ಬಿಹಾರ ಚುನಾವಣೆಯಲ್ಲಿ ಮತ್ತೆ ಜೀವಂತವಾದ ʼಜಿನ್ನಾ ಆತ್ಮʼ..!

ಬಿಹಾರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೇ, ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲದೇ ಮಾಧ್ಯಮಗಳಿಗೂ ಇದರ ಬಿಸಿ ತಟ್ಟತೊಡಗಿದೆ. ಈಗ ಪಾಕಿಸ್ತಾನದ ʼಜಿನ್ನಾ ಆತ್ಮʼ ಹೊಸ ವಿವಾದದ ಕೇಂದ್ರವಾಗಿ ಮಾರ್ಪಟ್ಟಿದೆ.
ಬಿಹಾರ ಚುನಾವಣೆಯಲ್ಲಿ ಮತ್ತೆ ಜೀವಂತವಾದ ʼಜಿನ್ನಾ ಆತ್ಮʼ..!

ಬಿಹಾರ ವಿಧಾನಸಭಾ ಚುನಾವಣೆ ನಡೆಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ಪಕ್ಷಗಳು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರದಲ್ಲಿ ತೊಡಗಿದರೆ, ಬಿಹಾರದ ಜಾಲೆ ವಿಧಾನಸಭಾ ಕ್ಷೇತ್ರವು ವಿಶಿಷ್ಟವಾದ ಕಾರಣಕ್ಕೆ ಸುದ್ದಿಯಲ್ಲಿದೆ. ಇದಕ್ಕೆ ಪಾಕಿಸ್ತಾನದ ʼಜಿನ್ನಾʼ ಅವರ ಆತ್ಮ ಕಾರಣ.

ಬಿಹಾರದ ಚುನಾವಣೆಗೂ ಪಾಕಿಸ್ತಾನದ ಮೊದಲ ಅಧ್ಯಕ್ಷರಾದ ಜಿನ್ನಾ ಅವರ ಆತ್ಮಕ್ಕೂ ಮಾಧ್ಯಮದ ವ್ಯಕ್ತಿಯೊಬ್ಬರು ಸಂಬಂಧ ಕಲ್ಪಿಸಿದ್ದಾರೆ. ಅವರ ಹೇಳಿಕೆಯೇ ಈಗ ಅವರಿಗೆ ಮುಳುವಾಗಿ ಪರಿಣಮಿಸಿದೆ.

CNN-News18 ಸುದ್ದಿ ವಾಹಿನಿಯಲ್ಲಿ ರಾಜಕೀಯ ಸುದ್ದಿಯ ಸಂಪಾದಕಿಯಾಗಿರುವ ಮಾರ್ಯಾ ಶಾಕಿಲ್‌ ಅವರು ಮಾಡಿರುವ ಒಂದು ಟ್ವೀಟ್‌ ಸಾಕಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅವರ ಟ್ವೀಟ್‌ ವಿರುದ್ದ ಆರ್‌ಟಿಐ ಹಾಗೂ ಸಾಮಾಜಿಕ ಹೋರಾಟಗಾರ ಸಾಕೇತ್‌ ಗೋಖಲೆ ಚುನಾವಣಾ ಆಯೋಗಕ್ಕೆ ದೂರು ಕೂಡಾ ನೀಡಿದ್ದಾರೆ.

“ಬಿಹಾರ ಚುನಾವಣೆಗೆ ʼಜಿನ್ನಾ ಆತ್ಮʼ ಆಗಮಿಸಿದೆ. 2018ರ ಪ್ರತಿಭಟನೆಯಿಂದಾಗಿ ಮುನ್ನೆಲೆಗೆ ಬಂದಿದ್ದ AMU (Aligarh Muslim University) ಯ ಮುಖ್ಯಸ್ಥ ಮಷ್ಕೂರ್‌ ಉಮಾನಿಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಿದೆ. ಇದನ್ನು ಬಿಜೆಪಿಯು ಟೀಕಿಸಿದೆ,” ಎಂದು ಮಾರ್ಯಾ ಶಾಕಿಲ್‌ ಅವರು ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ಖಾರವಾದ ಪ್ರತಿಕ್ರಿಯೆ ಮಾತ್ರ ಬಂದಿದ್ದಲ್ಲದೇ, ಸಾಕೇತ್‌ ಗೋಖಲೆ ಅವರು ಚುನಾವಣಾ ಅಧಿಕಾರಿಗಳಿಗೆ ಪತ್ರ ಬರೆದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದಕ್ಕಾಗಿ ಮಾರ್ಯಾ ಅವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

“ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯ ಧರ್ಮವನ್ನು ಕೇಂದ್ರೀಕರಿಸಿ ಅವರ ವಿರುದ್ದ ಟೀಕೆ ಮಾಡಲಾಗುತ್ತಿದೆ. ಪಾಕಿಸ್ತಾನಕ್ಕೂ ಅಭ್ಯರ್ಥಿಗೂ ಯಾವುದೇ ಸಂಬಂಧವಿಲ್ಲದಿದ್ದರೂ, ಉದ್ದೇಶಪೂರ್ವಕವಾಗಿ ʼಜಿನ್ನಾ ಆತ್ಮʼ ಎಂಬ ಪದವನ್ನು ಬಳಸಲಾಗಿದೆ. ಈ ಪದವನ್ನು ಬಳಸಿ, ಚುನಾವಣಾ ವ್ಯವಸ್ಥೆಗೆ ಕೋಮು ಬಣ್ಣ ಬಳಿಯುವ ಪ್ರಯತ್ನವನ್ನು ಮಾರ್ಯಾ ಶಾಕಿಲ್‌ ಮಾಡಿದ್ದಾರೆ,” ಎಂದು ಸಾಕೇತ್‌ ತಮ್ಮ ದೂರಿನಲ್ಲಿ ಬರೆದುಕೊಂಡಿದ್ದಾರೆ.

ಮಾರ್ಯಾ ಶಾಕಿಲ್‌ ಅವರ ಈ ಹೇಳಿಕೆಯು ಚುನಾವಣಾ ನೀತಿ ಸಂಹಿತೆಗೆ ವಿರುದ್ದವಾದದ್ದು. ಮಾಧ್ಯಮಗಳು ಪಕ್ಷಾತೀತರಾಗಿ ಇರಬೇಕಾಗಿವೆ. ಅಷ್ಟು ಮಾತ್ರವಲ್ಲದೇ, ಅವರ ವರದಿಗಾರಿಕೆ ಅಥವಾ ಮಾಧ್ಯಮದ ವ್ಯಕ್ತಿಗಳ ಹೇಳಿಕೆಗಳು ಕೋಮು ದ್ವೇಷವನ್ನು ಪ್ರಚೋದಿಸುವಂತಿರಬಾರದು. ಆದರೆ, ಮಾರ್ಯಾ ಶಾಕಿಲ್‌ ಅವರು ಅಭ್ಯರ್ಥಿಯ ಧರ್ಮವನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆ ಮಾದರಿ ಚುನಾವಣಾ ಸಂಹಿತೆಗೆ ಅಪಚಾರವೆಗುವಂತದ್ದು, ಎಂದು ಸಾಕೇತ್‌ ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com