ಆರು ತಿಂಗಳಿಗೂ ಮುನ್ನವೇ ಚುನಾವಣೆಗೆ ಅಣಿಯಾಗುತ್ತಿರುವ ಪಶ್ಚಿಮ ಬಂಗಾಳ

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಂದಿನಿಂದಲೇ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿತ್ತು. ಬಿಜೆಪಿ ಪಶ್ಚಿಮ ಬಂಗಾಳದ ಬಗ್ಗೆ ವಿಶೇಷವಾಗಿ ಗಮನ ಹರಿಸಲು ಎರಡು ಪ್ರಮುಖ ಕಾರಣಗಳಿವೆ
ಆರು ತಿಂಗಳಿಗೂ ಮುನ್ನವೇ ಚುನಾವಣೆಗೆ ಅಣಿಯಾಗುತ್ತಿರುವ ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ನಡೆಯುವುದು ಮುಂದಿನ‌ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ. ಆದರೆ ಆರು ತಿಂಗಳ ಮುನ್ನವೇ ಚುನಾವಣಾ ಕಣವನ್ನು ಅಣಿಗೊಳಿಸಲಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇಷ್ಟು ಬೇಗ ಬಿರುಸಿನ ಚಟುವಟಿಕೆಗಳು ಶುರುವಾಗಲು ಕಾರಣ ಬಿಜೆಪಿ. ಬಿಜೆಪಿ ಪಶ್ಚಿಮ ಬಂಗಾಳ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೂಡ ಈಗ ಚುನಾವಣಾ ಸಿದ್ಧತೆಗಳತ್ತ ಚಿತ್ತ ನೆಟ್ಟಿದೆ.

2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಅಂದಿನಿಂದಲೇ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಟ್ಟಿತ್ತು. ಬಿಜೆಪಿ ಪಶ್ಚಿಮ ಬಂಗಾಳದ ಬಗ್ಗೆ ವಿಶೇಷವಾಗಿ ಗಮನ ಹರಿಸಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕಾರಣಕ್ಕೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2014ರಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಮಣಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಶಾರದ ಚಿಟ್ ಫಂಡ್ ಪ್ರಕರಣದಲ್ಲಿ ಸಿಬಿಐ ಅನ್ನು ದುರುಪಯೋಗ ಮಾಡಿಕೊಂಡು ಅಣಿಯಲು ಪ್ರಯತ್ನಿಸಿದರು. ಅದರಿಂದ ಕೆಲವು ತೃಣಮೂಲ ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಸೆಳೆದರಾದರೂ ಮಮತಾ ಬ್ಯಾನರ್ಜಿ ಜಗ್ಗಲಿಲ್ಲ. ನೋಟ್ ಬ್ಯಾನ್ ನಿಂದ ಹಿಡಿದು ಎನ್ ಆರ್ ಸಿ\ಸಿಎಎವರೆಗೆ ಕೇಂದ್ರ ಸರ್ಕಾರದ ಎಲ್ಲಾ ಜನವಿರೋಧಿ ನಿಲುವುಗಳನ್ನು ಮಮತಾ ಖಂಡಿಸಿದರು. ಹೀಗೆ ಪ್ರತಿ ಹಂತದಲ್ಲೂ ತಮ್ಮನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಮಮತಾ ಬ್ಯಾನರ್ಜಿಯವರ ಗಟ್ಟಿ ದನಿಯನ್ನು ಅಡಗಿಸಲೇಬೇಕೆಂದು ಚುನಾವಣೆಯಲ್ಲಿ ಸೋಲಿಸುವ ಪಣತೊಡಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎರಡನೆಯದು‌ ಬಿಜೆಪಿಯ ಮೂಲ ಸಂಸ್ಥೆ ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿ ಅವರ ಕಾರಣಕ್ಕೆ. ಶ್ಯಾಮಪ್ರಸಾದ್ ಮುಖರ್ಜಿ ಪಶ್ಚಿಮ ಬಂಗಾಳದವರು. ಆದರೆ ಎಡಪಕ್ಷಗಳು ಭದ್ರ ನೆಲೆ ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಈವರೆಗೆ ಗೆಲ್ಲಲು ಸಾಧ್ಯವಾಗಿಲ್ಲ. ಕೇರಳದಂತೆ‌. ಇದೇ ರೀತಿ ಇನ್ನೂ ಬಹಳಷ್ಟು ರಾಜ್ಯಗಳಲ್ಲಿ ಅಧಿಕಾರ ಹಿಡಿಯುವ ಮಟ್ಟಕ್ಕೆ ಗೆದ್ದಿಲ್ಲ. ಆದರೂ ಪಶ್ಚಿಮ ಬಂಗಾಳದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರ ಮೂಲಕ 'ಬಂಗಾಳಿ ಅಸ್ಮಿತೆ' ತೇಲಿಬಿಟ್ಟು ಕಮಲ ಅರಳಿಸಲು ಪ್ರಯತ್ನ ಮಾಡಲಾಗುತ್ತಿದೆ.

