ಹಥ್ರಾಸ್ ಪ್ರಕರಣದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈ ಕೋರ್ಟ್

ನೀವು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪಡೆಯುತ್ತಿದ್ದೀರಿ, ನಿಮ್ಮ ಮಗಳು ಕರೋನಾ ವೈರಸ್ನಿಂದ ಮೃತಪಟ್ಟಿದ್ದರೆ ಇಷ್ಟು ಹಣ ನಿಮಗೆ ಸಿಗುತ್ತಿರಲಿಲ್ಲ ಎಂದ ಜಿಲ್ಲಾ ಮ್ಯಾಜಿಸ್ಟ್ರೇಟ್
ಹಥ್ರಾಸ್ ಪ್ರಕರಣದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈ ಕೋರ್ಟ್

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣವು ದೇಶಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಇತರ ಪಕ್ಷಗಳೊಂದಿಗೆ ಸೇರಿಕೊಂಡು ದೊಡ್ಡ ಮಟ್ಟದ ಪ್ರತಿಭಟನೆಯನ್ನೆ ಆಯೋಜಿಸಿತ್ತು. ಆದರೆ ಇದರ ಮುನ್ಸೂಚನೆ ಅರಿತಿದ್ದ ಉತ್ತರ ಪ್ರದೇಶದ ರಾಜ್ಯ ಸರ್ಕಾರ ಸಂತ್ರಸ್ಥೆ ಮನೀಷ ವಾಲ್ಮೀಕಿಯ ಮೃತದೇಹವನ್ನು ಸೆಪ್ಟೆಂಬರ್ 29 ರ ರಾತ್ರಿಯೇ ಸುಟ್ಟು ಹಾಕುವ ಮೂಲಕ ಮರಣೋತ್ತರ ಪರೀಕ್ಷೆ ನಡೆಸಬಹುದಾದ ಅವಕಾಶವನ್ನೂ ಕಿತ್ತುಕೊಂಡಿದೆ.

