ಬ್ಯಾಂಕ್ ಖಾತೆಗೆ ದುಡ್ಡು ಹಾಕಿದರೂ ದಂಡ, ತೆಗೆದರೂ ದಂಡ!

ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವಲಯಗಳ ಖಾಸಗೀಕರಣದ ಜಪ ಮಾಡುತ್ತಿರುವ ಸರ್ಕಾರದ ಇಂತಹ ಕ್ರಮಗಳು, ಸರ್ಕಾರ ಎಂಬುದು ಇರುವುದು ಜನರ ಪರವಾಗಿಯೋ ಅಥವಾ ಕೇವಲ ಬೃಹತ್ ಉದ್ಯಮಿಗಳು ಮತ್ತು ಕಾರ್ಪೊರೇಟ್ ಕುಳಗಳ ಪರವಾಗಿಯೋ ಎಂಬ ಹಳೆಯ ಪ್ರಶ್ನೆಯನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ.
ಬ್ಯಾಂಕ್ ಖಾತೆಗೆ ದುಡ್ಡು ಹಾಕಿದರೂ ದಂಡ, ತೆಗೆದರೂ ದಂಡ!

ಸಾಲು-ಸಾಲು ಹಬ್ಬಗಳು ಬಂದಿವೆ. ದೀಪಾವಳಿಯ ಖರೀದಿ, ಖರ್ಚು ವೆಚ್ಚಗಳಿಗಾಗಿ ಜೇಬು ಖಾಲಿಯಾದಾಗೆಲ್ಲಾ ಎಟಿಎಂ ಗೆ ಹೋಗಿ ಹಣ ತೆಗೆಯಬಹುದು, ಕರ್ಚು ಕಳೆದು ಉಳಿದರೆ, ಆ ಹಣವನ್ನೂ ಮತ್ತೆ ಬೇಕೆಂದಾಗ ಖಾತೆಗೆ ತುಂಬಬಹುದು… ನೀವು ಹೀಗೆಲ್ಲಾ ಯೋಚಿಸಿದ್ದರೆ ನಿಮಗೆ ಖಂಡಿತಾ ಶಾಕ್ ಸುದ್ದಿಯೊಂದು ಇದೆ.

ಹೌದು, ಬ್ಯಾಂಕಿನಿಂದ ಹಣ ಹಿಂತೆಗೆತ ಮತ್ತು ಖಾತೆಗೆ ಹಣ ಜಮಾ ಮಾಡುವ ಗ್ರಾಹಕರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಭಾರತೀಯ ಬ್ಯಾಂಕುಗಳು ನಿರ್ಧರಿಸಿದ್ದು, ನವೆಂಬರ್ 2ರಿಂದಲೇ ತಿಂಗಳಿಗೆ ಮೂರಕ್ಕಿಂತ ಹೆಚ್ಚು ಬಾರಿ ಹಣ ಹಾಕಲು ಮತ್ತು ಹಿಂತೆಗೆದರೆ ದುಬಾರಿ ಶುಲ್ಕ ವಿಧಿಸಲು ಮುಂದಾಗಿವೆ.

ಈ ಮೊದಲು ಎಟಿಎಂ ಮೂಲಕ ಹಣ ಹಿಂತೆಗೆತಕ್ಕೆ ತಿಂಗಳಲ್ಲಿ ಐದು ಬಾರಿ ಶುಲ್ಕ ರಹಿತವಾಗಿ ಮತ್ತು ಅದಕ್ಕೂ ಹೆಚ್ಚಿನ ವಹಿವಾಟಿಗೆ ಶುಲ್ಕ ವಿಧಿಸುವ ಪದ್ದತಿ ಇತ್ತು. ಆದರೆ, ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಆರ್ ಬಿಐ ಮಾರ್ಗದರ್ಶನದಂತೆ ಕೆಲವು ತಿಂಗಳ ಮಟ್ಟಿಗೆ ಶುಲ್ಕ ವಿಧಿಸುವುದನ್ನು ರದ್ದುಪಡಿಸಿ, ಎಷ್ಟು ಬಾರಿಯಾದರೂ ಶುಲ್ಕರಹಿತವಾಗಿ ಹಣ ಹಿಂತೆಗೆತಕ್ಕೆ ಅವಕಾಶ ನೀಡಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಇದೀಗ ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವು ಸಾರ್ವಜನಿಕ ಮತ್ತು ಖಾಸಗೀ ಬ್ಯಾಂಕುಗಳು ಮೂರು ಬಾರಿ ಹಿಂತೆಗೆತ ಮತ್ತು ಮೂರು ಬಾರಿ ಹಣ ಹಾಕುವುದಕ್ಕೆ ಮಾತ್ರ ಉಚಿತ ವಹಿವಾಟು ಅವಕಾಶ ನೀಡಿದ್ದು, ಮೂರಕ್ಕಿಂತ ಹೆಚ್ಚು ಬಾರಿಯ ವಹಿವಾಟುಗಳಿಗೆ ತಲಾ ವಹಿವಾಟಿಗೆ 40ರಿಂದ 150 ರೂ.ವರೆಗೆ ಶುಲ್ಕ ವಿಧಿಸಲು ಆರಂಭಿಸಿವೆ.

