ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!

ಸತ್ಯವನ್ನು ಯಾವ ಎಗ್ಗಿಲ್ಲದೆ ಮುಖಕ್ಕೆ ಹಿಡಿದಂತೆ ಹೇಳುವ ಛಾತಿಯ ವಿರಳ ಪತ್ರಕರ್ತರಲ್ಲಿ ‘ದ ವೈರ್’ ಸಂಪಾದಕಿ ಅರ್ಫಾ ಖಾನುಂ ಶೆರ್ವಾನಿ ಒಬ್ಬರು. ಅವರು ನೈಜ ಪತ್ರಿಕಾ ಮಾಧ್ಯಮದ ದನಿಯಾಗಿ ಅರ್ನಾಬ್ ಪ್ರಕರಣವನ್ನು ವಿಶ್ಲೇಷಿಸಿದ್ದಾರೆ. ಅವರ ಲೇಖನದ ಆಯ್ದಭಾಗ ಇಲ್ಲಿದೆ;
ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!

ರಿಪಬ್ಲಿಕ್ ಟಿವಿ ಆ್ಯಂಕರ್ ಅರ್ನಾಬ್ ಗೋಸ್ವಾಮಿ ಅವರನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಬಂಧಿಸಿರುವ ಮುಂಬೈ ಪೊಲೀಸರ ಕ್ರಮ ದೇಶದಾದ್ಯಂತ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಮುಂಬೈ ಪೊಲೀಸರು ಅರ್ನಾಬ್ರನ್ನು ಬಂಧಿಸಿರುವ ಕ್ರಮ, ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈಗ ಬಂಧನ ಮಾಡಿರುವುದರ ಹಿಂದೆ ಮಹಾರಾಷ್ಟ್ರದ ಶಿವಸೇನಾ ಮೈತ್ರಿ ಸರ್ಕಾರದ ಕೈವಾಡವಿರುವ ಸಾಧ್ಯತೆ, ಪತ್ರಕರ್ತನಾಗಿ ಆತನ ವೃತ್ತಿಗೆ ನೇರವಾಗಿ ಸಂಬಂಧಿಸದೇ ಹೋದರೂ ಈ ಪ್ರಕರಣವನ್ನು ಮಾಧ್ಯಮ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಹರಣ ಎನ್ನುವ ಮೂಲಕ ಬಿಜೆಪಿ ಮತ್ತು ಅದರ ಪರಿವಾರ ಏನನ್ನು ಹೇಳತೊಡಗಿದೆ? ಅಸಲಿಗೆ ಅರ್ನಾಬ್ ಮಾಡುತ್ತಿರುವುದು ನೈಜ ಪತ್ರಿಕಾವೃತ್ತಿಯೇ ? ಎಂಬೆಲ್ಲಾ ಪ್ರಶ್ನೆಗಳು ಇದೇ ಮೊದಲಬಾರಿಗೆ ಸಾರ್ವಜನಿಕ ಚರ್ಚೆಗೆ ಬಂದಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇವಲ ಸಾರ್ವಜನಿಕರು, ಅರ್ನಾಬ್ ಪರ ಮತ್ತು ವಿರೋಧಿಗಳಿಗಷ್ಟೇ ಸೀಮಿತವಾಗದೆ, ಈ ಚರ್ಚೆ ಸ್ವತಃ ಪತ್ರಕರ್ತರು ಮತ್ತು ಮಾಧ್ಯಮ ವಲಯದಲ್ಲಿ ಕೂಡ ಕಾವೇರಿದೆ. #IstandwithArnab ಎಂಬುದು ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದಷ್ಟೇ, #IdontstandwithArnab ಎಂಬ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಸ್ವತಃ ಮಾಧ್ಯಮ ಮಂದಿಯೇ ಈ ವಿಷಯದಲ್ಲಿ ಅರ್ನಾಬ್ ಪರ ಮತ್ತು ವಿರುದ್ಧ ಎರಡು ಬಣಗಳಾಗಿ ಒಡೆದುಹೋಗಿದೆ. ಗಮನಿಸಬೇಕಾದ ಸಂಗತಿಯೆಂದರೆ; ಹೀಗೆ ಎರಡು ಗುಂಪುಗಳಲ್ಲಿ ಪ್ರಜಾಪ್ರಭುತ್ವ, ಉದಾರವಾದಿ ಧೋರಣೆ, ಪ್ರಗತಿಪರ ಆಲೋಚನೆಯ ಹಲವು ಪತ್ರಕರ್ತರು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯದ ಹೆಸರಲ್ಲಿ ಅರ್ನಾಬ್ ಪರ ವಾದ ಹೂಡಿದ್ದಾರೆ ಕೂಡ!

