ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!

ಪ್ರಶಾಂತ್ ಭೂಷಣ್ ಅವರ ಈ ಹೊಸ ಟ್ವೀಟ್, ಸಿಜೆಐ ಮತ್ತು ಅವರ ನಡುವಿನ ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆ ಇದ್ದು, ಈ ವಿವಾದ ಭವಿಷ್ಯದಲ್ಲಿ ಪಡೆಯಲಿರುವ ನ್ಯಾಯಾಂಗದ ಸಂಘರ್ಷದ ಬಗ್ಗೆ ಕುತೂಹಲ ಮೂಡಿದೆ!
ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!

ಇತ್ತೀಚೆಗಷ್ಟೇ ಭಾರತದ ಮುಖ್ಯನ್ಯಾಯಮೂರ್ತಿ(ಸಿಜೆಐ)ಗಳನ್ನು ಟೀಕಿಸಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಒಂದು ರೂಪಾಯಿ ದಂಡ ತೆರುವ ಶಿಕ್ಷೆಗೆ ಗುರಿಯಾಗಿದ್ದ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಮತ್ತೆ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಮೊದಲು; ಸಿಜೆಐ ಅವರು ಆಡಳಿತಾರೂಢ ಬಿಜೆಪಿ ನಾಯಕರ ದುಬಾರಿ ಬೈಕನ್ನು ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದೇ ಸವಾರಿ ಮಾಡಿದ್ದು ಮತ್ತು ಹಿಂದಿನ ನಾಲ್ವರು ಸಿಜೆಐಗಳ ಭ್ರಷ್ಟಾಚಾರದ ಕುರಿತು ಮಾಡಿದ್ದ ಎರಡು ಟ್ವೀಟ್ ವಿಷಯದಲ್ಲಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸಿ ಶಿಕ್ಷೆ ವಿಧಿಸಿತ್ತು. ಆ ಪ್ರಕರಣ ಭಾರತೀಯ ನ್ಯಾಯಾಂಗ ವ್ಯವಸ್ಥೆ ಮತ್ತು ನ್ಯಾಯಾಂಗ ನಿಂದನೆ ಎಂಬ ಪ್ರಶ್ನಾತೀತ ಅಸ್ತ್ರದ ಕುರಿತ ವ್ಯಾಪಕ ಚರ್ಚೆ ಮತ್ತು ನ್ಯಾಯಾಂಗ ವ್ಯವಸ್ಥೆ ವಿಮರ್ಶೆ ಮತ್ತು ಟೀಕೆಗಳಿಗೆ ತೆರೆದುಕೊಳ್ಳಬೇಕು ಎಂಬ ವಾದಕ್ಕೂ ಇಂಬು ನೀಡಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದೀಗ ಭೂಷಣ್ ಅವರು ಅಂತಹದ್ದೇ ಮತ್ತೊಂದು ಟ್ವೀಟ್ ಮಾಡಿದ್ದು, ಸಿಜೆಐ ಎಸ್ ಎ ಬೋಬ್ಡೆ ಅವರ ಖಾಸಗೀ ಕಾರ್ಯಕ್ರಮಕ್ಕೆ ಮಧ್ಯಪ್ರದೇಶ ಸರ್ಕಾರದ ಹೆಲಿಕಾಪ್ಟರ್ ಬಳಕೆ ಮಾಡಿದ ಬಗ್ಗೆ ಪ್ರಸ್ತಾಪಿಸಿ, ಅಲ್ಲಿನ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣವೊಂದರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಮುನ್ನ ಇಂತಹ ಅನುಕೂಲ ಪಡೆದಿರುವುದು ಸರಿಯೇ ಎಂಬ ಪ್ರಶ್ನೆ ಎತ್ತಿದ್ದಾರೆ.

ಕನ್ಹಾ ನ್ಯಾಷನಲ್ ಪಾರ್ಕ್ ಭೇಟಿ ವೇಳೆ ಸಿಜೆಐ ಬೋಬ್ಡೆ ಅವರು ಮಧ್ಯಪ್ರದೇಶ ಸರ್ಕಾರದ ಹೆಲಿಕಾಪ್ಟರ್ ಬಳಸಿದ್ದಾರೆ. ಇದೊಂದು ಖಾಸಗೀ ಭೇಟಿಯಾಗಿದ್ದು, ಆ ಭೇಟಿಗೆ ತಮ್ಮ ಮುಂದೆ ವಿಚಾರಣೆ ಹಂತದಲ್ಲಿರುವ ಪ್ರಮುಖ ಪ್ರಕರಣವೊಂದರ ಪ್ರತಿವಾದಿಯಾಗಿರುವ ಸರ್ಕಾರದ ಅನುಕೂಲ ಪಡೆದಿರುವುದು, ಅಂತಿಮವಾಗಿ ಪ್ರಕರಣದ ವಿಚಾರಣೆ ಮತ್ತು ತೀರ್ಪಿನ ಮೇಲೆ ಪ್ರಭಾವ ಬೀರುವುದಿಲ್ಲವೆ ಎಂಬುದು ಭೂಷಣ್ ಎತ್ತಿರುವ ಪ್ರಶ್ನೆ.

