ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ

ಕಳೆದ ಮೂರು ವರ್ಷಗಳಿಂದ ಇಡೀ ದೇಶದಲ್ಲಿ ಇನ್ನೆಲ್ಲೂ ಕಂಡಿರದ ಮಟ್ಟಿನ ನಾಗರಿಕ ಹಕ್ಕುಗಳ ದಮನ, ಮಹಿಳಾ ದೌರ್ಜನ್ಯ, ದಲಿತರ ಮೇಲಿನ ಅಟ್ಟಹಾಸ, ಸರ್ಕಾರಿ ವ್ಯವಸ್ಥೆಯ ದುರ್ಬಳಕೆ, ಪೊಲೀಸ್ ದಬ್ಬಾಳಿಕೆಗಳನ್ನು ಕಂಡಿರುವ ರಾಜ್ಯದ ಮುಖ್ಯಮಂತ್ರಿಯನ್ನು ದೇಶ ...
ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ

ಜಾಗತಿಕ ಮಟ್ಟದಲ್ಲಿ ಭಾರತದ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಹಿಳಾ ರಕ್ಷಣೆಯ ವಾಸ್ತವಾಂಶಗಳನ್ನು ಬೆತ್ತಲು ಮಾಡಿದ ಉತ್ತರಪ್ರದೇಶದ ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಸುಪ್ರಿಂಕೋರ್ಟ್ ಮೆಟ್ಟಿಲೇರಿದ್ದು, ಅದೊಂದು ಆಘಾತಕಾರಿ, ಭೀಕರ ಪ್ರಕರಣ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಸುಪ್ರೀಂಕೋರ್ಟಿನ ಈ ಹೇಳಿಕೆ, ತಮ್ಮದು ರಾಮರಾಜ್ಯ ಮತ್ತು ತಾನು ರಾಮಭಕ್ತ ಎಂದು ಹೇಳಿಕೊಳ್ಳುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಮತ್ತು ಬಿಜೆಪಿ ಆಡಳಿತಕ್ಕೆ ತೀವ್ರ ಮುಖಭಂಗ ಉಂಟುಮಾಡಿದ್ದು, ಸ್ವತಃ ಅಜಯ್ ಸಿಂಗ್ ಬಿಷ್ತ್ ಅಲಿಯಾಸ್ ಯೋಗಿ ಆದಿತ್ಯನಾಥ ಆಡಳಿತ ಇಡಿಯಾಗಿ ನಾಲ್ವರು ಅತ್ಯಾಚಾರಿಗಳ ಪರ ನಿಂತಿರುವ ಮಾನಗೇಡಿ ವರಸೆಯನ್ನು ನಗೆಪಾಟಲಿಗೀಡುಮಾಡಿದೆ.

