ ನಂತರ ಸಾರ್ವಜನಿಕ ವಲಯದ ಬ್ಯಾಂಕುಗಳು ಸತತ ನಷ್ಟದಲ್ಲಿವೆ, ಅದಕ್ಕೆ ಮುಖ್ಯ ಕಾರಣ ಮೋದಿ ಸರ್ಕಾರವು, ಆಡಳಿತರೂಢ ಪಕ್ಷದ ಆಪ್ತ ಕಾರ್ಪೊರೆಟ್ ಕುಳಗಳ ಬಹುದೊಡ್ಡ ಮೊತ್ತದ ಸಾಲವನ್ನು ರೈಟ್ ಆಫ್ ಮಾಡಿದೆ. ಮಾಡುತ್ತಲೇ ಇದೆ. ಇದೇ ವೇಳೆ ಈ ಕಾರ್ಪೊರೆಟ್ ಕುಳಗಳು ಎಲೆಕ್ಟರೊಲ್ ಬಾಂಡ್ ಮೂಲಕ ಆಡಳಿತಾರೂಢ ಪಕ್ಷಕ್ಕೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡುತ್ತಿವೆ. ಎಲೆಕ್ಟೊರೊಲ್ ಬಾಂಡ್ ಮೂಲಕ ಯಾರು ಎಷ್ಟು ಎಷ್ಟು ಕೊಟ್ಟರೆಂಬುದನ್ನು ಗೌಪ್ಯವಾಗಿ ಇಡುವ ಕಾನೂನನ್ನು ಖುದ್ಧು ಮೋದಿ ಸರ್ಕಾರವೇ ಮಾಡಿಕೊಂಡಿದೆ.

ಸಮಸ್ಯೆಯ ಸ್ವರೂಪ ಯಾವುದು?

ನರೇಂದ್ರ ಮೋದಿ ಸರ್ಕಾರ ತನ್ನ ಆಪ್ತ ಕಾರ್ಪೊರೆಟ್ ಕುಳಗಳಿಗೆ ಅನುಕೂಲವಾಗುವ ರೀತಿಯಲ್ಲಿ ಬ್ಯಾಂಕಿಂಗ್ ನೀತಿಯನ್ನು ರೂಪಿಸುತ್ತಿದೆ. ಆದರೆ, ವಾಸ್ತವವಾಗಿ ಇದರ ನೇರ ಪರಿಣಾಮ ಬೀರುವುದು ಜನಸಾಮಾನ್ಯರ ಮೇಲೆ. ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ, ತರಾತುರಿಯಲ್ಲಿ ಜಿಎಸ್ ಟಿ ತಂದಿದ್ದರಿಂದ ಮತ್ತು ಜಗತ್ತಿನಲ್ಲೇ ಅತಿಗರಿಷ್ಠ ಮಟ್ಟದ ಪೆಟ್ರೋಲ್ ಮತ್ತು ಡಿಸೇಲ್ ದರ ಏರುತ್ತಿರುವುದರಿಂದ ಸಾರ್ವಜನಿಕರಿಗೆ ಹೇಗೆ ಕಷ್ಟವಾಗುತ್ತಿದೆಯೋ ಹಾಗೆಯೇ ಮುಂಬರುವ ದಿನಗಳಲ್ಲಿ ಜನರು ಕಷ್ಟ ಎದುರಿಸಬೇಕಾಗುತ್ತದೆ.

ಬ್ಯಾಂಕ್ ಎಂದರೆ, ಕೇವಲ ಬ್ಯಾಂಕ್ ಸ್ಥಾಪಿಸಿದ ಕಾರ್ಪೊರೆಟ್ ಕುಳ ಅಷ್ಟೇ ಇರೊದಿಲ್ಲ. ಲಕ್ಷಾಂತರ ಗ್ರಾಹಕರು ಇರುತ್ತಾರೆ. ಈ ಪೈಕಿ ಶೇ.75ರಷ್ಟು ಮಂದಿ ಠೇವಣಿ ಇಡುತ್ತಾರೆ. ಉಳಿದ ಗ್ರಾಹಕರು ಸಾಲ ಪಡೆಯುತ್ತಾರೆ. ಸಮಸ್ಯೆ ಅದಲ್ಲ. ಸಮಸ್ಯೆ ಮೂಲ ಇರುವುದು, ಬ್ಯಾಂಕ್ ಪ್ರವರ್ತಕರೇ ಸಾಲಗಾರರಾಗುವುದರಿಂದ. ಉದಾಹರಣೆಗೆ ರಿಲಯನ್ಸ್ ಇಂಡಸ್ಟ್ರೀಯ್ ಮುಖೇಶ್ ಅಂಬಾನಿ ಅವರ ಕಂಪನಿ ಮೇಲಿನ ಸಾಲವು 1.50 ಲಕ್ಷ ಕೋಟಿಗಳಷ್ಟಿದೆ. ಇತ್ತೀಚೆಗೆ ರಿಲಯನ್ಸ್ ಜಿಯೋ ಮತ್ತು ರಿಲಯನ್ಸ್ ರಿಟೇಲ್ಸ್ ಅಲ್ಪಭಾಗ ಪಾಲನ್ನು ಮಾರಾಟ ಮಾಡಿ ಸಾಲ ತೀರಿಸುವ ಪ್ರಯತ್ನದಲ್ಲಿ ಇದ್ದಾರೆ.

