ಜನಸಾಮಾನ್ಯರ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದ ಸುಪ್ರೀಂ ತೀರ್ಪು

ಸುಪ್ರೀಂಕೋರ್ಟ್ ಕೂಡ ಜನರ ಹಕ್ಕು ದಮನದ ವಿರುದ್ಧ ಪೊಲೀಸರಿಗೆ ಎಚ್ಚರಿಕೆ ರವಾನಿಸುವ ಮೂಲಕ, ಜನಸಾಮಾನ್ಯರ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದೆ ಮತ್ತು ಸ್ವತಃ ನ್ಯಾಯಾಂಗವೂ ಆತಂಕ ವ್ಯಕ್ತಪಡಿಸಿದೆ!
ಜನಸಾಮಾನ್ಯರ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದ ಸುಪ್ರೀಂ ತೀರ್ಪು

ದೇಶದಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಪೊಲೀಸ್ ಮತ್ತು ಇತರೆ ತನಿಖಾ ಸಂಸ್ಥೆಗಳನ್ನು ಬಳಸಿ ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ರಾಜಕೀಯ ವಿರೋಧಿಗಳು ಮತ್ತು ಜನಸಾಮಾನ್ಯರನ್ನು ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬ ಗಂಭೀರ ಮಾತುಗಳು ಕೇಳಿಬರುತ್ತಿರುವ ಹೊತ್ತಿನಲ್ಲಿ, ಒಂದು ಭರವಸೆಯಾಗಿ ಸುಪ್ರೀಂಕೋರ್ಟಿನ ಇತ್ತೀಚಿನ ಮಾತುಗಳು ಕಾಣುತ್ತಿವೆ.

ದೆಹಲಿ ಮೂಲದ ಮಹಿಳೆಯೊಬ್ಬರು ಕೋವಿಡ್ ಲಾಕ್ ಡೌನ್ ವಿಷಯದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ನಿರ್ಲಕ್ಷ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು ಎಂಬ ಹಿನ್ನೆಲೆಯಲ್ಲಿ ಆ ಮಹಿಳೆಯ ವಿರುದ್ದ ಪೊಲೀಸರು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ಸರ್ಕಾರಗಳನ್ನು ಟೀಕಿಸಿದ ಮಾತ್ರಕ್ಕೆ ಜನಸಾಮಾನ್ಯರಿಗೆ ಕಿರುಕುಳ ಕೊಡುವುದನ್ನು ಸಹಿಸಲಾಗದು ಎಂದು ಸ್ಪಷ್ಟ ಎಚ್ಚರಿಕೆ ನೀಡಿದೆ.

ಫೇಸ್ ಬುಕ್ ನಲ್ಲಿ ಎರಡು ಪೋಸ್ಟ್ ಹಂಚಿದ್ದು, ಅದರಲ್ಲಿ “ಪಶ್ಚಿಮಬಂಗಾಳದ ರಾಜಬಜಾರ್ ನಲ್ಲಿ ಲಾಕ್ ಡೌನ್ ನಡುವೆ ನೆರೆದಿದ್ದ ಭಾರೀ ಜನಸಂದಣಿಯನ್ನು ಉಲ್ಲೇಖಿಸಿ ಸಾವಿರಾರು ಜನ ಗುಂಪಾಗಿ ನೆರೆದಿರುವುದು ಕರೋನಾ ನಿಯಂತ್ರಣದ ಲಾಕ್ ಡೌನ್ ಜಾರಿಯ ವಿಷಯದಲ್ಲಿ ಸರ್ಕಾರಗಳು ಎಷ್ಟು ಗಂಭೀರವಾಗಿವೆ ಎಂಬುದಕ್ಕೆ ನಿದರ್ಶನ” ಎಂದು ಉಲ್ಲೇಖಿಸಿದ್ದಕ್ಕಾಗಿ ಪಶ್ಚಿಮಬಂಗಾಳ ಪೊಲೀಸರು ದೆಹಲಿಯ ರೋಶನಿ ಎಂಬ ಮಹಿಳೆಯ ವಿರುದ್ಧ ಸರ್ಕಾರದ ವಿರುದ್ಧ ಪಿತೂರಿ, ಸಮುದಾಯಗಳ ನಡುವೆ ದ್ವೇಷ ಹರಡುವ ಸಂಚು ಸೇರಿದಂತೆ ವಿವಿಧ ಪ್ರಕರಣಗಳಡಿ ಪ್ರಕರಣ ದಾಖಲಿಸಿದ್ದರು. ಆದರೆ ಮಹಿಳೆ ಹೈಕೋರ್ಟಿನಲ್ಲಿ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದರು ಮತ್ತು ತಾನು ಯಾವುದೇ ಬಗೆಯಲ್ಲೂ ಸರ್ಕಾರ ಅಥವಾ ಯಾವುದೇ ಸಮುದಾಯದ ವಿರುದ್ಧ ಟೀಕಿಸಿಲ್ಲ. ಮತ್ತು ಆ ಎರಡು ಪೋಸ್ಟ್ ಗಳು ಕೂಡ ತನ್ನದಲ್ಲ ಎಂದು ವಾದಿಸಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ನಡುವೆ ಮಹಿಳೆಯ ಬಂಧನಕ್ಕೆ ತಡೆಯಾಜ್ಞೆ ನೀಡಿದ ಕೊಲ್ಕತ್ತಾ ಹೈಕೋರ್ಟ್, ಪೊಲೀಸರ ಸಮನ್ಸ್ ಪ್ರಕಾರ ಖುದ್ದು ಕೊಲ್ಕತ್ತಾ ಪೊಲೀಸರ ಮುಂದೆ ಹಾಜರಾಗಲು ಮಹಿಳೆಗೆ ನಿರ್ದೇಶಿಸಿತ್ತು. ಆದರೆ, ಮಹಿಳೆ ಸುಪ್ರೀಂಕೋರ್ಟಿನಲ್ಲಿ ಆ ಆದೇಶವನ್ನು ಪ್ರಶ್ನಿಸಿದ್ದು, ಕ್ಷುಲ್ಲಕ ವಿಷಯಕ್ಕೆ ತನ್ನನ್ನು ಕೊಲ್ಕತ್ತಾಗೆ ಕರೆಸಿ ಭಯಪಡಿಸಲು ಪೊಲೀಸರು ಯತ್ನಿಸುತ್ತಿದ್ದಾರೆ ಎಂದು ಕೋರ್ಟ್ ಮೊರೆಹೋಗಿದ್ದರು.

