ಮೋದಿ ಸರ್ಕಾರದ ನೂತನ ಕೃಷಿ ಕಾನೂನುಗಳಿಗೆ ಶೇ.60ರಷ್ಟು ರೈತರ ವಿರೋಧ

ನರೇಂದ್ರ ಮೋದಿ ಸರ್ಕಾರವು ಕಾಲ ಕ್ರಮೇಣ ಸಬ್ಸಿಡಿಯನ್ನು ತೆಗೆದು ಹಾಕುವುದು ಮತ್ತು ರೈತರಷ್ಟೇ ಅಲ್ಲದೇ ಸಾಮಾನ್ಯ ಜನರನ್ನೂ ಕಾರ್ಪೊರೆಟ್ ವ್ಯವಸ್ಥೆಯ ಕಪಿಮುಷ್ಟಿಗೆ ಸಿಲುಕಿಸುವ ಇರಾದೆ ಹೊಂದಿದಂತಿದೆ.
ಮೋದಿ ಸರ್ಕಾರದ ನೂತನ ಕೃಷಿ ಕಾನೂನುಗಳಿಗೆ ಶೇ.60ರಷ್ಟು ರೈತರ ವಿರೋಧ

ಕಾರ್ಪೊರೆಟ್ ವಲಯಕ್ಕೆ ಹೆಚ್ಚು ಅನುಕೂಲ ಆಗಲಿರುವ ಮತ್ತು ಭವಿಷ್ಯದಲ್ಲಿ ರೈತರ ಹಿತಾಸಕ್ತಿಗಳಿಗೆ ಮಾರಕವಾಗಲಿರುವ ನೂತನ ಕೃಷಿ ಕಾನೂನುಗಳಿಗೆ ಶೇ.57ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ನರೇಂದ್ರಮೋದಿ ಸರ್ಕಾರವು ಪ್ರತಿಪಕ್ಷಗಳು ಮತ್ತು ಕೋಟ್ಯಂತರ ರೈತರ ಪ್ರತಿಭಟನೆಯ ನಡುವೆಯೂ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ರೈತರ ಹಿತಾಸಕ್ತಿಗೆ ಧಕ್ಕೆ ತರುತ್ತವೆ ಎಂಬುದು ರೈತರ ವಾದವಾಗಿದೆ.

ಗ್ರಾಮೀಣ ಮಾಧ್ಯಮ ವೇದಿಕೆಯಾಗಿರುವ ‘ಗೋವನ್ ಕನೆಕ್ಷನ್’ ಸಂಸ್ಥೆ ನಡೆಸಿರುವ ‘ನೂತನ ಕೃಷಿ ಕಾನೂನು ಕುರಿತಂತೆ ಭಾರತೀಯ ರೈತರ ಗ್ರಹಿಕೆ’ ಕುರಿತಾದ ಸಮೀಕ್ಷೆಯು ಈ ಅಂಶವನ್ನು ಬಹಿರಂಗ ಪಡಿಸಿದೆ. ನರೇಂದ್ರ ಮೋದಿ ಸರ್ಕಾರ ಜಾರಿ ಮಾಡಿರುವ ಕೃಷಿ ಕಾನೂನುಗಳನ್ನು ಬೆಂಬಲಿಸಿರುವ ಶೇ.35ರಷ್ಟು ರೈತರ ಪೈಕಿ ಶೇ.18ರಷ್ಟು ರೈತರಿಗೆ ನೂತನ ಕಾನೂನುಗಳಿಂದಾಗುವ ಅನಾಹುತಗಳ ಬಗ್ಗೆ ಮಾಹಿತಿಯೇ ಇಲ್ಲ.

