ಚುನಾವಣೆಗೆ ಸ್ಪರ್ಧಿಸದೆಯೂ ಜನಮಾನಸರಾಗಿ ಉಳಿದಿರುವ ನಿತೀಶ್ ಕುಮಾರ್

ಸಾಮಾನ್ಯವಾಗಿ ಬಹಳ ಕಾಲ ರಾಜಕೀಯದಲ್ಲಿ ಸಕ್ರೀಯವಾಗಿರುವವರು, ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನಗಳನ್ನು ಅಧಿಕಾರಯುತವಾಗಿ ಪಡೆದವರು ಜನರಿಂದಲೇ ಆಯ್ಕೆಯಾದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಭಿನ್ನ.
ಚುನಾವಣೆಗೆ ಸ್ಪರ್ಧಿಸದೆಯೂ ಜನಮಾನಸರಾಗಿ ಉಳಿದಿರುವ ನಿತೀಶ್ ಕುಮಾರ್

ಇಡೀ ದೇಶದ ರಾಜಕಾರಣವನ್ನು ನೋಡಿ, ಜನಮಾನಸದ ನಾಯಕರು ಎಂಬುವವರ ಇತಿಹಾಸ, ವರ್ತಮಾನ ಗಮನಿಸಿ. 'ಮಾಸ್ ಲೀಡರ್'ಗಳೆಲ್ಲರೂ ಜನರಿಂದ ಆಯ್ಕೆಯಾದವರು. ಆದರೆ ನಿತೀಶ್ ಕುಮಾರ್ ಅಪವಾದ. ನಿತೀಶ್ ಕುಮಾರ್ ಕಳೆದ 35 ವರ್ಷಗಳಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆಯನ್ನೇ ಮಾಡದೆ ಸತತವಾಗಿ ನಾಲ್ಕನೇ ಬಾರಿಗೆ, ಒಟ್ಟು 7ನೇ ಬಾರಿಗೆ ಹೆಚ್ಚು ರಾಜಕೀಯ ಪ್ರಜ್ನೆಯುಳ್ಳ ಬಿಹಾರದ ಮುಖ್ಯಮಂತ್ರಿಯಾಗಿದ್ದಾರೆ.

ಮುಖ್ಯಮಂತ್ರಿ ಆಗಲು ಅಥವಾ ಪ್ರಧಾನಮಂತ್ರಿ ಆಗಲು ವಿಧಾನಸಭೆ ಅಥವಾ ಲೋಕಸಭೆಗಳಿಗೇ ಆಯ್ಕೆ ಆಗಲೇಬೇಕು ಎಂಬ ನಿಯಮವೇನಿಲ್ಲ. ಮೇಲ್ಮನೆ ಎಂದು ಕರೆಯುವ ವಿಧಾನ ಪರಿಷತ್ ಅಥವಾ ರಾಜ್ಯಸಭೆಗಳಿಗೆ ಆಯ್ಕೆಯಾದರೆ ಸಾಕು. ಅವುಗಳು ಕೂಡ ಶಾಸನಸಭೆ ಆಗಿರುವುದರಿಂದ ಯಾವುದೇ ಸಂವಿಧಾನಿಕ ತಡೆ ಇಲ್ಲ. ಆದರೆ ಸಾಮಾನ್ಯವಾಗಿ ಬಹಳ ಕಾಲ ರಾಜಕೀಯದಲ್ಲಿ ಸಕ್ರೀಯವಾಗಿರುವವರು, ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನಗಳನ್ನು ಅಧಿಕಾರಯುತವಾಗಿ ಪಡೆದವರು ಜನರಿಂದಲೇ ಆಯ್ಕೆಯಾದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಭಿನ್ನ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಾಗಂತ ನಿತೀಶ್ ಕುಮಾರ್ ಚುನಾವಣೆಗಳಿಗೆ ಸ್ಪರ್ಧೆಯನ್ನೇ ಮಾಡಿಲ್ಲ ಎನ್ನುವಂತೆಯೂ ಇಲ್ಲ. 1989ರಿಂದ 2004ರವರೆಗೆ ( 1991, 1996, 1998, 1999 ಹಾಗೂ 2004) ನಿರಂತರವಾಗಿ ನಳಂದಾ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸರಕಾರದಲ್ಲಿ ದಶಕಗಳ ಕಾಲ ಮಂತ್ರಿಯಾಗಿದ್ದರು. ರೈಲ್ವೆಯಂತಹ ಮಹತ್ವದ ಖಾತೆ ನಿರ್ವಹಸಿದರು. ಜನತಾದಳ ನೇತೃತ್ವದ ತೃತೀಯ ರ‌ಂಗ ರಚಿಸುವ ಕಸರತ್ತು‌ ಮಾಡಿದರು. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ನೆಪ ಇಟ್ಟುಕೊಂಡು ಬಿಜೆಪಿ ಜತೆ ಸೇರಿ ಎನ್ ಡಿಎ ಮೈತ್ರಿಕೂಟ ರಚಿಸಲು ಮುನ್ನುಡಿ ಬರೆದವರಲ್ಲಿ ಒಬ್ಬರಾಗಿದ್ದರು.

