ಪಶ್ಚಿಮ ಬಂಗಾಳ: ಆದಿವಾಸಿಗಳನ್ನು ಓಲೈಸಲು ಹೋಗಿ ಮುಜುಗರಕ್ಕೀಡಾದ ಅಮಿತ್ ಶಾ

ಒಟ್ಟಿನಲ್ಲಿ, ಅಮಿತ್‌ ಶಾ ಅವರ ಬುಡಕಟ್ಟು ಜನಾಂಗದವರನ್ನು ಓಲೈಸಲು ಹೋಗಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಈ ನಡುವೆ ಬಿಜೆಪಿಯನ್ನು ಪ್ರತೀ ಹೆಜ್ಜೆಗೂ ಗಮನಿಸುತ್ತಿರುವ ತೃಣಮೂಲ ಕಾಂಗ್ರೆಸ್‌ ಬಿಜೆಪಿ ನಾಯಕರ ಯಾವುದೇ ತಪ್ಪನ್ನು ಕೂಡಾ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ಕೊಡುತ್ತಿಲ್ಲ
ಪಶ್ಚಿಮ ಬಂಗಾಳ: ಆದಿವಾಸಿಗಳನ್ನು ಓಲೈಸಲು ಹೋಗಿ ಮುಜುಗರಕ್ಕೀಡಾದ ಅಮಿತ್ ಶಾ

ಕೆಲವೇ ತಿಂಗಳಲ್ಲಿ ಚುನಾವಣೆ ಎದುರು ನೋಡುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತನ್ನ ಬಲವನ್ನು ವೃದ್ದಿಸಲು ಹರಸಾಹಸ ಪಡುತ್ತಿದೆ. ಒಂದರ ಮೇಲೋಂದರಂತೆ ರ್ಯಾಲಿಗಳನ್ನು ನಡೆಸುತ್ತಾ ಪಕ್ಷದ ಬಲವರ್ಧನೆಗೆ ಬಿಜೆಪಿ ನಾಯಕರು ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವತ್ತ ತಮ್ಮ ದೃಷ್ಟಿ ನೆಟ್ಟಿದ್ದಾರೆ.

ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಕೂಡ ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡು, ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬುಡಕಟ್ಟು ಜನಾಂಗದವರನ್ನು ಓಲೈಸುವ ಭರದಲ್ಲಿ ತಪ್ಪಾದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮುಜುಗರಕ್ಕೀಡಾಗಿದ್ದಾರೆ. ಇದರೊಂದಿಗೆ ಬುಡಕಟ್ಟು ಜನಾಂಗದವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಷ್ಟಕ್ಕೂ ಆಗಿದ್ದೇನೆಂದರೆ, ಪಶ್ಚಿಮ ಬಂಗಾಳದ ಬಂಕುರ ಜಿಲ್ಲೆಯಲ್ಲಿರುವ ಆದಿವಾಸಿಗಳ ನಾಯಕ ಭಗವಾನ್‌ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಅಮಿತ್‌ ಶಾ ಅವರು ಮಾಲಾರ್ಪಣೆ ಮಾಡಿದ್ದಾರೆ. ಮಾಲಾರ್ಪಣೆ ಮಾಡಿದ ನಂತರ ತಿಳಿದು ಬಂದದ್ದೇನೆಂದರೆ, ಅದು ಬಿರ್ಸಾ ಮುಂಡಾ ಅವರ ಪ್ರತಿಮೆಯಲ್ಲ ಬದಲಾಗಿ, ಒಬ್ಬ ಬುಡಕಟ್ಟು ಬೇಡೆಗಾರನನ್ನು ಹೋಲುವ ಪ್ರತಿಮೆ ಎಂದು. ಈ ಪ್ರಮಾದವನ್ನು ಮರೆಮಾಚಲು ಬಿಜೆಪಿಯ ಸ್ಥಳಿಯ ನಾಯಕರು, ಕೂಡಲೇ ಪ್ರತಿಮೆಯ ಕೆಳಗೆ ಬಿರ್ಸಾ ಮುಂಡಾ ಅವರ ಭಾವಚಿತ್ರವನ್ನು ತಂದು ಇಟ್ಟಿದ್ದಾರೆ.

ಇದರಿಂದ ಕುಪಿತರಾದ ಬುಡಕಟ್ಟು ಜನಾಂಗದ ಸದಸ್ಯರು, ಇದು ಬಿರ್ಸಾ ಮುಂಡಾ ಅವರಿಗೆ ಮಾಡಿರುವ ಅವಮಾನ ಎಂದು ಜರೆದಿದ್ದಾರೆ. ಆದಿವಾಸಿ ಜನಾಂಗದ ಪ್ರಮುಖ ಸಂಘಟನೆ ಭಾರತ್‌ ಜಕಾತ್‌ ಮಾಝಿ ಪರ್ಗಣಾ ಮಹಲ್‌ ಈ ಘಟನೆಯ ಕುರಿತಾಗಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಅಮಿತ್‌ ಶಾ ಅವರು ತಪ್ಪಾದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಗವಾನ್‌ ಬಿರ್ಸಾ ಮುಂಡಾ ಅವರಿಗೆ ಪುಷ್ಪಾರ್ಚನೆ ಮಾಡಿರುವುದಾಗಿ ತಮ್ಮ ಟ್ವಿಟರ್‌ ಖಾತೆಯಲ್ಲಿಯೂ ಬರೆದುಕೊಂಡಿದ್ದರು. ಈ ವಿಚಾರವನ್ನು ತೃಣಮೂಲ ಕಾಂಗ್ರೆಸ್‌ ತನ್ನ ಪ್ರಚಾರಕ್ಕೆ ಬಳಸಿಕೊಂಡಿದೆ.

ಅಮಿತ್‌ ಶಾ ನಮ್ಮವರಲ್ಲ ಹೊರಗಿನವರು, ಎಂದು ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದೆ. “Bohiragato (ಹೊರಗಿನವರು)… ಮತ್ತೆ ಬಂದಿದ್ದಾರೆ. ಯಾರದೋ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಯಾರದೋ ಕಾಲ ಕೆಳಗಡೆ ಭಗವಾನ್‌ ಬಿರ್ಸಾ ಮುಂಡಾ ಅವರ ಫೋಟೋ ಇಟ್ಟು ಅಪಮಾನಿಸಿರುವ ವ್ಯಕ್ತಿ, ಬಂಗಾಳಕ್ಕೆ ಗೌರವ ಕೊಡುವರೇ?” ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ, ಅಮಿತ್‌ ಶಾ ಅವರ ಬುಡಕಟ್ಟು ಜನಾಂಗದವರನ್ನು ಓಲೈಸಲು ಹೋಗಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಈ ನಡುವೆ ಬಿಜೆಪಿಯನ್ನು ಪ್ರತೀ ಹೆಜ್ಜೆಗೂ ಗಮನಿಸುತ್ತಿರುವ ತೃಣಮೂಲ ಕಾಂಗ್ರೆಸ್‌ ಬಿಜೆಪಿ ನಾಯಕರ ಯಾವುದೇ ತಪ್ಪನ್ನು ಕೂಡಾ ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ಬಿಟ್ಟು ಕೊಡುತ್ತಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com