ಗ್ರಾಮೀಣ ಮಾಧ್ಯಮ ವೇದಿಕೆಯಾಗಿರುವ ‘ಗೋವನ್ ಕನೆಕ್ಷನ್’ ದೇಶಾದ್ಯಂತ 16 ರಾಜ್ಯಗಳ 53 ಜಿಲ್ಲೆಗಳಲ್ಲಿ ರೈತರನ್ನು ಮುಖಾಮುಖಿ ಸಂದರ್ಶಿಸಿ ಸಮೀಕ್ಷೆ ನಡೆಸಿದೆ. ಅಕ್ಟೋಬರ್ 3ರಿಂದ ಅಕ್ಟೋಬರ್ 9ರವರೆಗೆ ಈ ಸಮೀಕ್ಷೆ ನಡೆಸಲಾಗಿದೆ ಎಂದು ಬ್ಯೂಸಿನೆಸ್ ಟುಡೆ ವರದಿ ಮಾಡಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ರೈತರ ಪ್ರಮುಖ ಆತಂಕ ಎಂದರೆ, ನೂತನ ಕೃಷಿ ಕಾನೂನುಗಳು ಜಾರಿಯಾಗಿರುವುದರಿಂದ ಕೃಷಿ ಉತ್ಪನ್ನಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಕಡಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ನಷ್ಟಕ್ಕೀಡಾಗಬೇಕಾಗುತ್ತದೆ ಎಂಬುದಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.33ರಷ್ಟು ರೈತರು ನರೇಂದ್ರ ಮೋದಿ ಸರ್ಕಾರವು ನಿಧಾನವಾಗಿ ಕೃಷಿ ಉತ್ಪನ್ನಗಳಿಗೆ ನೀಡುವ ಬೆಂಬಲ ಬೆಲೆಯನ್ನು ರದ್ದು ಮಾಡುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ವ್ಯವಸ್ಥೆಯಡಿ ಕೇಂದ್ರ ಸರ್ಕಾರವು ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಪ್ರಕಟಿಸುತ್ತದೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆಯಲ್ಲಿ ಉತ್ಪನ್ನಗಳನ್ನು ಖರೀದಿಸುತ್ತವೆ. ಇದರಿಂದಾಗಿ ರೈತರಿಗೆ ನಷ್ಟವಾಗುವುದು ತಪ್ಪುತ್ತದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.59ರಷ್ಟು ರೈತರು ಬೆಂಬಲ ಬೆಲೆ ವ್ಯವಸ್ಥೆಯನ್ನು ಕಡ್ಡಾಯ ಮಾಡಿ ಕಾನೂನು ಮಾಡಬೇಕು ಎಂದು ಬಯಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳಿಗೆ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆ ನೀಡಲಾಗಿದೆ. ಸೆಪ್ಟೆಂಬರ್ 27 ರಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ವಿಶೇಷ ಎಂದರೆ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಈ ನೂನತ ಕೃಷಿ ಮಸೂದೆಗೆ ಅಂಕಿತ ಹಾಕಬಾರದು ಎಂದು ಒತ್ತಾಯಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಮನವಿ ಸಲ್ಲಿಸಿದ್ದವು. ಇಂತಹ ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಪತಿಗಳು ಮಸೂದೆಗಳಿಗೆ ಅಂಕಿತ ಹಾಕುವ ಮುನ್ನ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ವಾಪಸು ಕಳುಹಿಸುವುದು ಸಂಸದೀಯ ಸಂತ್ಸಂಪ್ರದಾಯ. ಆದರೆ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಸಂಸದೀಯ ಸಂತ್ಸಂಪ್ರದಾಯ ಪಾಲಿಸದೇ, ಪ್ರತಿಪಕ್ಷಗಳ ಮನವಿ ಹಾಗೂ ರಾಷ್ಟ್ರವ್ಯಾಪಿ ರೈತರ ಹೋರಾಟದ ನಡುವೆಯೂ ಮಸೂದೆಗೆ ಅಂಕಿತ ಹಾಕಿದರು. ರಾಷ್ಟ್ರಪತಿಗಳ ಅಂಕಿತ ಬಿದ್ದನಂತರ ಮಸೂದೆಗಳು ಕಾನೂನುಗಳಾಗಿ ಜಾರಿಗೆ ಬಂದಿವೆ.

ಕೃಷಿಕರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ಧನೆ ಮತ್ತು ಸೌಲಭ್ಯಗಳು) ಕಾಯ್ದೆಯು (2020) ರೈತರು ಅಧಿಸೂಚಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯಿಂದ ಹೊರಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ. ಕೃಷಿಕರ (ಸಬಲೀಕರಣ ಮತ್ತು ಸುರಕ್ಷತೆ) ದರ ವಾಗ್ದಾನ ಮತ್ತು ಕೃಷಿ ಸೇವೆಗಳ ಒಪ್ಪಂದ ಕಾಯ್ದೆಯು (2020) ರೈತರು ಕೃಷಿ ವಹಿವಾಟು ಸಂಸ್ಥೆಗಳು, ಸಂಸ್ಕರಣ ಸಂಸ್ಥೆಗಳು, ಸಗಟುವ್ಯಾಪಾರಿಗಳು, ರಫ್ತುದಾರರು ಅಥವಾ ಬೃಹತ್ ಚಿಲ್ಲರೆ ವಹಿವಾಟುದಾರರೊಂದಿಗೆ ತಮ್ಮ ಉತ್ಪನ್ನಗಳನ್ನು ಪೂರ್ವನಿರ್ಧಾರಿತ ದರದಲ್ಲಿ ಮಾರಾಟ ಮಾಡುವ ಕುರಿತಂತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡುತ್ತದೆ. ಅಗತ್ಯವಸ್ತುಗಳ (ತಿದ್ದುಪಡಿ)ಕಾಯ್ದೆಯು (2020) ಆಹಾರಧಾನ್ಯಗಳು, ದ್ವಿದಳಧಾನ್ಯಗಳು, ಎಣ್ಣೆಕಾಳುಗಳು, ಈರುಳ್ಳಿ ಮತ್ತು ಆಲೂಗೆಡ್ಡೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕಿದೆ ಮತ್ತು ಈ ಸರಕುಗಳಿಗೆ ಇದ್ದ ದಾಸ್ತಾನು ಮಿತಿಯನ್ನು ಕೈಬಿಡಲು ಅವಕಾಶ ಮಾಡಿಕೊಟ್ಟಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.67ರಷ್ಟು ಮಂದಿಗೆ ಕೃಷಿ ಕಾನೂನು ಜಾರಿ ಮತ್ತು ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಮತ್ತಿತರ ವಿದ್ಯಮಾನಗಳ ಬಗ್ಗೆ ಅರಿವಿದೆ. ಈ ಅರಿವು ಇದ್ದವರೆಲ್ಲರೂ ಬಹುತೇಕ ನೂತನ ಕಾನೂನುಗಳನ್ನು ವಿರೋಧಿಸಿದ್ದಾರೆ. ಬಹುತೇಕ ರೈತರು ಮುಂಬರುವ ದಿನಗಳಲ್ಲಿ ತಮ್ಮ ಉತ್ಪನ್ನಗಳನ್ನು ಕಡಮೆ ಬೆಲೆಗೆ ಬಲವಂತವಾಗಿ ಅಥವಾ ಅನಿವಾರ್ಯವಾಗಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂಬ ಕಾರಣಕ್ಕೆ ನೂತನ ಕಾನೂನುಗಳನ್ನು ವಿರೋಧಿಸಿದ್ದಾರೆ.

ಮೋದಿ ಸರ್ಕಾರದ ತಂತ್ರವೇನು?

