ಬಿಹಾರದಲ್ಲಿ ಜೆಡಿಯು ಸ್ಥಾನ ಕುಸಿತಕ್ಕೆ ಎಲ್‌ಜೆಪಿ ಕಾರಣವೇ?

ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ನಿತೀಶ್ ಕುಮಾರ್ ಅವರು ಕುಸಿದಿರುವ ತಮ್ಮ ಜನಪ್ರಿಯತೆ ಮತ್ತು ವಿಫಲ ಆಡಳಿತವನ್ನು ಮರೆ ಮಾಚಲು ಈ ರೀತಿಯ ಆರೋಪ ಮಾಡಿರುವುದು ತಿಳಿಯುತ್ತದೆ.
ಬಿಹಾರದಲ್ಲಿ ಜೆಡಿಯು ಸ್ಥಾನ ಕುಸಿತಕ್ಕೆ ಎಲ್‌ಜೆಪಿ ಕಾರಣವೇ?

ಜಿದ್ದಾ ಜಿದ್ದಿನ ಸ್ಪರ್ದೆ ಏರ್ಪಟ್ಟಿದ್ದ ಬಿಹಾರ ವಿಧಾನ ಸಭಾ ಚುನಾವಣಾ ಕಣದಲ್ಲಿ ಎಲ್ಲ ಪಕ್ಷಗಳೂ ಶಕ್ತಿ ಮೀರಿ ಅಧಿಕಾರ ಹಿಡಿಯಲು ಹಣಾಹಣಿ ನಡೆಸಿದವು. ಈ ಬಾರಿಯ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಅವರಂತೂ ಆಡಳಿತಾರೂಢ ಜನತಾದಳ (ಯು) ನ್ನು ಸೋಲಿಸುವುದಕ್ಕೆ ಭಾರೀ ಶಕ್ತಿ ವ್ಯಯಿಸಿದರು. ಬಹುಷ ಅವರಿಗೆ ತಮ್ಮ ಪಕ್ಷ ದ ಅಭ್ಯರ್ಥಿಗಳು ಗೆಲ್ಲುವುದಕ್ಕಿಂತ ಜನತಾದಳವನ್ನು ಸೋಲಿಸುವುದೇ ಗುರಿ ಆಗಿದ್ದಂತೆ ಭಾಸವಾಗಿತ್ತು.

ಈ ಬಾರಿ ಜೆಡಿಯು ಕೇವಲ 43 ಸ್ಥಾನಗಳನ್ನು ಗಳಿಸುವಲ್ಲಿ ಮಾತ್ರ ಸಫಲವಾಗಿದ್ದು, ಇದು 2015 ರಲ್ಲಿ ಪಡೆದಿದ್ದ 71 ಸ್ಥಾನಗಳಿಗೆ ಹೋಲಿಸಿದರೆ 28 ಸ್ಥಾನ ಕಡಿಮೆ ಗಳಿಸಿದೆ. ತಮ್ಮ ಪಕ್ಷದ ಸೋಲಿನ ಕಾರಣವನ್ನು ಹೇಳಿದ ನಿತೀಶ್ ಕುಮಾರ್ ಅವರು ಕೆಲವರು ಮತದಾರರಲ್ಲಿ ಗೊಂದಲವನ್ನು ಮಾಡಲು ಪ್ರಯತ್ನಿಸಿದರು; ಹಾಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ತಮ್ಮ ರಾಜಕೀಯ ವಿರೋಧಿಯನ್ನು ನೇರವಾಗಿ ಹೆಸರಿಸದ ನಿತೀಶ್ ಕುಮಾರ್ ಅವರು ಸ್ಪಷ್ಟವಾಗಿ ಚಿರಾಗ್ ಪಾಸ್ವಾನ್ ಮತ್ತು ಅವರ ಲೋಕ ಜನಶಕ್ತಿ ಪಕ್ಷದ ಬಗ್ಗೆಯೇ ಹೇಳಿರುವುದು ಸ್ಪಷ್ಟವಾಗುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

NDA ಮಿತ್ರ ಪಕ್ಷವೇ ಆಗಿರುವ LJP ವಿರುದ್ದ ಎನ್ಡಿಏ ಕ್ರಮ ಕೈಗೊಳ್ಳುವುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಿತೀಶ್ ಅವರು ಇದನ್ನು ಬಿಜೆಪಿಯೇ ತೀರ್ಮಾನಿಸಬೇಕು ಎಂದು ಹೇಳಿದರು. ಏಕೆಂದರೆ LJPಯು NDA ಮೈತ್ರಿಕೂಟದಿಂದ ಹೊರ ಬಂದಿದೆ. ಇದಕ್ಕೂ ಮುನ್ನ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಯು ವಕ್ತಾರ ಕೆ ಸಿ ತ್ಯಾಗಿ ಅವರು LJPಯು ಕನಿಷ್ಟ 25 ರಿಂದ 30 ಸ್ಥಾನಗಳಲ್ಲಿ ನಮಗೆ ಬರಬೇಕಾದ ಮತಗಳನ್ನು ವಿಭಜಿಸಿತು. ಇದು ಸ್ಪರ್ದೆ ಮಾಡದಿದ್ದರೆ ನಮಗೆ ಕನಿಷ್ಟ 80 ಸ್ಥಾನಗಳಿಗೂ ಹೆಚ್ಚು ಸ್ಥಾನ ಬರುತಿತ್ತು ಎಂದು ಹೇಳಿದರು.

