ಬಿಹಾರ ಚುನಾವಣಾ ಕಣದಲ್ಲಿ ‌ʼರಾವಣʼನ ಪ್ರವೇಶ: ದಲಿತ ರಾಜಕಾರಣದಲ್ಲಿ ಸಂಚಲನ

ಉತ್ತರ ಪ್ರದೇಶದ ಹಥ್ರಾಸ್‌ ಪ್ರಕರಣದ ಬಳಿಕ ಯೋಗಿ ಆದಿತ್ಯನಾಥ್ರ ʼಠಾಕೂರ್ʼ ಹಿನ್ನೆಲೆ ಬಿಜೆಪಿಯಿಂದ ದಲಿತರನ್ನು ವಿಮುಖಗೊಳಿಸಿದರೂ, ಅದರ ಪ್ರಯೋಜನವನ್ನು ಮಾಯಾವತಿಗಿಂತ ಹೆಚ್ಚು ಚಂದ್ರಶೇಖರ್‌ ಆಝಾದ್‌ ಪಡೆಯುತ್ತಿದ್ದಾರೆ.
ಬಿಹಾರ ಚುನಾವಣಾ ಕಣದಲ್ಲಿ ‌ʼರಾವಣʼನ ಪ್ರವೇಶ: ದಲಿತ  ರಾಜಕಾರಣದಲ್ಲಿ ಸಂಚಲನ

ಬಿಹಾರ ಚುನಾವಣಾ ಕಣದಲ್ಲಿ ದಲಿತ ಯುವ ನಾಯಕ ಚಿರಾಗ್‌ ಪಾಸ್ವಾನ್‌ ಹೆಸರು ಹೆಚ್ಚು ಪ್ರಚಲಿತದಲ್ಲಿದ್ದರೂ, ಇನ್ನೋರ್ವ ದಲಿತ ನಾಯಕನೂ ಬಿಹಾರದ ಮಣ್ಣಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸುತ್ತಿದ್ದಾರೆ. ಮೂಲತಃ ಉತ್ತರ ಪ್ರದೇಶದ ಚಂದ್ರಶೇಖರ್‌ ಆಝಾದ್‌ ಬಿಹಾರ ಚುನಾವಣೆಯ ಮೂಲಕ ತಮ್ಮ ರಾಜಕೀಯ ಬದುಕಿಗೆ ಭದ್ರ ಬುನಾದಿ ಹಾಕುವ ಲಕ್ಷಣಗಳು ಕಂಡು ಬರುತ್ತಿವೆ.

ತಮ್ಮ ಆಕರ್ಷಕ ರಾಜಕೀಯ ನಿಲುವಿನಿಂದ ದೇಶಾದ್ಯಂತ ಅಭಿಮಾನಿಗಳನ್ನು ಪಡೆಯುತ್ತಿರುವ ಚಂದ್ರಶೇಖರ್‌ ಆಝಾದ್‌ ಭರವಸೆಯ ಯುವ ನಾಯಕರಾಗಿ ರೂಪುಗೊಳ್ಳುತ್ತಿದ್ದಾರೆ. ದಲಿತ ಅಸ್ಮಿತೆಯ ರಾಜಕಾರಣದ ಚಂದ್ರಶೇಖರ್‌, ಸಿಎಎ ವಿರೋಧಿ ಹೋರಾಟದ ಸಂಧರ್ಭದಲ್ಲಿ ಪ್ರತಿಭಟನಾಕಾರರಿಂದ ʼಇಮಾಮ್‌ʼ ಎಂದು ಕರೆಸಿಕೊಂಡವರು.