ನರೇಂದ್ರ ಮೋದಿ ಸರ್ಕಾರವು ಕಾಲ ಕ್ರಮೇಣ ಸಬ್ಸಿಡಿಯನ್ನು ತೆಗೆದು ಹಾಕುವುದು ಮತ್ತು ರೈತರಷ್ಟೇ ಅಲ್ಲದೇ ಸಾಮಾನ್ಯ ಜನರನ್ನೂ ಕಾರ್ಪೊರೆಟ್ ವ್ಯವಸ್ಥೆಯ ಕಪಿಮುಷ್ಟಿಗೆ ಸಿಲುಕಿಸುವ ಇರಾದೆ ಹೊಂದಿದಂತಿದೆ. ಈ ಹಿಂದೆ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಕಡಿತ ಮಾಡಲು ಮೋದಿ ಸರ್ಕಾರ ಕಾರ್ಪೊರೆಟ್ ತಂತ್ರವನ್ನೇ ಬಳಸಿದೆ. ಅಡುಗೆ ಅನಿಲವು ಬಹುತೇಕ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದೆ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ ಸಬ್ಸಿಡಿಯಿಲ್ಲದೇ ಸಿಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಿಲಿಂಡರ್ ಹಾಗೂ ಸಬ್ಸಿಡಿ ಸಿಲಿಂಡರ್ ದರದ ನಡುವೆ ಭಾರಿ ವ್ಯತ್ಯಾಸ ಇತ್ತು. ಆದರೆ, ಮೋದಿ ಸರ್ಕಾರವು ಸಬ್ಸಿಡಿ ದರದ ಸಿಲಿಂಡರ್ ಗಳ ದರವನ್ನು ಏರಿಸುತ್ತಾ, ಮುಕ್ತ ಮಾರುಕಟ್ಟೆದರವನ್ನು ಇಳಿಸುತ್ತಾ ಬಂದಿದೆ. ಅಂದರೆ, ಈ ಹಿಂದೆ ಸುಮಾರು 1200 ರುಪಾಯಿಗಳಷ್ಟಿದ್ದ ಮುಕ್ತಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಸಿಲಿಂಡರ್ ದರವು ನಿಧಾನವಾಗಿ ಕುಸಿಯುತ್ತಾ ಬಂದು ಈಗ 600 ರುಪಾಯಿ ಆಜುಬಾಜಿಗೆ ಇಳಿದಿದೆ. 300 ರುಪಾಯಿ ಇದ್ದ ಸಬ್ಸಿಡಿ ಸಿಲಿಂಡರ್ ದರವು ಸತತವಾಗಿ ಏರುತ್ತಾ 600ರ ಗಡಿ ದಾಟಿದೆ.

ಈಗ ಸಬ್ಸಿಡಿ ಮತ್ತು ನಾನ್ ಸಬ್ಸಿಡಿ ಸಿಲಿಂಡರ್ ಗಳ ದರದಲ್ಲಿ ವ್ಯತ್ಯಾಸವೇನೂ ಇಲ್ಲ. ಅಲ್ಲದೇ ಸಬ್ಸಿಡಿ ಸಿಲಿಂಡರ್ ದರ ಏರಿದಾಗ ಸರ್ಕಾರವೇನೂ ಸಬ್ಸಿಡಿ ಮೊತ್ತವನ್ನು ಏರಿಸಿಲ್ಲ. ಅಂದರೆ, ಒಂದು ದಿನ ಮೋದಿ ಸರ್ಕಾರ ಸಿಲಿಂಡರ್ ಗಳ ಮೇಲಿನ ಸಬ್ಸಿಡಿ ರದ್ದು ಮಾಡಿಬಿಡಲೂ ಬಹುದು. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿಯೂ ಅದೇ ದರದಲ್ಲಿ ಸಿಲಿಂಡರ್ ಸಿಗುವುದರಿಂದ ಜನರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಪಾಯ ಏನೆಂದರೆ ಮುಂಬರುವ ದಿನಗಳಲ್ಲಿ ಸಿಲಿಂಡರ್ ದರವು 1000 ರುಪಾಯಿ ದಾಟಿದರೆ, ಸಬ್ಸಿಡಿ ಇಲ್ಲದೆಯೇ ಗ್ರಾಹಕರು ಖರೀದಿ ಮಾಡಬೇಕಾಗುತ್ತದೆ.

