18 ವರ್ಷಗಳ ನಂತರ ಈಶಾನ್ಯ ರಾಜ್ಯಗಳಲ್ಲಿ ಮತ್ತೆ ಕಾಣಿಸಿಕೊಂಡ ಹಫ್ತಾ ವಸೂಲಿ ನೋಟೀಸ್..!

ಈ ಸಂಘಟನೆಯ 88 ಸದಸ್ಯರು ಸರ್ಕಾರದ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತರಾಗಿದ್ದರು. ಆದರೆ ಇದರ ಒಂದು ಸಣ್ಣ ಬಣ ಇನ್ನೂ ಸಕ್ರಿಯವಾಗಿದೆ ಎಂದು ನಂಬಲಾಗಿದೆ.
18 ವರ್ಷಗಳ ನಂತರ ಈಶಾನ್ಯ ರಾಜ್ಯಗಳಲ್ಲಿ ಮತ್ತೆ ಕಾಣಿಸಿಕೊಂಡ ಹಫ್ತಾ ವಸೂಲಿ ನೋಟೀಸ್..!

ನಾವು ಪ್ರಜಾ ಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಉತ್ತಮ ಆಡಳಿತ ಪಡೆದಿದ್ದರೂ ಕೆಲವೊಮ್ಮೆ ಸರ್ಕಾರಕ್ಕೂ ಸವಾಲೊಡ್ಡುವ ಸಮಾಜ ವಿರೋಧಿ ಶಕ್ತಿಗಳು ಜನರ ನೆಮ್ಮದಿ ಭಂಗ ಮಾಡುತ್ತಿವೆ. ನಮ್ಮ ದೇಶದ ಕೆಲವೆಡೆಗಳಲ್ಲಿ ಇರುವ ಭಯೋತ್ಪಾದಕರ, ನಕ್ಸಲ್ ಹಾವಳಿ ಮತ್ತು ವಿಚ್ಚಿದ್ರಕಾರಿ ಶಕ್ತಿಗಳು ಈಗಲೂ ಹಲವೆಡೆ ಜನರಿಗೆ ತೊಂದರೆ ಕೊಡುತ್ತಿವೆ. ಸರ್ಕಾರ, ಪೋಲೀಸ್ ವ್ಯವಸ್ಥೆ ಬಲವಾಗಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಭಯವನ್ನು ಹುಟ್ಟು ಹಾಕುತ್ತಿವೆ. ಸುಮಾರು ಎರಡು ದಶಕಗಳಿಗೂ ಮೊದಲು ನಮ್ಮ ಈಶಾನ್ಯ ರಾಜ್ಯಗಳಲ್ಲಿ ಕೂಡ ಅನೇಕ ಉಗ್ರ‌ ಸಂಘಟನೆಗಳು ಕಾರ್ಯಚರಿಸುತಿದ್ದವು. ಈಶಾನ್ಯದ 4-5 ರಾಜ್ಯಗಳಾದ ಮಣಿಪುರ, ತ್ರಿಪುರಾ, ಮಿಜೋರಾಂ, ನಾಗಾಲ್ಯಾಂಡ್, ಅಸ್ಸಾಂ ರಾಜ್ಯಗಳಲ್ಲಿ ಈ ಉಗ್ರ ಸಂಘಟನೆಗಳು ಹಿಂಸೆಯ ಮೂಲಕ ತಮ್ಮ ಬೇಡಿಕೆಯನ್ನು ಸರ್ಕಾರದ ಮೇಲೆ ಹೇರುತಿದ್ದವು.