ಇದರಿಂದಾಗಿ ಪ್ರಕರಣದ ನಿಷ್ಪಕ್ಷಪಾತ ತನಿಖೆಗೂ ಅಡ್ಡಿಯಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ದೂರಿವೆ. ಆದರೆ ದೇಶಧ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಕೋಟ್ಯಾಂತರ ಭಾರತೀಯರು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನೇ ಎದುರು ನೋಡುತಿದ್ದಾರೆ. ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿರ್ವಹಣೆ ಕುರಿತು ಅಲಹಾಬಾದ್ ಹೈಕೋರ್ಟಿನ ಲಕ್ನೋ ಪೀಠ ಸೋಮವಾರ ಉತ್ತರ ಪ್ರದೇಶದ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪೊಲೀಸರ ನಡವಳಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಕಳೆದ ವಾರ ನ್ಯಾಯಾಲಯವು ಈ ವಿಷಯದ ಬಗ್ಗೆ ಸ್ವಯಂ ಪ್ರೇರಿತ ಕಾಗ್ನಿಸೆನ್ಸ್ ತೆಗೆದುಕೊಂಡ ನಂತರ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ನ್ಯಾಯಾಲಯವು ವಿಶೇಷವಾಗಿ ದಲಿತ ಸಂತ್ರಸ್ತೆಯ ಅವಸರದ ಶವಸಂಸ್ಕಾರದ ಬಗ್ಗೆ ಗಮನ ಹರಿಸಿದ್ದು ಮಧ್ಯರಾತ್ರಿಯಲ್ಲಿ ನಡೆದ ಘಟನೆಯ ಪೂರ್ಣ ಚಿತ್ರಣವನ್ನು ಕೇಳಲು ಸಂತ್ರಸ್ಥೆಯ ರಕ್ತ ಸಂಬಂಧಿಕರನ್ನು ಅದರ ಮುಂದೆ ಹಾಜರಾಗುವಂತೆ ನಿರ್ದೇಶಿಸಿತ್ತು. ಈ ಸಂದರ್ಭ ಸಂತ್ರಸ್ಥೆಯು ಶ್ರೀಮಂತ,ಪ್ರಭಾವಿ ಕುಟುಂಬದಿಂದ ಬಂದಿದ್ದರೆ ನೀವು ದೇಹವನ್ನು ಸುಡುತಿದ್ದಿರಾ ಎಂದು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಮತ್ತು ನ್ಯಾಯಮೂರ್ತಿ ರಾಜನ್ ರಾಯ್ ಅವರನ್ನೊಳಗೊಂಡ ನ್ಯಾಯಪೀಠ, ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಲಕ್ಷ್ಕರ್ ಅವರನ್ನು ಪ್ರಶ್ನಿಸಿದೆ. ಮಧ್ಯರಾತ್ರಿಯ ನಂತರ ಮತ್ತು ಬಾಲಕಿಯ ಕುಟುಂಬ ಸದಸ್ಯರ ಉಪಸ್ಥಿತಿ ಇಲ್ಲದೆ ನಡೆಸಿದ ಶವಸಂಸ್ಕಾರವನ್ನು ಉಲ್ಲೇಖಿಸಿ ದ ಕೋರ್ಟ್ ಶವಸಂಸ್ಕಾರಕ್ಕೆ ಬರದಂತೆ ಸಂತ್ರಸ್ಥೆಯ ಕುಟುಂಬದವರನ್ನು ತಡೆದ ಬಗ್ಗೆ ತೀಕ್ಷ್ಣ ಪ್ರಶ್ನೆಯೊಂದನ್ನೂ ಹಾಕಿದೆ. ಜಿಲ್ಲಾ ಮ್ಯಾಜಿಸ್ಸ್ಟ್ರೇಟ್ ಪ್ರವೀಣ್ ಕುಮಾರ್ ಅವರನ್ನು ನಿಮ್ಮ ಸ್ವಂತ ಮಗಳನ್ನು ಇದೇ ರೀತಿ ಅಂತ್ಯಸಂಸ್ಕಾರ ಮಾಡಲು ಅನುಮತಿಸುತ್ತೀರಾ ಎಂದು ನ್ಯಾಯಪೀಠ ಕೇಳಿದೆ.

ಹಥ್ರಾಸ್ ಪ್ರಕರಣದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈ ಕೋರ್ಟ್
ಹಥ್ರಾಸ್: ಸುಪ್ರೀಂ ಕೋರ್ಟಿಗೆ ಸರ್ಕಾರ ಸಲ್ಲಿಸಿದ ಅಫಿಡವಿಟ್‌ನಲ್ಲಿದೆ ದೋಷ

ನ್ಯಾಯಾಲಯವು ಸಂತ್ತಸ್ತೆಯ ಪೋಷಕರನ್ನು ವಿಚಾರಣೆ ನಡೆಸಿತು. ಆಗ ಸಂತ್ರಸ್ಥೆಯ ಪೋಷಕರು, ಅವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸರು ತಮ್ಮ ಮಗಳ ದೇಹವನ್ನು ಕೊನೆಯ ಬಾರಿಗೆ ನೋಡಲೂ ಅನುಮತಿ ನೀಡಲಿಲ್ಲ ಅಥವಾ ಆತುರದಿಂದ ನಡೆಸಿದ ಶವಸಂಸ್ಕಾರಕ್ಕೆ ತೆರಳಲು ತಮಗೆ ಅನುಮತಿ ನೀಡಲಿಲ್ಲ ಎಂದು ಆರೋಪಿಸಿದ್ದರು. ಕಳೆದ ಸೆಪ್ಟೆಂಬರ್ 14 ರಂದು ಮೇಲ್ವರ್ಗದ ಠಾಕೂರ್ ಜಾತಿಗೆ ಸೇರಿದ ನಾಲ್ವರು ಯುವಕರು 19 ವರ್ಷದ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಂತರ ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ಥೆಯು ಕೊನೆಯುಸಿರು ಎಳೆದಿದ್ದಳು.

