ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!

ಕರ್ನಾಟಕದ ಉಪಚುನಾವಣೆ ಎದುರಿಸುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಕನ್ನಡಿಗರೆಲ್ಲರೂ ಮುಂದೊಂದು ದಿನ ವ್ಯಾಕ್ಸಿನ್ ಲಭ್ಯವಾದಾಗ ಅದನ್ನು ತಮ್ಮ ಬೆವರಿನ ಹಣ ತೆತ್ತೇ ಖರೀದಿಸಬೇಕು. ಮತ ಹಾಕಿ ಗೆಲ್ಲಿಸಿದ ಬಿಜೆಪಿ ಸರ್ಕಾರ ಅಡುಗೆ ಅನಿಲ, ಮಾಸ್ಕ ಧರಿಸಿದ ದಂಡ ಸೇರಿದಂತೆ ಇತರೆ ಎಲ್ಲಾ ವಿಷಯಗಳಲ್ಲಿ ಕೋವಿಡ್ ಸಂಕಷ್ಟದ ಹೊತ್ತಲ್ಲಿ ಜನರ ಗಾಯದ ಮೇಲೆ ಬರೆ ಎಳೆದಂತೆ ವ್ಯಾಕ್ಸಿನ್ ವಿಷಯದಲ್ಲಿ ಕೂಡ ದಂಧೆ ಮಾಡಲು ಹೊಂಚುಹಾಕಿದೆ!
ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!

ಕಳೆದ ಲೋಕಸಭಾ ಚುನಾವಣೆಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಂತಹ ಸೇನಾ ಕಾರ್ಯಾಚರಣೆಯನ್ನು ಕೂಡ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ಭಾರತೀಯ ಸೇನೆಯ ರಾಜಕಾರಣರಹಿತ ದೇಶಪ್ರೇಮದ ಬದ್ಧತೆಗೆ ಮಸಿ ಬಳಿದಿದ್ದ ಬಿಜೆಪಿ, ಈ ಬಾರಿ ಇಡೀ ಮನುಕುಲವೇ ಜೀವರಕ್ಷಣೆಯ ಕಾತರದಲ್ಲಿ ನಿರೀಕ್ಷಿಸುತ್ತಿರುವ ಕೋವಿಡ್-19 ವ್ಯಾಕ್ಸಿನ್ ವಿಷಯವನ್ನು ಬಿಹಾರ ಚುನಾವಣೆಯ ದಾಳವಾಗಿ ಬಳಸಿಕೊಂಡಿದೆ.

ಬಿಹಾರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖ ಚುನಾವಣಾ ಭರವಸೆಯಾಗಿ ಬಿಜೆಪಿ ಬಿಹಾರದ ಜನತೆಗೆ ಉಚಿತ ವ್ಯಾಕ್ಸಿನ್ ನೀಡುವ ವಿಷಯವನ್ನು ಪ್ರಸ್ತಾಪಿಸಿದೆ. ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಐಸಿಎಂಆರ್ ನಿಂದ ವ್ಯಾಕ್ಸಿನ್ ಅನುಮೋದನೆ ಗೊಂಡು, ದೇಶದಲ್ಲಿ ಎಲ್ಲರಿಗೂ ಅಗತ್ಯವಿರುವಷ್ಟು ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸುತ್ತಿದ್ದಂತೆ ಬಿಹಾರದ ಜನತೆಗೆ ಸಂಪೂರ್ಣ ಉಚಿತವಾಗಿ ವ್ಯಾಕ್ಸಿನ್ ನೀಡುವುದು ಬಿಜೆಪಿಯ ಮೊಟ್ಟಮೊದಲ ಆಶ್ವಾಸನೆ” ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿಗೆ ದೇಶದ ಪ್ರತಿಯೊಬ್ಬ ನಾಗರಿಕನ ಜೀವ ರಕ್ಷಣೆಯ ಹೊಣೆ ಇದೆ. ಅದು ಕೇವಲ ಸಂವಿಧಾನಿಕ ಬದ್ಧತೆಯ ಪ್ರಶ್ನೆಯಷ್ಟೇ ಅಲ್ಲ; ಕೋವಿಡ್ -19 ಸೋಂಕು ದೇಶದಲ್ಲಿ ನಿತ್ಯ ಸಾವಿರಾರು ಮಂದಿಯ ಜೀವ ಬಲಿತೆಗೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ; ಈಗಾಗಲೇ 77 ಲಕ್ಷ ಮಂದಿ ಸೋಂಕಿತರಾಗಿ, 1.17 ಲಕ್ಷ ಮಂದಿ ಜೀವ ಕಳೆದುಕೊಂಡಿರುವಾಗ, ಜನರ ಜೀವ ರಕ್ಷಣೆ ಮಾಡುವುದು ಕನಿಷ್ಟ ಮನುಷ್ಯತ್ವ ಇರುವ ಯಾವುದೇ ಸರ್ಕಾರ, ಅಧಿಕಾರದಲ್ಲಿರುವ ನಾಯಕರ ಹೊಣೆಗಾರಿಕೆ. ಹಾಗಾಗಿ ಸಾವಿನ ಎದುರು ಜೀವಭಯದಲ್ಲಿ ನಿಂತಿರುವ ಜನಸಮುದಾಯದ ಮುಂದೆ ಮತ ಹಾಕಿ ವ್ಯಾಕ್ಸಿನ್ ಕೊಟ್ಟು ಜೀವ ಉಳಿಸುತ್ತೇವೆ ಎಂದು ಭರವಸೆ ನೀಡುವುದು ಅತ್ಯಂತ ಹೇಯ ಮತ್ತು ನಾಚಿಕೆಗೇಡಿನ ಪರಮಾವಧಿಯ ಎಂಬ ವ್ಯಾಪಕ ಟೀಕೆಗೆ ಬಿಜೆಪಿಯ ಈ ನಡೆ ಪಾತ್ರವಾಗಿದೆ.

