ನಿತೀಶ್ ಕುಮಾರ್ ಎಂಬ ಅಪರೂಪದಲ್ಲೇ ಅಪರೂಪದ 'ಚಾಲಾಕಿ' ರಾಜಕಾರಣಿ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಹಾರದಲ್ಲಿ ಇದೇ ಮೊದಲ ಬಾರಿಗೆ 3ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಆದರೂ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದಾರೆ
ನಿತೀಶ್ ಕುಮಾರ್ ಎಂಬ ಅಪರೂಪದಲ್ಲೇ ಅಪರೂಪದ 'ಚಾಲಾಕಿ' ರಾಜಕಾರಣಿ

ನಿತೀಶ್ ಕುಮಾರ್, ದೇಶಕಂಡ ಅಪರೂಪದ ರಾಜಕಾರಣಿ. ಒಂದು ಹಂತದಲ್ಲಿ ಇಡೀ ದೇಶಾದ್ಯಂತ ಅಪಾರ ನಿರೀಕ್ಷೆ ಮೂಡಿಸಿದ್ದ ರಾಜಕಾರಣಿ. ಲಾಲು ಪ್ರಸಾದ್ ಯಾದವ್ ಬಳಿಕ ಬಿಹಾರದಲ್ಲಿ ಭಾರೀ ಭರವಸೆ ಹುಟ್ಟುಹಾಕಿದ್ದ ರಾಜಕಾರಣಿ. ಸಮಾಜವಾದಿ, ಚಾಣಾಕ್ಯ, ಸುಶಾಸನ್ ಬಾಬು ಎಂಬಿತ್ಯಾದಿ ಕರೆಯಲ್ಪಟ್ಟ ನಿತೀಶ್ ಕುಮಾರ್ ಅತ್ಯಂತ ನಿಗೂಢ ನಡೆಯ ರಾಜಕಾರಣಿಯೂ ಹೌದು. ಎಂಥದೇ ಪರಿಸ್ಥಿಯನ್ನು ತನ್ನ ಪರವಾಗಿಸಿಕೊಳ್ಳಬಲ್ಲ 'ಚಾಲಾಕಿ' ಕೂಡ ಹೌದು.

ತಾಜಾ ಉದಾಹರಣೆ ನೋಡಿ; ಈ ಸಲದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಹಾರದಲ್ಲಿ ಇದೇ ಮೊದಲ ಬಾರಿಗೆ 3ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ. ಆದರೂ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದಾರೆ. ಇದಕ್ಕೆ ನಿತೀಶ್ ಕುಮಾರ್ ಅವರನ್ನೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಅನಿವಾರ್ಯತೆ ಒಂದೇ ಕಾರಣವಲ್ಲ. ಬಿಹಾರ ಬಿಜೆಪಿಯಲ್ಲಿ ಸದ್ಯಕ್ಕೆ ಇಂಥ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನಾಯಕ ಇಲ್ಲದಿರುವುದೂ ಕಾರಣ. ಬಿಹಾರ ಬಿಜೆಪಿಗೆ ಇಂಥ ಅನಿವಾರ್ಯ ಸ್ಥಿತಿ ತಂದವರು ಇದೇ ನಿತೀಶ್ ಕುಮಾರ್.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2005ರಿಂದ ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಒಂದಾಗಿ ಸರ್ಕಾರ ನಡೆಸುತ್ತಿವೆ. (ಮಧ್ಯೆ ಆರ್ ಜೆಡಿ-ಜೆಡಿಯು-ಕಾಂಗ್ರೆಸ್ ಸರ್ಕಾರ ಇತ್ತು. ಆಗಲೂ ಇದೇ ನಿತೀಶ್ ಕುಮಾರ್ ಸಿಎಂ ಆಗಿದ್ದರು‌) ಅಂದಿನಿಂದಲೂ ನಿತೀಶ್ ಕುಮಾರ್ ಜೊತೆ ಬಿಜೆಪಿಯ ಸುಶಿಲ್ ಕುಮಾರ್ ಮೋದಿ ಉಪ ಮುಖ್ಯಮಂತ್ರಿಯಾಗಿದ್ದರು. ಜೊತೆಗಿದ್ದ ಸುಶಿಲ್ ಮೋದಿ ಎಂದೂ ಅಪಸ್ವರ ಹಾಡದಂತೆ ಹಾಗೂ ಡಿಸಿಎಂಗೂ ಮಿಗಿಲಾದ ಹುದ್ದೆಯ ಬಗ್ಗೆ ಯೋಚನೆಯನ್ನೂ ಮಾಡದಂತೆ ಫಳಗಿಸಿಟ್ಟಿದ್ದಾರೆ. ಸುಶಿಲ್ ಮೋದಿ ಈ ಬಾರಿ ಡಿಸಿಎಂ ಸ್ಥಾನ ತಪ್ಪಿಸಿಕೊಳ್ಳುವುದಕ್ಕೆ ಇದೇ ಪ್ರಮುಖ ಕಾರಣ.