ಮುಸ್ಲಿಮರ ಮೇಲೂ ತಮ್ಮ ಪ್ರಭಾವ ಬೀರುವಷ್ಟು ಛಾತಿಯುಳ್ಳ, ದಲಿತ್- ಮುಸ್ಲಿಮ್‌ ಯುವಜನಾಂಗದಲ್ಲಿ ಏಕಕಾಲಕ್ಕೆ ಆಶಾವಾದ ಮೂಡಿಸುತ್ತಿರುವ ಚಂದ್ರಶೇಖರ್‌ ಆಝಾದ್‌ ಬಿಜೆಪಿಗಿಂತ ಹೆಚ್ಚು ಮಾಯಾವತಿ ಹಾಗೂ ಅವರ ಪಕ್ಷ ಬಿಎಸ್‌ಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ʼದಲಿತರ ಮಹಾನಾಯಕಿʼ ಎಂದು ಬಿಂಬಿತವಾಗಿರುವ ಮಾಯಾವತಿಯ ರಾಜಕೀಯ ಆತ್ಮವಂಚಕತನದಿಂದಾಗಿ ಅವರ ಪಟ್ಟವನ್ನು ಚಂದ್ರಶೇಖರ್‌ ಆಝಾದ್‌ ಅಲಂಕರಿಸುವ ಸಾಧ್ಯತೆ ಇದೆ.

ಹಥ್ರಾಸ್‌ ಅತ್ಯಾಚಾರ ಪ್ರಕರಣದಲ್ಲಿ ಮಾಯಾವತಿ ಕೇವಲ ಪತ್ರಿಕಾ ಹೇಳಿಕೆ ಮೂಲಕ ಖಂಡನೆ ವ್ಯಕ್ತಪಡಿಸಿದರೆ, ಚಂದ್ರಶೇಖರ್‌ ಆಝಾದ್‌ ಖುದ್ದು ಸಂತ್ರಸ್ತೆ ಕುಟುಂಬವನ್ನು ಭೇಟಿ ಮಾಡಿ, ಪ್ರಕರಣಗಳನ್ನು ಮೈಮೇಲೆಳೆದುಕೊಂಡು ಜನ ಹೋರಾಟ ಸಂಘಟಿಸಿದವರು. ಆದರೂ, ಈ ಪ್ರಕರಣಕ್ಕೆ ಚಂದ್ರಶೇಖರ್‌ ಪ್ರತಿಕ್ರಿಯಿಸಿದ ರೀತಿ ಕಾಂಗ್ರೆಸ್‌ನ ರಾಹುಲ್‌ ಹಾಗೂ ಪ್ರಿಯಾಂಕರಷ್ಟು ವ್ಯಾಪಕ ಪ್ರಚಾರಕ್ಕೆ ಬಂದಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರ ಬಲ, ಪ್ರಭಾವ, ಇತಿಹಾಸಕ್ಕೆ ಹೋಲಿಸಿದರೆ ಚಂದ್ರಶೇಖರ್‌ ಸ್ಥಾಪಿತ ಭೀಮ್‌ ಆರ್ಮಿ ಸಣ್ಣದು. ಆ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಹೋರಾಟದ ಮೇಲಿನ ಬದ್ಧತೆ ಹಾಗೂ ಭೀಮ್‌ ಆರ್ಮಿಯ ದಲಿತ ಅಸ್ಮಿತೆ ರಾಜಕಾರಣದ ಪ್ರಸ್ತುತತೆಯು ಕಾಂಗ್ರೆಸ್‌ ನ ರಾಹುಲ್‌ ಹಾಗೂ ಪ್ರಿಯಾಂಕರಿಗಿಂತ ಹೆಚ್ಚು ವಿಶ್ವಾಸ ಮೂಡಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2015 ರಲ್ಲಿ ಭೀಮ್‌ ಆರ್ಮಿಯನ್ನು ಸ್ಥಾಪಿಸಿ ದಲಿತಪರ, ಬ್ರಾಹ್ಮಣ್ಯದ ವಿರುದ್ಧ ಹೋರಾಟ ಸಂಘಟಿಸುತ್ತಿರುವ ಚಂದ್ರಶೇಖರ್‌ ಆಝಾದ್‌ ರಾವಣ್‌ ಆಝಾದ್‌ ಸಮಾಜ್ ಪಾರ್ಟಿ ಎಂಬ ಹೊಸ ಪಕ್ಷದೊಂದಿಗೆ ರಾಜಕೀಯ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಈಗಾಗಲೇ ಹೋರಾಟದ ಕಣದಲ್ಲಿ ಭರವಸೆಯ ನಾಯಕ ಎನಿಸಿಕೊಂಡ ಆಝಾದ್‌ ಬಿಹಾರ ಚುನಾವಣೆ ಮೂಲಕ ರಾಜಕಾರಣದಲ್ಲೂ ತಮ್ಮ ಪ್ರಭಾವ ಪರೀಕ್ಷಿಸಲಿದ್ದಾರೆ.