ನಂತರ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಈ ಸಂಘಟನೆಗಳ ಸದಸ್ಯರು ಶಸ್ತ್ರಾಸ್ತ್ರ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬಂದರು. ಮೊದಲೆಲ್ಲ ಈ ಸಂಘಟನೆಗಳು ನಾಗರಿಕರಿಗೆ ಬೆದರಿಕೆ ಒಡ್ಡುವ ಮೂಲಕ ಅವರಿಂದಲೇ ತಿಂಗಳಿಗೆ ಇಂತಿಷ್ಟು ಎಂದು ಹಫ್ತಾ ವಸೂಲಿ ಮಾಡುತಿದ್ದವು. ನಂತರ ಈ ನಿಷೇಧಿತ ಸಂಘಟನೆಗಳು ಕಣ್ಮರೆ ಆಗಿದ್ದವು. ಇದೀಗ ಮೂರು ದಿನಗಳ ಹಿಂದಷ್ಟೆ ಹಫ್ತಾ ನೀಡಬೇಕೆಂಬ ನೋಟೀಸ್ ಗಳು ಉತ್ತರ ತ್ರಿಪುರದ ಜಂಪುಯಿ ಬೆಟ್ಟಗಳ ಮೇಲಿರುವ ವಾಂಗ್ಮುನ್ ಗ್ರಾಮದಲ್ಲಿ ಮಿಜೋರಾಂನ ರಾಜ್ಯದ ಗಡಿಯುದ್ದಕ್ಕೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2002 ನೇ ಇಸವಿಯ ಈ ಸುಲಿಗೆ ನೋಟಿಸ್‌ಗಳನ್ನು ವಾಂಗ್ಮುನ್ ಗ್ರಾಮ ಪರಿಷತ್ತಿನ ಅಧ್ಯಕ್ಷ ಜೊಸಾಂಗ್ಲಿಯಾನ ಅವರು ಪಡೆದಿದ್ದಾರೆ. ನಿಷೇಧಿತ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ (NLFT)ದ ಸ್ವಯಂ ಘೋಷಿತ ಉಪ ಜಿಲ್ಲಾಧಿಕಾರಿ ಬವ್ಸಕಂಗ್ ಎಂಬಾತ ಸಹಿ ಮಾಡಿದ್ದು ಗ್ರಾಮದ ಪ್ರತಿ ಮನೆಯಿಂದ 200 ರೂಪಾಯಿಗಳನ್ನು ನೀಡಬೇಕೆಂದು ತಿಳಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ವಾಂಗ್ ಮುನ್ ಪೋಲೀಸ್ ಠಾಣೆಯ ಅಧಿಕಾರಿ ಶ್ಯಾಮಲ್ ಮುರ್ ಸಿಂಗ್ ಅವರು ತಾವು ಎರಡು ನೋಟಿಸ್‌ಗಳ ನೈಜತೆಯನ್ನು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇವೆ, ಜತೆಗೆ ನಮ್ಮ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದಾರೆ.

12 ಮಾರ್ಚ್‌ 1989 ರಂದು ರಚನೆಯಾದ NLFT ಸ್ವತಂತ್ರ ತ್ರಿಪುರವನ್ನು ರೂಪಿಸುವ ಗುರಿಯನ್ನು ಹೊಂದಿದೆ. 1997 ರಲ್ಲಿ, ಈ ಸಂಘಟನೆಯನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ಮತ್ತು ನಂತರ ಭಯೋತ್ಪಾದನೆ ತಡೆ ಕಾಯ್ದೆಯಡಿ ನಿಷೇಧಿಸಲಾಯಿತು. 2005 ಮತ್ತು 2015 ರ ನಡುವೆ ನಡೆದ ಅನೇಕ ಹಿಂಸಾತ್ಮಕ ಚಟುವಟಿಕೆಗಳಿಗೆ ಈ ಸಂಘಟನೆ ಕಾರಣವಾಗಿದ. ಒಟ್ಟು 317 ಹಿಂಸಾತ್ಮಕ ಘಟನೆಗಳು, 28 ಭದ್ರತಾ ಪಡೆಗಳು ಮತ್ತು 62 ನಾಗರಿಕರ ಸಾವಿಗೆ ಇದು ಕಾರಣವಾಗಿವೆ. ಸರ್ಕಾರವು 2015 ರಲ್ಲಿ ಎನ್ಎಲ್ಎಫ್‌ಟಿಯೊಂದಿಗೆ ಶಾಂತಿ ಮಾತುಕತೆಗಳನ್ನು ನಡೆಸಿದ ಪರಿಣಾಮವಾಗಿ ಈ ಗುಂಪು 2016 ರಿಂದ ಯಾವುದೇ ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸಿಲ್ಲ. ಕಳೆದ ವರ್ಷ, ಈ ಸಂಘಟನೆಯ 88 ಸದಸ್ಯರು ಸರ್ಕಾರದ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗತರಾಗಿದ್ದರು. ಆದರೆ ಇದರ ಒಂದು ಸಣ್ಣ ಬಣ ಇನ್ನೂ ಸಕ್ರಿಯವಾಗಿದೆ ಎಂದು ನಂಬಲಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಈ ರೀತಿಯ ಬಂಡುಕೋರ ಗುಂಫುಗಳಿದ್ದರೆ ನಮ್ಮ ನೆರೆಯ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಮಾವೋ ನಕ್ಸಲರ ಗುಂಪು ಸಕ್ರಿಯವಾಗಿದೆ. ಈ ಗುಂಪುಗಳು ಅರಣ್ಯದೊಳಗೆ ತಮ್ಮ ಡೇರೆಗಳನ್ನು ಹಾಕಿಕೊಂಡು ಪದೇ ಪದೇ ಸ್ಥಳ ಬದಲಿಸುತ್ತಾ ಜನರಿಂದ ಹಫ್ತಾ ವಸೂಲಿ ಮಾಡುತ್ತಿವೆ. ಪೋಲೀಸರು ಮತ್ತು ಭದ್ರತಾ ಪಡೆಗಳು ಇವರೊಂದಿಗೆ ಆಗಾಗ ಮುಖಾಮುಖಿ ಆಗುವುದೂ ಸಾಮಾನ್ಯವೇ ಆಗಿದ್ದು ಆಗ ಎರಡೂ ಕಡೆಗಳಲ್ಲಿ ಸಾವುನೋವುಗಳಾಗುತ್ತವೆ. ನವೆಂಬರ್ ಮೂರರಂದು ಗುಂಡ್ಲುಪೇಟೆ ಸಮೀಪದ ಅರಣ್ಯದಲ್ಲಿ ಮಾವೋ ವಾದಿ ನಕ್ಸಲ್‌ ಒಬ್ಬನನ್ನು ಪೋಲೀಸರು ಹೊಡೆದುರುಳಿಸಿದ್ದಾರೆ. ಈತ ಕೇರಳದ ವೈನಾಡ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತಿದ್ದ ಪೋಲೀಸ್ ಪಡೆಗಳೊಂದಿಗೆ ಘರ್ಷಣೆ ನಡೆಸಿದ ಪರಿಣಾಮ ಕೊಲ್ಲಲ್ಪಟ್ಟಿದ್ದಾನೆ. ನಕ್ಸಲ್ ಸಮಸ್ಯೆ ಕರ್ನಾಟಕ, ತಮಿಳುನಾಡಿನಲ್ಲಿ ಇದ್ದು ಕೇರಳದಲ್ಲಿ ಸ್ವಲ್ಪ ಹೆಚ್ಚೇ ಇದೆ.

