ದೆಹಲಿಯಲ್ಲಿ ವಾಯು ಮಾಲಿನ್ಯದೊಂದಿಗೆ ಹೆಚ್ಚಿದೆ ಕೋವಿಡ್‌ ಸೋಂಕಿನ ಸಂಖ್ಯೆ

ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ವಾಹನಗಳ ದಟ್ಟಣೆಯೂ ಕೂಡಾ ವಾಯು ಮಾಲಿನ್ಯಕ್ಕೆ ಮತ್ತಷ್ಟು ಇಂಬು ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಜನರು ಜಾಗರೂಕರಾಗಿರುವುದು ಅತ್ಯವಶ್ಯಕ.
ದೆಹಲಿಯಲ್ಲಿ ವಾಯು ಮಾಲಿನ್ಯದೊಂದಿಗೆ ಹೆಚ್ಚಿದೆ ಕೋವಿಡ್‌ ಸೋಂಕಿನ ಸಂಖ್ಯೆ

ಸರಣಿ ಹಬ್ಬಗಳ ಆಚರಣೆಯ ನಡುವೆ ನಾವಿದ್ದೇವೆ. ನಮ್ಮ ನಡುವೆ ಕರೋನಾ ವೈರಸ್‌ ಎಂಬ ಅತೀ ಸೂಕ್ಷ್ಮ ಜೀವಾಣು ಇನ್ನೂ ಜೀವಂತವಾಗಿಯೇ ಇದೆ. ಹಬ್ಬದ ಸಡಗರದಲ್ಲಿ ಮೈಮರೆಯುತ್ತಿರುವ ನಮಗೆ ದೆಹಲಿಯಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳು ಎಚ್ಚರಿಕೆ ಗಂಟೆಯನ್ನು ಬಾರಿಸುತ್ತಿವೆ.

ಕಳೆದೆರಡು ವರ್ಷಗಳಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿತ್ತು. ಕರೋನಾ ಸೋಂಕು ಭಾರತದಲ್ಲಿ ಆರಂಭವಾದಾಗಲೂ, ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಶೀಘ್ರವಾಗಿ ಏರತೊಡಗಿತು. ನಂತರ ಜಾರಿಯಾದ ಲಾಕ್‌ಡೌನ್‌ ಕರೋನಾ ಸೋಂಕಿತರ ಸಂಖ್ಯೆಯನ್ನು ಕಡಿಮೆಗೊಳಿಸಿತೋ ಇಲ್ಲವೋ, ಆದರೆ, ದೆಹಲಿಯ ವಾಯು ಮಾಲಿನ್ಯವನ್ನು ಮಾತ್ರ ಖಂಡಿತವಾಗಿ ಕಡಿಮೆಗೊಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವಾಯು ಮಾಲಿನ್ಯ ಕಡಿಮೆಗೊಂಡಿದ್ದರಿಂದ ದೆಹಲಿಯಲ್ಲಿನ ಕೋವಿಡ್‌ ಪ್ರಕರಣಗಳ ಸಂಖ್ಯೆಯೂ ಇಳಿಕೆ ಕಂಡಿತ್ತು. ಲಾಕ್‌ಡೌನ್‌ ಸಡಿಲಗೊಳಿಸಿದ ನಂತರ ಮತ್ತೆ ಯಥಾಸ್ಥಿತಿಗೆ ಜನಜೀವನ ತಲುಪಿದ ನಂತರ ಮತ್ತೆ ವಾಯು ಮಾಲಿನ್ಯವೆಂಬ ಪೆಡಂಭೂತ ದೆಹಲಿ ನಿವಾಸಿಗರ ಮನೆಯನ್ನು ಹೊಕ್ಕಿದೆ. ಇದರಿಂದಾಗಿ ಕರೋನಾ ಸೋಂಕಿತರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ.

ವಾಯು ಮಾಲಿನ್ಯ ಹೆಚ್ಚಳದಿಂದ ದೆಹಲಿಯಲ್ಲಿ ಕೋವಿಡ್‌ ಪ್ರಕಣಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ವೈದ್ಯರಾದ ಅರವಿಂದ್‌ ಕುಮಾರ್‌ ಅವರು ಸ್ಪಷ್ಟಪಡಿಸಿದ್ದಾರೆ. “ಮುಂದಿನ ಕೆಲವು ದಿನಗಳ ಕಾಲ ಇರುವಂತಹ ಹಬ್ಬದ ವಾತಾವರಣವೂ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ವಾತಾವರಣದಲ್ಲಿರುವ ಕರೋನಾ ವೈರಾಣು ಹಾಗೂ ಹಾನಿಕಾರಿಕ ರಾಸಾಯನಿಕಗಳು ಶ್ವಾಸಕೋಸಕ್ಕೆ ಹೋದಲ್ಲಿ ಕರೋನಾ ಸೋಂಕು ಮಾತ್ರವಲ್ಲದೇ, ಹೃದಯ ಸಂಬಂಧಿ ಇತರ ಕಾಯಿಲೆಗಳನ್ನು ಕೂಡಾ ಕೊಡುಗೆಯಾಗಿ ನೀಡುತ್ತದೆ,” ಎಂದು ಹೇಳಿದ್ದಾರೆ.