ಸಾಲದ ಖಾತೆಗೆ ತಿಂಗಳಲ್ಲಿ ಮೂರಕ್ಕಿಂತ ಹೆಚ್ಚಿನ ಬಾರಿ ಹಣ ಹಿಂತೆಗೆತಕ್ಕೆ ಪ್ರತಿ ವಹಿವಾಟಿಗೆ 150 ರೂ. ಶುಲ್ಕ, ಉಳಿತಾಯ ಖಾತೆಗೆ ಮೂರು ಬಾರಿಯ ಬಳಿಕದ ಹಣ ಹಿಂತೆಗೆತಕ್ಕೆ ಪ್ರತಿ ವಹಿವಾಟಿಗೆ 100 ರೂ. ಶುಲ್ಕ ವಿಧಿಸಲಾಗುತ್ತಿದೆ. ಖಾತೆಗೆ ಹಣ ಹಾಕಲು ಲೋನ್ ಅಕೌಂಟ್, ಕರೆಂಟ್ ಅಕೌಂಟ್ ಮತ್ತು ಓವರ್ ಡ್ರಾಫ್ಟ್ ಅಕೌಂಟ್ ಗಳಿಗೆ ದಿನವೊಂದಕ್ಕೆ ಒಂದು ಲಕ್ಷ ರೂ.ವರೆಗಿನ ಜಮಾಕ್ಕೆ ಶುಲ್ಕವಿಲ್ಲ. ಆ ನಂತರದ ಮೊತ್ತಕ್ಕೆ ಕನಿಷ್ಟ 50 ರೂ.ನಿಂದ 20 ಸಾವಿರ ರೂ.ವರೆಗಿನ ಮೊತ್ತಕ್ಕೆ ಪ್ರತಿ ಒಂದು ಸಾವಿರಕ್ಕೆ ಕನಿಷ್ಟ ಒಂದು ರೂಪಾಯಿ ಶುಲ್ಕ ವಿಧಿಸಲಾಗಿದೆ. ಹಾಗೇ ಉಳಿತಾಯ ಖಾತೆಗೆ ಮೊದಲ ಮೂರು ವಹಿವಾಟಿಗೆ ಉಚಿತವಿದ್ದು, ಆ ಬಳಿಕದ ಹಣ ಖಾತೆಗೆ ಹಾಕುವ ಪ್ರತಿ ವಹಿವಾಟಿಗೆ ತಲಾ 40 ರೂ. ಶುಲ್ಕ ವಿಧಿಸಲಾಗುತ್ತಿದೆ.

ಈ ಎಲ್ಲಾ ಬಗೆಯ ಹಣ ಹಿಂತೆಗೆತ ಮತ್ತು ಹಣ ಖಾತೆಗೆ ಜಮಾ ಮಾಡುವ ವಹಿವಾಟುಗಳ ಶುಲ್ಕದಲ್ಲಿ ಹಿರಿಯ ನಾಗರಿಕರಿಗೆ ಕೂಡ ಯಾವುದೇ ವಿನಾಯ್ತಿ ನೀಡಿಲ್ಲ.

ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ದೇಶದ ಜನತೆ ದುಡಿಮೆ ಇಲ್ಲದೆ, ವ್ಯಾಪಾರ- ವಹಿವಾಟು ಇಲ್ಲದೆ ಬದುಕು ಸಂಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಜನಸಾಮಾನ್ಯರ ನೆರವಿಗೆ ಬರಬೇಕಿತ್ತು. ಆದರೆ, ಹೀಗೆ ಬ್ಯಾಂಕಿಗೆ ಹಣ ಹಾಕುವುದಕ್ಕೂ, ತೆಗೆಯುವುದಕ್ಕೂ ತಲಾ ವಹಿವಾಟಿಗೆ ಬರೋಬ್ಬರಿ 150 ರೂ.ವರೆಗೆ ಶುಲ್ಕ ವಿಧಿಸುವ ಮೂಲಕ ಜನರ ಖಾತೆಗೆ ಕತ್ತರಿ ಹಾಕಲು ಮುಂದಾಗಿರುವುದು ಆಘಾತಕಾರಿ ಬೆಳವಣಿಗೆ.

