ಚಿನ್ಮಯಾನಂದ್‌ ಪ್ರಕರಣ: ಸಂತ್ರಸ್ಥೆಯ ಹೇಳಿಕೆಯನ್ನು ಆರೋಪಿಗೆ ನೀಡಲು ನಿರಾಕರಿಸಿದ ಸುಪ್ರಿಂ

ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಒಂದು ವೇಳೆ ಆರೋಪಿಗಳಿಗೆ ಸಂತ್ರೆಸ್ಥೆಯ ಅಧಿಕೃತ ಹೇಳಿಕೆಯನ್ನು ನೀಡಿದಲ್ಲಿ ಅವರು ಪ್ರಕರಣದ ಹಾದಿ ತಪ್ಪಿಸುವ ಪ್ರಯತ್ನಪಡಬಹುದು, ಎಂದು ಹೇಳಲಾಗಿದೆ.
ಚಿನ್ಮಯಾನಂದ್‌ ಪ್ರಕರಣ: ಸಂತ್ರಸ್ಥೆಯ ಹೇಳಿಕೆಯನ್ನು ಆರೋಪಿಗೆ ನೀಡಲು ನಿರಾಕರಿಸಿದ ಸುಪ್ರಿಂ

ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಚಿನ್ಮಯಾನಂದ್‌ ಅವರಿಗೆ ಸುಪ್ರಿಂಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸಂತ್ರಸ್ಥೆಯು CrPC section 164ಅಡಿಯಲ್ಲಿ ನೀಡಿದ ಅಧಿಕೃತ ಹೇಳಿಕೆ ನೀಡಿ ಎಂದು ಚಿನ್ಮಯಾನಂದ್‌ ಅಲಹಾಬಾದ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದನ್ನು ಅಲಹಾಬಾದ್‌ ಹೈಕೋರ್ಟ್‌ ಮಾನ್ಯ ಮಾಡಿತ್ತು ಕೂಡಾ. ಆದರೆ, ಸುಪ್ರಿಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ನ ಆದೇಶವನ್ನು ತಳ್ಳಿ ಹಾಕಿದೆ.

ಜಸ್ಟೀಸ್‌ ಯುಯು ಲಲಿತ್‌ ನೇತೃತ್ವದ ಪೀಠವು ಈ ಆದೇಶವನ್ನು ನೀಡಿದೆ. ಓರ್ವ ಕಾನೂನು ವಿದ್ಯಾರ್ಥಿ ಅಲಹಾಬಾದ್‌ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರಿಂ ಮೆಟ್ಟಿಲೇರಿದ್ದರು. ಇದನ್ನು ಸುಪ್ರಿಂ ಕೋರ್ಟ್‌ ಪುರಸ್ಕರಿಸಿದೆ. ಆದೇಶ ನೀಡುವ ಸಂದರ್ಭದಲ್ಲಿ 2014ರ ಕರ್ನಾಟಕ ಸರ್ಕಾರ ಮತ್ತು ಶಿವಣ್ಣ ನಡುವಿನ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದೆ.

“ಅತ್ಯಾಚಾರದಂತಹ ಘಟನೆ ನಡೆದ ಸಂದರ್ಭದಲ್ಲಿ, ತನಿಖಾಧಿಕಾರಿಯು ತಕ್ಷಣವೇ ಸಂತ್ರಸ್ಥೆಯ ಹೇಳಿಕೆಯನ್ನು ಸಂತ್ರಸ್ಥೆಯು CrPC section 164ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ ಮುಂದೆ ದಾಖಲಿಸಬೇಕು. ಈ ಹೇಳಿಕೆಯ ಪ್ರತಿಯನ್ನು ತನಿಖಾಧಿಕಾರಿಗೆ ತುರ್ತಾಗಿ ನೀಡಬೇಕು. CrPC ಸೆಕ್ಷನ್‌ 173ರ ಅಡಿಯಲ್ಲಿ ಚಾರ್ಜ್‌ಶೀಟ್‌ ದಾಖಲಿಸುವವರೆಗೂ, ಈ ಹೇಳಿಕೆಯನ್ನು ಯಾರ ಬಳಿಯೂ ಬಹಿರಂಗಪಡಿಸಬಾರದು,” ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿತ್ತು. ಇದೇ ತೀರ್ಪನ್ನು ಮುಂದಿಟ್ಟುಕೊಂಡು ಚಿನ್ಮಯಾನಂದ್‌ ವಿಚಾರದಲ್ಲಿ ಆದೇಶವನ್ನು ನೀಡಲಾಗಿದೆ.

ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ಒಂದು ವೇಳೆ ಆರೋಪಿಗಳಿಗೆ ಸಂತ್ರೆಸ್ಥೆಯ ಅಧಿಕೃತ ಹೇಳಿಕೆಯನ್ನು ನೀಡಿದಲ್ಲಿ ಅವರು ಪ್ರಕರಣದ ಹಾದಿ ತಪ್ಪಿಸುವ ಪ್ರಯತ್ನಪಡಬಹುದು. ಇದು ಕೇವಲ ಒಂದು ಪ್ರಕರಣ ಮಾತ್ರವಲ್ಲ ಲೈಂಗಿಕ ದೌರ್ಜನ್ಯದ ಎಲ್ಲಾ ಪ್ರಕರಣಗಳಲ್ಲಿಯೂ ಇದನ್ನು ಪರಿಗಣಿಸಬೇಕು ಎಂದು ಹೇಳಿದ್ದರು.

ಸೆಪ್ಟೆಂಬರ್‌ 21, 2019ರಂದು ಚಿನ್ಮಯಾನಂದ್‌ ಅವರನ್ನು ಬಂಧಿಸಲಾಗಿತ್ತು. ಫೆಬ್ರುವರಿ 3, 2020ರಂದು ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿತ್ತು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com