ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ್‌ ಯೋಜನೆ ಆರಂಭಿಸಿದ ಗ್ರಾಮದಲ್ಲಿಯೇ ಇಲ್ಲ ಫಲಾನುಭವಿಗಳು!

ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರನ್ನು ತಮ್ಮ ರಾಜ್ಯದಲ್ಲಿಯೇ ಉಳಿಸಿಕೊಳ್ಳುವ ಯೋಜನೆ ಈ ರೀತಿ ವಿಫಲವಾಗಿದ್ದು ಚುನಾವಣೆ ಎದುರು ನೋಡುತ್ತಿರುವ ಬಿಹಾರದ ನೈಜ ಚಿತ್ರಣವನ್ನು ಕಣ್ಣ ಮುಂದೆ ತಂದಿಟ್ಟಿದೆ.
ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ್‌ ಯೋಜನೆ ಆರಂಭಿಸಿದ ಗ್ರಾಮದಲ್ಲಿಯೇ ಇಲ್ಲ ಫಲಾನುಭವಿಗಳು!

ಕರೋನಾ ಸೋಂಕು ನಿಯಂತ್ರಿಸಲು ಜಾರಿಗೆ ಬಂದ ಲಾಕ್‌ಡೌನ್‌ನಲ್ಲಿ ಲಕ್ಷಾಂತರ ಜನರು ನಿರುದ್ಯೋಗಿಗಳಾದರು ಮತ್ತು ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ದೇಶದ ಪ್ರಮುಖ ನಗರಗಳಿಂದ ತಮ್ಮ ಸ್ವಂತ ರಾಜ್ಯಗಳಿಗೆ ವಲಸೆ ಬಂದರು. ಹೀಗೆ ಜೀವನೋಪಾಯ ಕಳೆದುಕೊಂಡು ತವರಿಗೆ ಬಂದ ವಲಸೆ ಕಾರ್ಮಿಕರಿಗೆ ತಮ್ಮ ಊರಿನಲ್ಲೇ ಉದ್ಯೋಗ ನೀಡುವ ಸಲುವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ 'ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ್' ಎಂಬ ಯೋಜನೆಯನ್ನು ಪ್ರಾರಂಭಿಸಿತ್ತು.

ಈ ಅಭಿಯಾನದಡಿಯಲ್ಲಿ ಸರ್ಕಾರವು 6 ರಾಜ್ಯಗಳ 116 ಜಿಲ್ಲೆಗಳಲ್ಲಿ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವುದಾಗಿ ಹೇಳಿತ್ತು. ಇದಕ್ಕಾಗಿ ಸರ್ಕಾರ 50 ಸಾವಿರ ಕೋಟಿ ರೂಪಾಯಿಗಳ ಬಜೆಟ್ ನಿಗದಿಪಡಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ್ ಯೋಜನೆಯನ್ನು ಪ್ರಾರಂಭಿಸಿದ ಬಿಹಾರದ ಖಾಗೇರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಲ್ಲಿಯೇ, ಈ ಯೋಜನೆಯ ಒಂದು ಫಲಾನುಭವಿ ಕೂಡ ಇಲ್ಲ ಎಂದು ದಿ ವೈರ್ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವರದಿಯ ಪ್ರಕಾರ, ಯೋಜನೆಯ ಪ್ರಾರಂಭದ ಸಮಯದಲ್ಲಿ ಕೆಲಸ ಪಡೆದ ಜನರು ಸಹ ಕೇವಲ ಒಂದು ತಿಂಗಳು ಮಾತ್ರ ಕೆಲಸ ಮಾಡಿದರು. ಬಳಿಕ ಉಂಟಾದ ಪ್ರವಾಹದಿಂದಾಗಿ ಆ ವಲಸೆ ಕಾರ್ಮಿಕರು ಸಹ ಇತರ ರಾಜ್ಯಗಳಿಗೆ ಜೀವನೋಪಾಯ ಹುಡುಕಿಕೊಂಡು ಮರಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ 467 ಕಾರ್ಮಿಕರು ಗ್ರಾಮಗಳಿಗೆ ಹಿಂತಿರುಗಿದ್ದಾರೆ ಎಂದು ಗ್ರಾಮದ ಮುಖ್ಯಸ್ಥರು ಹೇಳುತ್ತಾರೆ. ಅವರಲ್ಲಿ 120 ಮಂದಿಗೆ MNREGA ಅಡಿಯಲ್ಲಿ ಕೆಲಸ ಕೂಡಾ ಸಿಕ್ಕಿತು. ಆದರೆ ಇಲ್ಲಿ ಪ್ರವಾಹ ಉಂಟಾಗಿ ಆ ಕೆಲಸ ನಿಂತುಹೋಯಿತು ಮತ್ತು ಕಾರ್ಮಿಕರು ತಮ್ಮ ಹೊಟ್ಟೆಪಾಡಿಗಾಗಿ ಇತರ ರಾಜ್ಯಗಳಿಗೆ ಕೆಲಸ ಹುಡುಕಿ ಹಿಂದಿರುಗಿದ್ದಾರೆ. ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ್ ಅವರ ಅಡಿಯಲ್ಲಿ, ಕಾರ್ಮಿಕರಿಗೆ ಈ ಯೋಜನೆಯ ಲಾಭವನ್ನು ಹೇಗೆ ನೀಡಬೇಕು ಎಂಬ ಬಗ್ಗೆ ಅಂತಹ ಯಾವುದೇ ಮಾರ್ಗಸೂಚಿಗಳನ್ನು ಸರ್ಕಾರದಿಂದ ಲಭಿಸಿಲ್ಲ ಎಂದು ಗ್ರಾಮ ಮುಖ್ಯಸ್ಥರು ಆರೋಪಿಸಿದ್ದಾರೆ.

ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನದ ಅಡಿಯಲ್ಲಿ, 6 ರಾಜ್ಯಗಳ 116 ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಕೆಲಸ ನೀಡಬೇಕಾಗಿದೆ. ಈ 6 ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಒಡಿಶಾ ಮತ್ತು ಜಾರ್ಖಂಡ್ ಸೇರಿವೆ, ಅಲ್ಲಿ ಕರೋನಾದಿಂದ ಜಾರಿಗೆ ಬಂದ ಲಾಕ್‌ಡೌನ್‌ನಲ್ಲಿ ಅತಿ ಹೆಚ್ಚು ವಲಸೆ ಕಾರ್ಮಿಕರು ತವರಿಗೆ ಮರಳಿದ್ದರು. ಈ ಯೋಜನೆಯಡಿ ಕಾರ್ಮಿಕರಿಗೆ ಕನಿಷ್ಟ 125 ದಿನಗಳ ಉದ್ಯೋಗ ನೀಡಬೇಕಾಗಿದೆ.

ಈ ಯೋಜನೆಯು ಬಿಹಾರದ 32 ಜಿಲ್ಲೆಗಳು, ಉತ್ತರ ಪ್ರದೇಶದ 31 ಜಿಲ್ಲೆಗಳು, ಮಧ್ಯಪ್ರದೇಶದ 24 ಜಿಲ್ಲೆಗಳು, ರಾಜಸ್ಥಾನದಲ್ಲಿ 22 ಜಿಲ್ಲೆಗಳು, ಒಡಿಶಾದಲ್ಲಿ 4 ಜಿಲ್ಲೆಗಳು ಮತ್ತು ಜಾರ್ಖಂಡ್‌ನ 3 ಜಿಲ್ಲೆಗಳನ್ನು ಒಳಗೊಂಡಿದೆ.

ಬಿಹಾರಕ್ಕಾಗಿ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನ್ ಯೋಜನೆಯಡಿ 17 ಸಾವಿರ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಅದರಲ್ಲಿ ಬಿಹಾರ ಸರ್ಕಾರ ಇಲ್ಲಿಯವರೆಗೆ ಕೇವಲ 10 ಸಾವಿರ ಕೋಟಿಗಳನ್ನು ಮಾತ್ರ ಖರ್ಚು ಮಾಡಿದೆ. ಇನ್ನೂ 7 ಸಾವಿರ ಕೋಟಿ ರೂಪಾಯಿ ಖರ್ಚು ಮಾಡದೆ ಹಾಗೆಯೇ ಖಜಾನೆಯಲ್ಲಿ ಉಳಿದಿದೆ. ಪ್ರವಾಹದಿಂದಾಗಿ ಸುಮಾರು 5.5 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲ ಮತ್ತು ಕೇಂದ್ರದಿಂದ ಹಣವನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ ಎಂದು ರಾಜ್ಯ ಅಧಿಕಾರಿಗಳು ಹೇಳಿದ್ದಾರೆ.

ಒಟ್ಟಿನಲ್ಲಿ ಕೇಂದ್ರ ವಲಸೆ ಕಾರ್ಮಿಕರಿಗಾಗಿ ತಂದ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನವು ಕೂಡಾ ಕೇಂದ್ರ ಸರ್ಕಾರದ ಇತರ ಯೋಜನೆಗಳಂತೆ ಮಕಾಡೆ ಮಲಗಿದೆ. ಈ ಯೋಜನೆಯನ್ನು ಪ್ರಾರಂಭಿಸಿರುವ ಗ್ರಾಮದಲ್ಲಿಯೇ ಈ ಯೋಜನೆಯ ಫಲಾನುಭವಿಗಳು ಇಲ್ಲವೆನ್ನುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಇನ್ನು, ವಲಸೆ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರನ್ನು ತಮ್ಮ ರಾಜ್ಯದಲ್ಲಿಯೇ ಉಳಿಸಿಕೊಳ್ಳುವ ಯೋಜನೆ ಈ ರೀತಿ ವಿಫಲವಾಗಿದ್ದು ಚುನಾವಣೆ ಎದುರು ನೋಡುತ್ತಿರುವ ಬಿಹಾರದ ನೈಜ ಚಿತ್ರಣವನ್ನು ನೀಡಿದೆ.

ಇನ್ನು ಬಿಹಾರಿಗಳಿಗೆ ಬಿಹಾರದಲ್ಲೇ ಕೆಲಸ ನೀಡುವುದಾಗಿ ಭರವಸೆ ನೀಡಿ ಈಗ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜೆಡಿಯು ನಾಯಕ ಹಾಗೂ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರಿಗೆ ಅಲ್ಲಿನ ಉದ್ಯೋಗದ ವಿಚಾರ ನಿಜಕ್ಕೂ ಕಾಡಲಿದೆ. ಇದರೊಂದಿಗೆ ಎಲ್‌ಜೆಪಿಯು ಕೂಡಾ ಈಗ ಬಿಇಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದ್ದು, ಮುಂಬರುವ ಚುನಾವಣೆ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ ಕಬ್ಬಿಣದ ಕಡಲೆಯಾಗಲಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com