ಅಪರೂಪದ ಅವಕಾಶ ಕೈಚೆಲ್ಲಿದ ಕಾಂಗ್ರೆಸ್ ಈಗಲೂ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಇನ್ನೂ ಕಷ್ಟ!

ಬಿಹಾರದಲ್ಲಿ ಮಹಾಘಟಬಂಧನವೇ ಗೆದ್ದು ಸರ್ಕಾರ ರಚನೆ ಮಾಡಿದ್ದರೆ ಮುಂದೆ ಬರುವ ಸಾಲು ಸಾಲು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮೈಕೊಡವಿಕೊಂಡು ನಿಲ್ಲಬಹುದಿತ್ತು.
ಅಪರೂಪದ ಅವಕಾಶ ಕೈಚೆಲ್ಲಿದ ಕಾಂಗ್ರೆಸ್ ಈಗಲೂ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಇನ್ನೂ ಕಷ್ಟ!

ಬಿಹಾರ ವಿಧಾನಸಭೆಯ ಸೋಲು‌ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಕಂಗೆಡಿಸಿದೆ. ಒಂದೊಮ್ಮೆ ಕಾಂಗ್ರೆಸ್ ಪಕ್ಷದ ಸಾಧನೆ ಉತ್ತಮವಾಗಿದ್ದರೆ ಅಲ್ಲೀಗ ಕಾಂಗ್ರೆಸ್ ಅನ್ನೂ ಒಳಗೊಂಡಿರುವ ರಾಷ್ಟ್ರೀಯ ಜನತಾದಳ ನೇತೃತ್ವದ ಮಹಾಘಟಬಂಧನ ಸರ್ಕಾರ ರಚನೆ ಮಾಡಿರುತ್ತಿತ್ತು. ಕಾಂಗ್ರೆಸ್ ವೈಫಲ್ಯದಿಂದಾಗಿ ಮಹಾಘಟಬಂಧನ ಸರ್ಕಾರ ರಚಿಸುವ ಅವಕಾಶವನ್ನು ಕಳೆದುಕೊಂಡಿದೆ. ಅದಕ್ಕಿಂತ ಹೆಚ್ಚಾಗಿ ಅತ್ಯಂತ ಕಡಿಮೆ ವಯಸ್ಸಿಗೆ ಮುಖ್ಯಮಂತ್ರಿ ಆಗಿ ದಾಖಲೆ ಬರೆಯಬಹುದಾದ (31 ವರ್ಷಕ್ಕೆ) ಅವಕಾಶವನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಕಳೆದುಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಹಾರದಲ್ಲಿ ಸರ್ಕಾರ ರಚನೆ ಮಾಡುವ ಅವಕಾಶ ಮತ್ತು ತೇಜಸ್ವಿ ಯಾದವ್ ಗೆ ಅದ ಅನ್ಯಾಯ(?)ವಷ್ಟೇ ಮುಖ್ಯವಲ್ಲ. ಕಾಂಗ್ರೆಸ್ ದೃಷ್ಟಿಯಿಂದ ಬಿಹಾರದ ಗೆಲುವು ಆ ಪಕ್ಷಕ್ಕೆ ಬಹಳ ಅನಿವಾರ್ಯವಾಗಿತ್ತು. ಕಾಂಗ್ರೆಸ್ ಕಳೆದ ಬಾರಿಯ ಬಿಹಾರ ಚುನಾವಣೆಯಲ್ಲಿ 41 ಕ್ಷೇತ್ರಗಳಲ್ಲಿ 27ರಲ್ಲಿ ಗೆದ್ದಿತ್ತು.‌ ಇದೇ ಹಿನ್ನೆಲೆಯಲ್ಲಿ ಈ ಬಾರಿ 70 ಸೀಟುಗಳಿಗೆ ಒತ್ತಾಯ ಮಾಡಿತ್ತು. ಅಷ್ಟು ಕ್ಷೇತ್ರಗಳನ್ನು ಪಡೆಯುವುದರಲ್ಲೂ ಯಶಸ್ವಿಯಾಗಿತ್ತು. ಸ್ವಲ್ಪ ಹೆಚ್ಚು ಸೀಟುಗಳನ್ನು ಗೆಲ್ಲುವುದರಲ್ಲೂ ಸಾಫಲ್ಯ ಕಂಡಿದ್ದರೆ ಮುಂದಿನ ಬಾರಿ ಇನ್ನಷ್ಟು ಸೀಟುಗಳನ್ನು ಕೇಳಬಹುದಿತ್ತು. ಬಿಜೆಪಿ ಬಿಹಾರವೂ ಸೇರಿ ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳಲ್ಲಿ ತನ್ನ ನೆಲೆ ಕಂಡುಕೊಂಡಿದ್ದು‌ ಹೀಗೆ. ಈಗಲೂ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಆಂಧ್ರ ಮತ್ತು ತೆಲಾಂಗಣ ಪ್ರದೇಶಗಳಲ್ಲಿ ಬಿಜೆಪಿ ದೊಡ್ಡ ಪಕ್ಷಗಳ ಮೊರೆ ಹೋಗುತ್ತಿರುವುದು ಇದೇ ಕಾರಣಕ್ಕೆ. ಇತ್ತೀಚೆಗೆ ಎಲ್ಲೆಡೆ 'ಜೂನಿಯರ್ ಪಾರ್ಟನರ್' ಆಗುತ್ತಿರುವ ಕಾಂಗ್ರೆಸ್, ಬಿಹಾರದಲ್ಲಿ ಸಿಕ್ಕಿದ್ದ ಬೆಳೆಯುವ ಅವಕಾಶವನ್ನು ಕಳೆದುಕೊಂಡಿದೆ.