ಈ ಬೆಳವಣಿಗೆಯನ್ನು ಮೊದಲೇ ಗ್ರಹಿಸಿಕೊಂಡವರಂತೆ ಬಿಎಸ್‌ಪಿಯ ಅಧಿನಾಯಕಿ ಮಾಯಾವತಿ ಚಂದ್ರಶೇಖರ್‌ ಆಝಾದ್‌ರನ್ನು ಕಡೆಗಣಿಸಲು ಪ್ರಯತ್ನಿಸಿದ್ದರು, ಆದರೆ ದಮನಿತ ದಲಿತರು ಆಝಾದ್‌ರನ್ನು ಅವಗಣನೆ ಮಾಡದಾದಾಗ ಮಾಯಾವತಿ ಆಝಾದ್‌ ವಿರುದ್ಧ ಬಹಿರಂಗ ಹೇಳಿಕೆ ನೀಡಿ ತಮ್ಮ ಹಗೆತನವನ್ನು ಜಗಜ್ಜಾಹೀರುಗೊಳಿಸಿದ್ದರು. “ಉತ್ತರಪ್ರದೇಶದ ರಾಜಕೀಯದಲ್ಲಿ ಈ ರಾವಣನನ್ನು ಬಿಜೆಪಿ ಮಾತ್ರವಲ್ಲ ಬಿಎಸ್ ಪಿಯೂ ತನ್ನ ಶತ್ರುವೆಂದು ಭಾವಿಸಿದೆ” ಎಂಬ ಕನ್ನಡದ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಅವರ ಹೇಳಿಕೆ ದಲಿತರ ದನಿಯೆಂದು ಅಧಿಕಾರ ಅನುಭವಿಸಿದ ಮಾಯಾವತಿ/ಬಿಎಸ್‌ಪಿ ಹೇಗೆ ಒಬ್ಬ ದಲಿತ ಯುವನಾಯಕನ ಏಳಿಗೆಗೆ ಸಹಿಸುತ್ತಿಲ್ಲ ಎನ್ನುವುದರ ಸರಿಯಾದ ಗ್ರಹಿಕೆ.

ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಲು ಚಂದ್ರಶೇಖರ್‌ ಆಝಾದ್‌ ತನ್ನ ಹೊಸ ಪಕ್ಷದ ಮೂಲಕ ಸುಮಾರು 30 ರಷ್ಟು ಕ್ಷೇತ್ರದಲ್ಲಿ ಕಣಕ್ಕೆ ಬಿಟ್ಟಿದ್ದಾರೆ. ಇದು ಉತ್ತರ ಪ್ರದೇಶ ಮಾಜೀ ಮುಖ್ಯಮಂತ್ರಿ ಮಾಯಾವತಿಗೆ ಸಾಕಷ್ಟು ನಡುಕ ಹುಟ್ಟಿಸಿದೆ. ಪಕ್ಷ ಸ್ಥಾಪಿಸಿ ವರ್ಷವೂ ಆಗದಿರುವ ಚಂದ್ರಶೇಖರ್‌ ಆಝಾದ್‌ ರಿಗೆ ಬಿಹಾರದಲ್ಲಿ ಸಾಕಷ್ಟು ಜನಬೆಂಬಲ ವ್ಯಕ್ತವಾಗುತ್ತಿರುವುದು ಮಾಯಾವತಿಗೆ ನುಂಗಲಾರದ ತುತ್ತಾಗಿದೆ.