ಇಲ್ಲಿ ಉದ್ಭವಿಸುವ ಪ್ರಶ್ನೆಗಳೇನೆಂದರೆ ಚಿರಾಗ್ ಪಾಸ್ವಾನ್ ಅವರೇ ಜೆಡಿಯುನ ಮತಗಳಿಕೆಯ ಕುಸಿತಕ್ಕೆ ಕಾರಣರೇ? ಮತದಾರರು ಗೊಂದಲಕ್ಕೀಡಾಗಿ LJP ಅಭ್ಯರ್ಥಿಗಳಿಗೆ ಮತ ನೀಡಿದರೆ? ಒಂದು ವೇಳೆ LJP ಸ್ಪರ್ಧಿಸದಿದ್ದರೆ ಮತದಾರರು ಜೆಡಿಯು ಅಭ್ಯರ್ಥಿಗಳಿಗೆ ಮತ ನೀಡುತಿದ್ದರೆ ಎಂಬುದಾಗಿದೆ. ಆದರೆ ಅಂಕಿ ಅಂಶಗಳನ್ನು ವಿಶ್ಲೇಷಿಸಿದಾಗ ಜೆಡಿಯು ನಾಯಕ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರು ಕುಸಿದಿರುವ ತಮ್ಮ ಜನಪ್ರಿಯತೆ ಮತ್ತು ವಿಫಲ ಆಡಳಿತವನ್ನು ಮರೆ ಮಾಚಲು ಈ ರೀತಿಯ ಆರೋಪ ಮಾಡಿರುವುದು ತಿಳಿಯುತ್ತದೆ.
ಏಕೆಂದರೆ ಕನಿಷ್ಟ 32 ಕ್ಷೇತ್ರಗಳಲ್ಲಿ LJP ಅಭ್ಯರ್ಥಿಗಳು ಜೆಡಿಯು ಅಭ್ಯರ್ಥಿಗಳು ಪರಾಭವಗೊಂಡ ಮತಗಳಿಗಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ.

ಚುನಾವಣೆಯಲ್ಲಿ ವರದಿಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಿದ ಹಿರಿಯ ಪತ್ರಕರ್ತ ಕನ್ಹಯ್ಯ ಭೆಲಾರಿ, ಅವರು ನೀತೀಶ್ ಅವರ ವೈಫಲ್ಯಕ್ಕೆ ಚಿರಾಗ್ ಅವರನ್ನು ದೂಷಿಸುವುದು ಸರಳ ಅಪ್ರಾಮಾಣಿಕತೆ ಎಂದು ಹೇಳುತ್ತಾರೆ. ಕೋವಿಡ್ 19 ಸಂದರ್ಭವನ್ನು ಚೆನ್ನಾಗಿ ನಿರ್ವಹಿಸದಿರುವುದು, 30 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರ ವಾಪಾಸ್ ಬಂದಿರುವುದು, ಆಡಳಿತದ ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರ ಮತ್ತು ಕಳಪೆ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಕಾರಣದಿಂದ ನಿತೀಶ್ ವಿರೋಧಿ ಮತದಾರರನ್ನು ತಮ್ಮ ಪಕ್ಷ LJP‌ ಗೆ ಮತ ಚಲಾಯಿಸುವಂತೆ ಕೇಳುತಿದ್ದರು. LJPಗೆ ಮತ ಹಾಕಿದವರು ನಿತೀಶ್ ವಿರುದ್ಧ ಮತ ಚಲಾಯಿಸುವ ಧೃಢ ನಿಶ್ಚಯಕ್ಕಿಂತ ಬದಲಿಗೆ ಗೊಂದಲ’ದಿಂದ ಹಾಗೆ ಮಾಡಿದ್ದಾರೆ ಎಂದು ನಂಬಲು ಯಾವುದೇ ಕಾರಣಗಳಿಲ್ಲ ಎಂದು ಅವರು ಹೇಳಿದರು.