ಅಲ್ಲದೆ, ಮಧ್ಯಪ್ರದೇಶ ಸರ್ಕಾರದ ಅತಿಗಣ್ಯರ ವಿವಿಐಪಿ ಪಟ್ಟಿಯಲ್ಲಿರುವ ಸಿಜೆಐ ಅವರಿಗೆ ಆತಿಥ್ಯ ನೀಡುವುದು ಮತ್ತು ಎಲ್ಲಾ ಬಗೆಯ ವ್ಯವಸ್ಥೆಗಳನ್ನು ಮಾಡುವುದು ಸರ್ಕಾರಿ ಶಿಷ್ಟಾಚಾರವಾಗಿದೆ. ಆದರೆ, ಆ ಶಿಷ್ಟಾಚಾರ ಖಾಸಗೀ ಭೇಟಿಯ ವೇಳೆ ಮೂರು ದಿನಗಳಿಗೆ ಮಾತ್ರ ಸೀಮಿತ. ಆದರೆ, ಸಿಜೆಐ ಅವರು ಈ ಅನುಕೂಲಗಳನ್ನು ಒಂದು ದಿನ ಹೆಚ್ಚುವರಿಯಾಗಿ ಬಳಸಿದ್ದಾರೆ. ಇದು ನಿಯಮ ಬಾಹಿರವೇ ಅಥವಾ ಮಧ್ಯಪ್ರದೇಶ ಸರ್ಕಾರ ಅದಕ್ಕಾಗಿ ವಿಶೇಷ ನಿಯಮ ಸಡಿಲಿಕೆ ಮಾಡಿದೆಯೇ ಎಂಬುದು ಕೂಡ ಈ ಚರ್ಚೆಗೆ ಒಳಗಾಗಿದೆ.

ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!
ನ್ಯಾಯಾಂಗ ನಿಂದನೆ ಪ್ರಕರಣ: ಹೊಸ ಪೀಠದಲ್ಲಿ ವಿಚಾರಣೆ ಆರಂಭಿಸಲು ಅರ್ಜಿ ಸಲ್ಲಿಸಿದ ಪ್ರಶಾಂತ್‌ ಭೂಷಣ್‌

ಮುಖ್ಯವಾಗಿ ಮಧ್ಯಪ್ರದೇಶದ ಈ ಹಿಂದಿನ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾದ 22 ಮಂದಿ ಬಂಡಾಯ ಶಾಸಕರ ಅನರ್ಹತೆಗೆ ಕೋರಿ ಕಾಂಗ್ರೆಸ್ ಶಾಸಕ ವಿಜಯ್ ಸಕ್ಸೇನಾ ದಾಖಲಿಸಿರುವ ಪ್ರಕರಣ ಸಿಜೆಐ ಮುಂದೆ ಬಾಕಿ ಇದೆ. ನವೆಂಬರ್ ಮೊದಲ ವಾರ ಪ್ರಕರಣದ ಅಂತಿಮ ವಿಚಾರಣೆ ನಡೆಯಲಿದ್ದು, ಆ ವೇಳೆ ಸಿಜೆಐ ಅವರು ಸ್ವತಃ ಪೀಠದಲ್ಲಿದ್ದು ನಿಷ್ಪಕ್ಷಪಾತ ವಿಚಾರಣೆ ಮತ್ತು ತೀರ್ಪು ನೀಡಲು ಇದು ಅಡ್ಡಿಯಾಗಬಹುದು. ಒಂದು ವೇಳೆ ಸಿಜೆಐ ಅವರು ಆ ಪೀಠದಿಂದ ದೂರ ಸರಿದರೂ ಕೂಡ, ತಮ್ಮ ಬದಲಾಗಿ ಮತ್ತೊಬ್ಬ ನ್ಯಾಯಾಧೀಶರನ್ನು ನೇಮಿಸಿದರೂ ಆಗಲೂ ಇಂತಹ ಪ್ರಭಾವಗಳು ಕೆಲಸ ಮಾಡಬಹುದು. ಹಾಗಾಗಿ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಿ ಈಗ ಅಧಿಕಾರದಲ್ಲಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾದ ಮತ್ತು ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ 22 ಮಂದಿಯ ಅನರ್ಹತೆಯ ಪ್ರಕರಣ ಶಿವರಾಜ್ ಸಿಂಗ್ ಅವರ ಸರ್ಕಾರದ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ. ಅಂತಹ ಗಂಭೀರ ಪ್ರಕರಣ ತಮ್ಮ ಮುಂದೆ ವಿಚಾರಣೆ ನಡೆಯುತ್ತಿರುವಾಗ ಆ ಪ್ರಕರಣದ ಪಾರ್ಟಿಯಾಗಿರುವ ಆಡಳಿತದಿಂದ ಅನುಕೂಲ ಪಡೆಯುವುದು ತರವೇ ಎಂಬುದು ಒಟ್ಟಾರೆ ಭೂಷಣ್ ಪ್ರಶ್ನೆಯ ಸಾರಾಂಶ.

