ಜಮ್ಮು-ಕಾಶ್ಮೀರ ನೀತಿಯಲ್ಲಿ ಮುಂದಿನ ಹಂತದ ಸುಧಾರಣೆಗೆ ಮುಂದಾದ ಮೋದಿ ಸರ್ಕಾರ

ಕಳೆದ ವಾರ ಚುನಾವಣೆಗೆ ಯೋಜನೆ ರೂಪಿಸಲು ಸರ್ಕಾರ ಸಮಿತಿಗಳನ್ನು ರಚಿಸುವುದರೊಂದಿಗೆ ಸ್ವ-ಸರ್ಕಾರವನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಹೆಜ್ಜೆಯಾದ ಜಿಲ್ಲಾ ಕೌನ್ಸಿಲ್ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ.
ಜಮ್ಮು-ಕಾಶ್ಮೀರ ನೀತಿಯಲ್ಲಿ ಮುಂದಿನ ಹಂತದ ಸುಧಾರಣೆಗೆ ಮುಂದಾದ ಮೋದಿ ಸರ್ಕಾರ

ಕಳೆದ ವರ್ಷದ ಆಗಸ್ಟ್ 5 ರಂದು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದು ಗೊಳಿಸಿದ ನಂತರ ಇದೀಗ ಮುಂದಿನ ಹಂತದ ʼಸುಧಾರಣೆಗೆʼ ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ಚಟುವಟಿಕೆಗಳು ಮತ್ತು ಬೆಳವಣಿಗೆಗಳು ಕೇಂದ್ರದ ಮೋದಿ ಸರ್ಕಾರದ ನೀತಿಯ ಮುಂದಿನ ಹಂತದಲ್ಲಿ ಬಹುಮುಖಿ ವಿಧಾನವನ್ನು ಮುಂದುವರಿಸಲಿದೆ ಎಂದು ಕಂಡು ಬರುತ್ತಿದೆ. ಕೇಂದ್ರ ಆಡಳಿತವು ಜಿಲ್ಲಾ ಮಂಡಳಿಗಳ ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದೆ, ಭೂ ಸುಧಾರಣಾ ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ, ಶಾಶ್ವತ ನಿವಾಸ ಪ್ರಮಾಣಪತ್ರಗಳ ದೀರ್ಘಕಾಲದ ಸಮಸ್ಯೆಯನ್ನು ಬಗೆಹರಿಸಿದೆ ಮತ್ತು ಕಾಶ್ಮೀರದ ಎರಡು ಮಾಧ್ಯಮಗಳು,ಕನಿಷ್ಟ 6 NGO ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ನಿರ್ಬಂಧಿಸಿದೆ.

ಮಾಜಿ ಕೇಂದ್ರ ಸಚಿವ ಮನೋಜ್ ಶರ್ಮಾ ಅವರನ್ನು ಲೆಫ್ಟಿನೆಂಟ್-ಗವರ್ನರ್ ಆಗಿ ನೇಮಕ ಮಾಡುವ ಮೂಲಕ ಪ್ರಾರಂಭವಾದ ಕಾಶ್ಮೀರ ನೀತಿಯ ‘ಮೂರನೇ ಹಂತ’ದ ಮೂರು ಪ್ರಮುಖ ಅಂಶಗಳು ರಾಜಕೀಯ ಸುಧಾರಣೆ, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಮತ್ತು ಆಡಳಿತ ಮತ್ತು ಕಾನೂನುಗಳ ಸುಧಾರಣೆಗಳು ಆಗಿವೆ. ಹಿಂದಿನ ವಿಶೇಷ ಸ್ಥಾನಮಾನವನ್ನು ನೀಡಿದ ಆರ್ಟಿಕಲ್ 370 ಅನ್ನು ತಿದ್ದುಪಡಿ ಮಾಡಿದಾಗ ಮತ್ತು ನಿವಾಸಿಗಳಿಗೆ ಮಾತ್ರ ಆಸ್ತಿ ಖರೀದಿಸಲು ಅವಕಾಶ ನೀಡುವ ಸೆಕ್ಷನ್ 35 ಎ ಅನ್ನು ರದ್ದುಗೊಳಸುವ ಮೂಲಕ ಈ ನೀತಿಯ ಮೊದಲ ಹಂತವು ಕಳೆದ ಆಗಸ್ಟ್‌ನಲ್ಲಿ ಪ್ರಾರಂಭವಾಯಿತು. ನಂತರ, ಎರಡನೇ ಹಂತದಲ್ಲಿ ಮೋದಿ ಸರ್ಕಾರ ಕೇಂದ್ರ ಸರ್ಕಾರದ ಅಧಿಕಾರಿ ಜಿ.ಸಿ. ಮುರ್ಮು ಅವರನ್ನು ಹೊಸದಾಗಿ ರಚಿಸಿದ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಿ, ಫೆಡರಲ್ ವ್ಯವಸ್ಥೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನದ ಅವಶ್ಯಕತೆಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಪ್ರಕ್ರಿಯೆಗಳು ಮತ್ತು ಸಾಂಸ್ಥಿಕ ರಚನೆಗಳನ್ನು ಪುನರ್ ರಚಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಕೆಲವು ರಾಜಕೀಯ ಸಂಘಟನೆಗಳು ಒಟ್ಟಿಗೆ ಸೇರಿಕೊಂಡು ರೂಪಿಸಿರುವ ‘ಗುಪ್ಕರ್ ಘೋಷಣೆ’ ಮೋದಿ ಸರ್ಕಾರವನ್ನು ಗೊಂದಲಗೊಳಿಸಿಲ್ಲ ಎನ್ನುವ ರೀತಿಯ ಬೆಳವಣಿಗೆಗಳು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿವೆ. ಈ ರಾಜಕೀಯ ಪಕ್ಷಗಳು ಸಂವಿಧಾನದ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಪಕ್ಷಗಳು ಒತ್ತಾಯಿಸಿವೆ.

