ಕಾಶ್ಮೀರದಲ್ಲಿ ಸದ್ದು ಮಾಡುತ್ತಿರುವ ʼಗುಪ್ಕಾರ್‌ ಡಿಕ್ಲರೇಷನ್‌ʼ: ಏನಿದರ ಮಹತ್ವ?

ಸುಮಾರು ಒಂದು ವರ್ಷಗಳ ಕಾಲ ಯಾವುದೇ ಪ್ರಮುಖ ರಾಜಕೀಯ ಕಾರ್ಯತಂತ್ರಗಳಿಲ್ಲದೇ ಇದ್ದ ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬದಲಾಗುತ್ತಿದೆ.
ಕಾಶ್ಮೀರದಲ್ಲಿ ಸದ್ದು ಮಾಡುತ್ತಿರುವ ʼಗುಪ್ಕಾರ್‌ ಡಿಕ್ಲರೇಷನ್‌ʼ: ಏನಿದರ ಮಹತ್ವ?

ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಚಟುವಟಿಕೆಗಳು ಈಗ ವೇಗವನ್ನು ಪಡೆಯುತ್ತಿವೆ. ಕಳೆದ ವರ್ಷ ಆಗಸ್ಟ್‌ 5ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಅಲ್ಲಿನ ಪ್ರಮುಖ ರಾಜಕೀಯ ನಾಯಕರನ್ನು ಬಂಧನದಲ್ಲಿರಿಸಿದ್ದ ಸರ್ಕಾರ, ಅಕ್ಷರಶಃ ಸರ್ವಾಧಿಕಾರಿತನವನ್ನು ಪ್ರದರ್ಶಿಸಿತ್ತು. ಈಗ ಪ್ರಮುಖ ರಾಜಕೀಯ ನಾಯಕರು ಬಂಧನದಿಂದ ಹೊರಬಂದ ನಂತರ ಹೊಸ ರಾಜಕೀಯ ಬೆಳವಣಿಗೆಗಳಿಗೆ ಜಮ್ಮು ಕಾಶ್ಮೀರ ಸಾಕ್ಷಿಯಾಗುತ್ತಿದೆ.

ಜಮ್ಮು ಕಾಶ್ಮೀರದ ಪ್ರಮುಖ ರಾಜಕೀಯ ನಾಯಕರಾದ ಫಾರುಕ್‌ ಅಬ್ದುಲ್ಲಾ, ಅವರ ಬದ್ದ ವೈರಿ ಮೆಹಬೂಬ ಮುಫ್ತಿ ಮತ್ತು ಸಜ್ಜದ್‌ ಲೋನ್‌ ಅವರು ಸಭೆ ಸೇರಿ ಮೈತ್ರಿಕೂಟವನ್ನು ರಚಿಸಿದ್ದಾರೆ. ಬುಧವಾರ ಎಲ್ಲಾ ಘಟಾನುಘಟಿ ನಾಯಕರು ಸಭೆ ಸೇರಿದ್ದು, ಗುರುವಾರವೇ ತಮ್ಮ ಮೈತ್ರಿಯನ್ನು ಘೋಷಿಸಿದ್ದಾರೆ. ರದ್ದುಗೊಳಿಸಲಾಗಿರುವ ಸಂವಿಧಾನದ 370ನೇ ವಿಧಿಯನ್ನು ಪುನರ್‌ಸ್ಥಾಪಿಸುವ ಗುರಿಯನ್ನು ಹೊಂದಿರುವ ಈ ಮೈತ್ರಿಕೂಟದ ಹೆಸರು ʼಪೀಪಲ್ಸ್‌ ಅಲಾಯನ್ಸ್‌ ಫಾರ್‌ ಗುಪ್ಕಾರ್‌ ಡಿಕ್ಲರೇಷನ್‌ʼ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ನಮ್ಮದು ಸಾಂವಿಧಾನಿಕವಾದ ಹೋರಾಟ. ಕೇಂದ್ರ ಸರ್ಕಾರವು ಆಗಸ್ಟ್‌ 5ರ ಹೀಂದಿದ್ದ ರಾಜ್ಯದ ಸ್ಥಾನಮಾನಗಳನ್ನು ವಾಪಾಸ್‌ ನೀಡಬೇಕು. ಜಮ್ಮು ಕಾಶ್ಮೀರ ಮತ್ತು ಲಡಾಖ್‌ನಿಂದ ಕಿತ್ತುಕೊಂಡಿರುವುದನ್ನು ವಾಪಾಸ್‌ ಪಡೆಯಲು ನಾವು ಹೋರಾಟ ನಡೆಸಲೇ ಬೇಕಿದೆ,” ಎಂದು ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

ಏನಿದು ಗುಪ್ಕಾರ್‌ ಡಿಕ್ಲರೇಷನ್‌?

ಆಗಸ್ಟ್‌ 4, 2019ರಂದು ಮೊದಲ ಗುಪ್ಕಾರ್‌ ಡಿಕ್ಲರೇಷನ್‌ಗೆ ಸಹಿ ಹಾಕಲಾಗಿತ್ತು. ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಒಂದು ದಿನದ ಹಿಂದೆ ಈ ಸಭೆಯನ್ನು ಕರೆಯಲಾಗಿತ್ತು. ಜೆಕೆಎನ್‌ಸಿ, ಜೆಕೆಪಿಡಿಪಿ, ಜೆಕೆಪಿಸಿ, ಸಿಪಿಐ(ಎಂ), ಪಿಯುಎಫ್‌, ಜೆಕೆಪಿಎಮ್‌ ಮತ್ತು ಅವಾಮಿ ನ್ಯಾಷನಲ್‌ ಕಾಂಗ್ರೆಸ್‌ ಪಕ್ಷಗಳ ಪ್ರತಿನಿಧಿಗಳು, ಫಾರುಕ್‌ ಅಬ್ದುಲ್ಲಾ ಅವರ ʼಗುಪ್ಕಾರ್‌ ನಿವಾಸʼದಲ್ಲಿ ಜೊತೆ ಸೇರಿದ್ದವು.