ಒಂದು ಕಡೆ ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದ ಮೂಲಕ ಒಂದು ದೇಶ ಒಂದು ಬ್ಯಾಂಕ್ ಪರಿಕಲ್ಪನೆಯತ್ತ ದಾಪುಗಾಲು ಹಾಕುತ್ತಿರುವ ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ, ಮತ್ತೊಂದು ಕಡೆ ಇಂತಹ ಆಘಾತಕಾರಿ ಶುಲ್ಕಗಳನ್ನು ಹೇರುವ ಮೂಲಕ ಬ್ಯಾಂಕುಗಳನ್ನು ಜನ ಸಾಮಾನ್ಯರಿಂದ ದೂರ ಮಾಡುವ ನಿಟ್ಟಿನಲ್ಲಿ ದಾಪುಗಾಲು ಇಡುತ್ತಿದೆ. ದೇಶದಲ್ಲಿ ಬ್ಯಾಂಕ್ ವಿಲೀನದ ಬಳಿಕವೂ ಸದ್ಯ 12 ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಸಾಕಷ್ಟು ಸಂಖ್ಯೆಯ ಖಾಸಗೀ ವಲಯದ ಬ್ಯಾಂಕುಗಳಿವೆ. ಹೀಗೆ ಹಲವು ಬ್ಯಾಂಕುಗಳಿರುವಾಗಲೇ, ಗ್ರಾಹಕರಿಗೆ ಹಲವು ಆಯ್ಕೆಗಳಿರುವಾಗಲೇ, ಒಂದು ರೀತಿಯ ಏಕಸ್ವಾಮ್ಯದ ಪರಿಸ್ಥಿತಿ ಇದೆ ಎಂಬಂತೆ ಗ್ರಾಹಕರಿಗೆ ಮನಸೋಇಚ್ಛೆ ಶುಲ್ಕ ವಿಧಿಸುವ ಮೂಲಕ ಜನಸಾಮಾನ್ಯರನ್ನು ಸುಲಿಗೆ ಮಾಡಲಾಗುತ್ತಿದೆ.

ಇನ್ನು ಮೋದಿಯವರ ಕನಸಿನ ಏಕ ರಾಷ್ಟ್ರ, ಏಕ ಬ್ಯಾಂಕ್ ವ್ಯವಸ್ಥೆ ಜಾರಿಗೆ ಬಂದರೆ, ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಒಂದೇ ಬ್ಯಾಂಕಿನಲ್ಲಿ ವಿಲೀನವಾದರೆ; ಆಗ ಇಡೀ ದೇಶದ ಹಣಕಾಸು ವಹಿವಾಟಿನ ಏಕಸ್ವಾಮ್ಯ ಸಾಧಿಸುವ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಇನ್ನೆಂಥ ಸುಲಿಗೆ ಕಾದಿದೆ ಎಂಬುದಕ್ಕೆ ಈ ಹೊಸ ಶುಲ್ಕ ಬೆಳವಣಿಗೆ ದಿಕ್ಸೂಚಿ.

ಆ ಹಿನ್ನೆಲೆಯಲ್ಲಿಯೇ ಈ ಹೊಸ ಶುಲ್ಕ ಪದ್ದತಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ದೇಶದ ಹಣಕಾಸು ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಒಂದು ಕಡೆ ಹೇಳುವ ಮೋದಿ ಸರ್ಕಾರ, ಮತ್ತೊಂದು ಕಡೆ ಇಂತಹ ಅವೈಜ್ಞಾನಿಕ ಶುಲ್ಕಗಳ ಮೂಲಕ ಜನ ಸಾಮಾನ್ಯರ ಮೇಲೆ ಪ್ರಹಾರ ನಡೆಸುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿಬರತೊಡಗಿದೆ. ಬ್ಯಾಂಕಿಂಗ್ ಸೇರಿದಂತೆ ಎಲ್ಲಾ ವಲಯಗಳ ಖಾಸಗೀಕರಣದ ಜಪ ಮಾಡುತ್ತಿರುವ ಸರ್ಕಾರದ ಇಂತಹ ಕ್ರಮಗಳು, ಸರ್ಕಾರ ಎಂಬುದು ಇರುವುದು ಜನರ ಪರವಾಗಿಯೋ ಅಥವಾ ಕೇವಲ ಬೃಹತ್ ಉದ್ಯಮಿಗಳು ಮತ್ತು ಕಾರ್ಪೊರೇಟ್ ಕುಳಗಳ ಪರವಾಗಿಯೋ ಎಂಬ ಹಳೆಯ ಪ್ರಶ್ನೆಯನ್ನು ಮತ್ತೊಮ್ಮೆ ಮುಂಚೂಣಿಗೆ ತಂದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com