2014ರಿಂದಲೂ ಟಾರ್ಗೆಟ್!

2016ರ ವಿಧಾನಸಭಾ ಚುನಾವಣೆಯಲ್ಲಿಯೇ ಬಿಜೆಪಿ ಭಾರೀ ಪ್ರಯತ್ನ ಪಟ್ಟಿತ್ತಾದರೂ ಸಾಧ್ಯವಾಗಿರಲಿಲ್ಲ. 2021ಕ್ಕೆ ಮರಳಿ ಯತ್ನಿಸಲಾಗುತ್ತಿದೆ. ಬಿಜೆಪಿ ನಾಯಕರು ಕೆಲ ದಿನಗಳ ಹಿಂದೆಯೇ ಚುನಾವಣಾ ಕೆಲಸ ಆರಂಭಿಸಿದ್ದರಾದರೂ ಬಿಹಾರ ವಿಧಾನಸಭಾ ಚುನಾವಣೆ ಗೆಲುವಿನ ಬಳಿಕ ಇನ್ನಷ್ಟು ಉತ್ಸಾಹದೊಂದಿಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಮ್ಮೆ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪಶ್ಚಿಮ ಬಂಗಾಳಕ್ಕೆ ಭೇಟಿಕೊಟ್ಟಿದ್ದಾರೆ. ಅಲ್ಲದೆ ಇನ್ನು ಮುಂದೆ ಚುನಾವಣೆ ಮುಗಿಯುವವರೆಗೂ ಪ್ರತಿ ತಿಂಗಳು ಕೂಡ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅಮಿತ್ ಶಾ 2 ದಿನ ಅಲ್ಲೇ ಠಿಕಾಣಿ‌ ಹೂಡಿದರೆ, ಜೆ.ಪಿ. ನಡ್ಡ 3 ದಿನ ಅಲ್ಲೇ ಇದ್ದು ತಂತ್ರಗಾರಿಕೆ ರೂಪಿಸಲಿದ್ದಾರೆ.

ಮಮತಾ 600 ಸಮಾವೇಶ

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಈ ಬಾರಿ ಏಕಕಾಲಕ್ಕೆ ಎಡಪಕ್ಷಗಳ ವಿರುದ್ಧ ಮತ್ತು ಬಲಪಂಥೀಯ ಬಿಜೆಪಿ ವಿರುದ್ಧ ಹೋರಾಡಬೇಕಿದೆ. ಬಿಜೆಪಿಗಿಂತ ತಾನು ಯಾವುದರಲ್ಲೂ ಕಡಿಮೆ ಇಲ್ಲ ಎಂಬ ಸಂದೇಶ ರವಾನಿಸಬೇಕಿದೆ. ಆದುದರಿಂದ ಮಮತಾ ಬ್ಯಾನರ್ಜಿಯವರು ರಾಜ್ಯಾದ್ಯಂತ ಮುಂದಿನ‌ 6 ತಿಂಗಳಲ್ಲಿ 600 ಸಮಾವೇಶಗಳನ್ನು ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸರಣಿ ಸಮಾವೇಶಗಳ ಅಭಿಯಾನ ಇದೇ ನವೆಂಬರ್ 22ರಂದೇ ಆರಂಭವಾಗಲಿದೆ. 'ಬಿಜೆಪಿಯಿಂದ ಬಂಗಾಳವನ್ನು ರಕ್ಷಿಸಿ' (Save Bengal from the BJP) ಎಂಬ ಬ್ಯಾನರ್ ಅಡಿ ಈ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಅಲ್ಪಸಂಖ್ಯಾತರು ಹೆಚ್ಚಿರುವ ಮತ್ತು ಬಹುಸಂಖ್ಯಾತ ಹಿಂದುಗಳು ಹಾಗೂ ಅಲ್ಪಸಂಖ್ಯಾತ ಮುಸ್ಲೀಮರು ಅನ್ಯೋನ್ಯವಾಗಿ ಬದುಕುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಧರ್ಮದ ರಾಜಕಾರಣ ಮಾಡಿ ಸಮಾಜ ಹೊಡೆಯುತ್ತಿದೆ, ಕೋಮು ಸೌಹಾರ್ದತೆಗೆ ಕೊಳ್ಳಿ ಇಡುತ್ತಿದೆ ಎಂಬ ಸಂದೇಶ ಕಳಿಸಲು 'ಬಿಜೆಪಿಯಿಂದ ಬಂಗಾಳವನ್ನು ರಕ್ಷಿಸಿ' ಸಮಾವೇಶಗಳ ಅಭಿಯಾನ‌ ಹಮ್ಮಿಕೊಳ್ಳಲಾಗಿದೆ.