ಸ್ವಲ್ಪ ಹಿಂದಕ್ಕೆ ನೋಡಿದರೆ ಸತತವಾಗಿ 15 ವರ್ಷ ಆಡಳಿತ ನಡೆಸಿದ ತಮ್ಮ ವಿರುದ್ಧ ಜನಾಕ್ರೋಶ ಇದ್ದರೂ ತಮ್ಮನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವಂತೆ ಬಿಜೆಪಿಯ ಪ್ರಬಲ ನಾಯಕರಾದ ನರೇಂದ್ರ ಮೋದಿ ಮತ್ತು ಅಮಿತ್ ಶಾಗೆ ಮನವೊಲಿಸುವಲ್ಲಿ ನಿತೀಶ್ ಕುಮಾರ್ ಯಶಸ್ವಿಯಾಗಿದ್ದರು. ತಮ್ಮನ್ನು ಮುಖ್ಯಮಂತ್ರಿಯಾಗಿ ಬಿಂಬಿಸದಿದ್ದರೆ ಎನ್ ಡಿಎ ಮೈತ್ರಿಕೂಟಕ್ಕೆ ಆಡಳಿತ ವಿರೋಧಿ ಅಲೆ ಇದೆ ಎನ್ನುವುದನ್ನು ನಾವೇ ಒಪ್ಪಿಕೊಂಡಂತಾಗುತ್ತದೆ. ವಿರೋಧಿ ಪಾಳೆಯಕ್ಕೆ ಬ್ರಹ್ಮಾಸ್ತ್ರ ರವಾನೆ ಮಾಡಿದಂತಾಗುತ್ತದೆ ಎಂದು ಹೇಳಿದ್ದರು.

ನಿತೀಶ್ ಕುಮಾರ್ ಅವರಿಗೆ ಯಾರ ಬಳಿ ಯಾವ ಅಸ್ತ್ರ ಪ್ರಯೋಗ ಮಾಡಬೇಕು ಎಂಬ ಕಲೆ ಚೆನ್ನಾಗಿ ಕರಗತವಾಗಿದೆ. ಇದಕ್ಕೆ ಹಿನ್ನೆಲೆಯೂ ಇದೆ. ಜಯಪ್ರಕಾಶ್ ನಾರಾಯಣ ಅವರ ವಿದ್ಯಾರ್ಥಿ ಚಳವಳಿಯಿಂದ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ನಿತೀಶ್ ಕುಮಾರ್ ಕ್ರಮೇಣ ಕಠಿಣ ಹಾದಿಯನ್ನು ಸವೆಸಬೇಕಾಯಿತು.‌ ಏಕೆಂದರೆ ಜಾರ್ಜ್ ಫರ್ನಾಂಡೀಸ್ ಅವರಂತಹ ಮೇರುಗುರು ಇದ್ದರೂ ಎದುರಿಗೆ ಇದ್ದವರು ಲಾಲುಪ್ರಸಾದ್ ಯಾದವ್. ಲಾಲು ಪ್ರಸಾದ್ ಯಾದವ್ ಕೂಡ ಸಮಾಜವಾದದ ಹಿನ್ನೆಲೆಯಿಂದಲೇ ಬಂದವರು. ಹಾಗಾಗಿ ಸಮಾಜವಾದಿ ನಾಯಕರು ಸಾಮಾನ್ಯವಾಗಿ ಕಾಂಗ್ರೆಸ್ ನಾಯಕರ ಮೇಲೆ ಬಿಡುತ್ತಿದ್ದ ವಂಶವಾಹಿನಿ ರಾಜಕಾರಣ, ಭ್ರಷ್ಟಾಚಾರ ಮತ್ತಿತರ ಅಸ್ತ್ರಗಳನ್ನು ಲಾಲು ಪ್ರಸಾದ್ ಯಾದವ್ ಮೇಲೆ ಪ್ರಯೋಗಿಸಲು ಸಾಧ್ಯವಿರಲಿಲ್ಲ. ಅದೇ ಕಾರಣಕ್ಕೆ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ 'ಜಂಗಲ್ ರಾಜ್' ಅಸ್ತ್ರ ಪ್ರಯೋಗಿಸಿದರು. ಸಫಲರಾದರು.

