ಅರ್ನಾಬ್‌ ಬಂಧನ: ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರದ ಮಂತ್ರಿಗಳು

ಕೇಂದ್ರ ಮಂತ್ರಿಗಳು ಅರ್ನಾಬ್‌ ಬೆಂಬಲಕ್ಕೆ ನಿಂತರೆ, ಆತ್ಮಹತ್ಯೆ ಮಾಡಿಕೊಂಡ ಡಿಸೈನರ್‌ ಅನ್ವಯ್‌ ಮಗಳು ಆದ್ನ್ಯಾ ಮುಂಬೈ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅರ್ನಾಬ್‌ ಬಂಧನ: ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರದ ಮಂತ್ರಿಗಳು

ರಿಪಬ್ಲಿಕ್‌ ಟಿವಿ ಮುಖ್ಯ ಸಂಪಾದಕ ಅರ್ನಾಬ್‌ ಗೋಸ್ವಾಮಿಯನ್ನು ಮುಂಬೈ ಪೊಲೀಸರು ಬಂಧಿಸಿದ ನಂತರ ಸಂಪೂರ್ಣ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿದೆ. ಕೇಂದ್ರ ಸರ್ಕಾರದ ಮಂತ್ರಗಳಿಂದ ಹಿಡಿದು, ಸಂಪಾದಕರ ಸಂಘಗಳು ಅರ್ನಾಬ್‌ ಬಂಧನವನ್ನು ಖಂಡಿಸಿವೆ. ಮಹಾರಾಷ್ಟ್ರ ಸರ್ಕಾರ ಅರ್ನಾಬ್‌ ಗೋಸ್ವಾಮಿಯನ್ನು ಬಂಧಿಸಿದ್ದು ಪತ್ರಿಕಾ ಸ್ವಾತಂತ್ರ್ಯದ ಹರಣ ಎಂಬ ಮಾತುಗಳು ಎಲ್ಲೆಡೆಯಿಂದ ಕೇಳಿ ಬರುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಂಧನದ ನಂತರ ಕೇಂದ್ರ ಮಂತ್ರಿಗಳು ಸಾಲು ಸಾಲಾಗಿ ಅರ್ನಾಬ್‌ಗೆ ಬೆಂಬಲ ಘೊಷಿಸಿದ್ದಾರೆ. ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರು “ಕಾಂಗ್ರೆಸ್‌ ಮತ್ತು ಇದರ ಮಿತ್ರ ಪಕ್ಷಗಳು ಪ್ರಜಾಪ್ರಭುತ್ವವನ್ನು ಮತ್ತೆ ನಾಚಿಕೆಗೀಡು ಮಾಡಿದೆ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಹಾಗೂ ಅದರ ಭಾಗವಾಗಿರುವ ರಿಪಬ್ಲಿಕ್‌ ಟಿವಿ ಮತ್ತು ಅರ್ನಾಬ್‌ ಗೋಸ್ವಾಮಿ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿರುವುದು, ಅಧಿಕಾರದ ದುರುಪಯೋಗ. ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಈ ದಾಳಿಯನ್ನು ಖಂಡಿಸಬೇಕು ಮತ್ತು ಖಂಡಿಸುತ್ತೇವೆ,” ಎಂದು ಹೇಳಿದ್ದಾರೆ.

ಇವರ ನಂತರದ ಸರದಿ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಅವರದಾಗಿತ್ತು. “ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಮಾಧ್ಯಮದೊಂದಿಗೆ ಈ ರೀತಿ ವ್ಯವಹರಿಸಬಾರದು. ತುರ್ತು ಪರಿಸ್ಥಿತಿಯಲ್ಲಿ ಮಾಧ್ಯಮಗಳನ್ನು ನರಿವಹಿಸಿದ ರೀತಿ ಇಂದು ಮತ್ತೆ ನೆನಪಿಗೆ ಬಂದಿದೆ,” ಎಂದು ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