ಈ ಪ್ರಕರಣದ ವಿವರಗಳನ್ನು ಪರಿಶೀಲಿಸಿದ ನ್ಯಾ. ಚಂದ್ರಚೂಡ್ ಮತ್ತು ನ್ಯಾ ಇಂದಿರಾ ಬ್ಯಾನರ್ಜಿ ಅವರ ಪೀಠ, ಪೊಲೀಸರು ಈ ರೀತಿ ಜನಸಾಮಾನ್ಯರಿಗೆ ಸಮನ್ಸ್ ನೀಡತೊಡಗಿದರೆ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹದ್ದುಬಸ್ತಿನಲ್ಲಿಡುವಂತಹ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಲಿದೆ. ಸಂವಿಧಾನದ 19(1)ನೇ ವಿಧಿಯಡಿ ನಾಗರಿಕರಿಗೆ ನೀಡಿರುವ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ರಕ್ಷಿಸಲು ನ್ಯಾಯಾಲಯ ಮಧ್ಯಪ್ರವೇಶಿಸುವುದು ಅನಿವಾರ್ಯ ಕೂಡ ಎಂದು ಹೇಳಿದೆ.

ದೇಶದ ಯಾವುದೋ ಮೂಲೆಯಲ್ಲಿ ಯಾರೋ ಒಬ್ಬರು ಯಾವುದೋ ರಾಜ್ಯದ, ದೇಶದ ಸರ್ಕಾರದ ಬಗ್ಗೆ ಏನೋ ಬರೆದರೆ, ಅವರನ್ನೆಲ್ಲಾ ಹೀಗೆ ಕೇಸು ಹಾಕಿ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವಿಚಾರಣೆಗೆ ಎಳೆದು ತರುವುದು ಎಂದರೆ ಏನರ್ಥ? ಕೊಲ್ಕತ್ತಾ, ಚಂಡೀಗಢ, ಮಣಿಪುರದಿಂದ ನೀವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನಸಾಮಾನ್ಯರನ್ನು ಅಲೆಸಿ ಕಿರುಕುಳ ಕೊಡುವುದು. ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಅನಗತ್ಯ ಕಾನೂನು ಕತ್ತಿ ಝಳಪಿಸುವುದು ಅಪಾಯಕಾರಿ ಪ್ರವೃತ್ತಿ. ಈ ದೇಶದ ಮುಕ್ತ ಸ್ವಾತಂತ್ರ್ಯದ ದೇಶವಾಗಿ ಉಳಿಯಲಾರದು ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.