ಈಗ ಕೃಷಿ ಉತ್ಪನ್ನಗಳ ಮೇಲೆ ನೀಡುತ್ತಿರುವ ಬೆಂಬಲ ಬೆಲೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ವ್ಯವಸ್ಥೆಯೂ ಇದೇ ದಾರಿ ಹಿಡಿಯಬಹುದು. ಮುಂದಿನ ಎರಡು ಮೂರು ವರ್ಷಗಳ ಕಾಲ ರೈತರ ಉತ್ಪನ್ನಗಳನ್ನು ಮೋದಿ ಆಪ್ತರಾದ ಕಾರ್ಪೊರೆಟ್ ಕುಳಗಳು ಹೆಚ್ಚಿನ ಬೆಲೆ ನೀಡಿ ಖರೀದಿಸಬಹುದು. ಆಗ ಬೆಂಬಲ ಬೆಲೆಯ ಪ್ರಸ್ತುತತೆಯೇ ಇಲ್ಲದಂತಾಗುತ್ತದೆ. ಅಂತಹ ಸಂದರ್ಭವನ್ನು ಮುಂದಿಟ್ಟುಕೊಂಡು ಮೋದಿ ಸರ್ಕಾರ ಬೆಂಬಲ ಬೆಲೆಯನ್ನು ರದ್ದು ಮಾಡಬಹುದು. ಹಾಗೆಯೇ ಮಾರುಕಟ್ಟೆಯ ಹೊರಗೆ ಕಾರ್ಪೊರೆಟ್ ಕುಳಗಳು ಎರಡು ಮೂರು ವರ್ಷಗಳ ಕಾಲ ರೈತರ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಬಹುದು. ಇದರಿಂದಾಗಿ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗಳತ್ತ ಹೋಗದೇ ಇರಬಹುದು. ಆಗ ರೈತರು ಬಳಕೆ ಮಾಡುತ್ತಿಲ್ಲ ಎಂಬ ಕಾರಣ ಮುಂದೊಡ್ಡಿ ಮೋದಿ ಸರ್ಕಾರವು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯನ್ನೇ ರದ್ದು ಮಾಡಬಹುದು. ನಾಲ್ಕು ಮತ್ತು ಐದನೇ ವರ್ಷಗಳಿಂದ ರೈತರು ಸಹಜವಾಗಿಯೇ ಕಾರ್ಪೊರೆಟ್ ಕುಳಗಳ ಕಪಿ ಮುಷ್ಠಿಗೆ ಸಿಲುಕುತ್ತಾರೆ. ಕೇಳಿದಷ್ಟು ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ. ಆ ವ್ಯವಸ್ಥೆ ಬೇಡ ಎನ್ನಲು ಸಾಧ್ಯವಾಗದು. ಏಕೆಂದರೆ, ಆ ವೇಳೆಗೆ ಮೋದಿ ಸರ್ಕಾರವು ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯನ್ನೇ ರದ್ದು ಮಾಡಿರುತ್ತದೆ. ಎಲ್ಪಿಜಿ ಸಿಲಿಂಡರ್ ತಂತ್ರವನ್ನೇ ಮೋದಿ ಸರ್ಕಾರ ಕೃಷಿ ಉತ್ಪನ್ನಗಳ ಮೇಲೂ ಬಳಸಲು ಮುಂದಾಗಿದಂತಿದೆ. ಸಬ್ಸಿಡಿ ಎಲ್ಪಿಡಿ ಸಿಲಿಂಡರ್ ದರ ತೀವ್ರವಾಗಿ ಏರಿಸಿದ, ಮತ್ತು ನಾನ್ ಸಬ್ಸಿಡಿ ಸಿಲಿಂಡರ್ ದರವನ್ನು ತೀವ್ರವಾಗಿ ಇಳಿಸಿದ ಮೋದಿ ಸರ್ಕಾರದ ಕುತಂತ್ರವು ಜನಸಾಮಾನ್ಯರಿಗೆ ಅರ್ಥವೇ ಆಗಿಲ್ಲ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com