ಶಾಹೀನ್ ಬಾಗ್: ಪ್ರತಿಭಟನೆಗೆ ಸಾರ್ವಜನಿಕ ಸ್ಥಳವನ್ನು ಆಕ್ರಮಿಸುವುದು ಸ್ವೀಕಾರಾರ್ಹವಲ್ಲ- ಸುಪ್ರೀಂ
ರಾಷ್ಟ್ರೀಯ

ಶಾಹೀನ್ ಬಾಗ್: ಪ್ರತಿಭಟನೆಗೆ ಸಾರ್ವಜನಿಕ ಸ್ಥಳವನ್ನು ಆಕ್ರಮಿಸುವುದು ಸ್ವೀಕಾರಾರ್ಹವಲ್ಲ- ಸುಪ್ರೀಂ

ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವು ಜೊತೆಗೆ ಸಾಗುತ್ತದೆ ಆದರೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ

ಪ್ರತಿಧ್ವನಿ ವರದಿ

ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಭಟಿಸುವ ಹಕ್ಕು ʼಪರಿಪೂರ್ಣವಲ್ಲʼ ಹಾಗೂ ಪ್ರತಿಭಟನೆಗಳಿಗಾಗಿ ಸಾರ್ವಜನಿಕ ಪ್ರದೇಶವನ್ನು ಅನಿರ್ದಿಷ್ಟಾವಧಿ ಆಕ್ರಮಿಸಿಕೊಳ್ಳುವುದು ಒಪ್ಪಿತಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸಿಎಎ ಎನ್‌ಆರ್‌ಸಿ ವಿರೋಧಿಸಿ ಶಾಹೀನ್‌ ಭಾಗ್‌ ನ ಹೋರಾಟದಲ್ಲಿ ಉಂಟಾದ ರಸ್ತೆ ಅಡಚಣೆ ಹಾಗೂ ಸಾರ್ವಜನಿಕರಿಗೆ ಎದುರಾದ ತೊಂದರೆಗಳನ್ನು ಎತ್ತಿ ತೋರಿಸುವ ಪ್ರಕರಣದ ವಿಚಾರಣೆ ನಡೆಸಿದ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ತ್ರಿಸದಸ್ಯ ಪೀಠವು, ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವು ಜೊತೆಗೆ ಸಾಗುತ್ತದೆ, ಆದರೆ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ತೀರ್ಪು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

"ಪ್ರತಿಭಟನೆಗಾಗಿ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಸಾರ್ವಜನಿಕ ಸ್ಥಳಗಳಿಂದ ತೆರವುಗೊಳಿಸುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು” ಎಂದು ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ಸರ್ಕಾರಿ ಅಧಿಕಾರಿಗಳು ಹೇಗಾದರೂ ಸಾರ್ವಜನಿಕ ಪ್ರದೇಶಗಳನ್ನು ಆಕ್ರಮಿಸಿಕೊಂಡ ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸಬೇಕು. ಇದಕ್ಕಾಗಿ ನ್ಯಾಯಾಲಯದ ಆದೇಶಕ್ಕೆ ಕಾದು ಕೂರಬಾರದು ಎಂದೂ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.

ಸಿಎಎಯನ್ನು ವಿರೋಧಿಸುವವರು ಶಾಹೀನ್ ಬಾಗ್‌ನಲ್ಲಿ ನಡೆಸಿದ ಪ್ರತಿಭಟನೆಯಿಂದಾಗಿ ʼಶಾಹೀನ್ ಬಾಗ್ - ಕಲಿಂದಿ ಕುಂಜ್ʼ ರಸ್ತೆಯಲ್ಲಿ ಉಂಟಾದ ತಡೆಯನ್ನು ತೆಗೆದುಹಾಕುವಂತೆ ಕೋರಿ ವಕೀಲ ಅಮಿತ್ ಸಾಹ್‌ನಿ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಮನವಿಯ ಮೇರೆಗೆ ಈ ತೀರ್ಪು ಬಂದಿದೆ.

2019 ರ ಡಿಸೆಂಬರ್‌ 12 ರಂದು ಅಂಗೀಕಾರಗೊಂಡ 1955 ರ ಪೌರತ್ವ ಕಾಯ್ದೆಯ ತಿದ್ದುಪಡಿ ಮಸೂದೆಯ ವಿರುದ್ಧ ದೇಶವ್ಯಾಪಿ ಜನರು ವಿರೋಧ ವ್ಯಕ್ತಪಡಿಸಿದ್ದರು. ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ತಂದಿರುವ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ರಾಜಕೀಯ ಚಿಂತಕರು, ಸಾಮಾಜಿಕ ಹೋರಾಟಗಾರರು ಕೂಡಾ ಸಕ್ರಿಯವಾಗಿ ಪಾಲ್ಗೊಂಡಿದ್ದರು. ದೇಶದಾದ್ಯಂತ ನಡೆದ ಪ್ರತಿಭಟನೆಗೆ ಶಾಹೀನ್‌ ಭಾಗ್‌ ನಲ್ಲಿ ನಡೆಯುತ್ತಿದ್ದ ನಿರಂತರ ಪ್ರತಿಭಟನೆ ಪ್ರೇರಕ ಶಕ್ತಿಯಾಗಿ ರೂಪುಗೊಂಡಿತ್ತು.

ರಾಷ್ಟ್ರ ರಾಜಧಾನಿಯ ಶಾಹೀನ್ ಬಾಗ್‌ನಲ್ಲಿ 2019 ರ ಡಿಸೆಂಬರ್ 15 ರಂದು ಪ್ರಾರಂಭವಾದ ಪ್ರತಿಭಟನೆ 3 ತಿಂಗಳಿಗೂ ಹೆಚ್ಚು ಕಾಲ ಮುಂದುವರೆಯಿತು. ಕರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪ್ರತಿಭಟನಾ ಧರಣಿಯನ್ನು ಸ್ಥಗಿತಗೊಳಿಸಲಾಗಿತ್ತು.

Click here to follow us on Facebook , Twitter, YouTube, Telegram

Pratidhvani
www.pratidhvani.com