ಒಬ್ಬ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಆಕೆಯ ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿಯುವ ಮಟ್ಟಿಗೆ ಬಡಿದು ಬಿಸಾಕಿದ ಹೇಯ ನರರಕ್ಕಸ ಆರೋಪಿಗಳನ್ನು ಬಂಧಿಸಿ, ಜೈಲಿಗೆ ಅಟ್ಟುವ ಕೆಲಸ ಮಾಡಬೇಕಾದ ಸರ್ಕಾರ, ಅದರ ಬದಲಿಗೆ ಆ ಆರೋಪಿಗಳ ರಕ್ಷಣೆಗೆ ತನ್ನ ಇಡೀ ಕಾನೂನು- ಕಾಯ್ದೆಗಳನ್ನು ಬಳಸಿಕೊಂಡು ನಿಷೇಧಾಜ್ಞೆ, ಪ್ರತಿಬಂಧಕಾಜ್ಞೆ, ಕೋವಿಡ್ ನಿರ್ಬಂಧಗಳನ್ನು ಜಾರಿಗೊಳಿಸಿತು. ಇಡೀ ಪೊಲೀಸ್ ಪಡೆಯನ್ನು ರಾಜ್ಯದ ದೆಹಲಿ ಗಡಿಯಲ್ಲಿ ಮತ್ತು ಹಥ್ರಾಸ್ ಜಿಲ್ಲೆಯ ಸುತ್ತ ನಿಯೋಜಿಸಿ ಪೊಲೀಸ್ ಕೋಟೆ ಕಟ್ಟಿತು. ಪ್ರತಿಪಕ್ಷಗಳು, ಪತ್ರಕರ್ತರು ಕೂಡ ಆ ಜಿಲ್ಲೆಗೆ ಕಾಲಿಡದಂತೆ ನೋಡಿಕೊಂಡಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜನರ ಮಾನ ಮತ್ತು ಪ್ರಾಣ ರಕ್ಷಣೆ ಮಾಡುವುದಾಗಿ, ಕಾನೂನು ಸುವ್ಯವಸ್ಥೆ ಕಾಯುವುದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು ಮಾತ್ರವಲ್ಲದೆ, ಸ್ವತಃ ತಾನೂ ಹಿಂದೂ ಸಂಸ್ಕೃತಿಯ ವಾರಸುದಾರ, ಹಿಂದೂ ಮಠವೊಂದರ ಮುಖ್ಯಸ್ಥ ಮತ್ತು ರಾಮಭಕ್ತ ಎಂದು ಹೇಳಿ ತನ್ನ ಆಡಳಿತದಲ್ಲಿ ಹಿಂದೂಗಳ ಪಾಲಿನ ಆದರ್ಶ ರಾಜ್ಯ ರಾಮರಾಜ್ಯವನ್ನೇ ಉತ್ತರಪ್ರದೇಶದಲ್ಲಿ ನಿರ್ಮಿಸುತ್ತೇನೆ ಎಂದು ಅಧಿಕಾರಕ್ಕೆ ಬಂದ ದಿನದಿಂದಲೂ ಹೇಳುತ್ತಿರುವ ಯೋಗಿ ಆದಿತ್ಯನಾಥ ಅಲಿಯಾಸ್ ಅಜಯ್ ಬಿಷ್ತ್, ಸಂಪೂರ್ಣ ತದ್ವಿರುದ್ಧ ದಿಕ್ಕಿನಲ್ಲಿ ತನ್ನ ಆಡಳಿತ ನಡೆಸುತ್ತಿರುವುದು ಹೊಸದೇನಲ್ಲ. ಯೋಗಿ ಸಿಎಂ ಗಾದಿಗೆ ಏರಿದ ಬಳಿಕ ಕಳೆದ ಮೂರು ವರ್ಷಗಳಿಂದಲೂ ಉತ್ತರಪ್ರದೇಶದಲ್ಲಿ ವಾಸ್ತವದಲ್ಲಿ ನಡೆಯುತ್ತಿರುವುದು ‘ರಾವಣರಾಜ್ಯ’ವಾದರೂ, ಹೇಳುತ್ತಿರುವುದು ಮಾತ್ರ ‘ರಾಮರಾಜ್ಯ’ದ ಹೆಸರು!

2017ರ ಜೂನ್ ನಲ್ಲಿ ಅಲ್ಲಿನ ಉನ್ನಾವ್ ನಲ್ಲಿ ಹದಿನೇಳು ವರ್ಷದ ಯುವತಿಯೊಬ್ಬಳ ಮೇಲೆ ಸ್ವತಃ ಯೋಗಿ ಆದಿತ್ಯನಾಥರ ಬಿಜೆಪಿಯ ಶಾಸಕನೇ ಅತ್ಯಾಚಾರ ಎಸಗಿದ್ದ ಪ್ರಕರಣ ವರದಿಯಾಗಿತ್ತು. ಆ ಪ್ರಕರಣದಲ್ಲಿ ಸಂತ್ರಸ್ತೆ ತನಗೆ ಜೀವ ಭಯವಿದೆ. ಆರೋಪಿ ನಿಮ್ಮದೇ ಪಕ್ಷದ ಶಾಸಕ. ಆತನ ವಿರುದ್ಧ ಕ್ರಮಕೈಗೊಳ್ಳಿ ಎಂದು ಗೋಗರೆದಿದ್ದಳು. ಆದರೆ, ಆಕೆಗೆ ರಕ್ಷಣೆ ನೀಡುವ ಬದಲು ಯೋಗಿ ಸರ್ಕಾರ ಆಕೆಯ ವಿರುದ್ಧವೇ ಹಥ್ರಾಸ್ ಪ್ರಕರಣದ ಮಾದರಿಯಲ್ಲೇ ಸಮರ ಸಾರಿತ್ತು. ಕೊನೆಗೆ ಆಕೆಯ ತಂದೆಯನ್ನು ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅಪಘಾತ ಮಾಡಿ ಸಾಯಿಸಿದರೆ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿ ವಾಪಸ್ಸಾಗುವಾಗ ಸಂತ್ರಸ್ತೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಕೊನೆಗೂ ಆಕೆ ಸುಟ್ಟಗಾಯಗಳಿಂದ ಸಾವು ಕಂಡಿದ್ದಳು.

ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ
CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು

ನಂತರ ಕಳೆದ ವರ್ಷದ ಡಿಸೆಂಬರಿನಲ್ಲಿ ದೆಹಲಿ ನ್ಯಾಯಾಲಯ ಅತ್ಯಾಚಾರಿ ಶಾಸಕನಿಗೆ ಶಿಕ್ಷೆ ವಿಧಿಸಿತ್ತು. ನ್ಯಾಯಾಲಯ ಶಿಕ್ಷೆ ವಿಧಿಸುವ ಕೊನೆಯ ಘಳಿಗೆಯವರೆಗೆ ಯೋಗಿ ಆಡಳಿತ ಆ ಅತ್ಯಾಚಾರಿಯ ಪರವೇ ನಿಂತಿತ್ತು ಮತ್ತು ಪ್ರಕರಣದ ಸಂತ್ರಸ್ತೆಯ ಪರ ನ್ಯಾಯಕ್ಕಾಗಿ ದನಿ ಎತ್ತಿದ ಎಲ್ಲರ ವಿರುದ್ಧ ಬೆದರಿಕೆ ಮತ್ತು ಕಾನೂನು ದುರ್ಬಳಕೆಯ ಅಸ್ತ್ರ ಪ್ರಯೋಗಿಸಿತ್ತು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಸ್ವತಃ, ಈ ಅಭಿಪ್ರಾಯ ವ್ಯಕ್ತಪಡಿಸಿ, ಆರೋಪಿಗೆ ರಕ್ಷಣೆ ಮತ್ತು ಜಿಲ್ಲಾಧಿಕಾರಿ ಮತ್ತು ಪೊಲೀಸರ ಲೋಪದ ವಿಷಯದಲ್ಲಿ ಕ್ರಮಕೈಗೊಳ್ಳುವಲ್ಲಿ ಕೂಡ ಯೋಗಿ ಸರ್ಕಾರ ವಿಫಲವಾಗಿದೆ ಎಂದು ಹೇಳಿತ್ತು. ಇದೀಗ ಆ ಅತ್ಯಾಚಾರ ಸಂತ್ರಸ್ತೆ, ಆಕೆಯ ತಂದೆ, ಪ್ರಮುಖ ಸಾಕ್ಷಿದಾರ ಸೇರಿದಂತೆ ಪ್ರಕರಣದ ಪ್ರಮುಖರೆಲ್ಲರೂ ಆರೋಪಿಯ ಕೈವಾಡಗಳಿಂದಲೇ ಜೀವ ಕಳೆದುಕೊಂಡ ಬಳಿಕ, ಆರೋಪಿ ಜೈಲು ಶಿಕ್ಷೆಗೆ ಒಳಗಾದ ಬಳಿಕವೂ ಬಿಜೆಪಿ ಶಾಸಕನ ಪ್ರಹಾರಗಳು ನಿಂತಿಲ್ಲ. ಎರಡು ದಿನಗಳ ಹಿಂದಷ್ಟೇ ಆ ಸಂತ್ರಸ್ತೆಯ ಹತ್ತಿರದ ಸಂಬಂಧಿಯ ಮಗು ನಾಪತ್ತೆಯಾಗಿದೆ. ಅದರ ಹಿಂದೆಯೂ ಅದೇ ಬಿಜೆಪಿ ಶಾಸಕ ಮತ್ತು ಯೋಗಿ ಆದಿತ್ಯನಾಥರ ಆಪ್ತನ ಬಂಟರ ಕೈವಾಡ ಇದೆ ಎನ್ನಲಾಗುತ್ತಿದೆ!