ಸದ್ಯಕ್ಕೆ ದೆಹಲಿಯ ಆಸ್ಪತ್ರೆಗಳಲ್ಲಿರುವ ಐಸಿಯು ಕೇಂದ್ರಗಳು ರೋಗಿಗಳಿಂದ ತುಂಬಿ ಹೋಗಿದ್ದು, ಹಬ್ಬದ ಬಳಿಕ ರೋಗಿಗಳ ಸಂಖ್ಯೆ ಹೆಚ್ಚಾಗುವುದಲ್ಲದೇ ಐಸಿಯುಗಳ ಕೊರತೆಯೂ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಾಯು ಮಾಲಿನ್ಯಕ್ಕೂ ಕರೋನಾ ಸೋಂಕಿಗೂ ಇರುವ ಸಂಬಂಧವನ್ನು ನೋಡಬೇಕಾದರೆ, ಕರೋನಾ ಸೋಂಕಿನಿಂದ ಅತೀ ಹೆಚ್ಚು ಸಾವುಗಳನ್ನು ಕಂಡಿರುವ ಇಟೆಲಿಯನ್ನು ನೋಡಿ ಕಲಿತುಕೊಳ್ಳಬೇಕು. ಇಟೆಲಿಯ ಕೈಗಾರಿಕಾ ಪ್ರದೇಶಗಳಿರುವ ಭಾಗದಲ್ಲಿ ಕರೋನಾ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದರು. ಮೊದಲಿಗೆ ಇದು ಬೆಳಕಿಗೆ ಬರಲಿಲ್ಲವಾದರೂ, ಸಾವಿನ ಸಂಖ್ಯೆಗಳು ಹೆಚ್ಚಾಗಲು ಕಾರಣವೇನು ಎಂದು ಅಧ್ಯಯನ ನಡೆಸಿದಾಗ, ವಾಯು ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಕೋವಿಡ್‌ ಸಾವುಗಳ ಸಂಖ್ಯೆಯೂ ಹೆಚ್ಚಿರುವುದು ಕಂಡು ಬಂದಿದೆ.

ಈಗ ಭಾರತದಲ್ಲಿಯೂ ಇಂತಹುದೇ ಪರಿಸ್ಥಿತಿ ನಿರ್ಮಾಣವಾಗುವುದೇ ಎನ್ನುವ ಗಂಭೀರವಾದ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ದೆಹಲಿಯಲ್ಲಿ ಈಗ ನಿರ್ಮಾಣವಾಗಿರುವ ಪರಿಸ್ಥಿತಿಯು ಅಂತಹುದೇ ಅಪಾಯವನ್ನು ತಂದೊಡ್ಡಿದೆ.

ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ವಾಹನಗಳ ದಟ್ಟಣೆಯೂ ಕೂಡಾ ವಾಯು ಮಾಲಿನ್ಯಕ್ಕೆ ಮತ್ತಷ್ಟು ಇಂಬು ನೀಡುತ್ತಿವೆ. ಇಂತಹ ಸಂದರ್ಭದಲ್ಲಿ ಜನರು ಜಾಗರೂಕರಾಗಿರುವುದು ಅತ್ಯವಶ್ಯಕ. ಮಾಸ್ಕ್‌ ಬಳಕೆ ದೋಷಪೂರಿತ ಗಾಳಿಯ ಸೇವನೆಯಿಂದ ನಿಮ್ಮನ್ನು ಕಾಪಾಡಬಹುದು. ಇದರೊಂದಿಗೆ ದೈಹಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳುವುದು ಹಾಗೂ ಪಟಾಕಿಗಳ ಕಡಿಮೆ ಬಳಕೆಯಿಂದ ಈ ಅಪಾಯದಿಂದ ಪಾರಾಗಬಹುದೇ ಹೊರತು ಬೇರಾವ ದಾರಿಯೂ ಇಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com