ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!

ತಮ್ಮ 69ನೇ ವಯಸ್ಸಿನಲ್ಲೇ ರಾಜಕೀಯ ನಿವೃತ್ತಿಯ ಮಾತನಾಡಿರುವ ನಿತೀಶ್ ಕುಮಾರ್ ಅವರ ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಒದಗಿಸಿದೆ. ಮುಖ್ಯವಾಗಿ ಪ್ರತಿಪಕ್ಷಗಳು, ಇದೊಂದು ಸೋಲಿನ ಭೀತಿಯಿಂದ ಹೊರಬಿದ್ದ ಹೇಳಿಕೆ. ಸೋಲು ನಿಶ್ಚಿತ ಎಂಬುದು ಗೊತ್ತಾಗುತ್ತಿದ್ದಂತೆ ಜನರನ್ನು ಭಾವನಾತ್ಮಕವಾಗಿ ಮರುಳುಮಾಡಲು ಇಂತಹ ಹೇಳಿಕೆ ನೀಡಲಾಗಿದೆ ಎಂದು ಟೀಕಿಸಿವೆ.
ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!

ಬಿಹಾರ ಚುನಾವಣೆಯ ಕೊನೆಯ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಅಂತಿಮ ಸುತ್ತಿನ ಮತದಾನ ನಡೆಯಲಿದ್ದು, ಗುರುವಾರ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.

ಈ ನಡುವೆ, ಚುನಾವಣಾ ಕಣದಲ್ಲಿ ಕೊನೇ ಕ್ಷಣದ ಭರ್ಜರಿ ಆರೋಪ ಪ್ರತ್ಯಾರೋಪಗಳು ಕಣದಲ್ಲಿ ಸದ್ದು ಮಾಡಿವೆ. ಪ್ರಮುಖವಾಗಿ ಆಡಳಿತ ಮೈತ್ರಿ ಮತ್ತು ಪ್ರತಿಪಕ್ಷಗಳ ನಡುವೆ ಭಾರೀ ವಾಗ್ವಾದಗಳು ನಡೆದಿದ್ದು, ಚುನಾವಣಾ ಮತದಾನದ ಮಾತ್ರವಲ್ಲದೆ, ಮತ ಎಣಿಕೆಯ ನಂತರದ ಬೆಳವಣಿಗೆಗಳ ಮೇಲೂ ಪ್ರಭಾವ ಬೀರುವಂತಹ ಪ್ರಯತ್ನಗಳು ಎರಡೂ ಕಡೆಯಿಂದ ಬಿರುಸಾಗಿ ನಡೆದಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಕಡೆ ಎನ್ ಡಿಎ ಮೈತ್ರಿಕೂಟದ ಸಿಎಂ ಅಭ್ಯರ್ಥಿ ಹಾಗೂ ಹಾಲಿ ಸಿಎಂ ನಿತೀಶ್ ಕುಮಾರ್ ಅವರು, ಇದೇ ತಮ್ಮ ಕೊನೆಯ ಚುನಾವಣೆ ಎಂಬ ಭಾವನಾತ್ಮಕ ದಾಳ ಉರುಳಿಸಿ ಕೊನೆಯ ಹಂತದ ಮತದಾನದ ಮೇಲೆ ಪ್ರಭಾವ ಬೀರುವ ಯತ್ನ ನಡೆಸಿದ್ದರೆ, ಮತ್ತೊಂದು ಕಡೆ ನಿತೀಶ್ ಕುಮಾರ್ ಅವರಿಗೆ ಮಗ್ಗುಲ ಮುಳ್ಳಾಗಿರುವ, ಕೇಂದ್ರದಲ್ಲಿ ಅದೇ ಎನ್ ಡಿಎ ಮೈತ್ರಿಯ ಭಾಗವಾಗಿದ್ದರೂ, ಬಿಹಾರದಲ್ಲಿ ಮಾತ್ರ ಪ್ರತ್ಯೇಕವಾಗಿ ಚುನಾವಣೆಗೆ ಧುಮುಕಿರುವ ಎಲ್ ಜೆಪಿಯ ನಾಯಕ ಚಿರಾಗ್ ಪಾಸ್ವಾನ್, ಮತ ಎಣಿಕೆ ಮುಗಿಯುತ್ತಲೇ ಜೆಡಿಯು ನಾಯಕ ತೇಜಸ್ವಿ ಯಾದವ್ ಮುಂದೆ ನಿತೀಶ್ ಕುಮಾರ್ ಕೈಮುಗಿದ ತಲೆಬಾಗಿ ನಿಂತುಕೊಳ್ಳುತ್ತಾರೆ ನೋಡುತ್ತಿರಿ ಎಂದು ಭರ್ಜರಿ ತಿರುಗೇಟು ನೀಡಿದ್ದಾರೆ.

