ರಾಜಕೀಯ ತಿರುವುಗಳನ್ನು ಪಡೆಯುತ್ತಿರುವ ಮುತ್ತಯ್ಯ ಮುರಳೀಧರನ್ ಬಯೋಪಿಕ್

ಮುರಳೀಧರನ್‌ ಜೀವನಾಧಾರಿತ ಸಿನೆಮಾದ ವಿರುದ್ಧ ತಮಿಳರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯ್‌ ಸೇತುಪತಿ ಈ ಸಿನೆಮಾದಲ್ಲಿ ನಟಿಸಲು ಒಪ್ಪಬಾರದಿತ್ತೆಂದು ಹಲವಾರು ತಮಿಳು ಅಸ್ಮಿತಾವಾದಿಗಳು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ.
ರಾಜಕೀಯ ತಿರುವುಗಳನ್ನು ಪಡೆಯುತ್ತಿರುವ ಮುತ್ತಯ್ಯ ಮುರಳೀಧರನ್ ಬಯೋಪಿಕ್

ತಮಿಳು ಮೂಲದ ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಜೀವನ ಚರಿತ್ರೆ ಆಧಾರಿತ ʼ800ʼ ಬಹುನಿರೀಕ್ಷಿತ ಚಿತ್ರವಾಗಿ ರೂಪುಗೊಂಡಿದೆ. ಈ ಚಿತ್ರದಲ್ಲಿ ತಮಿಳಿನ ಬಹುಬೇಡಿಕೆಯ ನಟ ವಿಜಯ್‌ ಸೇತುಪತಿ ಮುತ್ತಯ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸಿನಿಪ್ರಿಯರಿಗೆ, ಅದರಲ್ಲೂ ವಿಜಯ್‌ ಪಾತ್ರದೊಳಗೆ ಪರಾಕಾಷ್ಠೆ ಮಾಡುವುದು ಗೊತ್ತಿದ್ದವರನ್ನು ಸಿನೆಮಾಗಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿಸಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

‌ಮೈದಾನದಲ್ಲಿ ಬ್ಯಾಟ್ಸ್ಮಮನ್‌ಗಳ ಬೆವರಿಳಿಸುತ್ತಿದ್ದ ಮುರಳಿಧರನ್‌ ಟೆಸ್ಟ್‌ ಪಂದ್ಯದಲ್ಲಿ ಇದುವರೆಗೆ 800 ವಿಕೆಟ್‌ ಪಡೆದು ದಾಖಲೆ ನಿರ್ಮಿಸಿದವರು. ಈ ಆಟಗಾರನ ವೈಯಕ್ತಿಕ ಜೀವನ ಹಲವಾರು ಏಳು ಬೀಳು ಕಂಡ ಕತೆ. ಮುರಳೀಧರನ್‌ ಹೇಳುವಂತೆ ಅವರ ಹತ್ತನೇ ವಯಸ್ಸಿಗೆ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಆಂತರಿಕ ಯುದ್ದಕ್ಕೆ ತನ್ನ ಅಪ್ಪನನ್ನು ಕಳೆದುಕೊಂಡಿದ್ದರು. ಬದುಕಿನಲ್ಲಿ ತೀವ್ರ ಸಂಕಷ್ಟ ಎದುರಿಸಿ ಕ್ರಿಕೆಟಿಗನಾಗಿ ಸಾಧನೆ ಮಾಡಿದ ಮುರಳೀಧರನ್‌ ಬದುಕು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದ ಹೊತ್ತಿನಲ್ಲೇ ಸಿನೆಮಾದ ವಿರುದ್ಧ ಅಪಸವ್ಯಗಳು ಎದ್ದಿವೆ.