ಆದರೆ, ಇಂತಹ ಹೊತ್ತಲ್ಲಿ ಸತ್ಯವನ್ನು ಯಾವ ಎಗ್ಗಿಲ್ಲದೆ ಮುಖಕ್ಕೆ ಹಿಡಿದಂತೆ ಹೇಳುವ ಪತ್ರಕರ್ತರು ವಿರಳ. ಅಂತಹ ವಿರಳ ಪತ್ರಕರ್ತರಲ್ಲಿ ಒಬ್ಬರಾಗಿ ‘ದ ವೈರ್’ ಹಿರಿಯ ಸಂಪಾದಕಿ ಅರ್ಫಾ ಖಾನುಂ ಶೆರ್ವಾನಿ, ನೈಜ ಪತ್ರಿಕಾ ಮಾಧ್ಯಮದ ದನಿಯಾಗಿ ಅರ್ನಾಬ್ ಪ್ರಕರಣವನ್ನು ವಿಶ್ಲೇಷಿಸಿದ್ದಾರೆ. ಮುಖ್ಯವಾಗಿ ಅರ್ನಾಬ್ ಅವರನ್ನು ಪತ್ರಕರ್ತ ಎನ್ನುವುದೇ ಆದರೆ, ನಾನು ಆ ವರ್ಗದ ಪತ್ರಕರ್ತೆಯಲ್ಲ; ಹಾಗಾಗಿಯೇ ನಾನು ಈ ವಿಷಯದಲ್ಲಿ ಅರ್ನಾಬ್ ಪರ ನಿಲ್ಲಲಾರೆ ಎಂದು ಅವರು ದಿಟ್ಟವಾಗಿ ಹೇಳಿದ್ದಾರೆ. ಅವರ ಲೇಖನದ ಆಯ್ದಭಾಗ ಇಲ್ಲಿದೆ;

ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ಅರ್ನಾಬ್ ಬಂಧನಕ್ಕೆ 40 ಮಂದಿಯ ತಂಡ ರಚಿಸಿದ್ದ ಮಹಾರಾಷ್ಟ್ರ ಗೃಹ ಇಲಾಖೆ

ಅರ್ನಾಬ್ ಬಂಧನದ ಸುದ್ದಿ ಹರಡುತ್ತಿದ್ದಂತೆ ದೇಶದ ಮೂಲೆಮೂಲೆಯಿಂದ ಆತನಿಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಹುತೇಕ ಕೇಂದ್ರ ಸಂಪುಟದ ಸಚಿವರು ಸೇರಿದಂತೆ ಭಾರತೀಯ ಜನತಾ ಪಕ್ಷದ ನಾಯಕರು ಆ ಬಂಧನವನ್ನು ಖಂಡಿಸಿ, ಅದೊಂದು ಇಂದಿರಾ ಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ಮರುಕಳಿಕೆ ಎಂದು ಬಣ್ಣಿಸಿದರು. ಸಾಕಷ್ಟು ಕಡೆ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಅರ್ನಾಬ್ ಪರ ಘೋಷಣೆ ಕೂಗಿ, ಬಿಜೆಪಿ ಬಾವುಟ ಮತ್ತುಪಕ್ಷದ ಚಿಹ್ನೆಸಹಿತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾಸ್ವಾತಂತ್ರ್ಯದ ಕಗ್ಗೊಲೆಯಾಗಿಬಿಟ್ಟಿದೆ ಎಂದು ಹುಯಿಲೆಬ್ಬಿಸಿದರು.