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!
ಬಿಹಾರ ಚುನಾವಣೆ; ಬಿಜೆಪಿ ಪ್ರಣಾಳಿಕೆಗೆ ಕಾಂಗ್ರೆಸ್‌ ಮುಖಂಡರ ಟೀಕೆ

ಕೊನೆಯ ಪ್ರಚಾರ ಸಭೆಯಲ್ಲಿ ಗುರುವಾರ ಪುನಿಯಾದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು, “ಒಳ್ಳೆಯದು, ಒಳ್ಳೆಯ ರೀತಿಯಲ್ಲೇ ಕೊನೆಯಾಗುತ್ತದೆ. ನಾಡಿದ್ದು ಮತದಾನ ಇದೆ. ಇದು ನನ್ನ ಕೊನೆಯ ಚುನಾವಣೆ. ನೀವು ಜೆಡಿಯು ಅಭ್ಯರ್ಥಿಗೆ ಮತ ಹಾಕುತ್ತೀರೋ, ಇಲ್ಲವೋ? ಕಳೆದ ಹದಿನೈದು ವರ್ಷಗಳಿಂದ ಬಿಹಾರದ ಜನತೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಬಿಹಾರದ ಅಭಿವೃದ್ಧಿಗಾಗಿ ಇದೇ ಕೊನೆಯ ಬಾರಿ ನನಗೊಂದು ಮತ ನೀಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ” ಎಂದು ಜನರನ್ನು ಕೇಳುವ ಮೂಲಕ ಇದು ತಮ್ಮ ಕೊನೆಯ ಚುನಾವಣೆ ಎಂಬ ಸಂದೇಶ ನೀಡಿದ್ದಾರೆ.

ಹೀಗೆ ದಿಢೀರನೇ, ತಮ್ಮ 69ನೇ ವಯಸ್ಸಿನಲ್ಲೇ ರಾಜಕೀಯ ನಿವೃತ್ತಿಯ ಮಾತನಾಡಿರುವ ನಿತೀಶ್ ಕುಮಾರ್ ಅವರ ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸ ಒದಗಿಸಿದೆ. ಹಲವು ಕೋನದ ವಿಶ್ಲೇಷಣೆಗಳಿಗೆ ಈ ಹೇಳಿಕೆ ಇಂಬು ನೀಡಿದ್ದು, ಮುಖ್ಯವಾಗಿ ಪ್ರತಿಪಕ್ಷಗಳು, ಇದೊಂದು ಸೋಲಿನ ಭೀತಿಯಿಂದ ಹೊರಬಿದ್ದ ಹೇಳಿಕೆ. ಸೋಲು ನಿಶ್ಚಿತ ಎಂಬುದು ಗೊತ್ತಾಗುತ್ತಿದ್ದಂತೆ ಜನರನ್ನು ಭಾವನಾತ್ಮಕವಾಗಿ ಮರುಳುಮಾಡಲು ಇಂತಹ ಹೇಳಿಕೆ ನೀಡಲಾಗಿದೆ ಎಂದು ಟೀಕಿಸಿವೆ.

