ಸ್ವಯಂಕೃತ ಅಪರಾಧದಿಂದ ಬಿಹಾರವನ್ನು ಕಳೆದುಕೊಳ್ಳುತ್ತಿದೆಯೇ ಬಿಜೆಪಿ?

ಬಿಜೆಪಿ ತೋರಿದ ಮೃದುಧೋರಣೆ ತೇಜಸ್ವಿ ಯಾದವ್ ಆರೋಪಕ್ಕೆ ಬಲ ತಂದುಕೊಟ್ಟವು. ಇದಲ್ಲದೆ ಲೋಕಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಕೂಡ ನಿತೀಶ್ ಕುಮಾರ್ ಅವರನ್ನು ಹೀಗೆಳೆಯುವ ಕೆಲಸ ಮಾಡಿದರು.
ಸ್ವಯಂಕೃತ ಅಪರಾಧದಿಂದ ಬಿಹಾರವನ್ನು ಕಳೆದುಕೊಳ್ಳುತ್ತಿದೆಯೇ ಬಿಜೆಪಿ?

ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣ ಆಗಬಹುದು ಅಥವಾ ರಾಷ್ಟ್ರೀಯ ಜನತಾದಳ (RJD) ಮತ್ತು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಯ ಸರ್ಕಾರ ಬರಬಹುದು ಎಂದು ಭವಿಷ್ಯ ನುಡಿದಿವೆ. ಬಿಹಾರದ ಚುನಾವಣೆ ಆರಂಭವಾದಾಗ ಯಾವ ಸಮೀಕ್ಷೆಗಳು, ರಾಜಕೀಯ ವಿಶ್ಲೇಷಕರು, ಪತ್ರಕರ್ತರು ಹೀಗೆ ಹೇಳುತ್ತಿರಲಿಲ್ಲ. ಎಲ್ಲರೂ 'ಒನ್ ಸೈಡ್ ಮ್ಯಾಚ್', ಅಂದರೆ ಬಿಜೆಪಿ-ಜೆಡಿಯು ಸರ್ಕಾರ ಬಂದೇ ಬರುತ್ತದೆ ಎಂಬ ವಿಶ್ಲೇಷಣೆ ಮಾಡುತ್ತಿದ್ದರು. ಚುನಾವಣೆ ಆರಂಭವಾಗಿ ಅಂತ್ಯಗೊಳ್ಳುವುದರಲ್ಲಿ 'ಮಾಹೊಲ್' ಬದಲಾಗಿದೆ. ಈಗ ಅದೇ ರಾಜಕೀಯ ವಿಶ್ಲೇಷಕರು ಮತ್ತು ಪತ್ರಕರ್ತರು 'ಏನು ಬೇಕಾದರೂ ಆಗಬಹುದು, ಫೋಟೋ ಫಿನಿಷ್ ಆಗಬಹುದು' ಎನ್ನುತ್ತಿದ್ದಾರೆ.