ಅಂಬೇಡ್ಕರ್‌ ಹಾಗೂ ಸಂವಿಧಾನ ಹಿಡಿದುಕೊಂಡು, ನೀಲಿ ಶಾಲು ಹೆಗಲಿಗೆ ಹಾಕಿ, ʼಮೀಸೆ ತಿರುವಿʼ ಚಂದ್ರಶೇಖರ್‌ ಆಝಾದ್‌ ಬರುತ್ತಿದ್ದರೆ ಜನ ʼಜೈ ಭೀಮ್‌ʼ ಘೋಷಗಳಿಂದ ಸ್ವಾಗತಿಸುತ್ತಿದ್ದಾರೆ. ಚಂದ್ರಶೇಖರ್‌ ಮೇಲಿರುವ ಭರವಸೆ ಬಿಹಾರ ಚುನಾವಣಾ ಪ್ರಚಾರ ಸಭೆಯಲ್ಲಿ ಪ್ರತಿಬಿಂಬಿಸುತ್ತಿದೆ. ಬಿಹಾರದಲ್ಲಿ ಈ ಆಧುನಿಕ ರಾವಣ ದಲಿತ ಮತಗಳನ್ನು ಮಾತ್ರವಲ್ಲದೆ ಮುಸ್ಲಿಂ ಹಾಗೂ ಶೋಷಿತ ಸಮಾಜದ ಮತಗಳನ್ನೂ ತಮ್ಮೆಡೆಗೆ ಸೆಳೆಯಲಿದ್ದಾರೆ ಎಂದು ರಾಜಕೀಯ ನುರಿತ ಬಿಹಾರ ಪತ್ರಕರ್ತರು ವಿಶ್ಲೇಷಿಸುತ್ತಿದ್ದಾರೆ.

-

ಈಗಾಗಲೇ, ದಿನಗಳೆದಂತೆ ದಲಿತ ಮತಗಳನ್ನು ಕಳೆದುಕೊಂಡು ಬರುತ್ತಿರುವ ಮಾಯಾವತಿಗೆ ಇದು ತೀವ್ರ ಕಂಟಕವಾಗಿ ಪರಿಣಮಿಸಲಿದೆ. ದಲಿತರಲ್ಲಿ ಮಾಯಾವತಿಯ ಪ್ರಭಾವ ಕ್ಷೀಣಿಸುತ್ತಿರುವುದನ್ನು ಈ ಹಿಂದಿನ ಚುನಾವಣಾ ಫಲಿತಾಂಶಗಳು ಸಾಬೀತುಪಡಿಸುತ್ತವೆ. ಉದಾಹರಣೆಗೆ, 2007ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 30 ಶೇಕಡಾ ಮತಗಳನ್ನು ಬಿಎಸ್‌ಪಿ ಪಡೆದರೆ, 2012 ರಲ್ಲಿ ಇದು 26 ಶೇಕಡಾಕ್ಕೆ ಇಳಿದಿದೆ, ಹಾಗೂ 2017 ಕ್ಕಾಗುವಾಗ ಈ ಪ್ರಮಾಣ 22 ಶೇಕಡಾಕ್ಕೆ ತಲುಪಿದೆ. ಕಳೆದ ಎರಡು ಲೋಕಸಭೆಯಲ್ಲಿ ಬಿಎಸ್‌ಪಿ 20 ಶೇಕಡಾ ಮಾತ್ರ ಮತಗಳನ್ನು ಪಡೆದಿದೆ. ತನ್ನ ಕೈಯಿಂದ ತಪ್ಪುತ್ತಿರುವ ದಲಿತ ಮತವನ್ನು ಚಂದ್ರಶೇಖರ್‌ ಪಡೆಯಲಿದ್ದಾರೆ ಎಂಬುದು ಮಾಯಾವತಿ ಚಿಂತೆ. ಆದರೆ ದಲಿತ ಮತವನ್ನು ಪಡೆಯಲು ಮಾಯಾವತಿಗಿಂತ ಚಂದ್ರಶೇಖರ್‌ ಎಷ್ಟೋ ಪಾಲು ಅರ್ಹರು ಎಂಬುವುದು ಹಥ್ರಾಸ್‌ ಪ್ರಕರಣದಲ್ಲಿಯೇ ಮನದಟ್ಟಾಗುತ್ತದೆ.