ಜನಸಾಮಾನ್ಯರ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದ ಸುಪ್ರೀಂ ತೀರ್ಪು
ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿರಲು ಬಿಡಿ – ಸುಪ್ರಿಂ ಕೋರ್ಟ್

ಜೊತೆಗೆ, “ಯಾವುದೇ ತಪ್ಪು ಮಾಡಿದಾಗ ದೇಶದ ಜನತೆಗೆ ಕಾನೂನಿಗೆ ಬೆಲೆ ಕೊಡಬೇಕು ಮತ್ತು ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸಬೇಕು ಎಂದು ಹೇಳುವಲ್ಲಿ ಈ ಸಂಸ್ಥೆ ಮೊದಲನೆಯದಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಹಾಗೆ ಹೇಳಲಾಗದು. ಅದೇ ಹೊತ್ತಿಗೆ, ಕಾನೂನಿನ ಹೆಸರಿನಲ್ಲಿ ಯಾರೂ ದೇಶದ ಜನಸಾಮಾನ್ಯರಿಗೆ ಕಿರುಕುಳ ನೀಡದಂತೆ ಖಾತ್ರಿಪಡಿಸಲು ಕೂಡ ನಾವಿದ್ದೇವೆ ಎಂಬುದನ್ನು ಪೊಲೀಸರು ಅರ್ಥಮಾಡಿಕೊಳ್ಳಬೇಕು. ಕೇವಲ ಸರ್ಕಾರದ ವಿರುದ್ದ ಟೀಕೆ ಮಾಡಿದ್ದಕ್ಕಾಗಿ, ಸರ್ಕಾರದ ನೀತಿಗಳ ಕುರಿತು ವಿಮರ್ಶೆ ಮಾಡಿದ್ದಕ್ಕಾಗಿ ಜನರನ್ನು ದೇಶದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಅಲೆದಾಡಿಸಿ ಅವರನ್ನು ಬಗ್ಗುಬಡಿಯುವುದನ್ನು ಸಹಿಸಲಾಗದು?” ಎಂದು ಕಟು ಮಾತುಗಳಲ್ಲಿ ಪೀಠ ಎಚ್ಚರಿಕೆ ನೀಡಿದೆ.

ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಜನಸಾಮಾನ್ಯರನ್ನು ವಸ್ತುನಿಷ್ಟ ವರದಿಗಳಿಗಾಗಿ, ನ್ಯಾಯಯುತ ಹಕ್ಕೊತ್ತಾಯಗಳಿಗಾಗಿ, ರಚನಾತ್ಮಕ ಟೀಕೆಗಳಿಗಾಗಿ ಸಾಲುಸಾಲಾಗಿ ಜೈಲಿಗೆ ಅಟ್ಟುತ್ತಿರುವ ಈ ಹೊತ್ತಿನಲ್ಲಿ, ಸಂವಿಧಾನಿಕ ಹಕ್ಕುಗಳಡಿಯಲ್ಲಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸುವವರ ವಿರುದ್ಧ ಅಪಾಯಕಾರಿ ಯುಎಪಿಎ ಮತ್ತು ದೇಶದ್ರೋಹದಂತಹ ಕಾನೂನುಗಳನ್ನ ಬಳಸಿ ಎಲ್ಲ ಬಗೆಯ ಭಿನ್ನಮತಗಳನ್ನು ಹತ್ತಿಕ್ಕುತ್ತಿರುವ ಈ ಹೊತ್ತಿನಲ್ಲಿ ಸುಪ್ರೀಂಕೋರ್ಟಿನ ಈ ಎಚ್ಚರಿಕೆಯ ಸೂಚನೆಗಳು ದೊಡ್ಡಮಟ್ಟದಲ್ಲಿ ಜನಸಾಮಾನ್ಯರಿಗೆ ನೈತಿಕ ಬಲ ತುಂಬಲಿವೆ.

ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಗೋ ಹತ್ಯೆ ವಿಷಯವನ್ನೇ ಒಂದು ಅಸ್ತ್ರವಾಗಿಸಿಕೊಂಡು ಅಲ್ಪಸಂಖ್ಯಾತ ಸಮುದಾಯದ ಮೇಲೆ ಪೊಲೀಸರು ನಡೆಸುತ್ತಿರುವ ಕಿರುಕುಳ ಮತ್ತು ದಬ್ಬಾಳಿಕೆಯ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಹಾಗೇ ಭೀಮಾ ಕೋರೆಗಾಂವ್ ಮತ್ತು ಎನ್ ಆರ್ ಸಿ ಮತ್ತು ಸಿಎಎ ಹೋರಾಟದ ವಿಷಯದಲ್ಲಿ ಕೂಡ ಪೊಲೀಸರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವ್ಯಕ್ತಿಗತ ಹಕ್ಕುಗಳ ಮೇಲೆ ಸವಾರಿ ಮಾಡಿ, ಜನಸಾಮಾನ್ಯರು, ಹೋರಾಟಗಾರರು, ಬುದ್ದಿಜೀವಿಗಳು ಮತ್ತು ಪತ್ರಕರ್ತರ ವಿರುದ್ಧ ಅಮಾನುಷ ಯುಎಪಿಎ, ಎನ್ ಎಸ್ ಎ ಕಾಯ್ದೆಗಳನ್ನು ಹಾಕಿ ವರ್ಷಗಟ್ಟಲೆ ವಿಚಾರಣೆ ನೆಪದಲ್ಲಿ ಜೈಲಿನಲ್ಲಿ ಕೊಳೆಸಲಾಗುತ್ತಿದೆ. ದೇಶದ್ರೋಹ ಕಾಯ್ದೆ ಕೂಡ ಸರ್ಕಾರಗಳು ತಮ್ಮ ವಿರುದ್ಧದ ಟೀಕೆಗಳನ್ನು, ಭಿನ್ನಮತವನ್ನು ಬಗ್ಗುಬಡಿಯಲು ಬಳಸುತ್ತಿವೆ. ಕಳೆದ ಐದಾರು ವರ್ಷಗಳಲ್ಲಿ ದೇಶದ್ರೋಹ, ಯುಎಪಿಎ ಮತ್ತು ಎನ್ ಎಸ್ ಎ ಕಾಯ್ದೆಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಜನಸಾಮಾನ್ಯರ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದ ಸುಪ್ರೀಂ ತೀರ್ಪು
ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಂಡ ದೆಹಲಿ ಪೊಲೀಸರು!

ಅದರಲ್ಲೂ ಉತ್ತರಪ್ರದೇಶದಂತಹ ಬಿಜೆಪಿ ಆಡಳಿತದ ಸರ್ಕಾರ ಪತ್ರಕರ್ತರು, ಹೋರಾಟಗಾರರ ಮೇಲೆ ನ್ಯಾಯಾಂಗದ ಯಾವುದೇ ಭಯವಿಲ್ಲದೆ ಹೇಯ ಮತ್ತು ಅಮಾನುಷ ಕಾಯ್ದೆಗಳಡಿ ಪ್ರಕರಣ ದಾಖಲಿಸಿ, ಅಕ್ರಮವಾಗಿ ಬಂಧಿಸಿಡುತ್ತಿದೆ. ಅದಕ್ಕೆ ದಿ ವೈರ್ ಸಂಪಾದಕ ಸಿದ್ಧಾರ್ಥ ವರದರಾಜನ್ ಅವರ ವಿರುದ್ಧದ ಪ್ರಕರಣದಿಂದ, ಇತ್ತೀಚಿನ ಹತ್ರಾಸ್ ಸಂತ್ರಸ್ತೆಯ ಕುಟುಂಬದ ಭೇಟಿಗೆ ಹೋಗಿದ್ದ ಕೇರಳದ ಪತ್ರಕರ್ತರ ಬಂಧನ ಪ್ರಕರಣದವರೆಗೆ ನೂರಾರು ಉದಾಹರಣೆಗಳಿವೆ. ಲಾಕ್ ಡೌನ್ ಮತ್ತು ಕರೋನಾ ಸಂಕಷ್ಟದ ಹೊತ್ತಲ್ಲಿ ಪಕ್ಷಾತೀತವಾಗಿ ಬಹುತೇಕ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ವ್ಯವಸ್ಥೆಯ ಲೋಪಗಳ ಬಗ್ಗೆ ದನಿ ಎತ್ತುವ ಎಲ್ಲರ ವಿರುದ್ಧ ಹೇಯ ಕಾನೂನು ಅಸ್ತ್ರಗಳನ್ನು ಪ್ರಯೋಗಿಸುತ್ತಿವೆ. ಆ ಮೂಲಕ ಜನರ ಬಾಯಿ ಮುಚ್ಚಿಸುವ, ಮಾಧ್ಯಮಗಳನ್ನು ಬೆದರಿಸುವ, ಹೋರಾಟಗಾರರನ್ನು ದಮನಿಸುವ ಯತ್ನಗಳು ನಡೆಯುತ್ತಿವೆ.