ಬಿಜೆಪಿಯ ಸ್ವಯಂಕೃತ ಅಪರಾಧ

ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿ ಪಾಲಿಗೆ ಬಿಸಿತುಪ್ಪವಾಗಿದ್ದರು. ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ರಾಜ್ಯ ಬಿಜೆಪಿ ಹಾಗೂ ದೆಹಲಿಯ ಬಿಜೆಪಿ ನಾಯಕರಿಗೆ ಸುತಾರಾಂ ಇಷ್ಟವಿರಲಿಲ್ಲ. ಆದರೆ ಹಾಲಿ ಮುಖ್ಯಮಂತ್ರಿ ಆಗಿದ್ದ ಕಾರಣಕ್ಕೆ ಮನಸ್ಸಿಲ್ಲದಿದ್ದರೂ ನಿತೀಶ್ ಕುಮಾರ್ ಅವರನ್ನೇ ಬಿಜೆಪಿ ಎನ್ ಡಿಎ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ಜೊತೆಜೊತೆಗೆ 'ಜೆಡಿಯುಗಿಂತ ಬಿಜೆಪಿಯೇ ಬಲಶಾಲಿ' ಎಂದು ಬಿಂಬಿಸುವ ಕೆಲಸವೂ ಆರಂಭವಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದು ರಾಜಕೀಯವಾಗಿ ಪಕ್ಷವೊಂದು ತಾನು ಪ್ರಬಲವಾಗಲು ಯತ್ನಿಸಿದ ಸಹಜ ನಡೆ ಆಗಿರಲಿಲ್ಲ. ಬದಲಿಗೆ 'ಏನಾದರೂ ಸರಿ, ನಿತೀಶ್ ಕುಮಾರ್ ಅವರ ಜೆಡಿಯುಗಿಂತ ಬಿಜೆಪಿ ಕಡೆ ಪಕ್ಷ 1 ಸೀಟನ್ನಾದರೂ ಹೆಚ್ಚು ಗೆಲ್ಲಬೇಕು, ತಾನೇ ದೊಡ್ಡ ಪಕ್ಷ ಎಂಬ ನೆಪವನ್ನೇ ಇಟ್ಟುಕೊಂಡು ಚುನಾವಣೋತ್ತರದಲ್ಲಿ ನಿತೀಶ್ ಕುಮಾರ್ ಅವರನ್ನು ನೇಪಥ್ಯಕ್ಕೆ ಸರಿಸಿ ಬಿಜೆಪಿ ಮುಖ್ಯಮಂತ್ರಿಯನ್ನು ಪ್ರತಿಷ್ಠಾಪಿಸಬೇಕೆಂಬ' ದೂರದ ಆಲೋಚನೆ ಅಡಗಿತ್ತು. ಇದೇ ಕಾರಣಕ್ಕೆ ನಿತೀಶ್ ಕುಮಾರ್ ವಿಚಾರದಲ್ಲಿ ಬಿಜೆಪಿ 'ಡೌನ್ ಪ್ಲೇ' ಮಾಡತೊಡಗಿತು.

ಇನ್ನೊಂದೆಡೆ ಮಹಾಘಟಬಂಧನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರು ನಿರಂತರವಾಗಿ ನಿತೀಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದರು. ಬಿಜೆಪಿ ತೋರಿದ ಮೃದುಧೋರಣೆ ತೇಜಸ್ವಿ ಯಾದವ್ ಆರೋಪಕ್ಕೆ ಬಲ ತಂದುಕೊಟ್ಟವು. ಇದಲ್ಲದೆ ಲೋಕಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಕೂಡ ನಿತೀಶ್ ಕುಮಾರ್ ಅವರನ್ನು ಹೀಗೆಳೆಯುವ ಕೆಲಸ ಮಾಡಿದರು. ಒಂದು ಹಂತದಲ್ಲಿ 'ನವೆಂಬರ್ 10ರ ನಂತರ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಮುಂದೆ ಮಂಡಿಯೂರಬೇಕಾಗುತ್ತದೆ' ಎಂದೂ ಮೂದಲಿಸಿದರು. ಇದೆಲ್ಲದರ ಪರಿಣಾಮವಾಗಿ ನಿತೀಶ್ ಕುಮಾರ್ ಕ್ರಮೇಣ 'ವಿಫಲ ನಾಯಕ'ನಂತೆ ಬಿಂಬಿತರಾದರು. ಪರಿಣಾಮವಾಗಿ 'ಚಾಣಾಕ್ಯ' ಸಮೀಕ್ಷೆಯಲ್ಲಿ ಶೇಕಡಾ 63ರಷ್ಟು ಜನ 'ಬಿಹಾರದಲ್ಲಿ ಬದಲಾವಣೆ ಬೇಕು' ಎಂದು ಹೇಳಿದ್ದಾರೆ. ನಿತೀಶ್ ಕುಮಾರ್ ಮುಂದುವರೆಯಲಿ ಎಂದಿರುವವರು ಶೇಕಡಾ 27ರಷ್ಟು ಜನ ಮಾತ್ರ.