ಬಿಜೆಪಿಯ ಪ್ರಣಾಳಿಕೆ ಬಿಡುಗಡೆಯ ಬೆನ್ನಲ್ಲೇ ಪ್ರತಿಪಕ್ಷಗಳು ಮತ್ತು ನೆಟ್ಟಿಗರು ಪಕ್ಷದ ನೈತಿಕ ದಿವಾಳಿತನದ ಬಗ್ಗೆ ಟೀಕೆ ಮತ್ತು ವ್ಯಂಗ್ಯದ ಸುರಿಮಳೆಗರೆದಿದ್ದಾರೆ. ಜನರ ಜೀವದ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿರುವ ಬಿಜೆಪಿ, ತನಗೆ ಮತ ಹಾಕಿದವರಿಗೆ ಮಾತ್ರ ಉಚಿತ ವ್ಯಾಕ್ಸಿನ್ ನೀಡಲಾಗುವುದು, ಮತ ಹಾಕದೇ ಇರುವವರು ಮತ್ತು ತನ್ನ ಅಭ್ಯರ್ಥಿಗಳನ್ನು ಸೋಲಿಸುವ ಕ್ಷೇತ್ರದವರಿಗೆ ಉಚಿತ ವ್ಯಾಕ್ಸಿನ್ ಇಲ್ಲ ಎಂಬ ಪರೋಕ್ಷ ಸಂದೇಶ ರವಾನಿಸಿದೆ. ಆ ಮೂಲಕ ಈಗಾಗಲೇ ಜೀವಭಯದಲ್ಲಿರುವ ದೇಶದ ಮತ್ತು ನಿರ್ದಿಷ್ಟವಾಗಿ ಬಿಹಾರದ ಜನತೆಯಲ್ಲಿ ಭೀತಿ ಹುಟ್ಟಿಸಿ, ಭಯಬೀಳಿಸಿ ಬ್ಲಾಕ್ ಮೇಲ್ ಮಾಡಿ ಮತ ಪಡೆಯುವ ಕೀಳುಮಟ್ಟದ, ಅಸಹ್ಯಕರ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಪ್ರಣಾಳಿಕೆಯ ಪ್ರಕಾರ ಆ ಪಕ್ಷಕ್ಕೆ ಮತ ಹಾಕದ ಜನ ಮತ್ತು ಆ ಪಕ್ಷದ ಸರ್ಕಾರಗಳು ಇಲ್ಲದ ರಾಜ್ಯಗಳಿಗೆ ಉಚಿತ ವ್ಯಾಕ್ಸಿನ್ ನೀಡುವುದಿಲ್ಲ ಎಂದೇ ಅಲ್ಲವೆ? ಎಂಬ ಪ್ರಶ್ನೆಯನ್ನೂ ಪ್ರತಿಪಕ್ಷಗಳು ಕೇಳಿವೆ. ಜೊತೆಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ಕೋವಿಡ್ ವ್ಯಾಕ್ಸಿನ್ ಲಭ್ಯತೆಯ ಕುರಿತು ಭಾರತ ಸರ್ಕಾರ ಇದೀಗ ತಾನೆ ತನ್ನ ನೀತಿ ಘೋಷಿಸಿದೆ. ನಿಮಗೆ ಯಾವಾಗ ವ್ಯಾಕ್ಸಿನ್ ಸಿಗಬಹುದು ಎಂಬುದನ್ನು ತಿಳಿದುಕೊಳ್ಳಲು ದಯಮಾಡಿ ನಿಮ್ಮ ರಾಜ್ಯದ ಚುನಾವಣಾ ದಿನಾಂಕವನ್ನು ಗಮನಿಸಿ. ಸುಳ್ಳು ಭರವಸೆಗಳ ಸರಣಿಯಲ್ಲಿ ಇದೂ ಒಂದು ಕೊಡುಗೆಯಾಗಿ ನಿಮಗೆ ಸಿಗಬಹುದು” ಎಂದು ಟ್ವೀಟ್ ಮಾಡಿ, ವ್ಯಂಗ್ಯವಾಡಿದ್ದಾರೆ.