ಹಥ್ರಾಸ್ ಪ್ರಕರಣದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈ ಕೋರ್ಟ್
‌ಹಥ್ರಾಸ್:‌ ಸಂತ್ರಸ್ತೆಯ ಕುಟುಂಬವೇ ಆಕೆಯನ್ನು ಕೊಂದಿದೆ - ಆರೋಪಿಯಿಂದ ಪೊಲೀಸರಿಗೆ ಪತ್ರ

ನ್ಯಾಯಾಲಯದ ಮುಂದೆ ತನ್ನ ಹೇಳಿಕೆಯಲ್ಲಿ ಯುವತಿಯ ತಂದೆಯು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರವೀಣ್ ಕುಮಾರ್ ಅವರು ತಮಗೆ ನೀವು ಮುಖ್ಯಮಂತ್ರಿಯ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪಡೆಯುತ್ತಿದ್ದೀರಿ, ನಿಮ್ಮ ಮಗಳು ಕರೋನಾ ವೈರಸ್ನಿಂದ ಮೃತಪಟ್ಟಿದ್ದರೆ ಇಷ್ಟು ಹಣ ನಿಮಗೆ ಸಿಗುತ್ತಿರಲಿಲ್ಲ ಎಂದು ಹೇಳಿದ್ದಾಗಿ ಆರೋಪಿಸಿದ್ದಾರೆ. ಇದಕ್ಕೆ ಉತ್ತರಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ವಿವರಣೆಯು ಕೋರ್ಟ್ ಗೆ ಸಮಾಧಾನ ತರಲಿಲ್ಲ. ನಂತರ ತಮ್ಮ ಹೇಳಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ವೀರ್ ಅವರು ತಾವು ಈ ಪ್ರಕರಣದಲ್ಲಿ ಏನು ಕ್ರಮಗಳನ್ನು ಕೈಗೊಂಡಿದ್ದಾರೋ ಅದು ತಮ್ಮ ಸ್ವಂತ ಇಚ್ಚೆಯಿಂದ ಕೈಗೊಂಡಿದ್ದು ಮೇಲಿನ ಅಧಿಕಾರಿಗಳಿಂದ ಮತ್ತು ರಾಜ್ಯ ರಾಜಧಾನಿಯಾದ ಲಕ್ನೋದಿಂದ ಯಾವುದೇ ಸೂಚನೆಗಳನ್ನು ಪಡೆದಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದರು. ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹಿತೇಶ್ ಚಂದ್ರ ಅವಸ್ಥಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನಿಶ್ ಕುಮಾರ್ ಅವಸ್ಥಿ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ವಿಚಾರಣೆಯ ಕೊನೆಗೊಳ್ಳುವವರೆಗೂ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.

ಹಥ್ರಾಸ್ ಪ್ರಕರಣದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೈ ಕೋರ್ಟ್
ಹಥ್ರಾಸ್ ಪ್ರಕರಣ: ಸಿಬಿಐ ಭೀತಿಯ ಎದುರು ಉಡುಗಿಹೋಯ್ತೆ ದಲಿತ ನಾಯಕಿಯ ದನಿ?

ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಕುಮಾರ್ ಅವರು ಅಂದಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಬರುವಂತೆ ನೋಡಿಕೊಳ್ಳಲು ತಾವು ಸಂಪೂರ್ಣ ಗಮನ ಹರಿಸಿದ್ದು ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿಯು ಉದ್ವಿಗ್ನವಾಗುತಿತ್ತು. ಏಕೆಂದರೆ ಕೆಲವು ಸಂಘಟನೆಗಳು ಜನರನ್ನು ಪ್ರಚೋದಿಸಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸಲು ಸಂಚು ರೂಪಿಸಿರುವ ಬಗ್ಗೆ ಗುಪ್ತಚರ ಇಲಾಖೆಯು ಮಾಹಿತಿಗಳನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಹಳ್ಳಿಯಲ್ಲಿ ಈಗಾಗಲೇ ಜನಸಂದಣಿ ಇದ್ದು ಬೆಳಿಗ್ಗೆ ದೊಡ್ಡ ಜನಸಮೂಹವು ಸೇರುವ ನಿರೀಕ್ಷೆಯಿದೆ ಎಂದು ಪೋಲೀಸರು ತಿಳಿಸಿದ್ದರು. ಇದಕ್ಕಾಗಿಯೇ ಶವಸಂಸ್ಕಾರವನ್ನು ತ್ವರಿತಗೊಳಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ನಿರ್ಭಯಾ ಪ್ರಕರಣದಲ್ಲಿ ಸಂತ್ರಸ್ತೆಯ ಕಾನೂನು ಸಲಹೆಗಾರರೂ ಆಗಿದ್ದ ವಕೀಲ ಸೀಮಾ ಕುಶ್ವಾಹಾ ಅವರು ಸಂತ್ರಸ್ತೆಯ ಕುಟುಂಬವನ್ನು ಪ್ರತಿನಿಧಿಸುತ್ತಿದ್ದರೆ - ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿನೋದ್ ಶಾಹಿ ರಾಜ್ಯ ಸರ್ಕಾರದವನ್ನು ಪ್ರತಿನಿಧಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ಎತ್ತಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಸಲ್ಲಿಸಲು ಸಾಕಷ್ಟು ಸಮಯ ಬೇಕು ಎಂದು ರಾಜ್ಯದ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಈ ವಿಷಯವನ್ನು ನವೆಂಬರ್ 2 ರವರೆಗೆ ಮುಂದೂಡಲು ನ್ಯಾಯಪೀಠ ನಿರ್ಧರಿಸಿತು. ಏತನ್ಮಧ್ಯೆ, ಯೋಗಿ ಆದಿತ್ಯನಾಥ್ ಸರ್ಕಾರವು ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ, ಅಷ್ಟೇ ಅಲ್ಲ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿಯೇ ಸಿಬಿಐ ತನಿಖೆ ನಡೆಸುವಂತೆಯೂ ಒತ್ತಾಯಿಸಿದೆ. ಮುಖ್ಯಮಂತ್ರಿಗಳು ಶಿಫಾರಸು ಮಾಡಿದ ಎಂಟು ದಿನಗಳ ನಂತರ ಅಕ್ಟೋಬರ್ 11 ರಂದು ಸಿಬಿಐ ಈ ಕುರಿತು ಪ್ರಕರಣ ದಾಖಲಿಸಿದೆ. ಅಲಿಗಢದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಜೆಎನ್ಎಂಸಿಎಚ್) ವೈದ್ಯಕೀಯ ವರದಿಯು ಅತ್ಯಾಚಾರ ನಡೆದಿರುವ ಅಥವಾ ನಡೆದಿಲ್ಲದಿರುವ ಬಗ್ಗೆ ಸಮರ್ಥನೆಯನ್ನು ನೀಡಿಲ್ಲದಿದ್ದರೂ ಸಹ, ಯುಪಿ ಪೊಲೀಸರು ದಲಿತ ಮಹಿಳೆಯು ಅತ್ಯಾಚಾರಕ್ಕೊಳಗಾಗಲಿಲ್ಲ ಎಂದು ಹೇಳಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಅಪಖ್ಯಾತಿಗೀಡು ಮಾಡಲು ಅಂತರರಾಷ್ಟ್ರೀಯ ಪಿತೂರಿ ನಡೆದಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ದಲಿತ ಯುವತಿಯ ಮರಣದ ನಂತರ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 19 ಎಫ್ಐಆರ್ ಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖೆಯು ಮುಂದುವರಿದಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com