ತಮ್ಮ ಪ್ರಚಾರದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರು ತಮ್ಮ ಮಂತ್ರಿ ಸಹೋದ್ಯೋಗಿಯಾಗಿ ತಮ್ಮ ಜೀವನದ ಕೊನೆಯವರೆಗೂ ಇದ್ದರು ಎಂದು ಶ್ಲಾಘಿಸಿದರು. ಆದಾಗ್ಯೂ, ಚಿರಾಗ್ ಅವರ ಬಂಡಾಯದ ಬಗ್ಗೆ ಮೋದಿ ಮೌನ ವಹಿಸಿದ್ದರು. ತನ್ನನ್ನು ತಾನು “ಹನುಮಾನ್” ಎಂದು ಘೋಷಿಸಿಕೊಂಡಿದ್ದ ಚಿರಾಗ್, ಆಡಳಿತ ವಿರೋಧಿ ಮನೋಭಾವದ ಪ್ರಭಾವವನ್ನು ತಗ್ಗಿಸಲು ಕೆಲಸ ಮಾಡಿದ್ದು, ಅದು ನಿರ್ದಿಷ್ಟವಾಗಿ ನಿತೀಶ್ ವಿರುದ್ಧವಾಗಿತ್ತು ಎಂಬುದು ಮೋದಿಯವರ ವಿಶ್ಲೇಷಣೆ ಆಗಿದೆ ಎನ್ನಲಾಗಿದೆ. ಈ ನಡುವೆ ಜೆಡಿಯು LJP ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕೆಂದು NDA ಯನ್ನು ಬಲವಾಗಿ ಒತ್ತಾಯಿಸುವ ಪರಿಸ್ಥಿತಿಯಲ್ಲೂ ಇಲ್ಲ ಏಕೆಂದರೆ ಅದು ವಿಧಾನಸಭೆಯಲ್ಲಿ ಕಡಿಮೆ ಸ್ಥಾನ ಪಡೆದಿದೆ. ಇದರಿಂದಾಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮೇಲೆ ಒತ್ತಡ ಹೇರಲು ಆಗುತ್ತಿಲ್ಲ .

ಈ ನಡುವೆ ಚಿರಾಗ್ ಅವರ LJP ಪಕ್ಷವು ಸುಮಾರು 25 ಲಕ್ಷ ಮತಗಳನ್ನು ಗಳಿಸಿದೆ. ಚಿರಾಗ್ ಅವರು ಭವಿಷ್ಯದಲ್ಲಿ ಉತ್ತಮ ರಾಜಕೀಯ ಜೀವನವನ್ನು ಹೊಂದಿದ್ದಾರೆ. ಪಕ್ಷವು ದಲಿತರಲ್ಲಿ ಮತ್ತು ವಿಶೇಷವಾಗಿ ಪಾಸ್ವಾನ್ ಜಾತಿಯವರ ಬೆಂಬಲವನ್ನು ಹೊರತುಪಡಿಸಿ, ಈ ಚುನಾವಣೆಯು ಮೇಲ್ಜಾತಿಯ ಗುಂಪುಗಳ ಬೆಂಬಲವನ್ನು ಪಡೆಯಲು ಪಕ್ಷಕ್ಕೆ ಸಾಧ್ಯವಾಗಿದೆ ಎಂಬುದನ್ನು ತೋರಿಸಿದೆ. ಚಿರಾಗ್ ಅವರ ನಿಲುವಿನಲ್ಲಿ ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಹೆಜ್ಜೆ ಗುರುತುಗಳನ್ನೆ ಅನುಸರಿಸುವುದು ಮತ್ತು ಮತ್ತು ಜೆಡಿ (ಯು) ಹರಡಿದ ಅಪ ಪ್ರಚಾರಕ್ಕೆ ಕಿವಿಗೊಡದಿರುವುದು ಭವಿಷ್ಯವನ್ನು ಉತ್ತಮಗೊಳಿಸಿದೆ. ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಕಳಪೆ ಸಾಧನೆಯನ್ನು ಮರೆ ಮಾಚಲು ನಿತೀಶ ಕುಮಾರ್ ಉಪಯೋಗಿಸಿದ ತಂತ್ರ ಅಲ್ಪಕಾಲಿಕವಾಗಿದೆ. ಏಕೆಂದರೆ ಬಿಹಾರದಲ್ಲಿ ಆಡಳಿತ ವಿರೋಧಿ ಅಲೆ ಈಗಲೂ ಪ್ರಬಲವಾಗಿದೆ. NDA ಶಾಸಕರು ನಿತೀಶ್ ಕುಮಾರ್ ಅವರನ್ನು ತಮ್ಮ ನಾಯಕನನ್ನಾಗಿ ಆಯ್ಕೆ ಮಾಡುವುದು ಸಹಜವಾಗಿದ್ದು ಅವರು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದೂ ಖಚಿತವಾಗಿದೆ.

ಆದರೆ ಅವರ ರಾಜಕೀಯ ಜೀವನವು ವಯಸ್ಸಾದಂತೆ ಮುಗಿಯುತ್ತಾ ಬಂದಿದೆ. ಸೀಮಾಂಚಲ್ನಲ್ಲಿ ನಡೆದ ತಮ್ಮ ಕೊನೆಯ ಚುನಾವಣಾ ರ್ಯಾಲಿಯಲ್ಲಿ ಅವರು ಮತದಾರರಿಗೆ ಹೇಳಿದ್ದು ಹೀಗೆ : “ಯೇ ಮೇರಾ ಆಂಟಿಮ್ ಚುನವ್ ಹೈ (ಇದು ನನ್ನ ಕೊನೆಯ ಚುನಾವಣೆ)”. ನಿತೀಶ್ ಅವರು ಯಾವಾಗಲೂ ಮಾತನಾಡುವ ಮುನ್ನ ಸಾಕಷ್ಟು ಆಲೋಚಿಸಿ ಮಾತಾಡುತ್ತಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com