ಬಿಹಾರ ಚುನಾವಣೋತ್ತರ ಸಮೀಕ್ಷೆ: ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗುವ ಸಾಧ್ಯತೆ

ಒಟ್ಟು 243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಸರಳ ಬಹುಮತ ಸಾಬೀತು ಪಡಿಸಲು 123 ಸ್ಥಾನಗಳು ಅಗತ್ಯವಿದ್ದು, ಸಮೀಕ್ಷೆಯ ಪ್ರಕಾರ ಮಹಾಘಟಬಂಧನ್‌ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಬಲವಾಗಿ ಇದೆ
ಬಿಹಾರ ಚುನಾವಣೋತ್ತರ ಸಮೀಕ್ಷೆ: ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗುವ ಸಾಧ್ಯತೆ

ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಮತದಾನೋತ್ತರ ಸಮೀಕ್ಷೆಗಳು ಹೊರಬಂದಿದ್ದು, ಮಹಾಘಟಬಂಧನ್‌ ಹಾಗೂ ಎನ್‌ಡಿಎ ನಡುವೆ ತೀವ್ರ ಹಣಾಹಣಿಯಿದೆ ಎಂದು ಸಮೀಕ್ಷೆಗಳು ಹೇಳುತ್ತವೆ.

ಟೈಮ್ಸ್‌ ನೌ ಸಮೀಕ್ಷೆ ಪ್ರಕಾರ, ಮಹಾ ಘಟಬಂಧನ್‌ 120 ಸೀಟು ಗೆಲ್ಲಲಿದೆ, ಎನ್‌ಡಿಎ 116 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ, ಎಲ್‌ಜೆಪಿ ಒಂದರಲ್ಲಿ ಹಾಗೂ ಇತರೆ ಪಕ್ಷಗಳು/ ಪಕ್ಷೇತರರು 6 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜನ್‌ ಕಿ ಬಾತ್‌ ಸಮೀಕ್ಷೆ ಪ್ರಕಾರ ಮಹಾ ಘಟಬಂಧನ್‌ 91 ರಿಂದ 117 ಸೀಟು ಗೆಲ್ಲಲಿದೆ, ಎನ್‌ಡಿಎ 118 ರಿಂದ 138 ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ, ಎಲ್‌ಜೆಪಿ 5 ರಿಂದ 8 ಸ್ಥಾನದಲ್ಲಿ ಹಾಗೂ ಇತರೆ ಪಕ್ಷಗಳು/ ಪಕ್ಷೇತರರು 3 ರಿಂದ 6 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದ್ದಾರೆ.

ಟಿವಿ9 ಭರತ್‌ವರ್ಷ್ ಸಮೀಕ್ಷೆ ಪ್ರಕಾರ 110 ರಿಂದ 120 ಸ್ಥಾನವನ್ನು ಎನ್‌ಡಿಎ ಗೆಲ್ಲಲಿದೆ. ಮಹಾಘಟಬಂಧನ್‌ 115 ರಿಂದ 125 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಬಹುದು ಹಾಗೂ ಇತರೆ 10 ರಿಂದ 15 ಕ್ಷೇತ್ರಗಳನ್ನು ವಶಕ್ಕೆ ಪಡೆಯಬಹುದು .

ಎನ್‌ಡಿಎ 110 ರಿಂದ 120 ಸ್ಥಾನ ಗೆಲ್ಲಬಹುದೆಂದು ಸಿವೋಟರ್‌ ಸಮೀಕ್ಷೆಗಳು ಹೇಳುತ್ತವೆ. ಮಹಾಘಟಬಂಧನ್‌ 115 ರಿಂದ 125 ಹಾಗೂ ಇತರೆ ಪಕ್ಷಗಳು 10 ರಿಂದ 15 ಸ್ಥಾನಗಳನ್ನು ಗೆಲ್ಲಬಹುದೆಂದು ಈ ಸಮೀಕ್ಷೆಯು ಹೇಳುತ್ತದೆ.

ABP-CVoter ಸಮೀಕ್ಷೆ ಪ್ರಕಾರ 104 ರಿಂದ 128 ಸೀಟುಗಳನ್ನು ಎನ್‌ಡಿಎ ಗೆಲ್ಲಬಹುದು, 108 ರಿಂದ 131 ಸೀಟುಗಳನ್ನು ಮಹಾಘಟಬಂಧನ್‌ ಗೆಲ್ಲಬಹುದು ಹಾಗೂ 1 ರಿಂದ 3 ಸೀಟುಗಳನ್ನು ಎಲ್‌ಜೆಪಿ ಗೆಲ್ಲಲಿದೆ ಎನ್ನಲಾಗಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಮೂರನೇ ಹಂತದಲ್ಲಿ ಸಂಜೆ 6 ರವರೆಗೆ ಶೇ 56.59 ಮತದಾನ ನಡೆದಿದೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತಿಳಿಸಿವೆ.

ಇಂಡಿಯಾ ಟುಡೇ ವರದಿ ಪ್ರಕಾರ 44% ಜನರು ತೇಜಸ್ವಿ ಯಾದವ್‌ ಮುಖ್ಯಮಂತ್ರಿಯಾಗಲು ಒಲವು ತೋರಿಸಿದ್ದು, ಮತ್ತೆ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಲು 35 % ಮಂದಿ ಬಯಸಿದ್ದಾರೆ.

ಒಟ್ಟು 243 ವಿಧಾನಸಭಾ ಕ್ಷೇತ್ರಗಳಿರುವ ಬಿಹಾರದಲ್ಲಿ ಸರಳ ಬಹುಮತ ಸಾಬೀತು ಪಡಿಸಲು 123 ಸ್ಥಾನಗಳು ಅಗತ್ಯವಿದ್ದು, ಸಮೀಕ್ಷೆಯ ಪ್ರಕಾರ ಮಹಾಘಟಬಂಧನ್‌ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಬಲವಾಗಿ ಇದೆ. ತೇಜಸ್ವಿ ಯಾದವ್‌ ನೇತೃತ್ವದ ಆರ್‌ಜೆಡಿ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದ್ದು, ತೇಜಸ್ವಿ ಯಾದವ್‌ ಮುಖ್ಯಮಂತ್ರಿ ಆಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com