ಅಲ್ಲದೆ, ಅಲ್ಪಸಂಖ್ಯಾತ ಬಾಹುಳ್ಯದ ಸೀಮಾಚಲ ಪ್ರದೇಶದಲ್ಲಿ ಬಿಜೆಪಿ ನಾಯಕರು ಹಿಂದೂ ಮತಗಳ ಧ್ರುವೀಕರಣದ ಉದ್ದೇಶದಿಂದ ಮುಸ್ಲಿಮರ ವಿರುದ್ಧದ ಹೇಳಿಕೆಗಳನ್ನು ನೀಡಿದ್ದರೆ, ನಿತೀಶ್ ಕುಮಾರ್ ಮಾತ್ರ ತಮ್ಮದೇ ಮಿತ್ರಪಕ್ಷದ ನಾಯಕರ ವಿರುದ್ಧದ ನಿಲುವು ಪ್ರಕಟಿಸಿದ್ದಾರೆ. ಆ ಮೂಲಕ ಬಿಜೆಪಿಯೊಂದಿಗೆ ಮೈತ್ರಿ ಆಡಳಿತದಿಂದಾಗಿ ತಮ್ಮ ಸೆಕ್ಯುಲರ್ ಇಮೇಜಿಗೆ ಅಂಟಿರುವ ಕಳಂಕವನ್ನು ಕನಿಷ್ಟ ಸೀಮಾಚಲ ಪ್ರದೇಶಕ್ಕೆ ಸೀಮಿತವಾಗಿಯಾದರೂ ತೊಳೆದುಕೊಳ್ಳುವ ಯತ್ನ ಮಾಡಿದ್ದಾರೆ. ಆ ಪ್ರದೇಶದಲ್ಲಿ ಗುರುವಾರ ಪ್ರಚಾರ ನಡೆಸಿದ ಬಿಜೆಪಿಯ ಹಿಂದುತ್ವ ಐಕಾನ್ ಗಳಾದ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಅಕ್ರಮ ವಲಸಿಗರನ್ನು ಹೊರಗಟ್ಟುವ ಪ್ರಸ್ತಾಪ ಮಾಡಿ, ಆ ಬಗ್ಗೆ ಕಾಂಗ್ರೆಸ್ ಮತ್ತು ಆರ್ ಜೆಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಆ ಬಳಿಕ ಮಾತನಾಡಿದ ನಿತೀಶ್ ಕುಮಾರ್, ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ ಸೌಹಾರ್ದತೆ ಮತ್ತು ಶಾಂತಿಗೆ ಒತ್ತು ನೀಡಲಾಗಿದೆ ಎನ್ನುತ್ತಾ, “ಯಾರೂ ಕೂಡ ಯಾರನ್ನೂ ಹೊರಗಟ್ಟಲಾಗದು” ಎಂದಿದ್ದಾರೆ.

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!
ಬಿಹಾರ ಚುನಾವಣೆ: ನಿತೀಶ್‌ ಕುಮಾರ್‌ಗೆ ಮುಳುವಾಗಲಿದೆಯೇ ಆಡಳಿತ ವಿರೋಧಿ ಅಲೆ?