ಕೇರಳ ಮತ್ತು ಕರ್ನಾಟಕ ರಾಜ್ಯಗಳ ಪೋಲೀಸ್ ಇಲಾಖೆಗಳು ನಕ್ಸಲ್ ನಿಗ್ರಹ ಪಡೆಗಳನ್ನೂ ಹೊಂದಿವೆ. ಈ ನಕ್ಸಲ್ ಪಡೆಗಳು ಜನರಿಗೆ ಹೆಚ್ಚಿನ ತೊಂದರೆ ಕೊಡದಿದ್ದರೂ ಪಶ್ಚಿಮ ಘಟ್ಟಗಳ ದಟ್ಟಾರಣ್ಯಗಳಲ್ಲಿ ಸೇರಿಕೊಂಡು ಅಪರೂಪಕ್ಕೊಮ್ಮೆ ದುಷ್ಕೃತ್ಯ ನಡೆಸುವಲ್ಲಿ ನಿರತವಾಗಿವೆ. ಆಗೀಗ ಇವು ಪತ್ರಿಕೆಗಳ ಸುದ್ದಿ ಆಗುತ್ತವೆ ನಂತರ ತಣ್ಣಗಾಗುತ್ತದೆ. ಉಡುಪಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಕೇಂದ್ರ ಕಚೇರಿಯೂ ಇದ್ದು ಕರಾವಳಿ ಭಾಗದಲ್ಲಿ ನಕ್ಸಲ್ ಚಟುವಟಿಕೆ ಇದೆ. ನಿನ್ನೆ ಪೋಲೀಸರ ಗುಂಡಿಗೆ ಬಲಿಯಾದ ನಕ್ಸಲನ ಗುರುತು ಇನ್ನೂ ಪತ್ತೆ ಆಗಿಲ್ಲ.

ಸಾಮಾನ್ಯವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ನಕ್ಸಲರು ನಕಲಿ ಹೆಸರುಗಳನ್ನು ಹೊಂದಿರುತ್ತಾರೆ. ಪೋಲೀಸರು ಒಂದು ರಾಜ್ಯದ ಅರಣ್ಯದಲ್ಲಿ ಶೋಧ ಕಾರ್ಯ ಕೈಗೊಂಡಾಗ ಇವರು ಇನ್ನೊಂದು ರಾಜ್ಯದ ಅರಣ್ಯಕ್ಕೆ ಪರಾರಿ ಆಗುತ್ತಾರೆ. ನಮ್ಮ ಸಾಮಾಜಿಕ ವ್ಯವಸ್ಥೆಗೆ, ದೌರ್ಜನ್ಯ ಕ್ಕೆ ಆಡಳಿತಶಾಹಿ ವ್ಯವಸ್ಥೆಯನ್ನು ವಿರೋಧಿಸಿ ನಕ್ಸಲ್ ಸಿದ್ದಾಂತದ ಕಡೆಗೆ ಯುವಕರು ಆಕರ್ಷಿತರಾಗುತ್ತಾರೆ. ಇವರ ಮೇಲೆ ಪೋಲೀಸ್ ಮೊಕದ್ದಮೆಗಳು ವಿಚಾರಣೆಗೆ ಬಾಕಿ ಇರುತ್ತವೆ. ಬಹುತೇಕ ನಕ್ಸಲರು ರಾತ್ರಿ ವೇಳೆ ಸಂಚಾರ ಮಾಡುತ್ತಾರೆ. ಸದಾ ಸಶಸ್ತ್ರ ರಾಗಿರುವ ಇವರು ನಾಗರಿಕರ ಮೇಲೆ ಧಾಳಿ ನಡೆಸಿದ ಘಟನೆಗಳು ಕಡಿಮೆ ಆಗಿದ್ದರೂ ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಆದ್ದರಿಂದ ಸರ್ಕಾರ ಇವರ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳುತ್ತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com