ವಿದೇಶಾಂಗ ಇಲಾಖೆಯ ಸಚಿವರಾಗಿರುವ ಜೈಶಂಕರ್‌ ಪ್ರಸಾದ್‌ ಅವರು “ತುರ್ತು ಪರಿಸ್ಥಿತಿಯ ಕರಿನೆರಳು! ಅರ್ನಾಬ್‌ ಮೇಲಿನ ದಾಳಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ. ಸ್ವಾತಂತ್ರ್ಯದ ಮೇಲೆ ನಿಜವಾದ ನಂಬಿಕೆ ಇರುವವರು ಈಗ ಮಾತನಾಡಲೇಬೇಕು,” ಎಂದಿದ್ದಾರೆ.

ಸ್ಮೃತಿ ಇರಾನಿ “ಪತ್ರಿಕಾ ಸ್ವಾತಂತ್ರ್ಯದಲ್ಲಿ ಇರುವವರು ಇಂದು ಅರ್ನಾಬ್‌ನ ಕುರಿತು ಮಾತನಾಡದೇ ಇದ್ದರೆ, ಫ್ಯಾಸಿಸಂ ಅನ್ನು ಬೆಂಬಲಿಸಿದಂತಾಗುತ್ತದೆ. ನೀವು ಅವರನ್ನು ಇಷ್ಟಪಡದೇ ಇರಬಹುದು, ಅವರ ವಿಚಾರಗಳು ನಿಮಗಿಂತ ಭಿನ್ನವಾಗಿರಬಹುದು. ಆದರೆ, ಇಂದು ನೀವು ಸುಮ್ಮನಿದ್ದರೆ ಈ ದಾಳಿಯನ್ನು ಸಮರ್ಥಿಸಿದಂತಾಗುತ್ತದೆ. ಮುಂದೆ ಈ ಪರಿಸ್ಥಿತಿಯಲ್ಲಿ ನೀವೇ ಇದ್ದರೆ ಯಾರು ಮಾತನಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಬಿಹಾರದ ಉಪಮುಖ್ಯಮಂತ್ರಿಯಾಗಿರುವ ಸುಶೀಲ್‌ ಕುಮಾರ್‌ ಮೋದಿ ಅವರು “ಅರ್ನಾಬ್‌ ಮೇಲಿನ ದಾಳಿಯು ಮಾಧ್ಯಮದಲ್ಲಿ ರಾಷ್ಟ್ರೀಯವಾದಿ ದನಿಯನ್ನು ಮಟ್ಟಹಾಕುವಂತಹ ಕೆಲಸ. ಕಾಂಗ್ರೆಸ್‌ನ ತುರ್ತುಪರಿಸ್ಥಿತಿಯ ಮನಸ್ಥಿತಿ, ಇನ್ನೂ ಹಾಗೆಯೇ ಉಳಿದಿದೆ,” ಎಂದು ಹೇಳಿದ್ದಾರೆ.

ಎಡಿಟರ್ಸ್‌ ಗಿಲ್ಡ್‌ನಿಂದ ಖಂಡನೆ:

ಅರ್ನಾಬ್‌ ಗೋಸ್ವಾಮಿ ಅವರ ಬಂಧನವನ್ನು ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಖಂಡಿಸಿದೆ. “ಅರ್ನಾಬ್‌ ಗೋಸ್ವಾಮಿ ಅವರನ್ನು ಬಂಧಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಈ ಬೆಳವಣಿಗೆಯನ್ನು ನಾವು ಖಂಡಿಸುತ್ತೇವೆ. ಅವರೊಂದಿಗೆ ಅನುಚಿತವಾಗಿ ನಡೆದುಕೊಳ್ಳದಂತೆ ಮಹಾರಾಷ್ಟ್ರದ ಮುಖ್ಯಮಂತ್ರಿಯವರಲ್ಲಿ ನಾವು ಕೇಳಿಕೊಳ್ಳುತ್ತೇವೆ ಮತ್ತು, ಮಾಧ್ಯಮ ವರದಿಗಾರಿಕೆಯ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರಬಾರದೆಂದು ನಾವು ಆಗ್ರಹಿಸುತ್ತೇವೆ,” ಎಂದು ಹೇಳಿದೆ.