2019ರ ಎನ್ ಸಿಆರ್ ಬಿ ಅಪರಾಧ ದಾಖಲೆಗಳ ಪ್ರಕಾರ, ದೇಶದಲ್ಲಿ 2014ರಿಂದ 2019ರ ನಡುವೆ ದೇಶದ ಅಥವಾ ಪ್ರಭುತ್ವದ ವಿರುದ್ಧದ ಗಂಭೀರ ಅಪರಾಧ ಪ್ರಕರಣಗಳ ಸಂಖ್ಯೆ 512ರಿಂದ 7,569ಕ್ಕೆ ಏರಿದೆ. 2019ರಲ್ಲಿ ಒಂದೇ ವರ್ಷ ಬರೋಬ್ಬರಿ 12 ಸಾವಿರ ಮಂದಿಯನ್ನು ಪ್ರಭುತ್ವದ ವಿರುದ್ಧದ ವಿವಿಧ ಪ್ರಕರಣಗಳಡಿ ಬಂಧಿಸಲಾಗಿದೆ. ದೇಶದ್ರೋಹ ಕಾಯ್ದೆಯಡಿ 96 ಮಂದಿಯನ್ನ ಬಂಧಿಸಲಾಗಿದೆ. ಆದರೆ, ಆ ಪೈಕಿ ಅಪರಾಧ ಸಾಬೀತಾಗಿ ಶಿಕ್ಷೆಯಾಗಿರುವುದು ಕೇವಲ ಇಬ್ಬರಿಗೆ ಮಾತ್ರ! ಅಂದರೆ, ಇಂತಹ ಗಂಭೀರ ಪ್ರಕರಣಗಳ ಸಾಚಾತನ, ಪೊಲೀಸರು ಅಂತಹ ಪ್ರಕರಣ ದಾಖಲಿಸುವುದರ ಹಿಂದಿನ ಅಸಲೀಯತ್ತು ಮತ್ತು ಸರ್ಕಾರಗಳು ಇಂತಹ ಕಾನೂನುಗಳನ್ನು ಇತ್ತೀಚಿನ ವರ್ಷಗಳಲ್ಲಿ ಬಳಸುತ್ತಿರುವ ರೀತಿಯ ಬಗ್ಗೆ ಈ ಅಂಕಿಅಂಶಗಳೇ ಸಾಕಷ್ಟು ಹೇಳುತ್ತವೆ.

ಜನಸಾಮಾನ್ಯರ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದ ಸುಪ್ರೀಂ ತೀರ್ಪು
ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನಿಸಿದ ಬಿಜೆಪಿಯಿಂದ ಈಗ ತೇಪೆ ಹಚ್ಚುವ ಪ್ರಯತ್ನ 

ಆ ಹಿನ್ನೆಲೆಯಲ್ಲೇ; ಭಾರತದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ಎದುರಾಗಿದೆ ಎಂಬ ಆತಂಕ ಕೇವಲ ದೇಶದ ಒಳಗೆ ಮಾತ್ರವಲ್ಲ; ದೇಶದ ಹೊರಗೂ ವ್ಯಕ್ತವಾಗುತ್ತಿದೆ. ಇತ್ತೀಚಿನ ತಿಂಗಳುಗಳಲ್ಲೇ ಪತ್ರಕರ್ತರ ಸ್ವಾತಂತ್ರ್ಯಹರಣ, ವ್ಯಕ್ತಿಸ್ವಾತಂತ್ರ್ಯಹರಣ, ಮಹಿಳಾ ಸ್ವಾತಂತ್ರ್ಯ ಸೇರಿದಂತೆ ಹಲವು ವಿಷಯಗಳಲ್ಲಿ ಭಾರತದ ಬೆಳವಣಿಗೆಗಳ ಬಗ್ಗೆ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. ಇಂತಹ ಹೊತ್ತಲ್ಲಿ; ದೇಶದ ಆಡಳಿತ ಮತ್ತು ಸರ್ಕಾರಗಳು ಜನಸಾಮಾನ್ಯರ ಸಂವಿಧಾನಿಕ ಹಕ್ಕುಗಳನ್ನು ದಮನ ಮಾಡುತ್ತಿವೆ ಎಂಬ ಮಾತುಗಳು ಕೇಳಿಬರುವುದು ಸಹಜ. ಇದೀಗ ಸುಪ್ರೀಂಕೋರ್ಟ್ ಕೂಡ ಪೊಲೀಸರಿಗೆ ಎಚ್ಚರಿಕೆ ರವಾನಿಸುವ ಮೂಲಕ, ಜನಸಾಮಾನ್ಯರ ಆ ಆತಂಕಕ್ಕೆ ಅಧಿಕೃತತೆಯ ಮುದ್ರೆ ಒತ್ತಿದೆ ಮತ್ತು ಸ್ವತಃ ನ್ಯಾಯಾಂಗವೂ ಆತಂಕ ವ್ಯಕ್ತಪಡಿಸಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com