ಮುರಳೀಧರನ್‌ ಜೀವನಾಧಾರಿತ ಸಿನೆಮಾದ ವಿರುದ್ಧ ತಮಿಳರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಜಯ್‌ ಸೇತುಪತಿ ಈ ಸಿನೆಮಾದಲ್ಲಿ ನಟಿಸಲು ಒಪ್ಪಬಾರದಿತ್ತೆಂದು ಹಲವಾರು ತಮಿಳು ಅಸ್ಮಿತಾವಾದಿಗಳು ಸಾಮಾಜಿಕ ಜಾಲತಾಣದ ಮೂಲಕ ಆಗ್ರಹಿಸಿದ್ದಾರೆ. ಇದರಿಂದ ಮುತ್ತಯ್ಯ, ಸೇತುಪತಿ ಸೇರಿದಂತೆ ಇಡೀ ಚಿತ್ರತಂಡ ಇಬ್ಬಂದಿತನದಲ್ಲಿ ಸಿಲುಕಿದ್ದಾರೆ.

ಮುರಳೀಧರನ್‌ ಯೌವನ ಪಾತ್ರಕ್ಕೆ ವೆಟ್ರಿಮಾರನ್‌ ನಿರ್ದೇಶನದ ಅಸುರನ್‌ ಸಿನೆಮಾದಲ್ಲಿ ಧನುಷ್‌ ಹಿರಿಯ ಮಗನಾಗಿ ಪಾತ್ರವಹಿಸಿದ ಗಾಯಕ ಟೀಜೇ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರು ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಮುತ್ತಯ್ಯ ಮುರಳೀಧರನ್‌ ಮೇಲೆ ತಮಿಳರಿಗೇಕೆ ಕೋಪ?

ಶ್ರೀಲಂಕಾದಲ್ಲಿ ಸಿಂಹಳೀಯರು ಮತ್ತು ತಮಿಳರ ನಡುವೆ ನಡೆಯುತ್ತಿದ್ದ ಘರ್ಷಣೆಯ ನೋವನ್ನೂ ತಮಿಳರು ಇನ್ನೂ ಮರೆತಿಲ್ಲ. ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರ್‌ ರನ್ನು ಕೊಂದ ಬಗ್ಗೆ ಭಾರತ ಸರ್ಕಾರ ಹಾಗೂ ಶ್ರೀಲಂಕಾ ಸರ್ಕಾರದೊಂದಿಗೆ ತಮಿಳರಿಗೆ ಅಸಮಧಾನವಿದೆ. ಸಿಂಹಳೀಯರ ಜನಾಂಗೀಯವಾದದಿಂದಾಗಿ ಲಕ್ಷಾಂತರ ತಮಿಳರ ಸಾಮೂಹಿಕ ನರಮೇಧವಾಗಿದೆ. ಎಲ್‌ಟಿಟಿಇ ಯನ್ನು ಮಟ್ಟ ಹಾಕುವ ಭರದಲ್ಲಿ ಶ್ರೀಲಂಕನ್‌ ತಮಿಳರ ಸಾಮೂಹಿಕ ನರಮೇಧಗೊಳಿಸಿ 2009 ರಲ್ಲಿ ಯುದ್ಧವನ್ನು ಕೊನೆಗೊಳಿಸಲಾಗಿತ್ತು. ಇದನ್ನು ಮುತ್ತಯ್ಯ ಮುರಳೀಧರನ್ ತನಗೆ ವೈಯಕ್ತಿಕವಾಗಿ ಸಂಭ್ರಮ ನೀಡಿದ ವರ್ಷ ಎಂದು ಅವತ್ತಿನ ಶ್ರೀಲಂಕಾ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆ ನೇತೃತ್ವದ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ತಮಿಳರಿಗೆ ನೋವಿರುವುದು ಈ ಹೇಳಿಕೆಯ ಬಗ್ಗೆ.

ವಿಜಯ್‌ ಸೇತುಪತಿ ಆಯ್ಕೆಯನ್ನು ವಿರೋಧಿಸಿರುವ ಬಹುಪಾಲು ತಮಿಳರಿಗೆ ಇದೇ ಕಾರಣಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ತಮಿಳು ಜನಾಂಗಕ್ಕೆ ದ್ರೋಹ ಬಗೆದವನಂತೆ ಮುತ್ತಯ್ಯ ಮುರಳೀಧರನ್‌ ರನ್ನು ಕಾಣುತ್ತಾರೆ.