ಇತ್ತೀಚೆಗೆ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಮೇಲೆ ಗೋರ್ಖ ಜನಮುಕ್ತಿ ಮೋರ್ಚಾ (GJM) ಕಾರ್ಯಕರ್ತರು ಹಲ್ಲೆ ನಡೆಸಿದರು. ಆದರೆ ಬಿಜೆಪಿ ನಾಯಕರು ದೂರು ನೀಡಿದ್ದು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಅಂತಾ. ಅಲ್ಲದೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾಗ ಬಿಜೆಪಿ ಕಾರ್ಯಕರ್ತರೇ ಗಲಾಟೆ ಮಾಡಿ, ಬಟ್ಟೆ ಹರಿದುಕೊಂಡು, ಗನ್ ಬಳಸಿ ತೃಣಮೂಲ ಕಾಂಗ್ರೆಸ್ ವಿರುದ್ಧ ದೂರು ನೀಡಿದ್ದರು. ಹೀಗೆ ನಿರಂತರವಾಗಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಸಂದೇಶ ರವಾನಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಮತ್ತೆ ಆಗುತ್ತಾ ಎಡ-ಕಾಂಗ್ರೆಸ್ ಪಕ್ಷಗಳ ಮೈತ್ರಿ?

ಈ ನಡುವೆ ಕಳೆದ ಚುನಾವಣೆಯಲ್ಲಿ ಒಂದಾಗಿ ಕಣಕ್ಕಿಳಿದಿದ್ದ ಎಡಪಕ್ಷಗಳು ಹಾಗೂ ಕಾಂಗ್ರೆಸ್ ಈ ಬಾರಿಯೂ ಮೈತ್ರಿ ಮಾಡಿಕೊಳ್ಳಲಿವೆಯಾ ಅಥವಾ ಇಲ್ಲವಾ ಎಂಬ ಕುತೂಹಲವೂ ಇನ್ನಷ್ಟೇ ಬಗೆಹರಿಯಬೇಕಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಸಾಧನೆ ಚೆನ್ನಾಗಿತ್ತು‌. ಕಾಂಗ್ರೆಸ್ ಸಾಧನೆ ಕಳಪೆಯಾಗಿತ್ತು. ಅಲ್ಲದೆ ಕಳೆದ ಚುನಾವಣೆಯಲ್ಲಿ ಎಡಪಕ್ಷಗಳ ಮತಗಳು ಕಾಂಗ್ರೆಸಿಗೆ ವರ್ಗವಾಗಿದ್ದವು. ಆದರೆ ಕಾಂಗ್ರೆಸ್ ಮತಗಳು ಎಡಪಕ್ಷಗಳಿಗೆ ದೊಡ್ಡ ಪ್ರಮಾಣದಲ್ಲಿ ಬಂದಿರಲಿಲ್ಲ. ಆದುದರಿಂದ ಮತ್ತೆ ಮೈತ್ರಿ ಆಗುವ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು 148 ಸ್ಥಾನ ಗಳಿಸಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com