ರಾಮ್ ‌ವಿಲಾಸ್‌ ಪಾಸ್ವಾನ್‌ ಮರಣದ ನಂತರ, ಎನ್‌ಡಿಎ ಸರ್ಕಾರದಲ್ಲಿ ಉಳಿದ ಏಕೈಕ ಬಿಜೆಪಿಯೇತರ ಸಚಿವ
ರಾಷ್ಟ್ರೀಯ

ರಾಮ್ ‌ವಿಲಾಸ್‌ ಪಾಸ್ವಾನ್‌ ಮರಣದ ನಂತರ, ಎನ್‌ಡಿಎ ಸರ್ಕಾರದಲ್ಲಿ ಉಳಿದ ಏಕೈಕ ಬಿಜೆಪಿಯೇತರ ಸಚಿವ

ಈ ಹಿಂದೆ ಶಿರೋಮಣಿ ಅಕಾಲಿ ದಳ, ಮಿಜೋ ನ್ಯಾಷನಲ್‌ ಫ್ರಂಟ್‌ ಮತ್ತು ಶಿವಸೇನೆಯ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಪ್ರತಿಧ್ವನಿ ವರದಿ

ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದೊಂದಿಗೆ, ಕೇವಲ ಒಬ್ಬರು ಬಿಜೆಪಿಯೇತರ ಸಚಿವರು ಮಾತ್ರ ಪ್ರಧಾನಿ ಮೋದಿಯವರ ಸಂಪುಟದಲ್ಲಿ ಉಳಿದಿದ್ದಾರೆ. ಪಾಸ್ವಾನ್ ಅವರ ಸಾವು ಮತ್ತು ಹರ್ಸಿಮ್ರತ್ ಕೌರ್ ಬಾದಲ್ ಅವರ ರಾಜೀನಾಮೆಯ ನಂತರ 54 ಮಂತ್ರಿಗಳನ್ನು ಹೊಂದಿರುವ ಪ್ರಸ್ತುತ ಮೋದಿ ಸರ್ಕಾರದಲ್ಲಿ ಎನ್‌ಡಿಎಯ ಏಕೈಕ ಪ್ರತಿನಿಧಿಯಾಗಿ ರಿಪಬ್ಲಿಕನ್ ಪಾರ್ಟಿ ಆಫ್‌ ಇಂಡಿಯಾದ ರಾಮ್ ದಾಸ್ ಅಟವಾಲೆ ಮಾತ್ರ ಇದ್ದಾರೆ.

ಎನ್‌ಡಿಎ ಘಟಕವಾದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕ ಪಾಸ್ವಾನ್ ಅವರು ಮೋದಿ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಸೆಪ್ಟೆಂಬರ್ 18 ರಂದು ಕ್ಯಾಬಿನೆಟ್ ತೊರೆದರು. ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೂರು ವಿವಾದಾತ್ಮಕ ಕೃಷಿ ಜಾರಿಗೆ ತರುವ ನಿರ್ಧಾರವನ್ನು ವಿರೋಧಿಸಿ ಅವರ ಪಕ್ಷ ಎನ್‌ಡಿಎಯಿಂದ ಹೊರಬಂದಿದೆ.

ರಾಮ್‌ದಾಸ್‌ ಅಟವಾಲೆ
ರಾಮ್‌ದಾಸ್‌ ಅಟವಾಲೆ

ಎಲ್‌ಜೆಪಿ ಇನ್ನೂ ಎನ್‌ಡಿಎಯ ಭಾಗವಾಗಿದ್ದರೂ, ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನತಾದಳ (ಯುನೈಟೆಡ್) ವಿರುದ್ದ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಮತ್ತೊಂದು ಎನ್‌ಡಿಎ ಮಿತ್ರಪಕ್ಷ ಮಿಜೊ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) ಕೂಡ ಕಳೆದ ರಾಜ್ಯ ಚುನಾವಣೆಗೆ ಮುನ್ನ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತ್ತು.

2019 ರಲ್ಲಿ ಶಿವಸೇನೆಯು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲು ಎನ್‌ಡಿಎ ಯಿಂದ ಹೊರನಡೆದಿತ್ತು. ಆ ಹೊತ್ತಿನಲ್ಲಿ ಶಿವಸೇನೆಯಿಂದ ಕೇಂದ್ರ ಸಚಿವರಾಗಿದ್ದ ಅರವಿಂದ್‌ ಸಾವಂತ್‌ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ರಚಿಸಿ ಶಿವಸೇನೆಯ ಉದ್ದವ್‌ ಠಾಕ್ರೆ ಮುಖ್ಯಮಂತ್ರಿಯಾದರು.

ಮೋದಿ ಕ್ಯಾಬಿನೆಟ್ ವಿಸ್ತರಣೆಯ ಬಗ್ಗೆ ಕೆಲವು ಸಮಯದಿಂದ ಊಹಾಪೋಹಗಳು ಇದ್ದರೂ, ಸರ್ಕಾರವು ಈ ಬಗ್ಗೆ ಈವರೆಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡಲಿಲ್ಲ.

ರಾಮ ಮಂದಿರ ಭೂಮಿ ಪೂಜೆಯ ಬಳಿಕ ಸಂಪುಟ ವಿಸ್ತರಣೆ ನಡೆಸಲಾಗುವುದು. ಈ ಪ್ರಕ್ರಿಯೆ ಮುಗಿದಿರಬೇಕಿತ್ತು, ಆದರೆ ಕರೋನಾ ಸಂಕಷ್ಟದಿಂದ ಮುಂದೂಡಲ್ಪಟ್ಟಿದೆ, ಎಂದು ಬಿಜೆಪಿಯ ಮೂಲಗಳು ರಾಮ ಮಂದಿರ ಭೂಮಿ ಪೂಜೆ ನಡೆಯುವ ಮುಂಚೆ ಹೇಳಿದ್ದರು ಎಂದು ʼದಿ ವೈರ್‌ʼ ವರದಿ ಮಾಡಿದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com