ಅಷ್ಟೇ ಅಲ್ಲ; ಬಹುತೇಕ ಲಿಬರಲ್ ಪತ್ರಕರ್ತರು, ಲೇಖಕರು ಮತ್ತು ಹೋರಾಟಗಾರರು ಕೂಡ ಈ ಸಂದರ್ಭದಲ್ಲಿ ಅರ್ನಾಬ್ ಬಂಧನವನ್ನು ಮತ್ತು ಆತನ ‘ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ’ವನ್ನು ಖಂಡಿಸುವುದು ತಮ್ಮ ಕರ್ತವ್ಯ ಎಂದೇ ಭಾವಿಸಿ ಪ್ರತಿಕ್ರಿಯಿಸಿದರು. ಆತನ ಪತ್ರಿಕೋದ್ಯಮದ ಕುರಿತು ತಮಗೆ ಭಿನ್ನಾಭಿಪ್ರಾಯವಿದ್ದರೂ, ಈ ಬಂಧನವನ್ನು ಖಂಡಿಸುವುದು ಅನಿವಾರ್ಯ ಎಂದೇ ಅವರು ಭಾವಿಸಿದರು.

ಸದ್ಯ ಭಾರತದ ರಾಜಕಾರಣದ ಬಹಳ ಪ್ರಭಾವಿ ವ್ಯಕ್ತಿಗಳಲ್ಲಿ ಅರ್ನಾಬ್ ಕೂಡ ಒಬ್ಬ. ಅರ್ನಾಬ್ ಅಲ್ಲದೆ ಮತ್ತೊಬ್ಬರಿಗೆ ಹೀಗೆ ನರೇಂದ್ರ ಮೋದಿಯವರ ಇಡೀ ಸಚಿವ ಸಂಪುಟವೇ ಬೆಂಬಲಕ್ಕೆ ನಿಂತು, ಅವರ ಪರ ಗಟ್ಟಿದನಿ ಎತ್ತಿದ್ದನ್ನು ನಾನಂತೂ ಕಂಡಿಲ್ಲ. ಆತನನ್ನು ಜೈಲಿನಿಂದ ಹೊರತರಲು ಭಾರತ ಸರ್ಕಾರ ತನ್ನೆಲ್ಲಾ ಬಲ, ಪ್ರಭಾವವನ್ನು ಬಳಸಿ ಸರ್ವಪ್ರಯತ್ನ ಮಾಡಲಿದೆ ಎಂಬುದು ನಮಗೆಲ್ಲಾ ಗೊತ್ತಿದೆ. ಆತನ ರಾಜಕೀಯ ಪ್ರಭಾವದ ಎಷ್ಟು ಎಂಬುದಕ್ಕೆ ಇತ್ತೀಚಿನ ಕಮೇಡಿಯನ್ ಕುನಾಲ್ ಕಮ್ರಾಗೆ ಖಾಸಗೀ ವಿಮಾನಯಾನ ಸಂಸ್ಥೆಗಳು ವಿಧಿಸಿದ ನಿಷೇಧ ಪ್ರಕರಣವೇ ಸಾಕ್ಷಿ. ವಿಮಾನದಲ್ಲಿ ಆತ ಅರ್ನಾಬ್ ಗೆ ಕಿಚಾಯಿಸಿದ ಎಂಬುದನ್ನೇ ನೆಪವಾಗಿಟ್ಟುಕೊಂಡು ಕಮ್ರಾಗೆ ನಿಷೇಧ ಹೇರಲಾಗಿತ್ತು. ಆದರೆ, ಇದೇ ಅರ್ನಾಬ್ ತನ್ನ ರಾಜಕೀಯ ಮಾಲೀಕರಿಗೆ ಇಷ್ಟವಿರದ ಲೆಕ್ಕವಿರದಷ್ಟು ಮಂದಿಗೆ ಹೀಗೆ ತನ್ನ ಸ್ಟುಡಿಯೊ ಚರ್ಚೆಗಳಲ್ಲಿ, ಸುದ್ದಿಯಲ್ಲಿ ಕಿಚಾಯಿಸಿದ್ದಾನೆ ಎಂಬುದು ಎಲ್ಲರೂ ಬಲ್ಲ ಸಂಗತಿ.

ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ಅರ್ನಾಬ್ ಗೋಸ್ವಾಮಿಗೆ ತಿರುಗುಬಾಣವಾಗುವುದೇ ಹಲ್ಲೆ ಪ್ರಕರಣ?

ಉಮರ್ ಖಾಲೀದ್, ಡಾ ಕಫೀಲ್ ಖಾನ್, ಸಫೋರ್ ಜಾರ್ಗರ್, ಆನಂದ್ ತೇಲ್ತುಂಬ್ದೆ, ಸುಧಾ ಭಾರದ್ವಾಜ್ ಸೇರಿದಂತೆ ಆತನ ಬಲಿಪಶುಗಳಾದ ಹಲವರಂತೆ ತಮ್ಮ ಪರವಾಗಿ ದನಿ ಎತ್ತಲು ಮತ್ತು ಸಾರ್ವಜನಿಕ ಸಹಾನುಭೂತಿ ಗಳಿಸಲು ಅರ್ನಾಬ್ ಗೆ ‘ಟ್ವಿಟರ್ ಬಿರುಗಾಳಿ’ ಎಬ್ಬಿಸುವ ಅನಿವಾರ್ಯತೆ ಇಲ್ಲ. ಆತನಿಗಿರುವ ಶಕ್ತಿ ಎಂಥದ್ದು ಎಂದರೆ; ಪ್ರಭಾವಿ ಬುದ್ಧಿಜೀವಿಗಳು, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳಂತಹ ಕನಿಷ್ಟ ತಮ್ಮ ಕ್ಯಾಂಪಸ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪರವಾಗಿ ದನಿ ಎತ್ತುವ ಶಕ್ತಿ ಹೊಂದಿರುವವರನ್ನಷ್ಟೇ ಅಲ್ಲ; ಯಾವುದೇ ಶಕ್ತಿ, ಪ್ರಭಾವ ಮತ್ತು ಸಾಮಾಜಿಕ ಜಾಲತಾಣದ ಅರಿವು ಕೂಡ ಇಲ್ಲದ ತೀರಾ ದುರ್ಬಲ ಜನರ ಬದುಕನ್ನು ಕೂಡ ಹೊಸಕಿ ಹಾಕಿಬಿಡಬಲ್ಲ.