ಜಮ್ಮು ಕಾಶ್ಮೀರದಲ್ಲಿ ನಿರ್ಮಾಣವಾಗಿದ್ದ ಉದ್ವಿಗ್ನ ಪರಿಸ್ಥಿತಿ, ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದ ಸೇನೆ, ಪ್ರವಾಸಿಗಳನ್ನು ಬಲವಂತದಿಂದ ಹೊರಗಟ್ಟಿದ್ದರ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ಘೋಷಣೆ ಹೊರಡಿಸಿದ್ದ ಫಾರುಕ್‌ ಅಬ್ದುಲ್ಲಾ, “ನಾನು ಸಂಸತ್ತಿನಲ್ಲಿ ಗುಪ್ಕಾರ್‌ ಡಿಕ್ಲರೇಷನ್‌ನನ್ನು ಹೊರಡಿಸುತ್ತಾ ಇದ್ದೇನೆ. ನಮ್ಮ ಹೋರಾಟ ಗಾಂಧಿ ತತ್ವಗಳ ಮೇಲೆ ಆಧಾರಿತವಾಗಿರುತ್ತದೆ. ಏಕೆಂದರೆ, ನಮಗೆ ಕಲ್ಲು ಮತ್ತು ಗುಂಡುಗಳ ಮೇಲೆ ಭರವಸೆಯಿಲ್ಲ,” ಎಂದು ಹೇಳಿದ್ದರು.

ಈ ಗುಪ್ಕಾರ್‌ ಡಿಕ್ಲರೇಷನ್‌ನ ಎರಡನೇ ಭಾಗ ಗುರುವಾರದಂದು ಆರಂಭವಾಗಿದೆ. ಈ ಬಾರಿ ಜಮ್ಮು ಕಾಶ್ಮೀರ ರಾಜಕೀಯದಲ್ಲಿ ಕಡು ವೈರಿಗಳೆಂದು ಗುರುತಿಸಿಕೊಂಡಿದ್ದ ಫಾರುಕ್‌ ಅಬ್ದುಲ್ಲಾ ಹಾಗೂ ಮೆಹಬೂಬ ಮುಫ್ತಿ ಅವರು ಜೊತೆಯಾಗಿದ್ದು, ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಈ ಬಾರಿಯ ಗುಪ್ಕಾರ್‌ ಡಿಕ್ಲರೇಷನ್‌ನ ಪ್ರಮುಖ ಅಂಶಗಳೇನೆಂದರೆ:

1. ಪಿಡಿಪಿ, ನ್ಯಾಷನಲ್‌ ಕಾನ್ಫರೆನ್ಸ್‌ ಸೇರಿದಂತೆ ಒಟ್ಟು ಆರು ಪಕ್ಷಗಳು ಜೊತೆ ಸೇರಿ ಮೈತ್ರಿಕೂಟ ರಚಿಸಿವೆ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಅಸಂವಿಧಾನಿಕ ಎಂದು ಅದರ ವಿರುದ್ದ ಹೋರಾಡಲು ಈ ಆರು ಪಕ್ಷಗಳು ಜೊತೆಯಾಗಿವೆ.

2. ಎಲ್ಲಾ ಪಕ್ಷಗಳು ʼನಾವಿಲ್ಲದಿದ್ದರೆ, ಏನೂ ಇಲ್ಲʼ ಎಂಬ ಏಕತೆಯ ಮಂತ್ರವನ್ನು ಘೋಷಿಸಿದ್ದರಿಂದ, ಸಂವಿಧಾನದಲ್ಲಿ ಏನೇ ಬದಲಾವಣೆ ತರಬೇಕಾದರೂ, ಜಮ್ಮು ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರವು ಈ ಮೈತ್ರಿಕೂಟವನ್ನು ಸಂಪರ್ಕಿಸಲೇಬೇಕಿದೆ.

3. ಸಂವಿಧಾನದ 370ನೇ ಮತ್ತು 35A ವಿಧಿಯನ್ನು ರದ್ದುಗೊಳಿಸಿದ್ದು ಜಮ್ಮು ಕಾಶ್ಮೀರದ ಜನರ ಶಕ್ತಿ ಕುಂದಿಸಲು ಎಂದು ಈ ಮೈತ್ರಿಕೂಟವು ನಿರ್ಧಾರವನ್ನು ತಾಳಿದೆ.

ಒಟ್ಟಿನಲ್ಲಿ, ಸುಮಾರು ಒಂದು ವರ್ಷಗಳ ಕಾಲ ಯಾವುದೇ ಪ್ರಮುಖ ರಾಜಕೀಯ ಕಾರ್ಯತಂತ್ರಗಳಿಲ್ಲದೇ ಇದ್ದ ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬದಲಾಗುತ್ತಿದೆ. ಮಹತ್ತರವಾದ ರಾಜಕೀಯ ಬದಲಾವಣೆಯ ಗಾಳಿ ಬೀಸುವ ಎಲ್ಲಾ ಲಕ್ಷಣಗಳು ಕೂಡಾ ಕಾಣಿಸುತ್ತಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com