ಶಶಿ ತರೂರ್ ಕೂಡ ತೀವ್ರ ಚಾಟಿ ಬೀಸಿದ್ದು, “ನೀವು ನನಗೆ ಓಟು ಕೊಡಿ, ನಾನು ನಿಮಗೆ ವ್ಯಾಕ್ಸಿನ್ ಕೊಡುವೆ.. ಇದು ಎಂಥ ಹೇಯ ಸಿನಿಕತನ! ಇಂತಹ ನಾಚಿಕೆಗೇಡಿನ ಭರವಸೆ ನೀಡುವ ಸಚಿವೆ ಮತ್ತು ಆಕೆಯ ಸರ್ಕಾರವನ್ನು ಚುನಾವಣಾ ಆಯೋಗ ಕಿವಿ ಹಿಂಡುವುದೇ” ಎಂದು ಪ್ರಶ್ನಿಸಿದ್ದಾರೆ. ಆ ಹೇಳಿಕೆಗೆ ದನಿಗೂಡಿಸಿರುವ ಛತ್ತೀಸಗಢ ಸಿಎಂ ಭೂಪೇಶ್ ಬಘೇಲ, ಸದ್ಯ ಚುನಾವಣೆ ಇಲ್ಲದಿರುವ ರಾಜ್ಯಗಳ ಜನ ವ್ಯಾಕ್ಸಿನ್ ಗಾಗಿ ಹಣ ತೆರಬೇಕು ಎಂದು ಬಿಜೆಪಿ ಪರೋಕ್ಷವಾಗಿ ಹೇಳುತ್ತಿದೆ ಎಂದಿದ್ದಾರೆ. ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕೂಡ, “ಈ ಚುನಾವಣಾ ಭರವಸೆಯ ಮೂಲಕ ಬಿಜೆಪಿ ದೇಶದ ಜನತೆಗೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ. ಯಾವೆಲ್ಲಾ ರಾಜ್ಯದಲ್ಲಿ ಸದ್ಯ ಚುನಾವಣೆಗಳು ನಡೆಯುವುದಿಲ್ಲವೋ ಆ ರಾಜ್ಯಗಳ ಜನತೆ ವ್ಯಾಕ್ಸಿನ್ ಗಾಗಿ ಹಣ ತೆರಬೇಕು ಎಂದು ಬಿಜೆಪಿ ಹೇಳುತ್ತಿದೆ. ಸಿಡುಬು, ದಡಾರ, ಪೋಲಿಯೋದಂತಹ ರೋಗಗಳ ವಿರುದ್ಧ ಇಡೀ ದೇಶದ ಜನತೆಗೆ ಉಚಿತ ವ್ಯಾಕ್ಸಿನ ನೀಡಿದ ದಿನಗಳು ಈಗ ಇತಿಹಾಸ ಸೇರಿವೆ. ಇನ್ನೇನಿದ್ದರೂ ಜನ ದುಡ್ಡು ಕೊಟ್ಟು ವ್ಯಾಕ್ಸಿನ್ ಪಡೆಯುವ ಕಾಲ” ಎಂದಿದೆ.

ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!
ಬಿಹಾರ ಚುನಾವಣಾ ಕಣದಲ್ಲಿ ಬೀಸತೊಡಗಿದೆಯೇ ಬದಲಾವಣೆಯ ಗಾಳಿ?

ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಎಎಪಿ ನಾಯಕ ಮತ್ತು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತಿತರ ನಾಯಕರು ಕೂಡ ಬಿಜೆಪಿಯ ಈ ಕೀಳು ರಾಜಕೀಯ ವರಸೆಯನ್ನು ಕಟು ಮಾತುಗಳಲ್ಲಿ ಟೀಕಿಸಿದ್ದಾರೆ ಮತ್ತು ಮತಕ್ಕಾಗಿ ವ್ಯಾಕ್ಸಿನ್ ಹಾಗೂ ವ್ಯಾಕ್ಸಿನ್ ಗಾಗಿ ಮತ ಎಂಬ ನೀತಿಯ ಬಗ್ಗೆ ಚುನಾವಣಾ ಆಯೋಗ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸುತ್ತಿದ್ಧೇವೆ ಎಂದೂ ಹೇಳಿದ್ದಾರೆ.

ನೆಟ್ಟಿಗರು ಕೂಡ ಪ್ರಧಾನಿ ಮೋದಿಯವರು ಒಂದು ಕಡೆ ಇನ್ನೂ ಒಂದು ವರ್ಷ ಕಾಲ ಕೋವಿಡ್-19 ವ್ಯಾಕ್ಸಿನ್ ಕೈಗೆ ಬರುವ ಸಾಧ್ಯತೆ ಇಲ್ಲ ಎನ್ನುತ್ತಾ, ಭೌತಿಕ ಅಂತರ, ಶುಚಿತ್ವ ಮತ್ತು ಮಾಸ್ಕ ಧರಿಸುವುದೇ ಸದ್ಯಕ್ಕೆ ಜೀವರಕ್ಷಣೆಗೆ ಇರುವ ಉಪಾಯ ಎಂದಿದ್ದಾರೆ. ಜೊತೆಗೆ ವ್ಯಾಕ್ಸಿನ್ ಲಭ್ಯವಾದಲ್ಲಿ ದೇಶದ ಜನರೆಲ್ಲರಿಗೂ ವ್ಯಾಕ್ಸಿನ್ ನೀಡಿ ಜೀವ ರಕ್ಷಿಸುವುದು ತಮ್ಮ ಸರ್ಕಾರದ ಮೊದಲ ಆದ್ಯತೆ ಎಂದಿದ್ದಾರೆ. ಆದರೆ, ಅವರದೇ ಪಕ್ಷದ ಪ್ರಣಾಳಿಕೆಯ ಮತ ಹಾಕಿದವರಿಗೆ ಉಚಿತ ವ್ಯಾಕ್ಸಿನ್ ಎನ್ನುವ ಮೂಲಕ ಮತ ಹಾಕದವರು ಮತ್ತು ಚುನಾವಣೆ ಇಲ್ಲದ ರಾಜ್ಯದವರಿಗೆ ಉಚಿತ ವ್ಯಾಕ್ಸಿನ್ ಇಲ್ಲ ಎಂಬ ಪರೋಕ್ಷ ಸಂದೇಶ ನೀಡಿದ್ಧಾರೆ. ಇದು ಯಾವ ಬಗೆಯ ದ್ವಿಮುಖ ನೀತಿ? ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಇನ್ನೂ ಮೂರು ವರ್ಷ ಚುನಾವಣೆಗಳಿಲ್ಲ. ಹಾಗಾದರೆ ಆ ರಾಜ್ಯದ ಜನರು ದುಡ್ಡು ಕೊಟ್ಟು ವ್ಯಾಕ್ಸಿನ್ ಖರೀದಿಸಬೇಕೆ? ಎಂದು ಪ್ರಶ್ನಿಸಿದ್ದಾರೆ.