ಅಲ್ಲದೆ ಸಿಂಹಳೀಯ ಪಡೆ ತಮಿಳರ ಮೇಲೆ ಆಕ್ರಮಣ ನಡೆಸಿದಾಗ ಮುರಳೀಧರನ್‌ ಮೌನವಹಿಸಿದ್ದರು, ಅದರ ವಿರುದ್ಧ ದನಿಯೆತ್ತಲಿಲ್ಲ ಎಂಬ ಆರೋಪವೂ ಮುರಳೀಧರನ್‌ ಮೇಲೆ ಇದೆ.

ಸಿನೆಮಾದಿಂದ ಹಿಂದೆ ಸರಿಯುವಂತೆ ವಿಜಯ್‌ ಸೇತುಪತಿಗೆ ಸಲಹೆ

ನಿಮ್ಮನ್ನು ತಮಿಳರು ತುಂಬಾ ಇಷ್ಟಪಡುತ್ತಿದ್ದಾರೆ. ನೀವು ತಮಿಳರ ಹತ್ಯೆಯನ್ನು ಬೆಂಬಲಿಸಿದ ಓರ್ವನ ಮುಖವಾಗಿ ಕಾಣಿಸಿಕೊಳ್ಳುವುದು ನಮಗೆ ಇಷ್ಟವಿಲ್ಲ. ದಯವಿಟ್ಟು ಈ ಸಿನೆಮಾದಿಂದ ಹಿಂಜರಿಯಿರೆಂದು ಅಭಿಮಾನಿಯೊಬ್ಬರು ಕೇಳಿಕೊಂಡಿದ್ದಾರೆ.

ತಮಿಳರ ಸಾವಿನಲ್ಲಿ ಸಂಭ್ರಮ ಕಂಡುಕೊಂಡ ವ್ಯಕ್ತಿಯೊಬ್ಬನಾಗಿ ನೀವು ಅಭಿನಯಿಸಕೂಡದು, ಇದು ತಮಿಳರ ಭಾವನೆಗಳಿಗೆ ಘಾಸಿ ಉಂಟುಮಾಡುತ್ತದೆ. ದಯವಿಟ್ಟು ಮುರಳೀಧರನ್‌ ಬಗ್ಗೆ ಅಧ್ಯಯನ ನಡೆಸಿ ಎಂದು ಇನ್ನೋರ್ವ ಅಭಿಮಾನಿ ವಿನಂತಿಸಿದ್ದಾರೆ.

ನರಮೇಧಕ್ಕಿಂತ ಕ್ರೂರವಾದದ್ದು ಅದನ್ನು ಒಪ್ಪಿಕೊಂಡು ಮೌನವಾಗಿದ್ದ ಮನಸ್ಥಿತಿ. ನೀವು ಕೇವಲ ನಟರಲ್ಲ. ನಿಮ್ಮನ್ನು ವೈಚಾರಿಕತೆಯುಳ್ಳ ನಟನಾಗಿಯೂ ನಾವು ಪರಿಗಣಿಸುತ್ತಿದ್ದೇವೆ. ಇದರಲ್ಲಿ ನಟಿಸಿ ನೀವು ಮೂರ್ಖತನ ಪ್ರದರ್ಶಿಸಬಾರದು ಎಂದು ವಿಜಯ್‌ ಸೇತುಪತಿ ಅವರಲ್ಲಿ ಆಗ್ರಹಿಸಲಾಗಿದೆ.