ಬೇರೆಲ್ಲಾ ಖೂಳ ಕೃತ್ಯಗಳ ಹೊರತಾಗಿಯೂ ಹೇಳುವುದಾದರೆ; ಕರೋನಾ ವೈರಸ್ಸನ್ನು ಕೂಡ ಕೋಮು-ಧರ್ಮಕ್ಕೆ ತಳಕು ಹಾಕಿ, ವರದಿ ಮಾಡುವ ಮೂಲಕ ದೇಶದಲ್ಲಿ ಮಾರಕ ವೈರಸ್ ಹರಡಲು ಒಂದು ಸಮುದಾಯವೇ ಕಾರಣವೆಂದು ಬಿಂಬಿಸಿದ್ದು ದೇಶದ ಸಾಮಾಜಿಕ ಸ್ವಾಸ್ಥ್ಯಕ್ಕೆ ದೊಡ್ಡ ಪೆಟ್ಟು ನೀಡಿತು. ‘ಕರೋನಾ ಜಿಹಾದ್’, ‘ಕರೋನಾ ಟೆರರಿಸಂ’, ‘ಕರೋನಾ ಬಾಂಬ್ಸ್’ನಂತಹ ಪದಪುಂಜಗಳ ಮೂಲಕ ಅರ್ನಾಬ್ ಸೇರಿದಂತೆ ಮಾಧ್ಯಮದ ಒಂದು ವರ್ಗ ನಡೆಸಿದ ದ್ವೇಷ ಅಭಿಯಾನ, ತಬ್ಲೀಖ್ ಹೆಸರಿನಲ್ಲಿ ಇಡೀ ಮುಸ್ಲಿಂ ಸಮುದಾಯದ ವಿರುದ್ಧ ದೇಶದ ಉಳಿದವರನ್ನು ಎತ್ತಿಕಟ್ಟುವ ಹುನ್ನಾರವಾಗಿತ್ತು. ಆ ಕೃತ್ಯ ದೇಶದ ಸಾಮಾನ್ಯ ಹಿಂದೂಗಳ ಮನಸ್ಸಿನಲ್ಲಿ ಎಂಥ ಭಯ ಮತ್ತು ದ್ವೇಷ ಬಿತ್ತಿತ್ತೆಂದರೆ; ದೇಶದ ರಾಜಧಾನಿಯೂ ಸೇರಿದಂತೆ ಕನಿಷ್ಟ ನಾಲ್ಕು ರಾಜ್ಯಗಳಲ್ಲಿ ಮುಸ್ಲಿಂ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳು ವಸತಿ ಸಮುಚ್ಚಯಗಳು, ಬೀದಿಗಳಲ್ಲಿ ಕಾಣಿಸಿಕೊಂಡಿದ್ದವು. ಹಿಮಾಚಲಪ್ರದೇಶದ ಹಾಲು ವ್ಯಾಪಾರಿಯೊಬ್ಬ ಕರೋನಾ ಹರುಡುವವರು ಎಂಬ ನಿಂದನೆಯ ಮಾತಿಗೆ ಬೇಸತ್ತು ಆತ್ಮಹತ್ಯೆಯನ್ನೇ ಮಾಡಿಕೊಂಡರು.

ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ಮತ್ತೆ ಸಂಕಷ್ಟದಲ್ಲಿ Republic Tv ಮುಖ್ಯಸ್ಥ ಅರ್ನಬ್ ಗೋಸ್ವಾಮಿ.!

ದೇಶದ ಕೆಲವು ಭಾಗದಲ್ಲಾದರೂ ಈ ಜನರ ವಿರುದ್ಧ ಆರ್ಥಿಕ ಅಸ್ಪೃಶ್ಯತೆಯನ್ನು ಜಾರಿಗೆ ತರುವಲ್ಲಿ ಮತ್ತು ಆ ಮೂಲಕ ಕಡುಬಡವರ ಬದುಕನ್ನು ಸರ್ವನಾಶ ಮಾಡುವಲ್ಲಿ ಇತರೆ ಸುದ್ದಿವಾಹಿನಿಗಳ ಜೊತೆ ಈ ಮನುಷ್ಯ ಮತ್ತು ಆತನ ಸುದ್ದಿ ವಾಹಿನಿಯ ವರದಿಗಾರಿಕೆ ದೊಡ್ಡ ಕೊಡುಗೆ ನೀಡಿದೆ ಎಂದರೆ ಅದು ಅತಿಶಯೋಕ್ತಿಯಾಗಲಾರದು.