ಈಗ ಮುಖೇಶ್ ಅಂಬಾನಿಯೇ ಬ್ಯಾಂಕ್ ಸ್ಥಾಪಿಸಿದರು ಅಂದಿಟ್ಟುಕೊಳ್ಳಿ, ಅವರದೇ ಕಂಪನಿಗೆ ಅವರೇ ಸಾಲ ಪಡೆದುಕೊಳ್ಳುತ್ತಾರೆ. ಆಡಳಿತ ಮಂಡಳಿಯ ನಿಯಂತ್ರಣವು ಅವರದೇ ಕೈಯ್ಯಲ್ಲಿರುವುದರಿಂದ ನಿಯಮಗಳನ್ನು ಮೀರಿ ಬೇಕಾದಷ್ಟು ಸಾಲ ಪಡೆಯುತ್ತಾರೆ. ಒಂದು ವೇಳೆ ರಿಲಯನ್ಸ್ ಕಂಪನಿ ತೀವ್ರ ನಷ್ಟಕ್ಕೆ ಇಡಾಯಿತು ಎಂದಿಟ್ಟುಕೊಳ್ಳಿ, ಆಗ ಬ್ಯಾಂಕಿಗೆ ನಷ್ಟವಾಗುತ್ತದೆ. ಆದರೆ, ವಾಸ್ತವವಾಗಿ ನಷ್ಟವಾಗುವುದು ಬ್ಯಾಂಕಿಗೆ ಅಲ್ಲ. ಆ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಗ್ರಾಹಕರಿಗೆ. ಇದನ್ನು ಇಲ್ಲಿ ಉದಾಹರಣೆಗೆ ಪ್ರಸ್ತಾಪಿಸಲಾಗಿದೆ. ಕಾರ್ಪೊರೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪ್ರವರ್ತಕರು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಯೆಸ್ ಬ್ಯಾಂಕ್ ಹಗರಣವೇ ಬಯಲು ಮಾಡಿದೆ.

ಮೋದಿ ಸರ್ಕಾರದ ತನ್ನ ಕಳಪೆ ಸಾಧನೆಯನ್ನು ಮುಚ್ಚಿಕೊಳ್ಳಲು ಇಂತಹದ್ದೇ ಏನೇನೋ ಹೊಸ ಹೊಸ ಹಾದಿಗಳನ್ನು ಕಂಡುಕೊಳ್ಳುತ್ತಿದೆ. ಒಂದು ಕಡೆ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಮುಚ್ಚುವುದು, ಮತ್ತೊಂದು ಕಡೆ ತಮ್ಮ ಆಪ್ತರಿಗೆ ಬ್ಯಾಂಕುಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವುದು. ಈ ನಡುವೆ, ಇಡೀ ಮಾರುಕಟ್ಟೆ, ಬಂಡವಾಳ ಪೇಟೆ ಗಮನವು ಇತ್ತ ಹರಿದಿದೆ ಈಗ ಎಲ್ಲರೂ ಹೊಸ ಬ್ಯಾಂಕಿಂಗ್ ನಿಯಮಗಳು ಮತ್ತು ಅದರಿಂದಾಗುವ ಲಾಭ ನಷ್ಟಗಳ ಕುರಿತಂತೇ ಚರ್ಚಿಸುತ್ತಿದ್ದಾರೆ. ಆದರೆ, ಮೋದಿ ಸರ್ಕಾರದ ಆಡಳಿತ ವೈಫಲ್ಯದಿಂದ ಮತ್ತು ಅಪಕ್ವ ಆರ್ಥಿಕನೀತಿಗಳಿಂದ ಕುಸಿದಿರುವ ಆರ್ಥಿಕತೆಯ ಬಗ್ಗೆ ಮತ್ತು ಮುಂಬರುವ ದಿನಗಳಲ್ಲಿ ಜಿಡಿಪಿ ಮತ್ತಷ್ಟು ಕುಸಿಯುವ ಮುನ್ನಂದಾಜಿನ ಬಗ್ಗೆ ಯಾರೂ ಚರ್ಚಿಸುತ್ತಿಲ್ಲ. ಆ ಬಗ್ಗೆ ಚರ್ಚಿಸುವುದು ಪ್ರಧಾನಿ ಮೋದಿಗೂ ಬೇಕಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com