ಆದಾಗ್ಯೂ, ಮೋದಿ ಸರ್ಕಾರ ರಾಜಕೀಯ ಸುಧಾರಣಾ ನೀತಿಯೊಂದಿಗೆ ಮುಂದುವರಿಯಲು ನಿರ್ಧರಿಸಿದೆ. ಕಳೆದ ವಾರ ಚುನಾವಣೆಗೆ ಯೋಜನೆ ರೂಪಿಸಲು ಸರ್ಕಾರ ಸಮಿತಿಗಳನ್ನು ರಚಿಸುವುದರೊಂದಿಗೆ ಸ್ವ-ಸರ್ಕಾರವನ್ನು ಖಚಿತಪಡಿಸಿಕೊಳ್ಳುವ ಪ್ರಮುಖ ಹೆಜ್ಜೆಯಾದ ಜಿಲ್ಲಾ ಕೌನ್ಸಿಲ್ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಗುಪ್ಕರ್ ಘೋಷಣೆಯನ್ನು ರಾಜಕೀಯ ನಾಯಕರು ಮಾಡಿದ್ದಾರೆ, ಅವರು ತಮ್ಮ ಪಕ್ಷಗಳನ್ನು ಕುಟುಂಬ ಪಕ್ಷಗಳನ್ನಾಗಿ ಪರಿವರ್ತಿಸಿದ್ದರಿಂದ ಪ್ರಸ್ತುತತೆಯನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದರಿಂದ ಆಕ್ರೋಶಿತವಾಗಿರುವ ಭಯೋತ್ಪಾದಕ ಸಂಘಟನೆಗಳು ತಮ್ಮ ಹತಾಶೆಯನ್ನು ರಾಜಕೀಯ ಕಾರ್ಯಕರ್ತರ ಮೇಲೆ, ವಿಶೇಷವಾಗಿ ಭಾರತೀಯ ಜನತಾ ಪಕ್ಷದ ಮೇಲೆ ಹಲ್ಲೆ ಮತ್ತು ಹತ್ಯೆಯ ಮೂಲಕ ವ್ಯಕ್ತಪಡಿಸುತ್ತಿವೆ. ಆದರೆ ಭದ್ರತಾ ಸಂಸ್ಥೆಯ ಮೂಲಗಳು, ಪಡೆಗಳು ಭಯೋತ್ಪಾದಕರ ಮೇಲೆ ತೀವ್ರವಾಗಿ ಕರ‍್ಯಾಚರಣೆ ನಡೆಸುತ್ತಿವೆ ಮತ್ತು ಕೇಂದ್ರ ದ ಸಂಪರ‍್ಣ ಬೆಂಬಲವನ್ನು ಹೊಂದಿವೆ. ಇದಲ್ಲದೆ, ಕಾಶ್ಮೀರದಲ್ಲಿ ಈಗ ಸಕ್ರಿಯ ಭಯೋತ್ಪಾದಕರ ಸಂಖ್ಯೆ ಮತ್ತು ಸ್ಥಳೀಯ ನೇಮಕಾತಿ ಸಾರ್ವಕಾಲಿಕವಾಗಿ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಹಲವಾರು ಪ್ರಮುಖ ಕಾನೂನು ಮತ್ತು ಆಡಳಿತಾತ್ಮಕ ಸುಧಾರಣೆಗಳನ್ನು ಸಹ ತರಲಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಇಂತಹ ಹೆಚ್ಚಿನ ಕ್ರಮಗಳು ನಡೆಯುತ್ತಿವೆ. ದೀರ್ಘಕಾಲದಿಂದ ಬಾಕಿ ಇರುವ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ಒದಗಿಸುವುದು, ಕಾಶ್ಮೀರಿ, ಡೋಗ್ರಿ ಮತ್ತು ಹಿಂದಿಯನ್ನು ಅಧಿಕೃತ ಭಾಷೆಗಳನ್ನು ಮಾಡುವುದು ಮತ್ತು ಅಕ್ಟೋಬರ್ 27 ರಂದು ಹೊಸ ಭೂ ಕಾನೂನುಗಳನ್ನು ಪರಿಚಯಿಸಿದ್ದು ಮೋದಿ ಸರ್ಕಾರ ಕೈಗೊಂಡ ಕೆಲವು ಪ್ರಮುಖ ಕ್ರಮಗಳಾಗಿವೆ.