ಆ ಹಿನ್ನೆಲೆಯಲ್ಲಿ ಅರ್ನಾಬ್ ಪರ ನಿಲ್ಲಲು ನಿರಾಕರಿಸುವ ನನ್ನ ನಿಲುವಿನಿಂದ ನನ್ನ ಲಿಬರಲ್ ವ್ಯಕ್ತಿತ್ವ ಮತ್ತು ಪತ್ರಿಕಾ ಸಹೋದ್ಯೋಗಿಗಳ ಕುರಿತ ನನ್ನ ಬದ್ಧತೆಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದು ಎಂದು ನನಗೆ ವಿಶ್ವಾಸವಿದೆ. ಎರಡು ದಶಕ ಕಾಲ ಆಡಿಯೋ-ವಿಷ್ಯುವಲ್ ಮಾಧ್ಯಮದಲ್ಲಿ ವೃತ್ತಿಜೀವನ ನಡೆಸಿರುವ ನಾನು, ನೂರಾರು ಟಿವಿ ಡಿಬೇಟುಗಳನ್ನು ನಡೆಸಿದ್ದೇನೆ. ಆ ಅನುಭವದ ಮೇಲೆ ಹೇಳುವುದೇ ಆದರೆ, ಈ ಅರ್ನಾಬ್ ನಡೆಸುವ ಟಿವಿ ಡಿಬೇಟುಗಳು ಪತ್ರಿಕೋದ್ಯಮವಲ್ಲ; ಬದಲಾಗಿ ಅದು ಪತ್ರಿಕೋದ್ಯಮದ ಅಣಕ. ಹಾಗಾಗಿ ಆತನೊಂದಿಗೆ ನನ್ನನ್ನೂ ಸೇರಿಸುವುದಕ್ಕೆ ನನ್ನ ವಿರೋಧವಿದೆ. ಇವತ್ತಿನ ಭಾರತದಲ್ಲಿ ಅದೇ ಪತ್ರಿಕೋದ್ಯಮ ಎನ್ನುವುದಾದರೆ, ನಾನು ಈ ವೃತ್ತಿಯನ್ನೇ ಬಿಡಲು ಕೂಡ ಸಿದ್ಧ.’

ಅಭಿವ್ಯಕ್ತಿಯ ತನ್ನ ಹಕ್ಕನ್ನು ಹೀನಾಯವಾಗಿ ದುರುಪಯೋಗಪಡಿಸಿಕೊಂಡ ಮತ್ತು ಭಾರತದ ಪತ್ರಿಕೋದ್ಯಮ ವ್ಯವಸ್ಥೆಯನ್ನು ಬಹುತೇಕ ಏಕಾಂಗಿಯಾಗಿ ಸರ್ವನಾಶ ಮಾಡಿದ ವ್ಯಕ್ತಿಯೇ ಸಂವಿಧಾನ ಖಾತ್ರಿಪಡಿಸಿದ ಪತ್ರಿಕಾ ಸ್ವಾತಂತ್ರ್ಯ ಮತ್ತು ವಿಶೇಷ ಸವಲತ್ತಿಗಾಗಿ ಬಾಯಿಬಡಿದುಕೊಳ್ಳುವುದು ನಾಚಿಕೆಗೇಡು. ಹಾಗಾಗಿ ಆತನ ಬಂಧನ ಅಥವಾ ಅದರ ಹಿಂದೆ ‘ರಾಜ್ಯ ಸರ್ಕಾರದ ಅಧಿಕಾರ ದುರುಪಯೋಗ’ ಕುರಿತ ಯಾವುದೇ ಟೀಕೆಗಳಿದ್ದರೂ ಅವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯದ ಪರಿಧಿಯಿಂದ ಹೊರಗಿರಬೇಕಾಗುತ್ತದೆ.

ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ಅರ್ನಾಬ್ ಗೋಸ್ವಾಮಿಗೆ ಸಮನ್ಸ್ ನೀಡುವಂತೆ ಬಾಂಬೆ ಹೈಕೋರ್ಟ್ ನಿರ್ದೇಶನ