ಇನ್ನೊಂದು ಇಂತಹದ್ದೇ ಹೈಪ್ರೊಫೈಲ್ ಬಿಜೆಪಿ ನಾಯಕನ ಪ್ರಕರಣವೆಂದರೆ; ಅದು ಸ್ವಾಮಿ ಚಿನ್ಮಯಾನಂದ ಎಂಬ ಮೋದಿ ಸಚಿವ ಸಂಪುಟದ ಮಾಜಿ ಸಚಿವರ ವಿರುದ್ಧದ ಅತ್ಯಾಚಾರ ಪ್ರಕರಣ. ಆ ಪ್ರಕರಣದಲ್ಲಿ ಕೂಡ ಯೋಗಿ ಆದಿತ್ಯನಾಥರ ಸರ್ಕಾರ, ಶಾಸಕ ಸೆಂಗರ್ ಪ್ರಕರಣದ ವರಸೆಯನ್ನೇ ತೋರಿದೆ. ಅತ್ಯಾಚಾರ ಆರೋಪ ಕೇಳಿಬಂದಾಗ ಆರೋಪಿಯ ವಿರುದ್ಧ ಕ್ರಮಕೈಗೊಳ್ಳುವ ಬದಲು, ಸಂತ್ರಸ್ತೆ ಯುವತಿಯ ವಿರುದ್ಧವೇ ಪೊಲೀಸರು ಇನ್ನಿಲ್ಲದ ಪ್ರಕರಣಗಳನ್ನು ಹೂಡಿ ಆಕೆಯನ್ನು ಬಂಧಿಸಿದ್ದರು. ಅಷ್ಟೇ ಅಲ್ಲ; ಜಾಮೀನಿನ ಮೇಲೆ ಆತ ಜೈಲಿನಿಂದ ಬಿಡುಗಡೆಗೊಂಡಾಗ ಆತನಿಗೆ ಹೂಹಾರ ಹಾಕಿ ಭರ್ಜರಿ ಆದರಾತಿಥ್ಯದಿಂದ ಸ್ವಾಗತ ಕೋರಿದ್ದು ಕೂಡ ಇದೇ ಯೋಗಿ ಅವರ ರಾಮರಾಜ್ಯದ ಹೆಗ್ಗಳಿಕೆಗಳಲ್ಲಿ ಒಂದು!

ಯೋಗಿ ಆದಿತ್ಯನಾಥರ ಆಡಳಿತದಲ್ಲಿ ಉತ್ತರಪ್ರದೇಶ ಎಂತಹ ರಾಮರಾಜ್ಯವನ್ನು ಕಂಡಿದೆ ಎಂಬುದಕ್ಕೆ ಈ ಉನ್ನಾವ್ ಪ್ರಕರಣ ಒಂದು ಅತ್ಯುತ್ತಮ ಉದಾಹರಣೆ. ಇಂತಹ ನೂರಾರು ಪ್ರಕರಣಗಳು ಆ ರಾಜ್ಯದಲ್ಲಿ ಇವೆ. ಹಾಗಾಗಿಯೇ 2019ರ ಅಪರಾಧ ಮಾಹಿತಿ ಬ್ಯೂರೋ ವರದಿಯ ಪ್ರಕಾರ, ಇಡೀ ದೇಶದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣಗಳು ಉತ್ತರಪ್ರದೇಶದಿಂದ ವರದಿಯಾಗಿವೆ ಮತ್ತು ಆ ಪೈಕಿ ಬರೋಬ್ಬರಿ 59,853 ಪ್ರಕರಣಗಳು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು. ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಕೂಡ ಇಡೀ ದೇಶದಲ್ಲೇ ಯೋಗಿ ಅವರ ಈ ರಾಮರಾಜ್ಯ ಮುಂದಿದೆ. 2019ರಲ್ಲಿ ಅಂತಹ 545 ಪ್ರಕರಣಗಳು ಅಧಿಕೃತವಾಗಿಯೇ ದಾಖಲಾಗಿದ್ದು, ದಲಿತ ಮಹಿಳೆಯರಿಗೆ ಉತ್ತರಪ್ರದೇಶದಲ್ಲಿ, ರಾಮನ ಜನ್ಮಭೂಮಿಯಲ್ಲಿ ಎಷ್ಟು ಸುರಕ್ಷತೆ ಇದೆ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ
ಉನ್ನಾವ್ ಭೀಭತ್ಸವು ಆಳದ ವ್ಯಾಧಿ ಲಕ್ಷಣ