ಚಿರಾಗ್ ಕಮಾಲ್

ಈಗಲೂ ಕೇಂದ್ರ ಸರ್ಕಾರದಲ್ಲಿ ಬಿಜೆಪಿ ಮತ್ತು ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ, ಮೈತ್ರಿ ಪಕ್ಷಗಳು. ಜೊತೆಗೆ ಈ ಮೈತ್ರಿ ಮಧುರವಾಗಿಯೇ ಇದೆ. ಆದರೂ ಬಿಹಾರದಲ್ಲಿ ಲೋಕಜನಶಕ್ತಿ ಎನ್ ಡಿಎ ಮೈತ್ರಿಯಿಂದ ಹೊರಬಂದಿದ್ದೇಕೆ? ಎಂಬ ಕುತೂಹಲ ತಣಿದಿಲ್ಲ. ಈಗಾಗಲೇ ಹೇಳಿದಂತೆ ಜೆಡಿಯು ಪಕ್ಷವನ್ನು ಅಣಿಯಲೆಂದೇ ಬಿಜೆಪಿ ಚಿರಾಗ್ ಪಾಸ್ವಾನ್ ಅವರನ್ನು 'ಬಂಡಾಯ ನಾಯಕನನ್ನಾಗಿ ಅಖಾಡಕ್ಕಿಳಿಸಿತು' ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಚಿರಾಗ್ ಚುನಾವಣೆ ಉದ್ದಕ್ಕೂ ಬಿಜೆಪಿಯ ವಿರುದ್ಧ ಒಂದೇ ಒಂದು ಮಾತನಾಡಿಲ್ಲ.

ಸ್ವಯಂಕೃತ ಅಪರಾಧದಿಂದ ಬಿಹಾರವನ್ನು ಕಳೆದುಕೊಳ್ಳುತ್ತಿದೆಯೇ ಬಿಜೆಪಿ?
ಬಿಹಾರ ಚುನಾವಣೆ: ರಾಮಮಂದಿರ, ಸೀತಾಮಾತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ

ಮಹಾಘಟಬಂಧನ ರಣತಂತ್ರ

ನಿತೀಶ್ ಕುಮಾರ್ ಮೇಲೆ ತೇಜಸ್ವಿ ಯಾದವ್ ದಾಳಿ ಮಾಡಬೇಕು, ನರೇಂದ್ರ ಮೋದಿ ಮೇಲೆ ರಾಹುಲ್ ಗಾಂಧಿ ದಾಳಿ ಮಾಡಬೇಕು ಎಂಬ ಮಹಾಘಟಬಂಧನದ ತಂತ್ರವೂ ಫಲ ತಂದುಕೊಟ್ಟಂತಿದೆ. ಈ ಪೈಕಿ ತೇಜಸ್ವಿ ಯಾದವ್ ನಿರುದ್ಯೋಗ, ಭ್ರಷ್ಟಾಚಾರ ಮತ್ತಿತರ ಸ್ಥಳೀಯ ವಿಚಾರಗಳನ್ನು ಪ್ರಸ್ತಾಪಿಸಿದರು. ಒಂದು ಹಂತದಲ್ಲಿ 'ತಮ್ಮ ಸರ್ಕಾರ ಬಂದರೆ ಮೊದಲ ಸಂಪುಟ ಸಭೆಯಲ್ಲೇ 10 ಲಕ್ಷ ಉದ್ಯೋಗ ಸೃಷ್ಟಿಸುವ ನಿರ್ಧಾರ ಮಾಡಲಾಗುವುದು' ಎಂದು ಘೋಷಿಸಿದರು. ತೇಜಸ್ವಿ ಯಾದವ್ ಪ್ರಸ್ತಾಪಿಸಿದ ಇಂಥ ವಿಚಾರಗಳು ಜನರನ್ನು ಮುಟ್ಟಿವೆ ಎಂಬುದಕ್ಕೆ ಪೂರಕವಾಗಿ 'ಚಾಣಾಕ್ಷ' ಸಮೀಕ್ಷೆ ಪ್ರಕಾರ ನಿರುದ್ಯೋಗದ ವಿಷಯ ಈ ಚುನಾವಣೆಯಲ್ಲಿ ಶೇಕಡಾ 35ರಷ್ಟು ಪ್ರಭಾವ ಬೀರಿದೆ. ಅಭಿವೃದ್ಧಿ ಬಗ್ಗೆ ನಡೆದ ಚರ್ಚೆ ಶೇಕಡಾ 28 ರಷ್ಟು ಪ್ರಭಾವ ಬೀರಿದೆ. ಭ್ರಷ್ಟಾಚಾರದ ವಿಚಾರ ಶೇಕಡಾ 19ರಷ್ಟು ಪ್ರಭಾವ ಬೀರಿದೆ ಎಂದು ಹೇಳುತ್ತದೆ.