ಈ ನಡುವೆ 2000ನೇ ಇಸವಿಯಲ್ಲಿ ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದಾಗ ಕೇಂದ್ರದಲ್ಲಿ ಮಂತ್ರಿಯಾಗಿದ್ದ ನಿತೀಶ್ ಕುಮಾರ್ ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಲಾಲು ಪ್ರಸಾದ್ ಯಾದವ್ ಎದುರು ನಿತೀಶ್ ಆಟ ನಡೆಯಲಿಲ್ಲ. ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. 8 ದಿನಕ್ಕೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು‌. ಆ ನಂತರದಲ್ಲಿ 2005ರಲ್ಲೂ ಬಿಹಾರವನ್ನು‌ ಲಾಲು‌ ಪ್ರಸಾದ್ ಯಾದವ್ ಅವರಿಂದ ಬಿಡಿಸಿಕೊಳ್ಳುವುದು ಸುಲಭವಾಗಿರಲಿಲ್ಲ. ಏಕೆಂದರೆ ಸಾರಾಸಗಟಾಗಿ ಯಾದವರು ಮತ್ತು ಮುಸ್ಲೀಮರು, ಭಾರೀ ಪ್ರಮಾಣದಲ್ಲಿ ದಲಿತರು ಹಾಗೂ ಹಿಂದುಳಿದವರು ಲಾಲು ಜೊತೆಗಿದ್ದರು. ಈ ಜಾತಿಸಮೀಕರಣವನ್ನರಿತ ನಿತೀಶ್ ಕುಮಾರ್, ರಾಮವಿಲಾಸ್ ಪಾಸ್ವಾನ್ ಅವರನ್ನು ಎತ್ತಿಕಟ್ಟಿ ದಲಿತರು ಮತ್ತು ಮಹಾದಲಿತರು ಎಂಬ ವಿಂಗಡಣೆ ಮಾಡಿದರು. ಮೊದಲ ಬಾರಿಗೆ ಅಧಿಕಾರ ಹಿಡಿಯುವಂತಾಯಿತು.