ಹೊಸ ಭೂ ಸುಧಾರಣಾ ಕಾನೂನಿನ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಕೃಷಿಯೇತರ ಭೂಮಿಯನ್ನು ಭಾರತದ ಯಾವನೇ ಪ್ರಜೆ ಖರೀದಿಸಬಹುದಾಗಿದೆ. ಕಾಶ್ಮೀರ ಮೂಲದ ಹಿರಿಯ ಪತ್ರಕರ್ತ ಸಂತ ಕುಮಾರ್ ವರ್ಮಾ ಈ ಕ್ರಮದ ಮಹತ್ವವನ್ನು ಒತ್ತಿಹೇಳಿದ್ದಾರೆ. ಈ ನೂತನ ಕಾನೂನುಗಳ ಅಡಿಯಲ್ಲಿ, ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಕಾಶ್ಮೀರದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳನ್ನು ತೆರೆಯಲು ಕಾರಣವಾಗಬಹುದು. ಪ್ರಸ್ತುತ ಜಮ್ಮು ಕಾಶ್ಮೀರದಲ್ಲಿ ಯಾವುದೇ ಖಾಸಗಿ ವಿಶ್ವವಿದ್ಯಾಲಯಗಳು ಅಥವಾ ಕಾಲೇಜುಗಳಿಲ್ಲ. ವೃತ್ತಿಪರ ಅಥವಾ ತಾಂತ್ರಿಕ ಶಿಕ್ಷಣಕ್ಕಾಗಿ ಶಾಲಾ ಹಂತದಿಂದ ವಿಶ್ವವಿದ್ಯಾಲಯದವರೆಗೆ ಸಾವಿರಾರು ವಿದ್ಯಾರ್ಥಿಗಳು ಕಾಶ್ಮೀರದಿಂದ ಹೊರಗೆ ಹೋಗುತ್ತಾರೆ. ಅವರನ್ನು ನೆರೆಯ ರಾಜ್ಯಗಳಾದ ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾಖಂಡ, ದೆಹಲಿ ಅಥವಾ ಮುಂಬೈ ಮತ್ತು ಬೆಂಗಳೂರಿನಂತಹ ದೂರದ ಸ್ಥಳಗಳಲ್ಲಿ ಕಾಣಬಹುದು ಎಂದು ಅವರು ಹೇಳಿದರು.

ಅಂತಹ ಹೆಚ್ಚಿನ ಕಾನೂನು, ಆಡಳಿತಾತ್ಮಕ ಮತ್ತು ಇತರ ಸುಧಾರಣೆಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿದೆ. ಆಡಳಿತ ಮತ್ತು ಸಾಮಾನ್ಯ ಜನರ ನಡುವಿನ ಅಂತರವು ದಶಕಗಳ ‘ಕಾಲದ ದುರ್ಬಳಕೆ ಮತ್ತು ಸಂಪನ್ಮೂಲಗಳ ದುರುಪಯೋಗ’ದಿಂದ ಉಂಟಾಗಿದೆ. ಈ ಅವ್ಯವಸ್ಥೆಯನ್ನು ಸೃಷ್ಟಿಸಿದವರು ‘ಗುಪ್ಕರ್ ಘೋಷಣೆ’ ಮಾಡುತ್ತಿದ್ದಾರೆ ಆದರೆ ಅವುಗಳು ಹೆಚ್ಚು ಅಪ್ರಸ್ತುತವಾಗುತ್ತಿವೆ ಎಂದು ತೋರುತ್ತದೆ ಮತ್ತು ಈ ಬದಲಾವಣೆಗಳಿಂದ ಮೋದಿ ಸರ್ಕಾರವು ಯೋಜಿಸಿದಂತೆ ಕಾಶ್ಮೀರ ನೀತಿಯನ್ನು ಹೊರತರುತ್ತಿದೆ ಎಂದು ನಿರೀಕ್ಷಿಸಬಹುದು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com