ಪಶ್ಚಿಮ ಬಂಗಾಳ: ಬಿಜೆಪಿಯಿಂದ ಪೊಲೀಸ್‌ ಠಾಣೆಗಳಿಗೆ ಘೆರಾವ್‌

ನವೆಂಬರ್‌ 5 ಮತ್ತು 6ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ರಾಜಕೀಯ ಕೊಲೆಗಳನ್ನು ಪ್ರಚಾರದ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿಯು ವೇದಿಕೆ ಸಿದ್ದಪಡಿಸುತ್ತಿದೆ.
ಪಶ್ಚಿಮ ಬಂಗಾಳ: ಬಿಜೆಪಿಯಿಂದ ಪೊಲೀಸ್‌ ಠಾಣೆಗಳಿಗೆ ಘೆರಾವ್‌

ಪಶ್ಚಿಮ ಬಂಗಾಳದಲ್ಲಿ ನಡೆದ ʼರಾಜಕೀಯʼ ಕೊಲೆಯನ್ನು ಖಂಡಿಸಿ ಬಿಜೆಪಿಯಿಂದ ಪೋಲಿಸ್‌ ಠಾಣೆಗೆ ಮುತ್ತಿಗೆ ಹಾಕುವ ಆಂದೋಲನ ಆಯೋಜಿಸಲಾಗಿತ್ತು. ನವೆಂಬರ್‌ 1ರಂದು ಸಾವಿಗೀಡಾದ ಬಿಜೋಯ್‌ ಸಿಲ್‌ ಎಂಬ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು, ಅವನನ್ನು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಕೊಂದುಹಾಕಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಈ ಸಾವಿನ ಪ್ರಕರಣ ಹೊರಬೀಳುತ್ತಿದ್ದಂತೆಯೇ, ಟಿಎಂಸಿ ಪಕ್ಷದ ವಿರುದ್ದ ಕಿಡಿಕಾರಿರುವ ಬಿಜೆಪಿ ನಾಯಕರು, ಆಡಳಿತದಲ್ಲಿರುವ ತೃಣಮೂಲ ಕಾಂಗ್ರೆಸ್‌ ಅನ್ನು ಬಿಟ್ಟು ಬಿಜೆಪಿ ಸೇರಿದ ಕಾರಣಕ್ಕೆ ಈ ರೀತಿ ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ. ನವೆಂಬರ್‌ 2ರಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ 12 ಗಂಟೆಗಳ ಬಂದ್‌ಗೂ ಬಿಜೆಪಿ ಕರೆ ನೀಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಜೆಪಿಯ ಎಲ್ಲಾ ಆರೋಪಗಳನ್ನು ಟಿಎಂಸಿ ನಾಯಕರು ತಿರಸ್ಕರಿಸಿದ್ದರು. ಸಾವನ್ನಪ್ಪಿರುವ ವ್ಯಕ್ತಿಗೂ ಅವನ ಕುಟುಂಬಕ್ಕೂ ಯಾವುದೇ ರಾಜಕೀಯ ಹಿನ್ನೆಲೆ ಇರಲಿಲ್ಲ. ಈ ವಿಚಾರವನ್ನು ಬಿಜೋಯ್‌ ಕುಟುಂಬವೇ ದೃಢಪಡಿಸಿದೆ, ಎಂದು ಟಿಎಂಸಿ ಅಧಿಕೃತ ಹೇಳಿಕೆ ನೀಡಿದೆ.

ಈ ಸಮಜಾಯಿಷಿಯನ್ನು ಕೇಳಲು ಒಪ್ಪದ ಬಿಜೆಪಿ ಕಾರ್ಯಕರ್ತರು, ಸೋಮವಾರದಂದು, ಸೋನಾರ್‌ಪುರ್‌, ಅಸಾಂಸೋಲ್‌, ಹಬ್ರಾ, ಹೌರಾ, ಬಿಡ್ಡಾ ನಗರ್‌ ಮುಂತಾದ ಕಡೆಗಳಲ್ಲಿ ಪೊಲೀಸ್‌ ಠಾಣೆಗಳಿಗೆ ಮುತ್ತಿಗೆ ಹಾಕಿದ್ದಾರೆ. ಹೌರಾದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿಯ ಸೌಮಿತ್ರಾ ಖಾನ್‌ ದುರ್ಗಾ ಪೂಜೆಯ ನಂತರ ಬಿಜೆಪಿಯ ಆರು ಜನ ಕಾರ್ಯಕರ್ತರು ಕೊಲೆಗೀಡಾಗಿದ್ದಾರೆ. ಈ ಎಲ್ಲಾ ಸಾವುಗಳು ರಾಜಕೀಯ ಪ್ರೇರಿತ ಕೊಲೆಗಳು ಎಂದು ಆರೋಪಿಸಿದ್ದಾರೆ.

ನವೆಂಬರ್‌ 5 ಮತ್ತು 6ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ರಾಜಕೀಯ ಕೊಲೆಗಳನ್ನು ಪ್ರಚಾರದ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿಯು ವೇದಿಕೆ ಸಿದ್ದಪಡಿಸುತ್ತಿದೆ.

ಬಿಜೆಪಿ ಕಾರ್ಯಕರ್ತರು ಪೊಲೀಸ್‌ ಠಾಣೆಗಳಿಗೆ ಘೆರಾವ್‌ ಹಾಕುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2020ರ ಜುಲೈ 15ರಂದು ಹೇಮತಾಬಾದ್‌ನಲ್ಲಿ ಬಿಜೆಪಿ ಶಾಸಕ ದೇಬೇಂದ್ರ ನಾಥ್‌ ರಾಯ್‌ ಹತ್ಯೆಯಾದಾಗ ಸುಮಾರು 50 ಪೊಲೀಸ್‌ ಠಾಣೆಗಳಿಗೆ ಮುತ್ತಿಗೆ ಹಾಕಲಾಗಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com