ಈ ಮಾತು ಕೂಡ ಒಂದು ಕಡೆ ಅಲ್ಪಸಂಖ್ಯಾತರ ಮನಗೆಲ್ಲುವ ಯತ್ನವಾಗಿದ್ದರೆ, ಮತ್ತೊಂದು ಕಡೆ ತಮ್ಮ ಕಳಚಿಬಿದ್ದಿದ್ದ ಸೆಕ್ಯುಲರ್ ವರ್ಚಸ್ಸನ್ನು ಮತ್ತೆ ಎತ್ತಿ ಕಟ್ಟಿಕೊಂಡು ಚುನಾವಣಾ ಫಲಿತಾಂಶದ ಬಳಿಕ ಸಂದರ್ಭ ಬಂದಲ್ಲಿ ಆರ್ ಜೆಡಿ ಮತ್ತು ಕಾಂಗ್ರೆಸ್ ನಂತಹ ಪಕ್ಷಗಳ ಜೊತೆ ಕೈಜೋಡಿಸುವ ಅವಕಾಶವನ್ನೂ ಮುಕ್ತವಾಗಿಟ್ಟುಕೊಳ್ಳುವ ತಂತ್ರಗಾರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅದಕ್ಕೆ ತಕ್ಕಂತೆ ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್, ಸಿಎಂ ನಿತೀಶ್ ಕುಮಾರ್ ಅವರ ಇದೇ ತಂತ್ರವನ್ನು ಗುರಿಯಾಗಿಟ್ಟುಕೊಂಡು, “ತಾವು ದಶಕಗಳ ಕಾಲ ಕಟುವಾಗಿ ಟೀಕಿಸಿಕೊಂಡು ಬಂದಿದ್ದ ಮೋದಿಯವರ ಎದುರು ಅಧಿಕಾರಕ್ಕಾಗಿ ಕೈಮುಗಿದು, ನಡಬಗ್ಗಿಸಿ ನಿಂತಿರುವ ನಿತೀಶ್ ಕುಮಾರ್ ಅವರು, ಚುನಾವಣಾ ಫಲಿತಾಂಶ ಬಂದ ದಿನ ಅದೇ ನಡಬಗ್ಗಿಸಿ, ಕೈಮುಗಿದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಮುಂದೆ ನಿಲ್ಲುತ್ತಾರೆ ನೋಡುತ್ತಿರಿ. ಸಂದರ್ಭ ಬಂದರೆ ಅವರು ಪಾಟ್ನಾಕ್ಕೆ ಹೋಗಿ ಲಾಲೂ ಪ್ರಸಾದ್ ಅವರ ಕಾಲಿಗೆ ಎರಗಲೂ ಹಿಂಜರಿಯುವುದಿಲ್ಲ. ನಿತೀಶ್ ಕುಮಾರ್ ಅವರ ಅಧಿಕಾರದ ಲಾಲಸೆ ಅಷ್ಟರಮಟ್ಟಿಗೆ ಇದೆ” ಎಂದು ವಾಗ್ದಾಳಿ ಮಾಡಿದ್ಧಾರೆ.

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!
ಟೀಕೆಗೆ ಗುರಿಯಾದ ಬಿಜೆಪಿಯ ಬಿಹಾರ ಚುನಾವಣಾ ಪ್ರಣಾಳಿಕೆ; ತೇಪೆ ಹಚ್ಚಲು ಮುಂದಾದ ಕೇಂದ್ರ ಸಚಿವ

ಜೊತೆಗೆ, “ರಣರಂಗದಿಂದ ನಾಯಕನೇ ಓಡಿಹೋದರೆ, ಅವನನ್ನು ನೆಚ್ಚಿಕೊಂಡ ಜನ ಏನು ಮಾಡಬೇಕು? ಇಂತಹ ಪಲಾಯನವಾದದಿಂದ ತಮ್ಮ ಮೇಲಿನ ಭ್ರಷ್ಟಾಚಾರ ಆರೋಪಗಳಿಂದ ಬಚಾವಾಗಬಹುದು ಎಂದು ಅವರು ಯೋಚಿಸಿದ್ದರೆ, ಅದು ಸುಳ್ಳು. ನಾನು ಅಂತಹ ಅವಕಾಶವನ್ನು ಅವರಿಗೆ ಕೊಡಲಾರೆ. ಮಾಡಿದ ತಪ್ಪಿಗೆ ಅವರು ಶಿಕ್ಷೆ ಅನುಭವಿಸಲೇಬೇಕು. ತನಿಖೆ ನಡೆದು ತಪ್ಪು ಸಾಬೀತಾದರೆ ಅವರು ಜೈಲಿಗೆ ಹೋಗಲೇಬೇಕು” ಎಂದು ಭ್ರಷ್ಟಾಚಾರ ತನಿಖೆಯಿಂದ ತಪ್ಪಿಸಿಕೊಳ್ಳುವ ಉಪಾಯ ಇದು ಎಂದು ಚಿರಾಗ್, ಸಿಎಂ ನಿತೀಶ್ ವಿರುದ್ಧ ಟೀಕಿಸಿದ್ದಾರೆ.