ಒಂದು ವೇಳೆ ಆತನ ವಿರುದ್ಧದ ಪೊಲೀಸ್ ಕಾರ್ಯಾಚರಣೆ ರಾಜಕೀಯ ಪ್ರೇರಿತ ಎಂದು ನಾವು ನಂಬಿದರೂ, ಅಂತಹ ವರಸೆ ಕೂಡ, ಇತರರ ವಿರುದ್ಧ ಸಿನಿಮೀಯ ರೀತಿಯ ಕತೆ ಕಟ್ಟಿ ಪೊಲೀಸರನ್ನು ಛೂ ಬಿಡುತ್ತಿದ್ದ ತನ್ನ ನಿರ್ಲಜ್ಜ ಆಟದ ಮುಂದುವರಿದ ಭಾಗವೇ ಎಂಬುದನ್ನು ಗೋಸ್ವಾಮಿ ಅರ್ಥಮಾಡಿಕೊಳ್ಳಬೇಕಿದೆ. ಸತ್ಯವೇನೆಂದರೆ ಆತ ನಿಷ್ಪಕ್ಷಪಾತಿ ಪತ್ರಕರ್ತನಾಗಿಲ್ಲ; ಬದಲಾಗಿ ರಾಜಕೀಯ ಸೂತ್ರಧಾರನಾಗಿ ಕೆಲಸ ಮಾಡಿದ್ದಾನೆ. ಕಳೆದ ಆರು ವರ್ಷಗಳಲ್ಲಿ ಎಡಪಂಥೀಯ ಹೋರಾಟಗಾರರು, ವಿದ್ಯಾರ್ಥಿಗಳು ಮತ್ತು ಪ್ರಾಮಾಣಿಕ ಪತ್ರಕರ್ತರನ್ನು ಹಣಿಯಲು ಮತ್ತು ಹತ್ತಿಕ್ಕಲು ಕೇಂದ್ರ ಮತ್ತು ವಿವಿಧ ರಾಜ್ಯಗಳ ಬಿಜೆಪಿ ಸರ್ಕಾರಗಳು ಅಧಿಕಾರ ಮತ್ತು ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೊಗಪಡಿಸಿಕೊಂಡಿರುವುದನ್ನು ಕಂಡಿದ್ದೇವೆ. ತನಗಾಗದವರನ್ನು ಹಣಿಯಲು ಸರ್ಕಾರಗಳು ಸೃಷ್ಟಿಸಿದ ಕಟ್ಟುಕತೆಗಳಿಗೆ ನಾಗರಿಕರ ಬೆಂಬಲ ಗಿಟ್ಟಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ ಅರ್ನಾಬ್, ತನ್ನ ಸ್ಟುಡಿಯೋದಲ್ಲೇ ಪರ್ಯಾಯ ನ್ಯಾಯಾಲಯ ಸೃಷ್ಟಿಸಿ, ತನ್ನದೇ ವಾದ, ತನ್ನದೇ ನ್ಯಾಯ ಮತ್ತು ತನ್ನದೇ ಶಿಕ್ಷೆಯನ್ನು ವಿಧಿಸುವ ಸರ್ವಾಧಿಕಾರಿಯಾಗಿ ವರ್ತಿಸಿದ. ಒಂದೇ ಒಂದು ಬಾರಿ ಕೂಡ ಆತ ಹಾಗೆ ಬಿಜೆಪಿ ಮತ್ತು ಅದರ ಸರ್ಕಾರಗಳಿಂದ ದಮನಕ್ಕೊಳಗಾದ ಪತ್ರಕರ್ತರ ಬಗ್ಗೆಯಾಗಲೀ, ಸಾಮಾಜಿಕ ಹೋರಾಟಗಾರರ ಬಗ್ಗೆಯಾಗಲೀ ದನಿ ಎತ್ತಲಿಲ್ಲ.

ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ತಬ್ಲೀಗಿ ಜಮಾತಿಗರು ಮಾಧ್ಯಮಗಳ ʼಬಲಿಪಶುʼ- ಬಾಂಬೆ ಹೈಕೋರ್ಟ್

ಆಡಳಿತ ವ್ಯವಸ್ಥೆಯ ವಿರುದ್ಧದ ಯಾವುದೇ ರಾಜಕೀಯ ವಿರೋಧಿಗಳನ್ನು ಸುಳ್ಳು ಕೇಸುಗಳ ನೆಪದಲ್ಲಿ ಬೇಟೆಯಾಡುವ ಒಂದು ಭೀಕರ ಪರಿಸ್ಥಿತಿಯನ್ನು ದೇಶದಲ್ಲಿ ನಿರ್ಮಾಣ ಮಾಡುವಲ್ಲಿ ಆತ ಬಹಳ ಸಕ್ರಿಯ ಪಾತ್ರ ವಹಿಸಿದ. ದೇಶದ ಉನ್ನತ ಸಂವಿಧಾನಿಕ ಸಂಸ್ಥೆಗಳಾಗಲೀ, ಕಾನೂನಿನ ಬಲವಾಗಲೀ ಅಂತಹ ಬಲಿಪಶುಗಳ ನೆರವಿಗೆ ಬರಲಿಲ್ಲ. ಆದರೆ ಇಂತಹ ಒಂದು ಹೊಸ ವ್ಯವಸ್ಥೆಯ ಬಗ್ಗೆ ಆತ ಎಂದೂ ಆಕ್ಷೇಪವೆತ್ತಲಿಲ್ಲ. ಏಕೆಂದರೆ; ನಮ್ಮ 2020ರ ‘ಹೊಸ ಅನೈತಿಕ ಭಾರತ’ದ ರಾಷ್ಟ್ರ ನಿರ್ಮಾತ್ರುಗಳಲ್ಲಿ ಆತನೂ ಒಬ್ಬ!

ಗೋಸ್ವಾಮಿ ಮತ್ತು ಆತನಂಥವರು ಜಾರಿಗೆ ತಂದ, ಅಮಾಯಕರನ್ನು ಬೇಟೆಯಾಡುವ ಹೇಯ ಪತ್ರಿಕೋದ್ಯಮದ ಬಲಿಪಶುಗಳು-ಯಾವ ಪ್ರಭಾವವಿರದ ನೂರಾರು ನಾಗರಿಕರು- ಅಪಪ್ರಚಾರ ಮತ್ತು ದಾಳಿಯಿಂದ ತಮ್ಮ ಜೀವ ಮತ್ತು ಬದುಕು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇ ಸರ್ಕಾರ ಮತ್ತು ನ್ಯಾಯಾಲಯಗಳು ಅಂತಹ ಬಲಿಪಶುಗಳ ನೆರವಿಗೆ ಬರುತ್ತವೆ ಎಂಬ ನಿರೀಕ್ಷೆ ಕೂಡ ಇಲ್ಲ. ಹಾಗಾಗಿ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ನಾವು, ನಮ್ಮ ದನಿ ಮತ್ತು ಸಾಮಾಜಿಕ ಶಕ್ತಿಯನ್ನು ಬಳಸಿ ಅಂತಹ ಅಶಕ್ತರ ರಕ್ಷಣೆಗೆ ನಿಲ್ಲಬೇಕಿದೆ. ಅರ್ನಾಬ್ ನಂಥ ಒಬ್ಬ ಪ್ರಭುತ್ವದ ಪ್ರಚಾರಕನ ಪರ ವಕಾಲತು ವಹಿಸಿ ತಮ್ಮ ಸಮಯ ಮತ್ತು ಆಕ್ರೋಶವನ್ನು ವ್ಯರ್ಥ ಮಾಡುವ ಬದಲು ಪತ್ರಕರ್ತರು ಮತ್ತು ಸಾಹಿತಿಗಳು, ದೇಶದ ಕೋಮು ಸೌಹಾರ್ದ ಮತ್ತು ಕಠಿಣ ಪರಿಶ್ರಮದಿಂದ ಪಡೆದ ಸಾಮಾಜಿಕ ಶಾಂತಿಯನ್ನು ನಾಶ ಮಾಡುತ್ತಿರುವ, ಸದಾ ದ್ವೇಷಕಾರುವ, ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಪ್ರಚಾರಕರ ವಿರುದ್ಧ ದನಿ ಎತ್ತಬೇಕಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com