ಸಾಲು ಸಾಲು ಅತ್ಯಾಚಾರಿ ಶಾಸಕರು, ಸಚಿವರು ಮತ್ತು ಪಕ್ಷದ ವಿವಿಧ ಹಂತದ ಮುಖಂಡರನ್ನು ಹೊಂದಿರುವ ಬಿಜೆಪಿ ಆಡಳಿತದಲ್ಲಿ ಉತ್ತರಪ್ರದೇಶ ದೇಶದ ಅತ್ಯಾಚಾರಿಗಳ ರಾಜ್ಯವೇ ಆಗಿದೆ ಎಂಬ ಟೀಕೆಗಳು ವ್ಯಾಪಕವಾಗಿದ್ದು. ಅಂತಹ ನಿಂದನೆಗಳ ಹಿಂದೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೋರೋ(ಎನ್ ಸಿಆರ್ ಬಿ)ಯಂತಹ ಸಂಸ್ಥೆಯ ನಂಬಲಾರ್ಹ ಅಂಕಿಅಂಶಗಳ ಬಲವಿದೆ ಎಂಬುದು ವಿಪರ್ಯಾಸ. ಯೋಗಿ ಆಡಳಿತದಲ್ಲಿ ಬಿಜೆಪಿ ಮತ್ತು ಅದರ ವಿವಿಧ ಪರಿವಾರ ಬಣಗಳ ಮಹಿಳಾ ವಿರೋಧಿ ಅಟ್ಟಹಾಸ ಎಷ್ಟು ವ್ಯಾಪಕವಾಗಿದೆ ಎಂದರೆ; ಹತ್ರಾಸ್ ಮತ್ತು ಬಲರಾಂಪುರ ಸರಣಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವೇ ತಲೆತಗ್ಗಿಸುವಂತೆ ಮಾಡಿರುವಾಗಲೇ ಅದೇ ರಾಜ್ಯದ ಪ್ರಯಾಗ್ ರಾಜ್ ಜಿಲ್ಲೆಯಲ್ಲಿ ಸ್ವತಃ ಬಿಜೆಪಿ ನಾಯಕ ಡಾ ಶ್ಯಾಮ ಪ್ರಕಾಶ್ ದ್ವಿವೇದಿ ಎಂಬಾತನನ್ನು ಮತ್ತೊಂದು ಅತ್ಯಾಚಾರ ಪ್ರಕರಣದಡಿ ಬಂಧಿಸಲಾಗಿದೆ!

ಉತ್ತರಪ್ರದೇಶದಲ್ಲಿ ಯೋಗಿ ಕಟ್ಟುತ್ತಿರುವ ‘ರಾಮರಾಜ್ಯ’ದ ಕರಾಳ ಇತಿಹಾಸ
ಉತ್ತರ ಪ್ರದೇಶದಲ್ಲಿ ಗ್ಯಾಂಗ್‌  ರೇಪ್‌ ಪ್ರಕರಣಗಳು ದೇಶದಲ್ಲೇ ಅತ್ಯಧಿಕ