ಬಿಹಾರದಲ್ಲಿ ಮಹಾಘಟಬಂಧನವೇ ಗೆದ್ದು ಸರ್ಕಾರ ರಚನೆ ಮಾಡಿದ್ದರೆ ಮುಂದೆ ಬರುವ ಸಾಲು ಸಾಲು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮೈಕೊಡವಿಕೊಂಡು ನಿಲ್ಲಬಹುದಿತ್ತು. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಜೊತೆ, ತಮಿಳುನಾಡಿನಲ್ಲಿ ಡಿಎಂಕೆ ಜೊತೆ, ಅಸ್ಸಾಂನಲ್ಲಿ ಸ್ಥಳೀಯ ಪಕ್ಷಗಳ ಜೊತೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಜೊತೆ, ಗುಜರಾತಿನಲ್ಲಿ ಏಕಾಂಗಿಯಾಗಿ (ಅಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹೋರಾಟ) ಕಣಕ್ಕಿಳಿಯಬಹುದಿತ್ತು. ಆದರೀಗ ಎಲ್ಲೆಡೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬೇರೆ ಪಕ್ಷಗಳು ಸುಲಭಕ್ಕೆ ಮನಸ್ಸು ಮಾಡುವುದಿಲ್ಲ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನಾಮಕಾವಸ್ತೆಯಾಗಿದ್ದರು. ಸ್ವತಃ ನಿತೀಶ್ ಕುಮಾರ್ ಅವರೇ ಬಿಹಾರದಲ್ಲಿ ಎನ್ ಡಿಎ ಗೆಲುವಿಗೆ ಮೋದಿ ರೂವಾರಿ ಅಂತಾ ಹೇಳಿದ್ದಾರೆ. ಅಂದಮೇಲೆ ಎನ್ ಡಿಎ ಸೋತಿದ್ದರೆ ಅದು ಮೋದಿ ಅವರ ವೈಫಲ್ಯವೇ ಆಗಿರುತ್ತಿತ್ತು. ಜಿಡಿಪಿ ಕುಸಿತ, ಆರ್ಥಿಕ ಹಿಂಜರಿತ, ಹೆಚ್ಚುತ್ತಿರುವ ನಿರುದ್ಯೋಗ, ಕರೋನಾ, ಗಡಿ ಘರ್ಷಣೆ, ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳನ್ನು ಗಟ್ಟಿ ದನಿಯಲ್ಲಿ ಮಾತನಾಡಬಹುದಿತ್ತು, ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರ ಮೇಲೆ ಪ್ರಯೋಗಿಸಲು ಬ್ರಹ್ಮಾಸ್ತ್ರವೇ ಸಿಕ್ಕಂತಾಗುತ್ತಿತ್ತು. ಆದರೀಗ ಇದೇ ಮೋದಿ, ಅಮಿತ್ ಶಾ ಮತ್ತಿತರರಿಗೆ ಬಿಹಾರದ ಗೆಲುವಿನಿಂದ 'ನಮ್ಮ ಆಡಳಿತಕ್ಕೆ ಜನಾದೇಶವಿದೆ' ಎಂಬ 'ಗುರಾಣಿ' ಸಿಕ್ಕಂತಾಗಿದೆ.