ಏನಿದು ಪ್ರಕರಣ:

2018ರ ಅನ್ವಯ್‌ ಮಧುಕರ್‌ ನಾಯ್ಕ್‌ ಎಂಬವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಾಬ್‌ ಗೋಸ್ವಾಮಿ ಅವರನ್ನು ಬಂಧಿಸಲಾಗಿದೆ. ವೃತ್ತಿಯಿಂದ ಡಿಸೈನರ್‌ ಆಗಿದ್ದ ಅನ್ವಯ್‌ ಅವರಿಗೆ ರಿಪಬ್ಲಿಕ್‌ ಟಿವಿಯಿಂದ ಬರಬೇಕಾಗಿದ್ದ ಹಣವನ್ನು ನೀಡದೇ ಸತಾಯಿಸಿದ್ದರಿಂದ ಮನನೊಂದು ಅವರ ತಾಯಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ವರದಿಗಳ ಪ್ರಕಾರ, ಅನ್ವಯ್‌ ಅವರು ತಮ್ಮ ಡೆತ್‌ ನೋಟ್‌ನಲ್ಲಿ ಅರ್ನಾಬ್‌ ಗೋಸ್ವಾಮಿಯವರ ಹೆಸರನ್ನು ಕೂಡಾ ನಮೂದಿಸಿದ್ದರು. ಮೊದಲಿಗೆ ಈ ಪ್ರಕರಣವು ಯಾವುದೇ ತಾರ್ಕಿಕ ಅಂತ್ಯವನ್ನು ಕಾಣದಿದ್ದರೂ, 2020ರ ಮೇ ತಿಂಗಳಲ್ಲಿಅನ್ವಯ್‌ ಮಗಳು ಅದ್ನ್ಯಾ ನಾಯ್ಕ್‌ ಅವರು ಹೊಸ ದೂರು ನೀಡಿದ ನಂತರ ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಪ್ರಕರಣದ ಮರುವಿಚಾರಣೆಗೆ ಆದೇಶಿಸಿದ್ದರು.

“2018ನ್ನು ನಾವು ಮರೆಯಲು ಸಾಧ್ಯವಿಲ್ಲ. ಮಹಾರಾಷ್ಟ್ರ ಪೊಲೀಸರು ನಮ್ಮ ಬೆಂಬಲಕ್ಕೆ ನಿಂತಿರುವುದು ತುಂಬಾ ಖುಶಿ ತಂದಿದೆ. ಡೆತ್‌ ನೋಟ್‌ನಲ್ಲಿ ಮೂವರ ಹೆಸರಿತ್ತು. ನನ್ನ ತಂದೆಯವರಿಗೆ ರಿಪಬ್ಲಿಕ್‌ ಟಿವಿಯಿಂದ 83 ಲಕ್ಷ ನೀಡಲು ಬಾಕಿಯಿತ್ತು ಎಂದು ಡೆತ್‌ ನೋಟ್‌ನಲ್ಲಿ ಹೇಳಿಕೊಂಡಿದ್ದರು. ಅರ್ನಾಬ್‌ ಗೋಸ್ವಾಮಿ ಈ ಹಣವನ್ನು ನೀಡಲೇ ಇಲ್ಲ,” ಎಂದು ಅದ್ನ್ಯಾ ಹೇಳಿದ್ದಾರೆ.

ಅನ್ವಯ್‌ ಮಧುಕರ್‌ ನಾಯಕ್‌ ಅವರು ಬರೆದಿದ್ದರು ಎನ್ನಲಾದ ಡೆತ್‌ ನೋಟ್‌ ಪ್ರತಿ
ಅನ್ವಯ್‌ ಮಧುಕರ್‌ ನಾಯಕ್‌ ಅವರು ಬರೆದಿದ್ದರು ಎನ್ನಲಾದ ಡೆತ್‌ ನೋಟ್‌ ಪ್ರತಿ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com