ಅಧಿಕಾರ ಸಿಕ್ಕ ಬಳಿಕ ನಿತೀಶ್ ಕುಮಾರ್ ಮಾಡಿದ ಮೊದಲ ಕೆಲಸ ಲಾಲೂ ಪ್ರಸಾದ್ ಯಾದವ್ ವಿರುದ್ಧ ಷಡ್ಯಂತ್ರ. ಲಾಲು ಪ್ರಸಾದ್ ಯಾದವ್ ಅವರನ್ನು ರಾಜಕೀಯವಾಗಿ ಮುಗಿಸದೇ ಇದ್ದರೆ ತಮಗೆ ಉಳಿಗಾಲ ಇಲ್ಲ ಎಂದು ಎಣಿಸಿದ ನಿತೀಶ್ ಕುಮಾರ್ ಹಿಂದುಳಿದ ಮತಬುಟ್ಟಿಗೆ ಕೈಹಾಕಿದರು.‌ ತಮ್ಮ ಕುರ್ಮಿ ಜನಾಂಗದ ಕಾರ್ಡ್ ಬಳಿಸಿಕೊಂಡು ಅತಿಸಣ್ಣ ಹಾಗೂ ಅತಿಹಿಂದುಳಿದ ಜಾತಿಗಳ ಬಗ್ಗೆ ಮಾತನಾಡತೊಡಗಿದರು. ಈ ಮೂಲಕ ಹಿಂದುಳಿದ ವರ್ಗಗಳ ಮತಗಳು ಬಹುತೇಕ ಪ್ರಮಾಣದಲ್ಲಿ ಆರ್ ಜೆಡಿಗೆ ಹೋಗುವುದನ್ನು ತಡೆದರು. ಇದರಿಂದಾಗಿ 2010ರಲ್ಲಿ ಮತ್ತೆ ಗೆದ್ದು ಮುಖ್ಯಮಂತ್ರಿಯಾದರು.

ನಿತೀಶ್ ಕುಮಾರ್ ಎಂಬ ಅಪರೂಪದಲ್ಲೇ ಅಪರೂಪದ 'ಚಾಲಾಕಿ' ರಾಜಕಾರಣಿ
ಮೋದಿಯೊಂದಿಗೆ ಕೈಜೋಡಿಸಿದಕ್ಕಾಗಿ ಬೆಲೆ ತೆರುತ್ತಿರುವ ನಿತೀಶ್‌ ಕುಮಾರ್!

ಎರಡನೇ ಅವಧಿಯಲ್ಲಿ ನಿಜವಾದ ಹಿಂದುಳಿದ ವರ್ಗಗಳ ನಾಯಕ ನಾನೇ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಮುಂದುವರೆಸಿದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಒಂದೂ ಸ್ಥಾನ ಗೆಲ್ಲದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅಷ್ಟೊತ್ತಿಗಾಗಲೇ ಎರಡು ಅವಧಿ ಮುಗಿಸಿದ್ದರಿಂದ ಸೋಲಿನ‌ ಸುಳಿವರಿತ ನಿತೀಶ್ ಕುಮಾರ್, 2015ರಲ್ಲಿ ಎನ್ ಡಿಎ ಬಿಟ್ಟು ಆರ್ ಜೆಡಿ ಮತ್ತು ಕಾಂಗ್ರೆಸ್ ಜೊತೆ ಕೈ ಜೋಡಿಸಿದರು. ನಿತೀಶ್ ಲೆಕ್ಕಾಚಾರ ಸರಿಯಾಗಿತ್ತು. ಮತ್ತೆ ಮುಖ್ಯಮಂತ್ರಿಯಾದರು. ಆಗ ಮತ್ತೆ ತಮ್ಮ ಮತಬುಟ್ಟಿಯನ್ನು ಹಿಗ್ಗಿಸಿಕೊಳ್ಳಬೇಕೆಂದು ಪಾನನಿಷೇಧ ಜಾರಿ ಮಾಡುವ ಮೂಲಕ ಮಹಿಳೆಯರ ಮನಗೆದ್ದರು. ಸದಾ ಬದ್ಧ ವೈರಿಯಾಗಿದ್ದ ಆರ್ ಜೆಡಿ ಜೊತೆ ಸಾಗುವುದು ನಿತೀಶ್ ಕುಮಾರ್ ಅವರಿಗೆ ಸಾಧ್ಯವಾಗಲಿಲ್ಲ. ಮತ್ತೆ ಎನ್ ಡಿಎ ತೆಕ್ಕೆಗೆ ಬಂದು ಮುಖ್ಯಮಂತ್ರಿ ಆದರು. ಹೀಗೆ‌ ನಿತೀಶ್ ಕುಮಾರ್ ನಿರಂತರವಾಗಿ 4 ಬಾರಿ, ಒಟ್ಟು 7 ಬಾರಿ ಮುಖ್ಯಮಂತ್ರಿಯಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com