ತಮ್ಮ ಟ್ವೀಟ್ ನೊಂದಿಗೆ ಮಧ್ಯಪ್ರದೇಶ ಸರ್ಕಾರದ ವಿವಿಐಪಿ ಶಿಷ್ಟಾಚಾರ ಆದೇಶ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ ನಡತೆ ಕುರಿತ ಕೋಡ್ ಆಫ್ ಕಂಡಕ್ಟ್ ಪ್ರತಿಯನ್ನೂ ಭೂಷಣ್ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ವಾಗ್ವಾದಕ್ಕೆ ಈಡಾದ ಪ್ರಶಾಂತ್ ಭೂಷಣ್ ಟ್ವೀಟ್!
ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಹೊಸ ಆಯಾಮ ನೀಡಿದ ಗಾಂಧಿ ಹೇಳಿಕೆ!

ಈ ನಡುವೆ, ಭೂಷಣ್ ಟ್ವೀಟ್ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ಸುಪ್ರೀಂಕೋರ್ಟ್ ಮೂಲಗಳು, “ಸಿಜೆಐ ಅವರ ಪ್ರಯಾಣಕ್ಕೆ ರಾಜ್ಯಗಳು ಹೆಲಿಕಾಪ್ಟರ್ ಒದಗಿಸುವುದು ಒಂದು ಮಾಮೂಲಿ ಸಂಗತಿ. ಕೆಲವು ತಿಂಗಳ ಹಿಂದೆ ಸಿಜೆಐ ಅವರು ಶಿರಡಿ ಮತ್ತು ಶನಿಶಿಂಗಾಣಪುರಕ್ಕೆ ಪ್ರಯಾಣಿಸಿ ವಾಪಸು ತಮ್ಮ ಮೂಲ ಊರು ನಾಗ್ಪರಕ್ಕೆ ತೆರಳಲು ಮಹಾರಾಷ್ಟ್ರ ಸರ್ಕಾರದ ಹೆಲಿಕಾಪ್ಟರ್ ಬಳಸಿದ್ದರು. ಹಾಗಾಗಿ ಇದೀಗ ಮಧ್ಯಪ್ರದೇಶ ಸರ್ಕಾರಿ ಹೆಲಿಕಾಪ್ಟರಿನಲ್ಲಿ ಕನ್ಹಾ ಗೆ ಭೇಟಿ ನೀಡಿ ವಾಪಸು ನಾಗ್ಪುರದ ತಮ್ಮ ನಿವಾಸಕ್ಕೆ ಭೇಟಿ ನೀಡಿರುವುದು ಯಾವುದೇ ರೀತಿಯಲ್ಲೂ ಶಿಷ್ಟಾಚಾರದ ಉಲ್ಲಂಘನೆಯಲ್ಲ” ಎಂದು ಹೇಳಿವೆ.

ಆದರೆ, ಶಿಷ್ಟಾಚಾರ ಉಲ್ಲಂಘನೆಯೊಂದಿಗೆ ರಾಜ್ಯ ಸರ್ಕಾರದ ಭವಿಷ್ಯಕ್ಕೆ ಸಂಬಂಧಿಸಿದ ಅತ್ಯಂತ ಮಹತ್ವದ ಪ್ರಕರಣವೊಂದರ ಅಂತಿಮ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿ ಅಂತಹ ವಿಚಾರಣೆ ಮತ್ತು ತೀರ್ಪಿನಿಂದ ಬಾಧಿತವಾಗುವ ಅಥವಾ ಅನುಕೂಲ ಪಡೆಯುವ ಸರ್ಕಾರದಿಂದಲೇ ಇಂತಹ ಸೌಲಭ್ಯಗಳನ್ನು ಪಡೆಯುವುದು ಎಷ್ಟು ಸರಿ? ಹಾಗೂ ಅಂತಹ ತಪ್ಪು ಆಗಿಲ್ಲ ಎಂಬುದನ್ನು ಸಮರ್ಥಿಸಲು ಅದೇ ವ್ಯಕ್ತಿ ಈ ಹಿಂದೆಯೂ ಹೀಗೆ ಮಾಡಿದ್ದರು ಎಂದು ಹೇಳುವುದು ಸೂಕ್ತವೇ ಎಂಬ ಪ್ರಶ್ನೆಯನ್ನೂ ಮಾಧ್ಯಮಗಳು ಎತ್ತಿವೆ.

ಒಟ್ಟಾರೆ ಭೂಷಣ್ ಅವರ ಹೊಸ ಟ್ವೀಟ್, ಸಿಜೆಐ ಮತ್ತು ಅವರ ನಡುವಿನ ಮತ್ತೊಂದು ಸುತ್ತಿನ ನ್ಯಾಯಾಂಗ ನಿಂದನೆ ಸಮರಕ್ಕೆ ನಾಂದಿ ಹಾಡುವ ಸಾಧ್ಯತೆ ಇದ್ದು, ಈ ವಿವಾದ ಭವಿಷ್ಯದಲ್ಲಿ ಪಡೆಯಲಿರುವ ನ್ಯಾಯಾಂಗದ ಸಂಘರ್ಷದ ಬಗ್ಗೆ ಕುತೂಹಲ ಮೂಡಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com