ಈ ನಡುವೆ 2000ನೇ ಇಸವಿಯಲ್ಲಿ ಜಾರ್ಖಂಡ್ ಅನ್ನೂ ಒಳಗೊಂಡ ಅವಿಭಜಿತ ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. 324 ಸಂಖ್ಯಾಬಲ ಹೊಂದಿದ್ದ ಅವಿಭಜಿತ ಬಿಹಾರದಲ್ಲಿ ಸರಳ ಬಹುಮತಕ್ಕೆ 163 ಸದಸ್ಯರ ಬೆಂಬಲ ಬೇಕಿತ್ತು. ಎನ್‌ಡಿಎ ಮೈತ್ರಿಕೂಟ 151 ಹಾಗೂ ಲಾಲು ಪ್ರಸಾದ್‌ ಯಾದವ್‌ ಅವರ ಆರ್‌ಜೆಡಿ 159 ಕ್ಷೇತ್ರಗಳಲ್ಲಿ ಗೆದ್ದಿದ್ದವು‌. ಆಗ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದ ನಿತೀಶ್ ‌ಕುಮಾರ್‌ ಅವರನ್ನು ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಆದರೆ ಲಾಲೂ ಪ್ರಸಾದ್ ಯಾದವ್ ಅವರ ಮುಂದೆ ನಿತೀಶ್ ಕುಮಾರ್ ಆಟ ನಡೆಯಲಿಲ್ಲ. ಎಂಟೇ ದಿನಕ್ಕೆ ನಿತೀಶ್‌ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಯಿತು.

ಇದಲ್ಲದೆ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರು. ಮೊದಲ ಬಾರಿ 1977ರಲ್ಲಿ ನಳಂದಾ ಜಿಲ್ಲೆಯ ಹರ್ನೌತ್‌ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರಾದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ 1985ರಲ್ಲಿ ಅದೇ ಕ್ಷೇತ್ರದಿಂದ ಭಾರೀ ಮತಗಳ ಅಂತರದ ಗೆಲುವು ಸಾಧಿಸಿದ್ದರು‌. ಆನಂತರದಲ್ಲಿ ಅವರೆಂದೂ ವಿಧಾನಸಭೆಗೆ ಸ್ಪರ್ಧೆ ಮಾಡುವ ಧೈರ್ಯವನ್ನೇ ತೋರಲಿಲ್ಲ. ಇದೇ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರಿಗೆ 'ಈ ಬಾರಿ ಯಾವುದಾದರೂ ಕ್ಷೇತ್ರದಲ್ಲಿ ನಿಂತು ಜನರಿಂದ ಆಯ್ಕೆಯಾಗಿ ನಿಮ್ಮ ಶಕ್ತಿ ಸಾಬೀತುಪಡಿಸಿ' ಎಂದು ಚುನಾವಣೆ ವೇಳೆ ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಸವಾಲು ಹಾಕಿದ್ದರು. ನಿತೀಶ್ ಕುಮಾರ್ ಎಷ್ಟು ಬುದ್ದಿವಂತರೆಂದರೆ, ತೇಜಸ್ವಿ ಯಾದವ್‌ ಅವರ ಸವಾಲಿಗೆ ಪ್ರತಿಕ್ರಿಯಿಸಲೇ ಇಲ್ಲ.

2005ರಲ್ಲಿ 2ನೇ ಬಾರಿಗೆ ಮುಖ್ಯಮಂತ್ರಿ ಆದ ನಿತೀಶ್ ಕುಮಾರ್ 2006ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾದರು. ಅಲ್ಲಿಂದೀಚೆಗೆ ನಿರಂತರವಾಗಿ ಅವರು ವಿಧಾನ‌ ಪರಿಷತ್ತಿನಲ್ಲೇ ಇದ್ದಾರೆ. 2010ರಲ್ಲಿ 3ನೇ ಬಾರಿ ಮುಖ್ಯಮಂತ್ರಿಯಾದರು, 2012ರಲ್ಲಿ ವಿಧಾನ ಪರಿಷತ್‌ಗೆ ಮರು ಆಯ್ಕೆಯಾದರು. ಈ ನಡುವೆ ಬಂದ 2015ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿಲ್ಲ. 2015ರಲ್ಲಿ ಮಹಾ ಘಟಬಂಧನ್‌ ವತಿಯಿಂದ 4ನೇ ಬಾರಿಗೆ ಮುಖ್ಯಮಂತ್ರಿಯಾದರು. 2017ರಲ್ಲಿ ಮಹಾಘಟಬಂಧನ ಬಿಟ್ಟು ಎನ್ ಡಿಎಗೆ ಬಂದು ಮತ್ತೆ ಮುಖ್ಯಮಂತ್ರಿಯಾದರು. ಇದಾದ ಮೇಲೆ 2018ರಲ್ಲಿ ಮತ್ತೆ 3ನೇ ಬಾರಿಗೆ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿಲ್ಲ. 2024ರವರೆಗೂ ಅವರು ವಿಧಾನ ಪರಿಷತ್ ಸದಸ್ಯರಾಗಿತ್ತಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com