ಸಾಮಾನ್ಯ ಅಭಿಮಾನಿಗಳು ಮಾತ್ರವಲ್ಲದೆ ತಮಿಳು ಚಿತ್ರರಂಗದ ಹಿರಿಯರು ಕೂಡಾ ವಿಜಯ್‌ ಸೇತುಪತಿ ಈ ಸಿನೆಮಾದಿಂದ ಹೊರ ಬರುವಂತೆ ಆಗ್ರಹಿಸಿದ್ದಾರೆ. ತಮಿಳಿನ ಹಿರಿಯ ನಿರ್ದೇಶಕ ಭಾರತಿರಾಜ ಪ್ರತಿಕ್ರಿಯಿಸಿದ್ದು, ಸಾರ್ವಜನಿಕರೊಂದಿಗೆ ಒಳ್ಳೆಯ ಹೆಸರು ಗಳಿಸುವುದು ಕಷ್ಟ. ನೀವು ನೀಡಿದ ಪಾತ್ರಗಳಿಂದಾಗಿ ಜನರು ನಿಮ್ಮ ಮೇಲೆ ಸುಲಭವಾಗಿ ಪ್ರೀತಿಯನ್ನು ತೋರಿಸಿದ್ದಾರೆ. ನೀವು ಮಾಡಿದ ಪಾತ್ರಗಳು ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ. ನೀವು ಬಹಳ ದೂರ ಸಾಗಬೇಕಾಗಿದೆ. ದ್ರೋಹ ಮಾಡುವವರನ್ನು ಜನರು ಶಾಶ್ವತವಾಗಿ ನೆನಪಿಟ್ಟುಕೊಳ್ಳಲು ನಿಮ್ಮ ಮುಖವನ್ನು ನೀಡಲು ಏಕೆ ನೀವು ಬಯಸುತ್ತೀರಿ? ದಯವಿಟ್ಟು ಏನಾದರೂ ಮಾಡಿ ಈ ಯೋಜನೆಗೆ ನಿರಾಕರಿಸಿ ಸೇತುಪತಿಗೆ ಸಲಹೆ ನೀಡಿದ್ದಾರೆ.

ತಮಿಳು ಗೀತರಚನೆಕಾರ ವೈರಮುತ್ತು ಕೂಡಾ ತಮಿಳರ ಹಿತದೃಷ್ಟಿಯಿಂದ ಈ ಅವಕಾಶವನ್ನು ಬಿಡಬೇಕೆಂದು ಸೇತುಪತಿಗೆ ಒತ್ತಾಯಿಸಿದ್ದಾರೆ.

ಮುತ್ತಯ್ಯ ಸ್ಪಷ್ಟೀಕರಣ

ತಮಿಳರ ಹತ್ಯೆಯನ್ನು ಸಂಭ್ರಮಿಸಿದ್ದಾರೆನ್ನುವ ಆರೋಪವನ್ನು ಮುತ್ತಯ್ಯ ಮುರಳೀಧರನ್‌ ನಿರಾಕರಿಸಿದ್ದಾರೆ. ಯುದ್ಧ ಅಂತ್ಯಗೊಂಡ 2009 ಇಸವಿಯನ್ನು ನಾನು ಸಂತೋಷದ ಕ್ಷಣವೆಂದು ಹೇಳಿರುವುದನ್ನು ಸಮರ್ಥಿಸಿದ್ದಾರೆ. ಯುದ್ಧ ಕೊನೆಗೊಂಡಿರುವುದನ್ನಷ್ಟೇ ತಾನು ಸಂಭರ್ಮಿಸಿರುವುದಾಗಿ ಮುತ್ತಯ್ಯ ಮುರಳೀಧರನ್‌ ಹೇಳಿದ್ದಾರೆ.

ಯುದ್ಧಗಳು ನಡೆಯುವ ರಾಷ್ಟ್ರದಲ್ಲಿ ನಾಳೆ ಏನು ನಡೆಯುತ್ತವೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇವತ್ತು ನನ್ನೊಂದಿಗೆ ಆಟವಾಡುತ್ತಿರುವ ಆಟಗಾರ ಗೆಳೆಯ ನಾಳೆ ಬಾಂಬ್‌ ದಾಳಿಗೆ ಸಿಲುಕಿ ಸತ್ತು ಬಿಡಬಹುದು. ಓರ್ವ ಸಾಮಾನ್ಯ ನಾಗರಿಕನ ದೃಷ್ಟಿಯಿಂದ ಯುದ್ಧ ಕೊನೆಗೊಳ್ಳುವುದು ನನಗೆ ಮುಖ್ಯವಾಗಿತ್ತು. 2009 ರ ಹೇಳಿಕೆಯ ಉದ್ದೇಶ ಇಷ್ಟೇ ಇತ್ತು. ಬದಲಾಗಿ ಮುಗ್ಧರ ಹತ್ಯೆಯನ್ನು ಎಂದಿಗೂ ನಾನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com