ಡಬಲ್ ಇಂಜಿನ್ ಡ್ಯಾಮೇಜ್

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಗಳಲ್ಲಿ ಬೇರೆ ಪಕ್ಷದ ನಾಯಕರ ಬಗ್ಗೆ ಲಘುವಾಗಿ ಮಾತನಾಡುವುದರಲ್ಲಿ, ಅಣಕಿಸುವುದರಲ್ಲಿ, ಮೂದಲಿಸುವುದರಲ್ಲಿ ಬಲು‌ ನಿಸ್ಸೀಮರು. ಅದೇ ರೀತಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 'ನಮ್ಮದು ಡಬಲ್ ಇಂಜಿನ್ ಸರ್ಕಾರ (ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ), ಇನ್ನೊಂದೆಡೆ ಅನಾನುಭವಿ ಡಬಲ್ ಯುವ ನೇತಾವೋ (ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್)' ಎಂದು ಹೇಳಿದ್ದರು. ಆದರೆ ಇದೇ ಡಬಲ್ ಯುವ ನಾಯಕರು ಬಿಹಾರದುದ್ದಕ್ಕೂ ಸಂಚರಿಸಿ ಆಡಳಿತವಿರೋಧಿ ಅಲೆ ಇರುವುದನ್ನು ಸಾರಿ ಹೇಳಿದ್ದಾರೆ ಎಂಬುದು ಚುನಾವಣೋತ್ತರ ಸಮೀಕ್ಷೆಯಿಂದ ಗೊತ್ತಾಗಿದೆ.

ಬಿಜೆಪಿಯ ಕೈಹಿಡಿಯದ ಶ್ರೀರಾಮ

ಬಿಜೆಪಿ ರಾಜಕೀಯವಾಗಿ ನೆಲೆ ಕಂಡುಕೊಂಡಿದ್ದೇ ಶ್ರೀರಾಮನ ಹೆಸರಿನಲ್ಲಿ ರಾಜಕಾರಣ ಮಾಡಿ. ಆದರೆ ಬಿಹಾರದ ಜನತೆ 'ಬಿಜೆಪಿಯ ರಾಮನ ರಾಜಕಾರಣಕ್ಕೆ' ಮನ್ನಣೆ ನೀಡಿಲ್ಲ ಎನ್ನುತ್ತವೆ ಸಮೀಕ್ಷೆಗಳು. ಏಕೆಂದರೆ ಉತ್ತರ ಪ್ರದೇಶದಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಿದಂತೆ ಬಿಹಾರದಲ್ಲಿ ಸೀತೆಯ ಮಂದಿರ ನಿರ್ಮಿಸಲಾಗುವುದು ಎಂದು ಬಿಜೆಪಿ ನಾಯಕರು ಸಾರಿ ಸಾರಿ ಹೇಳಿದರು. ಖುದ್ದು ಮೋದಿಯೇ ಈ ವಿಷಯ ಪ್ರಸ್ತಾಪಿಸಿದರು. ಆದರೂ ಶ್ರೀರಾಮನಾಗಲಿ, ಸೀತೆಯಾಗಲಿ ಬಿಜೆಪಿಗೆ ವರ ನೀಡಿದಂತೆ ಕಂಡುಬರುತ್ತಿಲ್ಲ. ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಬಂದಿದ್ದೇಯಾದರೆ ರಾಜಕೀಯವಾಗಿ ನಿತೀಶ್ ಕುಮಾರ್ ಅಧ್ಯಾಯ ಮುಗಿದಂತೆ. ಜೊತೆಗೆ ಬಿಜೆಪಿಗೆ ಪಶ್ಚಿಮ ಬಂಗಾಳದ ಚುನಾವಣೆ ಇನ್ನಷ್ಟು ಕಷ್ಟವಾಗಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com