ಮಾಯಾವತಿಯವರಲ್ಲಿ ಇದು ಅಭದ್ರತೆಯನ್ನು ಸೃಷ್ಟಿಸಿದೆ. ಬಿಹಾರ ಚುನಾವಣೆಯಲ್ಲಿ ಚಂದ್ರಶೇಖರ್‌ ಪಕ್ಷ ದಲಿತ, ಮುಸ್ಲಿಮ್‌ ಮತಗಳನ್ನು ಸೆಳೆಯುತ್ತಿದ್ದರೂ ಭಾರೀ ಪ್ರಮಾಣದಲ್ಲಿ ಬಿಹಾರದ ಫಲಿತಾಂಶದಲ್ಲಿ ತನ್ನ ಛಾಪು ಮೂಡಿಸುವುದು ಕಷ್ಟ, ಆದರೆ ಇಲ್ಲಿ ಸಾಧಾರಣ ಯಶಸ್ಸು ಪಡೆದರೂ ನೆರೆಯ ಉತ್ತರ ಪ್ರದೇಶದ ರಾಜಕೀಯ ಚಲನಶೀಲತೆಯ ಮೇಲೆ ಭಾರೀ ಪರಿಣಾಮ ಬೀರಬಹುದು. ಇದು ಖಂಡಿತವಾಗಿಯೂ ಬಿಎಸ್‌ಪಿಯ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಇರಬಲ್ಲದು. ಹಾಗಾಗಿಯೇ ದಲಿತ ಪರ ಪರ್ಯಾಯ ದನಿಯೊಂದು ಬಿಹಾರ ಚುನಾವಣೆಯಲ್ಲಿ ಸದ್ದು ಮಾಡುವುದನ್ನು ಮಾಯಾವತಿ ಇಷ್ಟ ಪಡುವುದು ಸಾಧ್ಯವಿಲ್ಲ.

ಉತ್ತರ ಪ್ರದೇಶದಲ್ಲಿ ಹಥ್ರಾಸ್‌ ಘಟನೆಯೊಂದಿಗೆ ಠಾಕೂರ್‌ ಜನರ ಮೇಲೆ, ಠಾಕೂರ್‌ ಮುಖ್ಯಮಂತ್ರಿ ಆ ಮೂಲಕ ಬಿಜೆಪಿ ಮೇಲೆ ದಲಿತರಿಗೆ ಸಾಕಷ್ಟು ಆಕ್ರೋಶವಿದೆ. ಈ ಆಕ್ರೋಶವನ್ನು ನಿಯಂತ್ರಿಸಬಲ್ಲ ವಿಶ್ವಾಸಾರ್ಹ ದಲಿತ ನಾಯಕರ ಅನುಪಸ್ಥಿತಿಯು ಬಿಜೆಪಿಗೆ ಇದೆ. ಯುಪಿ ಸರ್ಕಾರಕ್ಕೆ ಸೆಡ್ಡು ಹಾಕಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ರಾಹುಲ್‌ ಹಾಗೂ ಪ್ರಿಯಾಂಕ ಗಾಂಧಿ ಸಂಪೂರ್ಣ ದಲಿತರ ಮನಗೆಲ್ಲುವಲ್ಲಿ ಯಶಸ್ವಿಯಾಗುವುದು ಸಂದೇಹ, ಬಹುತೇಕ ದಲಿತರು ಇದನ್ನು ʼಸಾಂಕೇತಿಕ ರಾಜಕಾರಣʼ ಎಂದೇ ಭಾವಿಸುತ್ತಾರೆ, ಪ್ರಿಯಾಂಕ, ರಾಹುಲ್‌ ಭೇಟಿಯು ಇದು ಉತ್ತರಪ್ರದೇಶದ ದಲಿತರ ಬದುಕಿನ ಮೇಲೆ ಕಾರ್ಯಾತ್ಮಕ ಪರಿಣಾಮ ಬೀರಲಿದೆ ಎಂಬ ವಿಶ್ವಾಸ ಹುಟ್ಟಿಲ್ಲ. ಮಾತ್ರವಲ್ಲ ಭರವಸೆ ತುಂಬುವ ದಲಿತ ನಾಯಕರ ಕೊರತೆ ಕಾಂಗ್ರೆಸ್‌ ಪಾಳೆಯದಲ್ಲೂ ಇದೆ.