ಈ ನಡುವೆ, ನಿತೀಶ್ ಕುಮಾರ್ ಅವರ ಇದು ತಮ್ಮ ಕೊನೆಯ ಚುನಾವಣೆ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಆರ್ ಜೆಡಿ ನಾಯಕ ತೇಜಸ್ವಿ ಯಾದವ್, “ನಾವು ಇದನ್ನು ಬಹಳ ಹಿಂದಿನಿಂದಲೇ ಹೇಳುತ್ತಿದ್ದೆವು. ನಿತೀಶ್ ಕುಮಾರ್ ಜೀ ಅವರು ದಣಿದಿದ್ದಾರೆ. ನಿಶ್ಯಕ್ತರಾಗಿದ್ದಾರೆ. ಅವರಿಗೆ ಈಗ ಬಿಹಾರವನ್ನು ಆಳುವ, ಮುನ್ನಡೆಸುವ ಶಕ್ತಿಯಾಗಲೀ, ವಯಸ್ಸಾಗಲೀ ಇಲ್ಲ. ಈಗ ಮತದಾನದ ಕೊನೆಯ ಹಂತದ ಹೊತ್ತಿಗಾದರೂ ಅವರು ಈ ಸತ್ಯವನ್ನು ಅರಿತು, ರಾಜಕೀಯ ನಿವೃತ್ತಿಯ ಆಶಯ ವ್ಯಕ್ತಪಡಿಸಿದ್ದಾರೆ. ನಾವೂ ಇದನ್ನೇ ಹೇಳುತ್ತಿದ್ದೆವು” ಎಂದಿದ್ದಾರೆ.

ಬಿಹಾರ ಚುನಾವಣೆ: ಕೊನೆ ಹಂತದಲ್ಲಿ ರಾಜಕೀಯ ನಿವೃತ್ತಿಯ ದಾಳ ಪ್ರಯೋಗಿಸಿದ ನಿತೀಶ್!
ಬಿಹಾರ ಚುನಾವಣೆ: ಬಿಜೆಪಿಯಿಂದ ʼಕರೋನಾ ಯುದ್ಧ ಗೆಲ್ಲುತ್ತಿದ್ದೇವೆʼ ಎಂಬ ಸುಳ್ಳು ಪ್ರಚಾರ

ಕಾಂಗ್ರೆಸ್ ಕೂಡ ಪ್ರತಿಕ್ರಿಯಿಸಿದ್ದು, “ನಿತೀಶ್ ಜೀ ಅವರು ಮೂರನೇ ಹಂತದ ಮತದಾನಕ್ಕೆ ಮುಂಚೆಯೇ ಸೋಲೊಪ್ಪಿಕೊಂಡಿದ್ದಾರೆ. ಹಿಂದಿನ ಯಾರೊಬ್ಬರಿಗಿಂತ ನಿತೀಶ್ ಮತ್ತು ಮೋದಿಜೀ ಬಿಹಾರಕ್ಕೆ ದೊಡ್ಡ ಹಾನಿ ಮಾಡಿದ್ದಾರೆ. ನಿತೀಶ್ ಅವರು ಈಗ ನಿವೃತ್ತಿ ಹೊಂದುವುದು ಬಹಳ ಸೂಕ್ತ. ತಮ್ಮ ಅನುಭವವನ್ನು ಮಹಾಘಟಬಂಧನದ ಸಿಎಂ ಜೊತೆ ಹಂಚಿಕೊಂಡು ಬದಿಗೆ ಸರಿಯಲು ಇದು ಸಕಾಲ” ಎಂದು ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.

ಹಾಗಾಗಿ ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ತಂತ್ರವಾಗಿ ನಿತೀಶ್ ಕುಮಾರ್ ಪ್ರಯೋಗಿಸಿದ ರಾಜಕೀಯ ನಿವೃತ್ತಿಯ ದಾಳ, ನಿಜವಾಗಿಯೂ ಅವರು ಎಣಿಸಿದಂತೆ ಕೊನೆಯ ಹಂತದ ಮತದಾನದಲ್ಲಿ ವರವಾಗುವುದೋ ಅಥವಾ ಪ್ರತಿಪಕ್ಷಗಳ ಯುವ ನಾಯಕರು ನಿರೀಕ್ಷಿಸಿದಂತೆ ತಿರುಗುಬಾಣವಾಗುವುದೋ ಎಂಬುದನ್ನು ಕಾದುನೋಡಬೇಕಿದೆ. ನವೆಂಬರ್ 10ರಂದು ಹೊರಬೀಳಲಿರುವ ಫಲಿತಾಂಶ ಆ ಕುತೂಹಲಕ್ಕೆ ತೆರೆ ಎಳೆಯಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com