ಇಂತಹ ಹೆಚ್ಚುಗಾರಿಕೆ ಮತ್ತು ಹೆಗ್ಗಳಿಕೆಯ ಹಿನ್ನೆಲೆಯಲ್ಲಿಯೇ ರಾಜ್ಯದ ಘನತೆ ಮತ್ತು ಗೌರವಕ್ಕೆ ದಲಿತ ಹೆಣ್ಣುಮಗಳ ಪರ ಹೋರಾಟಗಳು, ಮಾಧ್ಯಮ ವರದಿಗಳು ಮಸಿ ಬಳಿದುಬಿಟ್ಟಾವು ಎಂದೇ ಯೋಗಿ, ಇಡೀ ಪೊಲೀಸ್ ಪಡೆ ಮತ್ತು ಆಡಳಿತ ಯಂತ್ರವನ್ನು ಬಳಸಿ ಅಭೂತಪೂರ್ವ ಭದ್ರತೆ ಮಾಡಿದ್ದರು! ತಮ್ಮ ರಾಮರಾಜ್ಯದ ಮಾನ ಕಾಯುವ ನಿಟ್ಟಿನಲ್ಲಿ, ಅವರಿಗೆ ದಲಿತ ಹೆಣ್ಣು ಮಗಳ ಮಾನ ಮತ್ತು ಪ್ರಾಣಗಳೆರಡೂ ಯಕಃಶ್ಚಿತ್ ಎನಿಸಿದ್ದರೆ ಅದರಲ್ಲೇನು ತಪ್ಪು ಅಲ್ಲವಾ? ಮರ್ಯಾದಾ ಪುರುಷೋತ್ತಮನ ಮಾನಕ್ಕಿಂತ, ಒಂದು ದಲಿತ ಸಮುದಾಯ, ಒಂದು ಕಡುಬಡವ ಕುಟುಂಬ ಮತ್ತು ಯಾವ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಭದ್ರತೆ, ಬೆಂಬಲವೂ ಇಲ್ಲದ ಒಂದು 19 ವರ್ಷದ ಹೆಣ್ಣಿನ ಮಾನ ಮತ್ತು ಪ್ರಾಣ ದೊಡ್ಡದಲ್ಲ ಅಲ್ಲವೇ?

ಹಾಗಾಗಿಯೇ ಯೋಗಿ ಈಗ ತಮ್ಮ ಸರ್ಕಾರಿ ಆಡಳಿತ ಯಂತ್ರ ಸಾಲದು ಎಂದು ಇಂಗ್ಲಿಷ್ ಮಾಧ್ಯಮಗಳಲ್ಲಿ ತಮ್ಮ ಮತ್ತು ತಮ್ಮ ರಾಮರಾಜ್ಯದ ವರ್ಚಸ್ಸು ವೃದ್ಧಿಗೆ ಹೊಸ ಪಿಆರ್ ಏಜೆನ್ಸಿ ನೇಮಿಸಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಡೀ ದೇಶದಲ್ಲಿ ಇನ್ನೆಲ್ಲೂ ಕಂಡಿರದ ಮಟ್ಟಿನ ನಾಗರಿಕ ಹಕ್ಕುಗಳ ದಮನ, ಮಹಿಳಾ ದೌರ್ಜನ್ಯ, ದಲಿತರ ಮೇಲಿನ ಅಟ್ಟಹಾಸ, ಸರ್ಕಾರಿ ವ್ಯವಸ್ಥೆಯ ದುರ್ಬಳಕೆ, ಪೊಲೀಸ್ ದಬ್ಬಾಳಿಕೆಗಳನ್ನು ಕಂಡಿರುವ ರಾಜ್ಯದ ಮುಖ್ಯಮಂತ್ರಿಯನ್ನು ದೇಶದ ಅತ್ಯುತ್ತಮ ಮುಖ್ಯಮಂತ್ರಿ ಎಂದು ರೇಟಿಂಗ್ ನೀಡಿ ಬಹುಪರಾಕ್ ಹಾಕುವ ಮಾಧ್ಯಮಗಳ ಜೊತೆ, ಕಾರ್ಪೊರೇಟ್ ಪಿಆರ್ ಏಜೆನ್ಸಿಗಳ ಗಿಲೀಟೂ ಸೇರಿದರೆ, ಅಡಿಗಡಿಗೆ ರಾಮರಾಜ್ಯ ಕಾಣಿಸದೇ ಇರದೆ?!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com