ತನಗೆ ಮತ ಹಾಕಿದರೆ ಮಾತ್ರ ಉಚಿತ ಕೋವಿಡ್ ವ್ಯಾಕ್ಸಿನ್ ಎಂದ ಬಿಜೆಪಿ ಪ್ರಣಾಳಿಕೆ!
19 ಲಕ್ಷ ಉದ್ಯೋಗ ಸೃಷ್ಟಿ, ಪ್ರತಿಯೊಬ್ಬರಿಗೂ ಕರೋನಾ ಲಸಿಕೆ; ಬಿಹಾರ ಬಿಜೆಪಿಯ ಭರವಸೆ

ಈ ನಡುವೆ ಪ್ರತಿಪಕ್ಷಗಳು ಮತ್ತು ನೆಟ್ಟಿಗರ ತೀವ್ರ ಟೀಕೆಯ ಹಿನ್ನೆಲೆಯಲ್ಲಿ ಆ ಬಗ್ಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, “ಬಿಜೆಪಿ ಪ್ರಣಾಳಿಕೆಯಲ್ಲಿ ಉಚಿತ ಕೋವಿಡ್ ವ್ಯಾಕ್ಸಿನ್ ಭರವಸೆ ನೀಡಿರುವುದು ನಿಜ. ಎಲ್ಲಾ ವ್ಯಾಕ್ಸಿನೇಷನ್ ಕಾರ್ಯಕ್ರಮಗಳಂತೆ ಕೋವಿಡ್ ವ್ಯಾಕ್ಸಿನನ್ನೂ ಎಲ್ಲಾ ರಾಜ್ಯಗಳೂ ಕನಿಷ್ಟ ಮೊತ್ತದ ಹಣ ನೀಡಿ ಕೇಂದ್ರದಿಂದ ಖರೀದಿಸಬೇಕು. ತನ್ನ ರಾಜ್ಯದ ಜನತೆಗೆ ಉಚಿತವಾಗಿ ನೀಡುವುದೇ ಅಥವಾ ಕನಿಷ್ಟ ವೆಚ್ಚ ಭರಿಸಿ ವ್ಯಾಕ್ಸಿನ್ ಪಡೆಯುವಂತೆ ಮಾಡುವುದೆ ಎಂಬುದನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಬೇಕು. ಬಿಹಾರದ ವಿಷಯದಲ್ಲಿ ಅಲ್ಲಿನ ರಾಜ್ಯ ಸರ್ಕಾರ ತನ್ನ ಜನತೆಗೆ ಉಚಿತ ವ್ಯಾಕ್ಸಿನ್ ನೀಡಲು ತೀರ್ಮಾನಿಸಿದೆ” ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ; ಅನುಮಾನ ಪರಿಹರಿಸುವ ಬದಲು, ಈ ಟ್ವೀಟ್, ಕೇಂದ್ರ ಸರ್ಕಾರ ಉಚಿತವಾಗಿ ವ್ಯಾಕ್ಸಿನ್ ನೀಡುವುದಿಲ್ಲ ಎಂಬುದನ್ನು ಇನ್ನಷ್ಟು ಸ್ಪಷ್ಟಪಡಿಸಿದೆ.

ಅಂದರೆ; ಕರ್ನಾಟಕದ ಉಪಚುನಾವಣೆ ಎದುರಿಸುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಕನ್ನಡಿಗರೆಲ್ಲರೂ ಮುಂದೊಂದು ದಿನ ವ್ಯಾಕ್ಸಿನ್ ಲಭ್ಯವಾದಾಗ ಅದನ್ನು ತಮ್ಮ ಬೆವರಿನ ಹಣ ತೆತ್ತೇ ಖರೀದಿಸಬೇಕು. ಮತ ಹಾಕಿ ಗೆಲ್ಲಿಸಿದ ಬಿಜೆಪಿ ಸರ್ಕಾರ, ಅಡುಗೆ ಅನಿಲ, ದಿನಬಳಕೆ ವಸ್ತು, ಮಾಸ್ಕ ಧರಿಸಿದ ದಂಡ ಸೇರಿದಂತೆ ಇತರೆ ಎಲ್ಲಾ ವಿಷಯಗಳಲ್ಲಿ ಕೋವಿಡ್ ಸಂಕಷ್ಟದ ಹೊತ್ತಲ್ಲಿ ಜನರ ಗಾಯದ ಮೇಲೆ ಬರೆ ಎಳೆದಂತೆ ಜೀವರಕ್ಷಣೆಯ ವ್ಯಾಕ್ಸಿನ್ ವಿಷಯದಲ್ಲಿ ಕೂಡ ದಂಧೆ ಮಾಡಲು ಸಜ್ಜಾಗಿದೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com