ಈ ವೇಳೆ ಆಕ್ರಮಣಕಾರಿಯಂತೆ ತೋರುವ ಅಥವಾ ಬಿಂಬಿಸಲ್ಪಟ್ಟ ರಾಜಕಾರಣವನ್ನು ಚಂದ್ರಶೇಖರ್‌ ಮಾಡುತ್ತಿದ್ದಾರೆ. ಇಂತಹ ಕಠಿಣ ಪ್ರತಿರೋಧದ ರಾಜಕೀಯದಲ್ಲಿ ತೊಡಗಿಕೊಳ್ಳಬೇಕೆಂದು ದಲಿತರಿಗೆ ಅನಿಸಿದರೆ, ಈ ಎರಡು ರಾಷ್ಟ್ರೀಯ ಪಕ್ಷಗಳ ಅತೃಪ್ತ ದಲಿತ ಮತದಾರರು ಸುಲಭವಾಗಿ ರಾವಣ್‌ ಪಕ್ಷಕ್ಕೆ ವಾಲಲಿದ್ದಾರೆ. ಹಾಗೆ ವಾಲಿಕೊಂಡರೆ ಅದರ ಪರಿಣಾಮವನ್ನು ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಎದುರಿಸಬೇಕಾಗುತ್ತದೆ. ಒಂದು ವೇಳೆ ಬಿಹಾರದಲ್ಲಿ ಆಝಾದ್‌ ರಿಗೆ ನಿರೀಕ್ಷಿತ ಬೆಂಬಲ ಸಿಗದಿದ್ದರೂ ಆಝಾದ್‌ರ ರಾಜಕೀಯ ಜೀವನ ಸಂಪೂರ್ಣ ಅಪಾಯಕ್ಕೊಳಗಾಗುವುದಿಲ್ಲ ಎಂದು ಪತ್ರಕರ್ತ ಡಿಕೆ ಸಿಂಗ್‌ ತನ್ನ ರಾಜಕೀಯ ವಿಶ್ಲೇಷಣಾ ಲೇಖನದಲ್ಲಿ(ದಿ ಪ್ರಿಂಟ್‌) ಹೇಳುತ್ತಾರೆ. ಹೆಚ್ಚೆಂದೆರೆ ಇದು ದಲಿತ ನಾಯಕತ್ವದ ಸುದೀರ್ಘ ಹೋರಾಟದಲ್ಲಿ ಒಂದು ತಪ್ಪಾದ ಆಲೋಚನೆಯಾಗಬಹುದು ಅಥವಾ ತಾತ್ಕಾಲಿಕ ನಿಲುಗಡೆಯಾಗಬಹುದು ಎಂದವರು ಅಭಿಪ್ರಾಯ ಪಡುತ್ತಾರೆ. ಹಾಗೊಂದು ವೇಳೆ ಬಿಹಾರ ಚುನಾವಣೆ ಫಲಿತಾಂಶದಲ್ಲಿ ಬಲವಾಗಿ ತಮ್ಮ ಛಾಪನ್ನು ಚಂದ್ರಶೇಖರ್‌ ತೋರಿದರೆ, ಉತ್ತರ ಪ್ರದೇಶ ದಲಿತ ರಾಜಕಾರಣದಲ್ಲೂ ಚಂದ್ರಶೇಖರ್‌ ಆಝಾದ್‌ ಪ್ರಭಾವ ಬೀರಬಲ್ಲರು.

Inputs : ದಿ ಹಿಂದೂ, ದಿ ಪ್ರಿಂಟ್‌, ಎನ್‌ಡಿಟಿವಿ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com