ಸ್ವಪಕ್ಷೀಯರಿಂದಲೇ ಟೀಕೆ

ಒಂದೇ ಏಟಿಗೆ ಹಲವು ಅವಕಾಶಗಳನ್ನು ಕೈಚೆಲ್ಲಿದ ಬಗ್ಗೆ ಕಾಂಗ್ರೆಸ್ ಈಗ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗುತ್ತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ 'ಕಾಂಗ್ರೆಸ್ ಪಕ್ಷದಲ್ಲಿ ಆತ್ಮವಾಲೋಕನದ ಅಭಾವ ಇದೆ. ಸೋಲಿಗೆ ಇದೇ ಕಾರಣ' ಎಂದು ಹೇಳಿದ್ದಾರೆ. ಬಿಹಾರದ ಕಾಂಗ್ರೆಸ್ ಕಾರ್ಯಕರ್ತರಂತೂ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂದು ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಬಹಿರಂಗವಾಗಿ ಮಾತನಾಡುತ್ತಿಲ್ಲ, ಆದರೆ ಆಫ್ ದಿ ರೆಕಾರ್ಡ್ ಆಗಿ 'ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ, ನಾವು 70 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಗತ್ಯವೇ ಇರಲಿಲ್ಲ. ಇದಾದ ಬಳಿಕ ಸರಿಯಾದ ರೀತಿಯ ಸೋಷಿಯಲ್ ಇಂಜನಿಯರಿಂಗ್ ಮಾಡುವುದರಲ್ಲೂ ಸೋತೆವು. ಸೀಮಾಂಚಲ್ ಪ್ರದೇಶವೂ ಸೇರಿದಂತೆ ಎಲ್ಲೆಡೆ ಸೂಕ್ತ, ಸಮರ್ಥ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸುವುದರಲ್ಲಿ ವಿಫಲರಾಗಿದ್ದೇವೆ. ಸ್ಥಳೀಯವಾಗಿ ಇರುವ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವಂತೆ ಮಾಡುವುದರಲ್ಲಿ, ಅವುಗಳ ಬಗ್ಗೆ ಮಾತನಾಡುವುದರಲ್ಲಿ ಸೋತಿದ್ದೇವೆ' ಎಂದು ಹೇಳಿಕೊಳ್ಳುತ್ತಿದ್ದಾರೆ.

ಆತ್ಮಾವಲೋಕನವಿಲ್ಲದ ಕಾಂಗ್ರೆಸ್

ಸಮಸ್ಯೆ ಇರುವುದು ಇಲ್ಲೇ. ಪತ್ರಕರ್ತರ ಜೊತೆ ಆಫ್ ದಿ ರೆಕಾರ್ಡ್ ಆಗಿ ಸತ್ಯ ಒಪ್ಪಿಕೊಳ್ಳುವ ಕಾಂಗ್ರೆಸ್ ನಾಯಕರು, ಪಕ್ಷದ ವೇದಿಕೆಯಲ್ಲಿ ಅಥವಾ ಹೈಕಮಾಂಡ್ ನಾಯಕರ ಜೊತೆ ಮಾತನಾಡುವಾಗ ಮಗುಮ್ಮಾಗಿರುತ್ತಾರೆ. ಮೇಲಾಗಿ ಎಐಸಿಸಿ ಅಥವಾ ಪಿಸಿಸಿಗಳು ಆತ್ಮಾವಲೋಕನ ಸಭೆಯನ್ನೇ ನಡೆಸುವುದಿಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ 2018ರ ವಿಧಾನಸಭಾ, 2019ರ ಲೋಕಸಭಾ, 2020ರಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ನಿರಂತರವಾಗಿ ಸೋತಿದೆ. ಆದರೆ ಯಾವ ಸಂದರ್ಭದಲ್ಲೂ ಆತ್ಮಾವಲೋಕನ ಮಾಡಿಕೊಂಡಿಲ್ಲ. 2014ರಿಂದ ನಿರಂತರವಾಗಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು‌ ಸೋತಿದೆ. ಆದರೂ ಎಐಸಿಸಿ ಆತ್ಮಾವಲೋಕನ ಸಭೆ ಕರೆದಿಲ್ಲ.

ಎಚ್ಚರಿಸಿದವರ ಮೇಲೆಯೇ ಕ್ರಮ

ಇತ್ತೀಚೆಗೆ ಇದೇ ಆತ್ಮಾವಲೋಕನದ ವಿಷಯ ಕಾಂಗ್ರೆಸಿನಲ್ಲಿ ಭಾರೀ ಚರ್ಚೆಯಾಯಿತು. 23 ಹಿರಿಯ ನಾಯಕರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರವನ್ನು ಬರೆದರು. ಆದರೂ ಆತ್ಮಾವಲೋಕನ ಸಭೆ ನಡೆಯಲಿಲ್ಲ. ಬದಲಿಗೆ ಎಚ್ಚರಿಸಿದ ನಾಯಕರ ಮೇಲೆಯೇ ಕ್ರಮ ಜರುಗಿಸಲಾಯಿತು. ಹಲವು ಅನುಕೂಲಗಳನ್ನು ತಂದುಕೊಡಬಲ್ಲ ಅಪರೂಪದ ಅವಕಾಶವನ್ನು ಕೈಚೆಲ್ಲಿರುವ ಕಾಂಗ್ರೆಸ್ ಪಕ್ಷ ಈಗಲೂ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ ಮುಂದೆ ಇನ್ನಷ್ಟು ಸೋಲುಗಳನ್ನು‌ ಉಣ್ಣಲು ಅಣಿಯಾಗಬೇಕಾಗುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com